ಜಾಗತಿಕ ಯುದ್ಧದಲ್ಲಿ ಪಾಕ್​ ಡಬಲ್ ಗೇಮ್ ಬಯಲು! ಇರಾನ್ ಗಡಿಯಲ್ಲಿ ಶಾಂತಿ ನಾಟಕ; ಸೌದಿಯಲ್ಲಿ 8,000 ಸೈನಿಕರು! 
ವಿದೇಶ

ಜಾಗತಿಕ ಯುದ್ಧದಲ್ಲಿ ಪಾಕ್​ ಡಬಲ್ ಗೇಮ್ ಬಯಲು! ಇರಾನ್ ಗಡಿಯಲ್ಲಿ ಶಾಂತಿ ನಾಟಕ; ಸೌದಿಯಲ್ಲಿ 8,000 ಸೈನಿಕರು! Pakistan Dual Game

ಇಸ್ಲಾಮಾಬಾದ್: ಅಮೆರಿಕ-ಇರಾನ್ ಮಹಾಯುದ್ಧದ ರಣಾಂಗಣದಲ್ಲಿ ಪಾಕಿಸ್ತಾನದ(Pakistan Dual Game) ಅತ್ಯಂತ ಅಪಾಯಕಾರಿ ಮತ್ತು ವಿರೋಧಾಭಾಸದ ನಿಲುವು ಜಗತ್ತಿನ ಮುಂದೆ ಜಗಜ್ಜಾಹೀರಾಗಿದೆ. ರಾಯಿಟರ್ಸ್ ವರದಿಯ ಪ್ರಕಾರ, ಪಾಕಿಸ್ತಾನವು ಸೌದಿ ಅರೇಬಿಯಾ ಮತ್ತು ತನ್ನ ನಡುವಿನ ರಹಸ್ಯ ಪರಸ್ಪರ ರಕ್ಷಣಾ ಒಪ್ಪಂದದ ಅಡಿಯಲ್ಲಿ ಬರೊಬ್ಬರಿ 8,000 ಸೈನಿಕರು, ಪೂರ್ಣ ಪ್ರಮಾಣದ ಫೈಟರ್ ಜೆಟ್ ಸ್ಕ್ವಾಡ್ರನ್ ಹಾಗೂ ಚೀನಾ ನಿರ್ಮಿತ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆಯನ್ನು ಸೌದಿ ಮಣ್ಣಿನಲ್ಲಿ ಜಮಾವಣೆ ಮಾಡಿದೆ.
ಒಂದೆಡೆ ಯುದ್ಧ ಪೀಡಿತ ಇರಾನ್ ಮತ್ತು ಅಮೆರಿಕ ನಡುವೆ ಏಕೈಕ ರಹಸ್ಯ ಸಂಧಾನಕಾರನಾಗಿ ನಟಿಸುತ್ತಿರುವ ಇಸ್ಲಾಮಾಬಾದ್, ಇನ್ನೊಂದೆಡೆ ಇರಾನ್‌ನ ಕಡು ವೈರಿ ರಾಷ್ಟ್ರಕ್ಕೆ ಯುದ್ಧ ಸಾಮಗ್ರಿಗಳನ್ನು ಪೂರೈಸುತ್ತಿರುವುದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಸೌದಿ ಮಣ್ಣಿನಲ್ಲಿ ಪಾಕಿಸ್ತಾನಿ ಸೈನ್ಯ ಮತ್ತು ಚೀನಾದ ಕ್ಷಿಪಣಿ ಆರ್ಭಟ!

