ಸಾಲದ ಸುಳಿಯಲ್ಲಿ ಸಿಲುಕಿದ ಪಾಕ್​: ಭಿಕ್ಷಾಪಾತ್ರೆ ಹಿಡಿದು ಗಲ್ಫ್​ ಯಾತ್ರೆಗೆ ಹೊರಟ ಶಹಬಾಜ್​ಗೆ ಸೌದಿ ಸಂಜೀವಿನಿ! 
ವಿದೇಶ

ಸಾಲದ ಸುಳಿಯಲ್ಲಿ ಸಿಲುಕಿದ ಪಾಕ್​: ಭಿಕ್ಷಾಪಾತ್ರೆ ಹಿಡಿದು ಗಲ್ಫ್​ ಯಾತ್ರೆಗೆ ಹೊರಟ ಶಹಬಾಜ್​ಗೆ ಸೌದಿ ಸಂಜೀವಿನಿ! Pakistan Economy

ಇಸ್ಲಾಮಾಬಾದ್: ತೀವ್ರ ಆರ್ಥಿಕ ದಿವಾಳಿತನದ ಭೀತಿಯಲ್ಲಿರುವ ಪಾಕಿಸ್ತಾನಕ್ಕೆ(Pakistan Economy) ಸೌದಿ ಅರೇಬಿಯಾ ಮತ್ತೊಮ್ಮೆ ಸಂಕಟ ಬಂದಾಗ ವೆಂಕಟ ರಮಣನಂತೆ ಧಾವಿಸಿದೆ. ಐಎಂಎಫ್ (IMF) ಷರತ್ತುಗಳು ಮತ್ತು ವಿದೇಶಿ ಸಾಲ ಮರುಪಾವತಿಯ ಒತ್ತಡದ ನಡುವೆ, ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ 3 ಬಿಲಿಯನ್ ಡಾಲರ್ (ಸುಮಾರು ₹25,000 ಕೋಟಿ) ಹಣಕಾಸಿನ ನೆರವು ಘೋಷಿಸಿದೆ. ಇದರೊಂದಿಗೆ ಈಗಾಗಲೇ ನೀಡಿದ್ದ 5 ಬಿಲಿಯನ್ ಡಾಲರ್ ಸೌಲಭ್ಯವನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸಿದೆ.

ವಾಷಿಂಗ್ಟನ್‌ನಲ್ಲಿ ಪಾಕ್ ಹಣಕಾಸು ಸಚಿವರಿಂದ ಅಧಿಕೃತ ಘೋಷಣೆ

ವಿಶ್ವ ಬ್ಯಾಂಕ್ ಮತ್ತು ಐಎಂಎಫ್ ವಸಂತ ಕಾಲದ ಸಭೆಯಲ್ಲಿ ಭಾಗವಹಿಸಲು ಅಮೆರಿಕದ ವಾಷಿಂಗ್ಟನ್‌ಗೆ ಭೇಟಿ ನೀಡಿರುವ ಪಾಕಿಸ್ತಾನದ ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್, ಈ ಮಹತ್ವದ ಬೆಳವಣಿಗೆಯನ್ನು ಖಚಿತಪಡಿಸಿದ್ದಾರೆ.
ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ಹೆಚ್ಚುವರಿಯಾಗಿ 3 ಬಿಲಿಯನ್ ಡಾಲರ್ ಡೆಪಾಸಿಟ್ ನೀಡಲು ಒಪ್ಪಿಕೊಂಡಿದೆ. ಅಷ್ಟೇ ಅಲ್ಲದೆ, ಚಾಲ್ತಿಯಲ್ಲಿದ್ದ 5 ಬಿಲಿಯನ್ ಡಾಲರ್ ಮೊತ್ತವನ್ನು ಪ್ರತಿ ವರ್ಷ ನವೀಕರಿಸುವ ಬದಲು, ಈಗ ನೇರವಾಗಿ ಮೂರು ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ ಎಂದು ಔರಂಗಜೇಬ್ ತಿಳಿಸಿದ್ದಾರೆ.
ಈ ಕ್ರಮವು ಪಾಕಿಸ್ತಾನದ ವಿದೇಶಿ ವಿನಿಮಯ ಮೀಸಲು ಹೆಚ್ಚಿಸಲು ಮತ್ತು ಕುಸಿಯುತ್ತಿರುವ ಆರ್ಥಿಕತೆಯನ್ನು ಸ್ಥಿರಗೊಳಿಸಲು ಸಹಾಯ ಮಾಡಲಿದೆ ಎಂದು ಮುಹಮ್ಮದ್ ಆಶಿಸಿದ್ದಾರೆ.

ಯುಎಇ ಸಾಲ ತೀರಿಸಲು ಸೌದಿ ನೆರವು ಅನಿವಾರ್ಯ!

