ಶಾಂತಿ ಮಂಡಳಿ 
ವಿದೇಶ

ವಿಶ್ವಸಂಸ್ಥೆಗೆ ಸೆಡ್ಡು ಹೊಡೆಯಲು ಶಾಂತಿ ಮಂಡಳಿ!

ಎರಡು ವರ್ಷಗಳ ಯುದ್ದದಿಂದ ತಲ್ಲಣಿಸಿರುವ ಗಾಜಾದಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಮತ್ತು ಮರುನಿರ್ವಣ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಶಾಂತಿ ಮಂಡಳಿ’ಯನ್ನು (Board of peace) ಸ್ಥಾಪಿಸಿದ್ದು, ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮದಲ್ಲಿ ಗುರುವಾರ ಇದಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಮಂಡಳಿಯ ಶಾಶ್ವತ ಸದಸ್ಯ ಸ್ಥಾನ ಪಡೆಯಲು 9 ಸಾವಿರ ಕೋಟಿ ರೂಪಾಯಿ ಶುಲ್ಕ ಪಾವತಿಸಬೇಕು. ಹೀಗೆ ಶುಲ್ಕದಿಂದಲೇ 4.58 ಲಕ್ಷ ಕೋಟಿ ರೂ. ಸಂಗ್ರಹಿಸಲು ಉದ್ದೇಶಿಸಿರುವ ಟ್ರಂಪ್ ಪ್ರಯತ್ನಕ್ಕೆ ಹೇಳಿಕೊಳ್ಳುವಂಥ ಪ್ರತಿಕ್ರಿಯೆಯೇನೂ ಲಭಿಸಿಲ್ಲ. ಗಾಜಾ ಶಾಂತಿ ಮಂಡಳಿಯಲ್ಲಿ ಪಾಲ್ಗೊಳ್ಳಲು ಒಪ್ಪಿ 59 ರಾಷ್ಟ್ರಗಳು ಸಹಿ ಹಾಕಿವೆ ಎಂದು ಟ್ರಂಪ್ ಹೇಳಿದ್ದರೂ, ಗುರುವಾರದ ಸಮಾರಂಭದಲ್ಲಿ 19 ರಾಷ್ಟ್ರಗಳು ಮಾತ್ರ ಪಾಲ್ಗೊಂಡಿದ್ದವು. 9 ಸಾವಿರ ಕೋಟಿ ರೂ. ಪಾವತಿಸಿ ರಷ್ಯಾ ಸದಸ್ಯತ್ವ ಪಡೆದಿದ್ದು ಅಚ್ಚರಿ ಮೂಡಿಸಿದ್ದು, ಭಯೋತ್ಪಾದನೆ ರಫ್ತು ಮಾಡುವ ಪಾಕಿಸ್ತಾನ ಕೂಡ ಈ ‘ಶಾಂತಿ ಮಂಡಳಿ’ಯಲ್ಲಿದೆ. ಭಾರತ ಈ ಬಗ್ಗೆ ಮೌನವಹಿಸಿರುವುದೇಕೆ? ಶಾಂತಿ ಮಂಡಳಿಯ ಉದ್ದೇಶ ಏನು? ಇಲ್ಲಿದೆ ವಿವರ.