ಮೂವರು ಉನ್ನತ ಪಾಕಿಸ್ತಾನಿ ಭದ್ರತಾ ಅಧಿಕಾರಿಗಳು ಮತ್ತು ಇಬ್ಬರು ಸರ್ಕಾರಿ ಮೂಲಗಳು ಈ ಭೀಕರ ಸೇನಾ ನಿಯೋಜನೆಯನ್ನು ಖಚಿತಪಡಿಸಿದ್ದಾರೆ. ಈ ರಹಸ್ಯ ಕಾರ್ಯಾಚರಣೆಯ ಭಾಗವಾಗಿ ಚೀನಾ ಮತ್ತು ಪಾಕಿಸ್ತಾನ ಜಂಟಿಯಾಗಿ ನಿರ್ಮಿಸಿರುವ 16 ಜೆಎಫ್-17 ಯುದ್ಧ ವಿಮಾನಗಳು ಕಳೆದ ಏಪ್ರಿಲ್ ಆರಂಭದಲ್ಲೇ ಸೌದಿ ಅರೇಬಿಯಾವನ್ನು ತಲುಪಿವೆ. ಇದರೊಂದಿಗೆ ಎರಡು ಸ್ಕ್ವಾಡ್ರನ್ ಡ್ರೋನ್‌ಗಳು ಹಾಗೂ ಚೀನಾದ ಭೀಕರ HQ-9 ಮೇಲ್ಮೈಯಿಂದ ವಾಯುಗಾಮಿ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ನಿಯೋಜಿಸಲಾಗಿದೆ.
ಅತ್ಯಂತ ಆಘಾತಕಾರಿ ವಿಷಯವೆಂದರೆ, ಸೌದಿ ಮಣ್ಣಿನಲ್ಲಿರುವ ಈ ಎಲ್ಲಾ ಯುದ್ಧ ವಿಮಾನ ಮತ್ತು ಕ್ಷಿಪಣಿಗಳನ್ನು ಕಾರ್ಯಾಚರಣೆಗೊಳಿಸುತ್ತಿರುವುದು ಪಾಕಿಸ್ತಾನಿ ಮಿಲಿಟರಿ ಸಿಬ್ಬಂದಿಯೇ ಆಗಿದ್ದು, ಇದಕ್ಕೆ ಬೇಕಾದ ಸಂಪೂರ್ಣ ಧನಸಹಾಯವನ್ನು ಸೌದಿ ಅರೇಬಿಯಾ ನೀಡುತ್ತಿದೆ. ಇದರ ಜೊತೆಗೆ ಪಾಕಿಸ್ತಾನದ ಯುದ್ಧ ನೌಕೆಗಳನ್ನು ಸೌದಿಗೆ ಕಳುಹಿಸುವ ಸಿದ್ಧತೆಯೂ ನಡೆದಿದೆ ಎನ್ನಲಾಗಿದೆ.

ಜೆಡಿ ವ್ಯಾನ್ಸ್, ಡೊನಾಲ್ಡ್ ಟ್ರಂಪ್ ಮತ್ತು ಮುನೀರ್ ಅವರ ರಹಸ್ಯ ಮಾತುಕತೆ!

