ಅಮೆರಿಕಕ್ಕೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ 'ರೆಡ್ ಫ್ಲ್ಯಾಗ್': ಇರಾನ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾರಾ ಮುನೀರ್? 
ವಿದೇಶ

ಅಮೆರಿಕಕ್ಕೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ 'ರೆಡ್ ಫ್ಲ್ಯಾಗ್': ಇರಾನ್ ಏಜೆಂಟ್ ಆಗಿ ಕೆಲಸ ಮಾಡ್ತಿದ್ದಾರಾ ಮುನೀರ್? Asim Munir

ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾದ ಮೇಲೆ ಪಾಕಿಸ್ತಾನದ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್(Asim Munir) ಅವರೊಂದಿಗೆ ಅತಿಯಾದ ಗೆಳೆತನ ಬೆಳೆಸಿದ್ದಾರೆ. ಅನೇಕ ವೇದಿಕೆಗಳಲ್ಲಿ ಮುನೀರ್ ಅವರನ್ನು ಫೆಂಟಾಸ್ಟಿಕ್ ವ್ಯಕ್ತಿ ಮತ್ತು 'ಗ್ರೇಟ್ ಫೈಟರ್' ಎಂದು ಟ್ರಂಪ್ ಹೊಗಳಿದ್ದಾರೆ. ಆದರೆ, ಅಮೆರಿಕದ ಪ್ರತಿಷ್ಠಿತ ಫಾಕ್ಸ್ ನ್ಯೂಸ್ ಡಿಜಿಟಲ್ ಪ್ರಕಟಿಸಿರುವ ವಿಶೇಷ ವರದಿ ಈಗ ಟ್ರಂಪ್ ಆಡಳಿತಕ್ಕೆ ನಡುಕ ಹುಟ್ಟಿಸಿದೆ.

ಟ್ರಂಪ್ ಪಾಕಿಸ್ತಾನಿಗಳನ್ನು ನಂಬಬಾರದು!

ಫೌಂಡೇಶನ್ ಫಾರ್ ಡಿಫೆನ್ಸ್ ಆಫ್ ಡೆಮಾಕ್ರಸಿಸ್ (FDD) ನ ಬಿಲ್ ರೋಗ್ಗಿಯೊ ಅವರು ಫಾಕ್ಸ್ ನ್ಯೂಸ್ ಡಿಜಿಟಲ್ ಜೊತೆ ಮಾತನಾಡುತ್ತಾ ತೀವ್ರ ಎಚ್ಚರಿಕೆ ನೀಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ಅಮೆರಿಕದ ಗೆಳೆಯನಂತೆ ನಟಿಸಿ ತಾಲಿಬಾನ್‌ಗೆ ಬೆಂಬಲ ನೀಡಿದ ಇತಿಹಾಸ ಪಾಕಿಸ್ತಾನಕ್ಕಿದೆ. ಈಗ ಇರಾನ್ ವಿಷಯದಲ್ಲೂ ಮುನೀರ್ ಇದೇ ಕೆಲಸ ಮಾಡುತ್ತಿದ್ದಾರೆ. ಅವರ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಜೊತೆಗಿನ ನಿಕಟ ಸಂಬಂಧ ಅಮೆರಿಕಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ.

ಇರಾನ್ ಹಿತಾಸಕ್ತಿಯ ರಕ್ಷಕನಾದರೇ ಮುನೀರ್..?

ಆಸಿಮ್ ಮುನೀರ್ ಅವರು ಹಿಂದೆ ಇರಾನ್‌ನ ಪ್ರಭಾವಿ ಕಮಾಂಡರ್ ಆಗಿದ್ದ ಕಾಸಿಂ ಸುಲೈಮಾನಿ ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಅಂಶ ಈಗ ಹೊರಬಂದಿದೆ. ಮುನೀರ್ ಅವರು ಟ್ರಂಪ್ ಅವರ ನಂಬಿಕೆಯನ್ನು ಗಳಿಸಿ, ಆ ಮೂಲಕ ಇರಾನ್‌ನ ಹಿತಾಸಕ್ತಿಗಳನ್ನು ರಕ್ಷಿಸಲು ಅಥವಾ ಅಮೆರಿಕದ ತಂತ್ರಗಾರಿಕೆಯನ್ನು ಸೋಲಿಸಲು ಸಂಚು ರೂಪಿಸಿರಬಹುದು ಎಂದು ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.

