ಪಾಕ್ ಕಳ್ಳನೋಟ: ಭಾರತದ ಮೇಲೆ ಕಣ್ಣಿಡಲು ಕೇವಲ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ, ಚೀನಾ ಸಾಥ್​! Pakistan  
ವಿದೇಶ

ಪಾಕ್ ಕಳ್ಳನೋಟ: ಭಾರತದ ಮೇಲೆ ಕಣ್ಣಿಡಲು ಕೇವಲ 16 ತಿಂಗಳಲ್ಲಿ 6 ಉಪಗ್ರಹ ಉಡಾವಣೆ, ಚೀನಾ ಸಾಥ್​! Pakistan

ಪ್ರಮುಖ ಮುಖ್ಯಾಂಶಗಳು

  • 16 ತಿಂಗಳುಗಳ ಅವಧಿಯಲ್ಲಿ ಆರು 'ಅರ್ಥ್ ಅಬ್ಸರ್ವೇಶನ್' ಉಪಗ್ರಹ ಉಡಾವಣೆ ಮಾಡಿದ ಪಾಕ್​
  • ಚೀನಾದ ಸಹಾಯದಿಂದ ಬಾಹ್ಯಕಾಶಕ್ಕೆ ಉಪಗ್ರಹಗಳನ್ನು ಉಡಾಯಿಸಿದ ಪಾಕಿಸ್ತಾನ
  • ಕೃಷಿ ಮತ್ತು ವಿಪತ್ತು ನಿರ್ವಹಣೆಗಾಗಿ ಈ ಉಪಗ್ರಹಗಳನ್ನು ಬಳಸಲಾಗುತ್ತಿದೆ ಎಂದಿರುವ ಪಾಕಿಸ್ತಾನ
  • ಆದರೆ ಭಾರತದ ಮೇಲೆ ನಿರಂತರವಾಗಿ ನಿಗಾ ಇಡುವ ಉದ್ದೇಶದಿಂದಲೇ ಉಪಗ್ರಹ ವಿನ್ಯಾಸ
ಇಸ್ಲಮಾಬಾದ್​: ಚೀನಾದ ಬೆಂಬಲದೊಂದಿಗೆ ಪಾಕಿಸ್ತಾನವು ( Pakistan ) ಕೇವಲ 16 ತಿಂಗಳುಗಳ ಅವಧಿಯಲ್ಲಿ ಆರು 'ಅರ್ಥ್ ಅಬ್ಸರ್ವೇಶನ್' (ಭೂ ವೀಕ್ಷಣೆ) ಉಪಗ್ರಹಗಳನ್ನು ಉಡಾವಣೆ ಮಾಡಿದೆ ಎಂದು ವರದಿಯಾಗಿದೆ.
ಭಾರತದ ಭೂಪ್ರದೇಶಗಳು ಮತ್ತು ಕಾರ್ಯತಂತ್ರದ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇಡುವ ನಿಟ್ಟಿನಲ್ಲಿ ಪಾಕಿಸ್ತಾನವು ಈ ನಿರ್ಣಾಯಕ ಹೆಜ್ಜೆಯನ್ನಿಟ್ಟಿದೆ ಎಂದು ಅಂದಾಜಿಸಲಾಗಿದೆ. ಜನವರಿ 2025 ರಿಂದ ಜೂನ್ 2026 ರ ನಡುವಿನ ಈ 16 ತಿಂಗಳ ಅಲ್ಪಾವಧಿಯಲ್ಲಿ ಪಾಕಿಸ್ತಾನವು ತನ್ನ ಬಾಹ್ಯಾಕಾಶ ಕಣ್ಗಾವಲು ಸಾಮರ್ಥ್ಯವನ್ನು ಅತ್ಯಂತ ವೇಗವಾಗಿ ಹೆಚ್ಚಿಸಿಕೊಂಡಿರುವುದು ರಕ್ಷಣಾ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಈ ಉಪಗ್ರಹಗಳನ್ನು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಉತ್ತರ ಭಾಗದ ಪ್ರದೇಶಗಳ ಮೇಲೆ ನಿರಂತರವಾಗಿ ನಿಗಾ ಇಡುವ ಉದ್ದೇಶದಿಂದಲೇ ವಿನ್ಯಾಸಗೊಳಿಸಲಾಗಿದೆ. ಕೃಷಿ ಮತ್ತು ವಿಪತ್ತು ನಿರ್ವಹಣೆಗಾಗಿ ಈ ಉಪಗ್ರಹಗಳನ್ನು ಬಳಸಲಾಗುತ್ತಿದೆ ಎಂದು ಪಾಕಿಸ್ತಾನವು