ಅಮೆರಿಕದ ಮಧ್ಯಸ್ಥಿಕೆಯಿಂದ ಇಸ್ರೇಲ್ ಮತ್ತು ಪ್ಯಾಲೆಸ್ತೀನ್​ನ ಹಮಾಸ್ ಬಂಡುಕೋರರ ನಡುವೆ 2025ರ ಅಕ್ಟೋಬರ್​ನಲ್ಲಿ ಕದನವಿರಾಮ ಏರ್ಪಟ್ಟಿದೆ. ಈ ಕದನವಿರಾಮ ಏರ್ಪಟ್ಟ ಬಳಿಕವೇ ‘ನೊಬೆಲ್ ಶಾಂತಿ ಪ್ರಶಸ್ತಿಗೆ ತಾನೇ ಅರ್ಹ’ ಎಂದು ಡೊನಾಲ್ಡ್ ಟ್ರಂಪ್ ಹಲವು ಬಾರಿ ಹೇಳಿಕೊಂಡಿದ್ದರು. ಕದನವಿರಾಮದ 20 ಅಂಶಗಳಲ್ಲಿ ಕೆಲವು ವಿಚಾರಗಳ ಬಗ್ಗೆ ಹಮಾಸ್ ಮತ್ತು ಇಸ್ರೇಲ್ ಬಹಿರಂಗವಾಗಿಯೇ ಭಿನ್ನಮತ ವ್ಯಕ್ತಪಡಿಸಿವೆ. ‘ಗಾಜಾ ಶಾಂತಿ ಮಂಡಳಿ’ Gaza Peace board) ಸ್ಥಾಪನೆ ಕೂಡ ಈ 20 ಅಂಶಗಳ ಭಾಗವೇ ಆಗಿದೆ. ಗಾಜಾ ಶಾಂತಿ ಮಂಡಳಿ ಸ್ಥಾಪನೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ 2025ರ ನವೆಂಬರ್​ನಲ್ಲಿ ಅನುಮೋದನೆ ದೊರೆತಿದೆ. ಕದನವಿರಾಮದ ಸಂದರ್ಭದಲ್ಲಿ ಏರ್ಪಟ್ಟ ಒಪ್ಪಂದದ 20 ಅಂಶಗಳು ಮುಂದಿನ ಐದು ವರ್ಷಗಳಲ್ಲಿ ಅನುಷ್ಠಾನಕ್ಕೆ ತರುವ ಆಶ್ವಾಸನೆಯನ್ನು ಮಂಡಳಿ ನೀಡಿದೆ.

ಗಾಜಾ ಪಟ್ಟಿಯಲ್ಲಿ ಶಾಶ್ವತ ಶಾಂತಿ ಸ್ಥಾಪನೆ ಮತ್ತು ಮರುನಿರ್ವಣ ಈ ಮಂಡಳಿಯ ಉದ್ದೇಶ. ಗಾಜಾದ ಬಳಿಕ ಇತರ ಸಮರಗ್ರಸ್ತ ಪ್ರದೇಶ ಗಳ ಮರುನಿರ್ವಣದ ಉದ್ದೇಶವನ್ನೂ ಹೊಂದಲಾಗಿದೆ. ಗಾಜಾ ಪಟ್ಟಿಯಲ್ಲಿ ಮರುನಿರ್ವಣದ ಕಾರ್ಯ ಕೂಡ ಸುಲಭವೇನಲ್ಲ.