ಮುಷರಫ್ ನಂತರದ ಅತ್ಯಂತ ಶಕ್ತಿಶಾಲಿ ನಾಯಕ

1968ರಲ್ಲಿ ಜನಿಸಿದ ಆಸಿಮ್ ಮುನೀರ್, ಮಿಲಿಟರಿ ಇಂಟೆಲಿಜೆನ್ಸ್ ಮತ್ತು ಐಎಸ್‌ಐ (ISI) ಎರಡನ್ನೂ ಮುನ್ನಡೆಸಿದ ಏಕೈಕ ಸೇನಾ ಮುಖ್ಯಸ್ಥರಾಗಿದ್ದಾರೆ. ವಿಶ್ಲೇಷಕರ ಪ್ರಕಾರ, ಪಾಕಿಸ್ತಾನದಲ್ಲಿ ಪ್ರಧಾನಿ ಶೆಹಬಾಜ್ ಷರೀಫ್ ಕೇವಲ ನಾಮಮಾತ್ರದ ನಾಯಕರಾಗಿದ್ದು. ಆದರೆ, ಅಸಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಆಗಿದ್ದಾರೆ.

ಆಪರೇಷನ್ ಸಿಂಧೂರ್ ಮತ್ತು ಫೀಲ್ಡ್ ಮಾರ್ಷಲ್ ಬಿರುದು

ಭಾರತದ ವಿರುದ್ಧದ 'ಆಪರೇಷನ್ ಸಿಂಧೂರ್' ಸಮಯದಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸಿದ ಹೊರತಾಗಿಯೂ ಮುನೀರ್ ಅವರು ತಮಗೆ ತಾವೇ ಫೀಲ್ಡ್ ಮಾರ್ಷಲ್ ಎಂದು ಬಡ್ತಿ ನೀಡಿಕೊಂಡಿದ್ದರು. ಇದು ಅವರ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ ಎಂದು ಲೋವಿ ಇನ್‌ಸ್ಟಿಟ್ಯೂಟ್‌ನ ಸಂಶೋಧಕ ಚಾರ್ಲ್ಸ್ ಲಿಯಾನ್ಸ್-ಜೋನ್ಸ್ ತಿಳಿಸಿದ್ದಾರೆ.

ಟ್ರಂಪ್ ಮತ್ತು ಮುನೀರ್ ಅವರ ಸಂಧಾನದ 'ಡಬಲ್ ಗೇಮ್'

ಪ್ರಸ್ತುತ ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಶಾಂತಿ ಮಾತುಕತೆಗಾಗಿ ಮುನೀರ್ ಇರಾನ್‌ನಲ್ಲಿದ್ದಾರೆ. ಟ್ರಂಪ್ ಅವರನ್ನು 'ನನ್ನ ಫೇವರೆಟ್ ಫೀಲ್ಡ್ ಮಾರ್ಷಲ್ ಎಂದು ಕರೆಯುತ್ತಿದ್ದಾರೆ. ಆದರೆ, ಅಮೆರಿಕದ ತನಿಖಾ ಸಂಸ್ಥೆಗಳ ಪ್ರಕಾರ, ಮುನೀರ್ ಅವರ ಈ ದ್ವಿಮುಖ ಪಾತ್ರ ಅಮೆರಿಕದ ಗುಪ್ತಚರ ಇಲಾಖೆಯ ಮಾಹಿತಿಯನ್ನು ಇರಾನ್ ದೇಶಕ್ಕೆ ಸೋರಿಕೆ ಮಾಡುವ ಸಾಧ್ಯತೆ ಇದೆ.
ಅಮೆರಿಕವು ಇರಾನ್ ಅನ್ನು ಹದ್ದುಬಸ್ತಿನಲ್ಲಿಡಲು ಪಾಕಿಸ್ತಾನದ ಸಹಾಯ ಪಡೆಯುತ್ತಿದೆಯೇ ಅಥವಾ ಪಾಕಿಸ್ತಾನವು ಇರಾನ್ ಅನ್ನು ಉಳಿಸಲು ಅಮೆರಿಕವನ್ನು ದಾರಿ ತಪ್ಪಿಸುತ್ತಿದೆಯೇ ಎಂಬುದು ಸದ್ಯದ ದೊಡ್ಡ ಪ್ರಶ್ನೆಯಾಗಿದೆ. ಪಾಕಿಸ್ತಾನದ ವಿಶ್ವಾಸಾರ್ಹತೆಯ ಇತಿಹಾಸವನ್ನು ನೋಡಿದರೆ, ಟ್ರಂಪ್ ಅವರ ಈ ಅತಿಯಾದ ನಂಬಿಕೆ ಭಾರಿ ಬೆಲೆ ತೆರಬೇಕಾಗಬಹುದು ಎಂದು ವರದಿ ಎಚ್ಚರಿಸಿದೆ,(ಏಜೆನ್ಸೀಸ್).