ಪಾಕಿಸ್ತಾನದ ಈ ನಡೆ ಇಡೀ ಜಗತ್ತಿಗೆ ಶಾಕ್ ನೀಡಲು ಕಾರಣ ಅದರ ವಿರೋಧಾಭಾಸದ ನಡೆಯಾಗಿದೆ. ಕಳೆದ ಮಾರ್ಚ್ ಅಂತ್ಯದಿಂದ ಅಮೆರಿಕ ಮತ್ತು ಇರಾನ್ ನಡುವಿನ ಏಕೈಕ ಸಂಧಾನದ ಕೊಂಡಿ ಪಾಕಿಸ್ತಾನವೇ ಆಗಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಕಳೆದ ಏಪ್ರಿಲ್‌ನಲ್ಲಿ ಇಸ್ಲಾಮಾಬಾದ್‌ಗೆ ಭೇಟಿ ನೀಡಿ ಇರಾನ್ ನಿಯೋಗದೊಂದಿಗೆ ರಹಸ್ಯವಾಗಿ ಮೊದಲ ಹಂತದ ನೇರ ಶಾಂತಿ ಮಾತುಕತೆ ನಡೆಸಿದ್ದರು. ಅಷ್ಟೇ ಅಲ್ಲದೆ, ಪಾಕಿಸ್ತಾನದ ಆರ್ಮಿ ಚೀಫ್ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸರಣಿ ಮಾತುಕತೆ ನಡೆಸಿದ್ದರು.
ಸ್ವತಃ ಡೊನಾಲ್ಡ್ ಟ್ರಂಪ್ ಅವರೇ, ನಾನು ಆಸಿಮ್ ಮುನೀರ್ ಮತ್ತು ಶೆಹಬಾಜ್ ಷರೀಫ್ ಅವರೊಂದಿಗೆ ಮಾತನಾಡಿದ ನಂತರವೇ ಇರಾನ್ ಮೇಲಿನ ಮುಂದಿನ ಭೀಕರ ದಾಳಿಗಳನ್ನು ಸದ್ಯಕ್ಕೆ ತಡೆಹಿಡಿದಿದ್ದೇನೆ ಎಂದು ಸಾರ್ವಜನಿಕವಾಗಿ ಒಪ್ಪಿಕೊಂಡಿದ್ದರು. ಇರಾನ್ ಕೂಡ ಪಾಕಿಸ್ತಾನದ ಮಣ್ಣಿನಲ್ಲಿ ಮಾತುಕತೆಗೆ ಒಪ್ಪಿಕೊಂಡಿತ್ತು. ಆದರೆ ಈ ಎಲ್ಲದರ ನಡುವೆ, ಪಾಕ್ ಸೇನೆ ಸೌದಿಯಲ್ಲಿ ಯುದ್ಧ ಸನ್ನದ್ಧ ಸ್ಥಿತಿಯಲ್ಲಿ ನಿಂತಿರುವುದು ಇರಾನ್‌ಗೆ ಮಾಡಿದ ದ್ರೋಹ ಎನ್ನಲಾಗುತ್ತಿದೆ.

ಸೌದಿಗೆ ಪಾಕಿಸ್ತಾನದ ಪರಮಾಣು ರಕ್ಷಣೆಯ ಭೀಕರ ಒಪ್ಪಂದ..?

ಕಳೆದ ವರ್ಷ ಸೌದಿ ಮತ್ತು ಪಾಕಿಸ್ತಾನದ ನಡುವೆ ಸಹಿ ಮಾಡಲಾದ ರಹಸ್ಯ ಒಪ್ಪಂದದ ಪ್ರಕಾರ, ಸೌದಿ ಅರೇಬಿಯಾದ ರಕ್ಷಣೆಗಾಗಿ ಗರಿಷ್ಠ 80,000 ಪಾಕಿಸ್ತಾನಿ ಸೈನಿಕರನ್ನು ಅಲ್ಲಿಗೆ ಕಳುಹಿಸಲು ಅವಕಾಶವಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಈ ಹಿಂದೆ, ಸೌದಿ ಅರೇಬಿಯಾ ದೇಶವು ಪಾಕಿಸ್ತಾನದ ಪರಮಾಣು ಛತ್ರಿಯ ಅಡಿಯಲ್ಲಿದೆ ಎಂದು ಹೇಳುವ ಮೂಲಕ ಸೌದಿಯ ರಕ್ಷಣೆಗಾಗಿ ಪಾಕಿಸ್ತಾನ ಪರಮಾಣು ಬಾಂಬ್ ಬಳಸಲೂ ಹಿಂಜರಿಯುವುದಿಲ್ಲ ಎಂಬ ಭೀಕರ ಮುನ್ಸೂಚನೆ ನೀಡಿದ್ದರು.
ಇತ್ತೀಚೆಗೆ ಇರಾನ್ ಪಡೆಗಳು ಸೌದಿಯ ತೈಲ ಮೂಲಸೌಕರ್ಯಗಳ ಮೇಲೆ ನಡೆಸಿದ ಭೀಕರ ದಾಳಿಯಲ್ಲಿ ಸೌದಿ ಪ್ರಜೆಯೊಬ್ಬರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಸೌದಿ ಕೂಡ ಇರಾನ್ ಮೇಲೆ ಸದ್ದಿಲ್ಲದೆ ಸರಣಿ ಪ್ರತಿದಾಳಿ ನಡೆಸಿತ್ತು. ಈ ವೇಳೆ ಆಸಿಮ್ ಮುನೀರ್ ನೇತೃತ್ವದಲ್ಲಿ ನಡೆದ ಕಾರ್ಪ್ಸ್ ಕಮಾಂಡರ್ಸ್ ಸಭೆಯಲ್ಲಿ ಪಾಕಿಸ್ತಾನವು ಇರಾನ್ ದಾಳಿಯನ್ನು ಅಪಾಯಕಾರಿ ಉಲ್ಲಂಘನೆ ಎಂದು ಬಹಿರಂಗವಾಗಿ ಖಂಡಿಸಿ ಸೌದಿಗೆ ತನ್ನ ಬೇಷರತ್ ಬೆಂಬಲ ಘೋಷಿಸಿತ್ತು.