ಪಾಕಿಸ್ತಾನದ ಮುಂದಿರುವ ಸದ್ಯದ ದೊಡ್ಡ ಸವಾಲೆಂದರೆ ಸಂಯುಕ್ತ ಅರಬ್ ಎಮಿರೇಟ್ಸ್‌ಗೆ (UAE) ಈ ತಿಂಗಳಲ್ಲೇ ಪಾವತಿಸಬೇಕಿರುವ 3.5 ಬಿಲಿಯನ್ ಡಾಲರ್ ಸಾಲ. ಒಂದು ವೇಳೆ ಸೌದಿ ಅರೇಬಿಯಾ ಈ ಹಣಕಾಸಿನ ನೆರವು ನೀಡದಿದ್ದರೆ ಪಾಕಿಸ್ತಾನವು ಸಾಲ ಮರುಪಾವತಿಯಲ್ಲಿ ಸುಸ್ತಿದಾರನಾಗಿ ಘೋಷಿಸಲ್ಪಡುವ ಅಪಾಯವಿತ್ತು. ಸೌದಿಯ ಈ ಡೆಪಾಸಿಟ್‌ನಿಂದಾಗಿ ಪಾಕಿಸ್ತಾನವು ಈಗ ಯುಎಇ ಸಾಲವನ್ನು ತೀರಿಸಿ ಸ್ವಲ್ಪ ನಿರಾಳವಾಗಬಹುದಾಗಿದೆ.

ಪ್ರಧಾನಿ ಶಹಬಾಜ್ ಶರೀಫ್ ಮೂರು ರಾಷ್ಟ್ರಗಳ ಪ್ರವಾಸ

ಸೌದಿ ಅರೇಬಿಯಾದ ಈ ಘೋಷಣೆಯು ಪ್ರಧಾನಿ ಶಹಬಾಜ್ ಶರೀಫ್ ಅವರ ವಿದೇಶಿ ಪ್ರವಾಸದ ಸಂದರ್ಭದಲ್ಲೇ ಬಂದಿರುವುದು ಗಮನಾರ್ಹವಾಗಿದೆ. ಏಪ್ರಿಲ್ 15 ರಿಂದ 18 ರವರೆಗೆ ಶರೀಫ್ ಅವರು ಸೌದಿ ಅರೇಬಿಯಾ, ಖತಾರ್ ಮತ್ತು ತುರ್ಕಿಯೆ ದೇಶಗಳಿಗೆ ಅಧಿಕೃತ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ವೇಳೆ ಸೌದಿ ದೊರೆಯೊಂದಿಗೆ ಹೆಚ್ಚಿನ ಹೂಡಿಕೆ ಮತ್ತು ಆರ್ಥಿಕ ಸಹಕಾರದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ.

ಐಎಂಎಫ್ ಕಠಿಣ ಷರತ್ತುಗಳು ಮತ್ತು ಪಾಕಿಸ್ತಾನದ ಅನಿವಾರ್ಯತೆ

ಅಂತಾರಾಷ್ಟ್ರೀಯ ಹಣಕಾಸು ನಿಧಿ (IMF) ಪಾಕಿಸ್ತಾನಕ್ಕೆ ಸಾಲ ನೀಡುವ ಮುನ್ನ ಒಂದು ಕಠಿಣ ಷರತ್ತನ್ನು ವಿಧಿಸಿತ್ತು. ಪಾಕಿಸ್ತಾನದ ಪ್ರಮುಖ ದ್ವಿಪಕ್ಷೀಯ ಸಾಲಗಾರರಾದ ಸೌದಿ ಅರೇಬಿಯಾ, ಚೀನಾ ಮತ್ತು ಯುಎಇ ತಮ್ಮ ಹಣದ ಡೆಪಾಸಿಟ್‌ಗಳನ್ನು ಕನಿಷ್ಠ ಮೂರು ವರ್ಷಗಳವರೆಗೆ ಪಾಕಿಸ್ತಾನದ ಬ್ಯಾಂಕುಗಳಲ್ಲೇ ಉಳಿಸಿಕೊಳ್ಳಬೇಕು ಎಂದು ಐಎಂಎಫ್ ತಿಳಿಸಿತ್ತು. ಸೌದಿಯ ಈ ನಿರ್ಧಾರವು ಐಎಂಎಫ್‌ನ ಸಾಲದ ಪ್ಯಾಕೇಜ್ ಅನ್ನು ಸುಗಮಗೊಳಿಸಲು ಪೂರಕವಾಗಿದೆ.

ಭಿಕ್ಷಾಪಾತ್ರೆ ಮತ್ತು ಸಾಲದ ಸುಳಿ!

ಪಾಕಿಸ್ತಾನವು ನಿರಂತರವಾಗಿ ನೆರೆರಾಷ್ಟ್ರಗಳು ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳಿಂದ ಸಾಲ ಪಡೆಯುತ್ತಲೇ ಸಾಗುತ್ತಿದೆ. ತಜ್ಞರ ಪ್ರಕಾರ, ಈ 3 ಬಿಲಿಯನ್ ಡಾಲರ್ ನೆರವು ಕೇವಲ ತಾತ್ಕಾಲಿಕ ಉಪಶಮನವಷ್ಟೇ.
ಪಾಕಿಸ್ತಾನದ ಹಣದುಬ್ಬರ ಗಗನಕ್ಕೇರಿದೆ.
ಜನಸಾಮಾನ್ಯರಿಗೆ ಆಹಾರ ಮತ್ತು ಇಂಧನದ ಬೆಲೆ ಏರಿಕೆ ದೊಡ್ಡ ಹೊರೆಯಾಗಿದೆ.
ಮೂಲಭೂತ ಆರ್ಥಿಕ ಸುಧಾರಣೆಗಳನ್ನು ಮಾಡದ ಹೊರತು ಕೇವಲ ಸೌದಿಯ ಡೆಪಾಸಿಟ್‌ಗಳಿಂದ ದೇಶವನ್ನು ರಕ್ಷಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ,(ಏಜೆನ್ಸೀಸ್).