ತೀವ್ರಗೊಂಡ ವಿರೋಧ

ವಿಶ್ವಸಂಸ್ಥೆಗೆ ಪರ್ಯಾಯವಾಗಿ ಎಂಬಂತೆ ಡೊನಾಲ್ಡ್ ಟ್ರಂಪ್ ‘ಶಾಂತಿ ಮಂಡಳಿ’ಯನ್ನು ರಚಿಸಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ವಿಶ್ವಸಂಸ್ಥೆಯ 31ಕ್ಕೂ ಹೆಚ್ಚು ಸಂಘಟನೆಗಳಿಂದ ಹೊರಬರುವುದಾಗಿ ಅಮೆರಿಕ ಇತ್ತೀಚೆಗಷ್ಟೇ ಘೋಷಿಸಿದೆ. ವಿಶ್ವಸಂಸ್ಥೆಯನ್ನು ಟ್ರಂಪ್ ದುರ್ಬಲಗೊಳಿಸುವ ಉದ್ದೇಶ ಇದರ ಹಿಂದಿರುವುದನ್ನು ಅನೇಕ ರಾಷ್ಟ್ರಗಳು ಮನಗಂಡಿವೆ. ಅಲ್ಲದೆ, ವಿಶ್ವಸಂಸ್ಥೆಯ ಕೆಲವು ಕಾರ್ಯಗಳನ್ನು ಬದಲಾಯಿಸುವ ಬಗ್ಗೆಯೂ ಟ್ರಂಪ್ ಈಗಾಗಲೇ ಸೂಚನೆ ನೀಡಿದ್ದಾರೆ. ಹಾಗಾಗಿ, ಕ್ರಮೇಣ ಇದು ವಿಶ್ವಸಂಸ್ಥೆಗೆ ಬದಲಿ ವ್ಯವಸ್ಥೆಯಾಗಿ ರೂಪುಗೊಳ್ಳುವುದೇ ಎಂಬ ಚರ್ಚೆ ಹುಟ್ಟುಹಾಕಿದೆ. ವಿಶ್ವಸಂಸ್ಥೆ ಈಗಾಗಲೇ ಗಾಜಾ ಮರುನಿರ್ವಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆಯು ಸಂತ್ರಸ್ತರಿಗೆ ವೈದ್ಯಕೀಯ ನೆರವನ್ನು ನೀಡಿದೆ. ವಿಶ್ವಸಂಸ್ಥೆಯ ಶಾಂತಿಸ್ಥಾಪನೆಯ ಬಜೆಟ್​ಗೆ ಅಮೆರಿಕ ಶೇಕಡ 25ರಷ್ಟು ಕೊಡುಗೆ ನೀಡುತ್ತಿತ್ತು. ಟ್ರಂಪ್ ಅಧ್ಯಕ್ಷರಾದಾಗಿನಿಂದ ಈ ಅನುದಾನವನ್ನು ಸ್ಥಗಿತಗೊಳಿಸಲಾಗಿದೆ. ಯೂಕ್ರೇನ್-ರಷ್ಯಾ ಯುದ್ಧ ಕೊನೆಗೊಂಡ ಬಳಿಕ ಯೂಕ್ರೇನ್ ಮರುನಿರ್ವಣಕ್ಕಾಗಿ ಮಂಡಳಿಯನ್ನು ವಿಸ್ತರಿಸುವ ಯೋಜನೆಯನ್ನು ಟ್ರಂಪ್ ಹೊಂದಿದ್ದಾರೆ ಎನ್ನಲಾಗಿದೆ. ಯೂಕ್ರೇನ್​ಗೆ ನೀಡಬೇಕಾದ 10 ಸಾವಿರ ಕೋಟಿ ರೂ. ನೆರವಿಗೆ ಕೂಡ ಟ್ರಂಪ್ ತಡೆ ನೀಡಿದ್ದಾರೆ.

ಗಾಜಾ ಪಟ್ಟಿಯಲ್ಲಿ ಏನೇನಾಯಿತು?

  • ಹಮಾಸ್ 2023ರ ಅಕ್ಟೋಬರ್ 7ರಂದು ನಡೆಸಿದ ದಾಳಿಯಲ್ಲಿ 1,195 ಇಸ್ರೇಲಿಗರು ಮೃತಪಟ್ಟರು. ಇದರಲ್ಲಿ 815 ಜನರು ನಾಗರಿಕರು. ಹಮಾಸ್​ನ ಈ ದಾಳಿಯ ನಂತರವೇ ಇಸ್ರೇಲ್ ಹಮಾಸ್ ಬಂಡುಕೋರ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿಕೊಂಡು ಗಾಜಾ ಪಟ್ಟಿ ಮೇಲೆ ಪ್ರತಿದಾಳಿ ಆರಂಭಿಸಿತು ಮತ್ತು ಯುದ್ಧದ ಸ್ವರೂಪ ಪಡೆದುಕೊಂಡು ಎರಡು ವರ್ಷಗಳ ಕಾಲ ಅಂದರೆ 2025ರ ಅಕ್ಟೋಬರ್​ವರೆಗೆ ಮುಂದುವರಿಯಿತು. ಶಾಲೆಗಳು, ಆಸ್ಪತ್ರೆಗಳು ಕೂಡ ದಾಳಿಗೆ ಛಿದ್ರವಾದವು.
  • ಗಾಜಾದ ಒಟ್ಟು ಜನಸಂಖ್ಯೆ 21 ಲಕ್ಷ. ಇಸ್ರೇಲ್ ಎರಡು ವರ್ಷಗಳ ಕಾಲ ನಡೆಸಿದ ದಾಳಿಯಲ್ಲಿ ಗಾಜಾದಲ್ಲಿನ 67,075 ಪ್ಯಾಲೆಸ್ತೀನಿಯನ್​ರು ಮೃತಪಟ್ಟಿದ್ದಾರೆ. ಈ ಪೈಕಿ ಮಕ್ಕಳ ಸಂಖ್ಯೆ 20 ಸಾವಿರ.
  • ನಿರಂತರ ದಾಳಿಯಿಂದ ಗಾಜಾದಲ್ಲಿ 19 ಲಕ್ಷ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ.
  • ಗಾಜಾದಲ್ಲಿ 195 ಪತ್ರಕರ್ತರು/ಮಾಧ್ಯಮ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದಾರೆ.
  • ಮಾನವೀಯ ನೆರವು ತಲುಪಿಸುತ್ತಿದ್ದ 554 ಕಾರ್ಯಕರ್ತರು ಬಲಿಯಾಗಿದ್ದಾರೆ.
  • ಇಸ್ರೇಲ್ ಭದ್ರತಾ ಪಡೆಯ 466 ಸಿಬ್ಬಂದಿ ಗಾಜಾದಲ್ಲಿ ಪ್ರಾಣ ತೆತ್ತಿದ್ದಾರೆ.

