ಪಿಸಿಬಿ ಅಧ್ಯಕ್ಷ ಒಬ್ಬ ಅಯೋಗ್ಯ, ಅಜ್ಞಾನಿ..! ಪಾಕ್ ಸೋಲಿನ ಬೆನ್ನಲ್ಲೇ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಗುಡುಗು 
ವಿದೇಶ

ಪಿಸಿಬಿ ಅಧ್ಯಕ್ಷ ಒಬ್ಬ ಅಯೋಗ್ಯ, ಅಜ್ಞಾನಿ..! ಪಾಕ್ ಸೋಲಿನ ಬೆನ್ನಲ್ಲೇ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಗುಡುಗು | Shoaib Akhtar

ಕೊಲಂಬೊ: ಟಿ20 ವಿಶ್ವಕಪ್ 2026ರಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತದ ವಿರುದ್ಧ ಪಾಕಿಸ್ತಾನ ತಂಡ ಅನುಭವಿಸಿದ 61 ರನ್‌ಗಳ ಹೀನಾಯ ಸೋಲು ಈಗ ಪಾಕ್ ಕ್ರಿಕೆಟ್‌ನಲ್ಲಿ ಜ್ವಾಲಾಮುಖಿ ಸ್ಫೋಟಿಸುವಂತೆ ಮಾಡಿದೆ. ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್(Shoaib Akhtar), ಪಾಕ್ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರನ್ನು ಅಯೋಗ್ಯ ಮತ್ತು ಅಜ್ಞಾನಿ ಎಂದು ಕರೆಯುವ ಮೂಲಕ ಕಟುವಾಗಿ ಟೀಕಿಸಿದ್ದಾರೆ.

ಭಾರತದ ಎದುರು ಮಂಡಿಯೂರಿದ ಪಾಕಿಸ್ತಾನ

ಭಾನುವಾರ (ಫೆ.15) ಕೊಲಂಬೊದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ನೀಡಿದ್ದ 175 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ, ಕೇವಲ 114 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಶರಣಾಯಿತು. ಈ ಜಯದೊಂದಿಗೆ ವಿಶ್ವಕಪ್ ಇತಿಹಾಸದಲ್ಲಿ ಭಾರತದ ವಿರುದ್ಧ ಪಾಕಿಸ್ತಾನದ ದಾಖಲೆ 1-8ಕ್ಕೆ ಕುಸಿದಿದೆ. ಈ ದಯನೀಯ ಪ್ರದರ್ಶನವೇ ಅಖ್ತರ್ ಸಿಟ್ಟಿಗೆ ಕಾರಣವಾಗಿದೆ.

ನಖ್ವಿಗೆ ಕ್ರಿಕೆಟ್ ಬಗ್ಗೆ ಏನೂ ಗೊತ್ತಿಲ್ಲ

ಈ ಬಗ್ಗೆ ಎಬಿಪಿ ನ್ಯೂಸ್ ಜೊತೆ ಮಾತನಾಡಿದ ಅಖ್ತರ್, ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ವಿರುದ್ಧ ಹರಿಹಾಯ್ದರು. ಏನೂ ತಿಳಿಯದ ವ್ಯಕ್ತಿಯನ್ನು ತಂದು ಪಿಸಿಬಿ ಅಧ್ಯಕ್ಷನನ್ನಾಗಿ ಮಾಡಿದ್ದೀರಿ. ಇಂತಹವರಿಂದ ತಂಡ ಹೇಗೆ ನಡೆಯಲು ಸಾಧ್ಯ? ಈತ ಅಯೋಗ್ಯ ಮತ್ತು ಜಾಹಿಲ್ ಆಗಿದ್ದಾನೆ. ಇವರಿಗೆ ಕ್ರಿಕೆಟ್ ಆಡಳಿತ ನಡೆಸುವ ಅರ್ಹತೆಯೇ ಇಲ್ಲ ಎಂದು ಗುಡುಗಿದ್ದಾರೆ.

