ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ 
ವಿದೇಶ

ಜಗತ್ತಿನೆದುರು ಮತ್ತೊಮ್ಮೆ ಬೆತ್ತಲಾದ ಪಾಕಿಸ್ತಾನ: ದಿತ್ವಾ ಸಂತ್ರಸ್ತರಿಗೆ ಅವಮಾನ, ಪಾಕ್​ ವಿರುದ್ಧ ಆಕ್ರೋಶ! Pakistan

ಪ್ರಮುಖ ಮುಖ್ಯಾಂಶಗಳು

  • ದಿತ್ವಾ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಶ್ರೀಲಂಕಾ ಭಾರಿ ಸಂಕಷ್ಟಗಳನ್ನು ಎದುರಿಸುತ್ತಿದೆ
  • ಮಾನವೀಯತೆ ದೃಷ್ಟಿಯಿಂದ ಭಾರತ, ಶ್ರೀಲಂಕಾ ಬೆನ್ನಿಗೆ ನಿಂತು ಸಹಾಯ ಮಾಡುತ್ತಿದೆ
  • ಲಂಕಾಗೆ ಸಹಾಯ ಮಾಡಲು ಹೋಗಿ ಜಗತ್ತಿನ ಎದುರು ಬೆತ್ತಲಾದ ಪಾಕಿಸ್ತಾನ
ಇಸ್ಲಮಾಬಾದ್​: ದಿತ್ವಾ ಚಂಡಮಾರುತದ ಅಬ್ಬರಕ್ಕೆ ಸಿಲುಕಿ ಶ್ರೀಲಂಕಾ ಭಾರಿ ಸಂಕಷ್ಟಗಳನ್ನು ಎದುರಿಸುತ್ತಿದೆ. ಈಗಾಗಲೇ ನೂರಾರು ಮಂದಿ ಸಾವಿಗೀಡಾಗಿದ್ದು, ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಭಾರತ, ಶ್ರೀಲಂಕಾ ಬೆನ್ನಿಗೆ ನಿಂತು ಸಹಾಯ ಮಾಡುತ್ತಿದೆ. ಇದರ ನಡುವೆ ನಾನೇನು ಕಮ್ಮಿ ಇಲ್ಲ ಎನ್ನುವಂತೆ ಲಂಕಾಗೆ ಸಹಾಯ ಮಾಡಲು ಹೋಗಿ ಪಾಕಿಸ್ತಾನ ( Pakistan ) ಮತ್ತೊಮ್ಮೆ ಜಗತ್ತಿನ ಎದುರು ಬೆತ್ತಲಾಗಿದೆ.
ದಿತ್ವಾ ಚಂಡಮಾರುತದ ಸಂತ್ರಸ್ತರಿಗೆ ಪರಿಹಾರವಾಗಿ ಪಾಕಿಸ್ತಾನ ಲಂಕಾಗೆ ಕಳುಹಿಸಿಕೊಟ್ಟಿರುವ ಆಹಾರ ವಸ್ತುಗಳೆಲ್ಲ ಅವಧಿ ಮೀರಿರುವುದು ಕೊಲಂಬೊ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಗತ್ಯ ವಸ್ತುಗಳ ಉತ್ಪಾದನಾ ದಿನಾಂಕ 2022 ಆಗಿದ್ದು, ಅವು 2024ರ ಅಕ್ಟೋಬರ್ ತಿಂಗಳಲ್ಲಿ ಎಕ್ಸ್​ಪೈರಿ ಆಗಿವೆ. ಈ ಹಿನ್ನೆಲೆಯಲ್ಲಿ ಶ್ರೀಲಂಕಾದ ವಿಪತ್ತು ನಿರ್ವಹಣೆ ಮತ್ತು ವಿದೇಶಾಂಗ ಸಚಿವಾಲಯ ಗಂಭೀರ ಕಳವಳ ವ್ಯಕ್ತಪಡಿಸಿವೆ. ಇನ್ನು ಈ ವಿಚಾರವಾಗಿ ಪಾಕಿಸ್ತಾನದ ಸರ್ಕಾರ ಈವರೆಗೂ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ.
ಇನ್ನು ಈ ಘಟನೆಯಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ರಾಜಕೀಯ ಮತ್ತು ರಾಜತಾಂತ್ರಿಕ ಹಿನ್ನಡೆ ಉಂಟಾಗಿದೆ. ಮಾನವೀಯ ನೆರವು ನೀಡುವಲ್ಲಿ ಈ ರೀತಿಯ ನಿರ್ಲಕ್ಷ್ಯವನ್ನು ನೆಟ್ಟಿಗರು ತೀವ್ರವಾಗಿ ಖಂಡಿಸಿದ್ದಾರೆ. ಪಾಕಿಸ್ತಾನವು ಲಂಕಾದ ಸಂತ್ರಸ್ತರಿಗೆ ಅವಧಿ ಮೀರಿದ ಸರಕುಗಳನ್ನು ಕಳುಹಿಸುವ ಮೂಲಕ ಅಗೌರವ ತೋರುತ್ತಿದೆ ಎಂದು ಕಿಡಿಕಾರಿದ್ದಾರೆ. ಅಯ್ಯೋ ನಿಮ್ಮ ಆಹಾರ ಪದಾರ್ಥಗಳ ಮೇಲಿರುವ ಲೇಬಲ್‌ಗಳನ್ನು ಪರಿಶೀಲಿಸದೆ ಸಾರ್ವಜನಿಕವಾಗಿ ಏಕೆ ಫೋಟೋ ಹಂಚಿಕೊಂಡಿದ್ದೀರಿ ಎಂದು ಕೆಲ ನೆಟ್ಟಿಗರು ಪಾಕ್​ ಕಾಲೆಳೆದಿದ್ದಾರೆ.
ಇದರ ನಡುವೆ ಭಾರತ, ಲಂಕಾ ಬೆನ್ನಿಗೆ ನಿಂತಿದೆ. ನೆರೆಯವರಿಗೆ ನಮ್ಮ ಮೊದಲ ಆದ್ಯತೆ ಎಂಬ ನಿಯಮದಲ್ಲಿ ಲಂಕಾಗೆ ನಿರಂತರವಾಗಿ ಪರಿಹಾರ ಸಾಮಾಗ್ರಿಗಳನ್ನು ಭಾರತ ಕಳುಹಿಸುತ್ತಿದೆ. ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ, ಭಾರತವು ನವೆಂಬರ್ 28 ರಿಂದ ವಾಯು ಮತ್ತು ಸಮುದ್ರ ಮಾರ್ಗಗಳ ಮೂಲಕ 53 ಟನ್ ಪರಿಹಾರ ಸಾಮಗ್ರಿಗಳನ್ನು ತಲುಪಿಸಿದೆ. ವಿದೇಶಾಂಗ ಸಚಿವಾಲಯ (MEA) ಪ್ರಕಾರ, ಶ್ರೀಲಂಕಾದಿಂದ 2,000 ಕ್ಕೂ ಹೆಚ್ಚು ಭಾರತೀಯರನ್ನು ಸ್ಥಳಾಂತರಿಸಲಾಗಿದೆ.