ಇತಿಹಾಸದ ಅತಿ ದೊಡ್ಡ ತೈಲ ಬಿಕ್ಕಟ್ಟು ಮತ್ತು 6 ವಾರಗಳ ಕದನ ವಿರಾಮ!

ಕಳೆದ ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಜಂಟಿಯಾಗಿ ಇರಾನ್ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿ ಅಲ್ಲಿನ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ್ದವು. ಈ ಘಟನೆಯಿಂದ ಭುಗಿಲೆದ್ದ ಯುದ್ಧವು ಜಗತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ಇಂಧನ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇರಾನ್ ದೇಶವು ಜಾಗತಿಕ ತೈಲ ಸಾಗಣೆಯ ಪ್ರಾಣನಾಳವಾದ ಹೊರ್ಮುಜ್ ಜಲಸಂಧಿಯನ್ನು ಬಹುತೇಕ ಬಂದ್ ಮಾಡಿದ್ದರಿಂದ ಜಗತ್ತಿನ ಶೇ.20 ರಷ್ಟು ಕಚ್ಚಾ ತೈಲ ಸಾಗಣೆ ಸ್ಥಗಿತಗೊಂಡು ಪೆಟ್ರೋಲ್ ಬೆಲೆ ಗಗನಕ್ಕೇರಿದೆ.
ಪ್ರಸ್ತುತ ಪಾಕಿಸ್ತಾನದ ಮಧ್ಯಸ್ಥಿಕೆಯಿಂದಾಗಿ ಕಳೆದ 6 ವಾರಗಳಿಂದ ಯುದ್ಧಭೂಮಿಯಲ್ಲಿ ಕದನ ವಿರಾಮ ಜಾರಿಯಲ್ಲಿದೆ. ಕದನ ವಿರಾಮವನ್ನು ಉಳಿಸಲು ನಾವು ಹಗಲಿರುಳು ಅಮೆರಿಕ ಮತ್ತು ಇರಾನ್ ಜೊತೆ ಸಂಪರ್ಕದಲ್ಲಿದ್ದೇವೆ ಎಂದು ಪಾಕಿಸ್ತಾನ ಹೇಳಿಕೊಳ್ಳುತ್ತಿದೆ. ಆದರೆ ಸೌದಿಯಲ್ಲಿ ಪಾಕ್ ಸೇನೆಯ ರಹಸ್ಯ ಜಮಾವಣೆ ಕುರಿತು ರಾಯಿಟರ್ಸ್ ಕೇಳಿದ ಪ್ರಶ್ನೆಗೆ ಪಾಕಿಸ್ತಾನ ಮಿಲಿಟರಿ ಮತ್ತು ಸೌದಿ ಸರ್ಕಾರ ಉತ್ತರಿಸದೆ ಮೌನಕ್ಕೆ ಶರಣಾಗಿದೆ,(ಏಜೆನ್ಸೀಸ್​).