ಟ್ರಂಪ್ ಆಹ್ವಾನ ನೀಡಿದ್ದು 59 ರಾಷ್ಟ್ರಗಳಿಗೆ, ಬಂದದ್ದು 19 ದೇಶಗಳು

ಹೀಗಿದೆ ಮಂಡಳಿ

ಗಾಜಾ ಶಾಂತಿ ಮಂಡಳಿಗೆ ಡೊನಾಲ್ಡ್ ಟ್ರಂಪ್ ಅನಿರ್ದಿಷ್ಟಾವಧಿಗೆ ಅಧ್ಯಕ್ಷರು. ಹಾಗಾಗಿಯೇ, ಈ ಮಂಡಳಿಯಲ್ಲಿ ಹೆಚ್ಚೆಚ್ಚು ರಾಷ್ಟ್ರಗಳನ್ನು ಸೇರಿಸಿಕೊಳ್ಳುವ ಮೂಲಕ ವಿಶ್ವಸಂಸ್ಥೆಯ ಮಹತ್ವವನ್ನು ಗೌಣವಾಗಿಸಬೇಕು ಮತ್ತು ಜಾಗತಿಕ ರಾಜಕೀಯದಲ್ಲಿ ಈ ‘ಶಾಂತಿ ಮಂಡಳಿ’ ಮಹತ್ವದ ಪಾತ್ರ ವಹಿಸುವಂತಾಗಬೇಕು ಎನ್ನುವುದು ಟ್ರಂಪ್ ಆಲೋಚನೆ.

ಸಂಸ್ಥಾಪಕ ಸದಸ್ಯರು

  • ಮಾರ್ಕೆ ರುಬಿಯೊ-ಅಮೆರಿಕದ ವಿದೇಶಾಂಗ ಕಾರ್ಯದರ್ಶಿ
  • ಸ್ಟೀವ್ ವಿಟ್ಕಾಫ್-ಡೊನಾಲ್ಡ್ ಟ್ರಂಪ್ ಅವರ ವಿಶೇಷ ರಾಯಭಾರಿ
  • ಜರೇಡ್ ಕುಶ್ನರ್-ಟ್ರಂಪ್ ಅಳಿಯ
  • ಟೋನಿ ಬ್ಲೇರ್- ಬ್ರಿಟನ್ ಮಾಜಿ ಪ್ರಧಾನಿ

ಟ್ರಂಪ್ ಜಾಣ ನಡೆ

‘ಗಾಜಾ ಪಟ್ಟಿ ಮರುನಿರ್ವಣದಲ್ಲಿ ಅಮೆರಿಕ ಮಹತ್ವದ ಪಾತ್ರ ವಹಿಸಲಿದೆ’ ಎಂದು ಹೇಳಿಕೊಂಡುಬಂದಿದ್ದ ಡೊನಾಲ್ಡ್ ಟ್ರಂಪ್ ಈಗ ಈ ವಿಷಯದಲ್ಲೂ ತಮ್ಮ ‘ವ್ಯಾಪಾರ’ ಬುದ್ಧಿಯನ್ನು ತೋರಿದ್ದಾರೆ. ಮರುನಿರ್ವಣದ ಹೊರೆಯನ್ನು ಹಲವು ದೇಶಗಳ ಹೆಗಲಿಗೆ ಹಾಕಲು ಮುಂದಾಗಿರುವ ಟ್ರಂಪ್ ಗಾಜಾ ಶಾಂತಿ ಮಂಡಳಿಯ ಕಾಯಂ ಸದಸ್ಯರಾಗ ಬಯಸುವ ರಾಷ್ಟ್ರಗಳಿಗೆ 9 ಸಾವಿರ ಕೋಟಿ ರೂ.ಗಳ ಬೃಹತ್ ಸದಸ್ಯತ್ವ ಶುಲ್ಕ ನಿಗದಿ ಮಾಡಿದ್ದಾರೆ. ಈ ಮೂಲಕ 4.58 ಲಕ್ಷ ಕೋಟಿ ರೂ. ಸಂಗ್ರಹಿಸುವುದು ಅವರ ಉದ್ದೇಶವಾಗಿದೆ.