ಶೋಯೆಬ್ ಅಖ್ತರ್ ಆರೋಪಗಳು

ಬಾಬರ್ ವಿರುದ್ಧ ಕಿಡಿ: ಪಂದ್ಯ ಗೆಲ್ಲಿಸಿಕೊಡದ ಆಟಗಾರನನ್ನು ನೀವು ಸೂಪರ್ ಸ್ಟಾರ್ ಮಾಡಿದ್ದೀರಿ. ಒತ್ತಡವನ್ನು ನಿಭಾಯಿಸುವ ತಾಕತ್ತು ಈ ತಂಡಕ್ಕಿಲ್ಲ ಎಂದು ಅಖ್ತರ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಬೌಲಿಂಗ್ ವೇಗ ಕುಸಿತ: ಶಹೀನ್ ಅಫ್ರಿದಿ 125 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದಾರೆ. ಇದು ಆಧುನಿಕ ಕ್ರಿಕೆಟ್ ಅಲ್ಲ. ಕಳೆದ 15-20 ವರ್ಷಗಳಿಂದ ಕ್ರಿಕೆಟ್‌ನಲ್ಲಿ ಯಾವುದೇ ಹೂಡಿಕೆ ನಡೆದಿಲ್ಲ. ಅಲ್ಲದೆ, ಒಂದು ಕಾಲದಲ್ಲಿ ನಾವು ಭಾರತಕ್ಕೆ ಮೈದಾನದಲ್ಲಿ ಟಕ್ಕರ್ ನೀಡುತ್ತಿದ್ದೆವು. ಆದರೆ ಇಂದು ಭಾರತವನ್ನು ಸೋಲಿಸುವ ಕನಸು ಕಾಣಲು ನಮಗೆ ಸಾಧ್ಯವಾಗುತ್ತಿಲ್ಲ ಎಂದು ಮಾಜಿ ಪಾಕ್​ ಬೌಲರ್ ಬೇಸರ ವ್ಯಕ್ತಪಡಿಸಿದ್ದಾರೆ.

ಶ್ರೀಲಂಕಾದಲ್ಲಿ ನಖ್ವಿ ಉಪಸ್ಥಿತಿ

ವಿಶೇಷವೆಂದರೆ, ಪಂದ್ಯದ ವೇಳೆ ಮೊಹ್ಸಿನ್ ನಖ್ವಿ ಅವರು ಕೊಲಂಬೊದ ಆರ್. ಪ್ರೇಮದಾಸ ಸ್ಟೇಡಿಯಂನಲ್ಲಿ ಹಾಜರಿದ್ದರು. ವಿಶ್ವಕಪ್ ಬಹಿಷ್ಕಾರದಂತಹ ಗೊಂದಲಗಳ ನಡುವೆ ಐಸಿಸಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲು ಅವರು ಲಂಕಾಗೆ ಭೇಟಿ ನೀಡಿದ್ದರು. ಆದರೆ ತಂಡದ ಕಳಪೆ ಪ್ರದರ್ಶನ ಈಗ ಅವರ ಸ್ಥಾನಕ್ಕೆ ಕುತ್ತು ತರುವ ಸಾಧ್ಯತೆಯಿದೆ.

ಅಭಿಮಾನಿಗಳ ಆಕ್ರೋಶ

ಅಖ್ತರ್ ಅವರ ಈ ಹೇಳಿಕೆಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪಾಕ್ ಅಭಿಮಾನಿಗಳು ಕೂಡ ತಂಡದ ಆಯ್ಕೆ ಮತ್ತು ಮಂಡಳಿಯ ನಿರ್ಧಾರಗಳನ್ನು ಪ್ರಶ್ನಿಸುತ್ತಿದ್ದಾರೆ. ಭಾರತದ ಕ್ಲಿನಿಕಲ್ ಪ್ರದರ್ಶನದ ಮುಂದೆ ಪಾಕಿಸ್ತಾನದ ಹಳೇ ತಂತ್ರಗಳು ನಡೆಯುತ್ತಿಲ್ಲ ಎಂಬುದು ಈಗ ಜಗಜ್ಜಾಹೀರಾಗಿದೆ,(ಏಜೆನ್ಸೀಸ್).