ಭಾರತದ ವಿರುದ್ಧ ಪಾಕ್​ ಆರೋಪ

ಮತ್ತೊಂದೆಡೆ ಶ್ರೀಲಂಕಾಗೆ ತನ್ನ ಸರಕುಗಳನ್ನು ಕಳುಹಿಸಲು ಭಾರತ ತನ್ನ ವಾಯುಮಾರ್ಗದ ಅನುಮತಿಯನ್ನು ನೀಡಲಿಲ್ಲ ಎಂದು ಪಾಕಿಸ್ತಾನ ಸುಳ್ಳು ಪ್ರಚಾರವನ್ನು ಪ್ರಾರಂಭಿಸಿದೆ. ಆದರೆ, ಈ ವಿಚಾರವಾಗಿ ಭಾರತ ತಕ್ಷಣ ಪ್ರತಿಕ್ರಿಯಿಸಿದ್ದು, ಶ್ರೀಲಂಕಾಕ್ಕೆ ಮಾನವೀಯ ನೆರವು ನೀಡುವ ಉದ್ದೇಶದಿಂದ ಪಾಕಿಸ್ತಾನಿ ವಿಮಾನಕ್ಕೆ ಅನುಮತಿ ನೀಡಲಾಗಿದೆ ಎಂದಿದೆ. ಪಾಕಿಸ್ತಾನ ಸೋಮವಾರ ಮಧ್ಯಾಹ್ನ 1 ಗಂಟೆಗೆ ವಾಯುಪ್ರದೇಶ ಅನುಮತಿಗಾಗಿ ಭಾರತವನ್ನು ಸಂಪರ್ಕಿಸಿತು ಮತ್ತು ಸಂಜೆ 4.30 ಕ್ಕೆ ಅನುಮತಿ ನೀಡಿದ್ದೇವೆ ಎಂದು ಭಾರತದ ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ, ಪಾಕಿಸ್ತಾನ ಇಂತಹ ಕೆಲಸಗಳನ್ನು ಮಾಡಿದ್ದಕ್ಕಾಗಿ ಟೀಕೆಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. 2015ರ ನೇಪಾಳ ಭೂಕಂಪದ ಸಮಯದಲ್ಲಿ, ಹಿಂದೂ ಬಹುಸಂಖ್ಯಾತ ದೇಶವಾದ ನೇಪಾಳಕ್ಕೆ ಗೋಮಾಂಸದಿಂದ ಸಿದ್ಧಪಡಿಸಿದ ಊಟಗಳನ್ನು ಕಳುಹಿಸಿತ್ತು. ಇದು ಅಲ್ಲಿನ ಸಾರ್ವಜನಿಕರ ಕೋಪಕ್ಕೆ ಕಾರಣವಾಗಿತ್ತು.
ಇನ್ನು ದಿತ್ವಾ ಚಂಡಮಾರುತದ ಪ್ರಭಾವದಿಂದ ಶ್ರೀಲಂಕಾ ತತ್ತರಿಸುತ್ತಿದೆ. ಪ್ರವಾಹದಿಂದ ಅಕ್ಷರಶಃ ಲಂಕಾ ಮುಳುಗಿ ಹೋಗಿದೆ. ಲಂಕಾದಲ್ಲಿ ಅಲ್ಲಲ್ಲಿ ಭೂಕುಸಿತಗಳು ಸಂಭವಿಸುತ್ತಿವೆ. ಸುಮಾರು 25 ಜಿಲ್ಲೆಗಳಲ್ಲಿ 366ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸುಮಾರು 400 ಜನರು ಕಾಣೆಯಾಗಿದ್ದು, 10 ದಶಲಕ್ಷಕ್ಕೂ ಹೆಚ್ಚು ಜನರು ದಿತ್ವಾ ಹೊಡೆತಕ್ಕೆ ನಲುಗಿದ್ದಾರೆ, (ಏಜೆನ್ಸೀಸ್​).