ದೂರ ಉಳಿದ ಭಾರತ

ಗಾಜಾ ಶಾಂತಿ ಮಂಡಳಿಯ ಭಾಗವಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಟ್ರಂಪ್ ಅಧಿಕೃತ ಆಹ್ವಾನ ನೀಡಿದ್ದರು. ಆದರೆ, ಮಂಡಳಿಯಲ್ಲಿ ಸೇರ್ಪಡೆ ಕುರಿತಂತೆ ಭಾರತ ಇನ್ನು ಯಾವುದೇ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. ಹಾಗಾಗಿ, ಗುರುವಾರ ನಡೆದ ಸಮಾರಂಭದಿಂದ ದೂರವುಳಿಯಿತು. ಅಲ್ಲದೆ, ವಿಶ್ವಸಂಸ್ಥೆಗೆ ಪರ್ಯಾಯವಾಗಿ ಈ ಮಂಡಳಿ ಕಟ್ಟಲು ಹೊರಟಿರುವ ಟ್ರಂಪ್ ನಡೆ ರಾಜತಾಂತ್ರಿಕವಾಗಿ ಸೂಕ್ತವಲ್ಲ ಎಂಬ ಅಭಿಪ್ರಾಯ ಭಾರತದ ವಿದೇಶಾಂಗ ವ್ಯವಹಾರಗಳ ತಜ್ಞರದ್ದು. ಹಾಗಾಗಿಯೇ, ಈ ವಿಷಯದಲ್ಲಿ ತರಾತುರಿಯಲ್ಲಿ ನಿರ್ಣಯ ಕೈಗೊಳ್ಳದೆ, ಕೇಂದ್ರ ಸರ್ಕಾರ ಸುರಕ್ಷಿತ ಅಂತರ ಕಾಯ್ದುಕೊಂಡಿದೆ. ಜರ್ಮನಿ ಮತ್ತು ಜಪಾನ್ ಕೂಡ ಮಂಡಳಿಯಲ್ಲಿ ಸೇರ್ಪಡೆಗೊಳ್ಳುವ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಮುಂದೇನು?

ಗಾಜಾ ಮರುನಿರ್ವಣದ ಕಾರ್ಯ ಸುಲಭವೇನಲ್ಲ. ಏಕೆಂದರೆ, ಸಂಘರ್ಷದ ಪರಿಣಾಮ ಗಾಜಾದಲ್ಲಿ ಶೇಕಡ 10ರಷ್ಟು ಮಂದಿ ಮೃತಪಟ್ಟಿದ್ದರೆ, ಶೇ.90ರಷ್ಟು ಜನರು ನಿರ್ವಸಿತರಾಗಿದ್ದಾರೆ. ಗಾಜಾ ಪ್ರದೇಶದ ಶೇ.80ರಷ್ಟು ಕಟ್ಟಡಗಳು ದುರಸ್ತಿ ಮಾಡಲಾಗದಷ್ಟು ತೀವ್ರವಾಗಿ ಹಾನಿಗೊಳಗಾಗಿವೆ. ಶೇ.95ರಷ್ಟು ಆಸ್ಪತ್ರೆಗಳು, ಶೇ.90ರಷ್ಟು ಶಾಲೆಗಳು ತೀವ್ರ ಹಾನಿಗೊಳಗಾಗಿದ್ದು, ಇವುಗಳ ಮರುನಿರ್ವಣ ಭಾರಿ ವೆಚ್ಚದಾಯಕವೇ ಹೌದು. ಗಾಜಾ ಪ್ರದೇಶದಲ್ಲಿ 5.5 ಕೋಟಿ ಟನ್​ಗಳಷ್ಟು ಅವಶೇಷಗಳನ್ನು ತೆರವುಗೊಳಿಸಬೇಕಿದೆ. ವಿಶ್ವಸಂಸ್ಥೆ, ಐರೋಪ್ಯ ಒಕ್ಕೂಟ ಮತ್ತು ವಿಶ್ವಬ್ಯಾಂಕ್​ನ ಅಂದಾಜಿನಂತೆ ಗಾಜಾವನ್ನು ವಾಸಯೋಗ್ಯ ಪ್ರದೇಶವಾಗಿಸಲು 7000 ಕೋಟಿ ಡಾಲರ್​ಗಳ (6.21 ಲಕ್ಷ ಕೋಟಿ ರೂ.) ಅಗತ್ಯವಿದೆ.

ವ್ಯಂಗ್ಯವಾಡಿದ ಮಸ್ಕ್

ಡೊನಾಲ್ಡ್ ಟ್ರಂಪ್ ‘ಆತ್ಮೀಯ ಮಿತ್ರ’ನಾಗಿದ್ದ ದಿಗ್ಗಜ ಉದ್ಯಮಿ ಎಲಾನ್ ಮಸ್ಕ್ ಟ್ರಂಪ್ ಅಧ್ಯಕ್ಷತೆಯ ‘ಶಾಂತಿ ಮಂಡಳಿ’ಯನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಸ್ವಿಜ್ಜರ್ಲೆಂಡ್​ನ ದಾವೋಸ್​ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಸ್ಕ್, ‘ಶಾಂತಿ ಮಂಡಳಿ ರಚನೆ ನನ್ನ ಗಮನಕ್ಕೂ ಬಂದಿದೆ. ಅದು ಪೀಸ್ ಅಥವಾ ಪೀಸ್? ಗ್ರೀನ್​ಲ್ಯಾಂಡ್​ನ ಒಂದು ಪೀಸ್ (ತುಂಡು), ವೆನಿಜುವೆಲಾದ ಒಂದು ಪೀಸ್ (ತುಂಡು) ಎಂದು ವ್ಯಂಗ್ಯವಾಡಿದ್ದಾರೆ. ಟ್ರಂಪ್ ಆಡಳಿತದಲ್ಲಿ ಮಸ್ಕ್ ಪ್ರಮುಖ ಹುದ್ದೆ ಗಿಟ್ಟಿಸಿಕೊಂಡಿದ್ದರು. ಆದರೆ, ಬಳಿಕ ಇಬ್ಬರ ನಡುವಿನ ಭಿನ್ನಾಭಿಪ್ರಾಯದ ಬಳಿಕ ಮಸ್ಕ್ ಆ ಹುದ್ದೆಯನ್ನು ತೊರೆದಿದ್ದಾರೆ.

ಸೇರ್ಪಡೆಗೊಂಡ ರಾಷ್ಟ್ರಗಳು

ಸೌದಿ ಅರೇಬಿಯಾ, ಪಾಕಿಸ್ತಾನ, ಯುಎಇ, ಈಜಿಪ್ತ್, ಅಲ್ಬೇನಿಯಾ, ಅಮೇನಿಯಾ, ಅಜರ್​ಬೈಜಾನ್, ಬಹ್ರೇನ್, ಬೆಲಾರಸ್, ಬಲ್ಗೇರಿಯಾ, ಹಂಗೇರಿ, ಇಂಡೋನೇಷ್ಯಾ, ಜಾರ್ಡನ್, ಕಜಕಿಸ್ತಾನ, ಕೊಸೊವೊ, ಮೊರಾಕೊ, ಮಂಗೋಲಿಯಾ, ಕತಾರ್, ಟರ್ಕಿ, ಉಜ್ಬೇಕಿಸ್ತಾನ, ವಿಯೆಟ್ನಾಂ.

ಗೈರಾದ ಪ್ರಮುಖ ರಾಷ್ಟ್ರಗಳು

ಭಾರತ, ಚೀನಾ, ಫ್ರಾನ್ಸ್, ಬ್ರಿಟನ್, ರಷ್ಯಾ