ಅಧಿಕೃತವಾಗಿ ಹೇಳಿಕೊಂಡಿದ್ದರೂ ಸಹ, ಇವುಗಳಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಒಳಗೊಂಡ ಅತ್ಯಾಧುನಿಕ ಇಮೇಜಿಂಗ್ (ಚಿತ್ರೀಕರಣ) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ ಮೂಲಕ ನಾಗರಿಕ ಯೋಜನೆಗಳ ಹೆಸರಿನಲ್ಲಿ ಭಾರತದ ಗಡಿ ಭಾಗಗಳ ಮೇಲೆ ಹದ್ದಿನ ಕಣ್ಣಿಡುವ ರಹಸ್ಯ ತಂತ್ರಜ್ಞಾನವನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಭಾರತದ ಸೇನಾ ಕಾರ್ಯಾಚರಣೆ 'ಆಪರೇಷನ್ ಸಿಂಧೂರ್' ನಂತರ ಉಭಯ ದೇಶಗಳು ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕಿದ ಕೇವಲ ಒಂದು ವರ್ಷದ ಅವಧಿಯಲ್ಲಿ ಪಾಕಿಸ್ತಾನವು ತನ್ನ ಉಪಗ್ರಹ ಜಾಲವನ್ನು ಇಷ್ಟೊಂದು ವೇಗವಾಗಿ ವಿಸ್ತರಿಸಿಕೊಂಡಿದೆ. ಈ ಉಪಗ್ರಹಗಳು ಮಿಲಿಟರಿ ಉದ್ದೇಶಗಳಿಗಾಗಿ ಮಾಹಿತಿಗಳನ್ನು ಸಂಗ್ರಹಿಸಲು ಮತ್ತು ಗೂಢಚಾರಿಕೆ ನಡೆಸಲು ನೇರ ಪಾತ್ರ ವಹಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ರಕ್ಷಣಾ ತಜ್ಞರು ಗುರುತಿಸಿದ್ದಾರೆ.
ಬಾಹ್ಯಾಕಾಶ ವಲಯದಲ್ಲಿ ಪಾಕಿಸ್ತಾನದ ಈ ಕ್ಷಿಪ್ರ ಬೆಳವಣಿಗೆ ಮತ್ತು ಚೀನಾದೊಂದಿಗೆ ಹೆಚ್ಚುತ್ತಿರುವ ಸಹಕಾರವು ಮುಂಬರುವ ದಿನಗಳಲ್ಲಿ ಭಾರತದ ಸಾರ್ವಭೌಮತ್ವ ಹಾಗೂ ಭದ್ರತೆಗೆ ಒಂದು ದೊಡ್ಡ ಕಳವಳಕಾರಿ ಸವಾಲಾಗಿ ಪರಿಣಮಿಸಿದೆ ಎಂದು ರಕ್ಷಣಾ ತಜ್ಞರು ಎಚ್ಚರಿಸಿದ್ದಾರೆ.
ಕಳೆದ 16 ತಿಂಗಳುಗಳಲ್ಲಿ ಉಡಾವಣೆ ಮಾಡಲಾದ ಈ ಬಹುತೇಕ ಉಪಗ್ರಹಗಳನ್ನು ಚೀನಾದ ರಾಕೆಟ್‌ಗಳ ಮೂಲಕವೇ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ. ಚೀನಾದ ಇಂತಹ ಬಾಹ್ಯ ನೆರವಿಲ್ಲದೆ ಪಾಕಿಸ್ತಾನಕ್ಕೆ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ವೇಗವಾಗಿ ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ನಿಯೋಜಿಸಲು ಸಾಧ್ಯವಿರಲಿಲ್ಲ ಎಂದು ರಕ್ಷಣಾ ವೀಕ್ಷಕರು ಬಲವಾಗಿ ನಂಬಿದ್ದಾರೆ.
ಇನ್ನು ಸಾಮಾನ್ಯ ಉಪಗ್ರಹಗಳಿಗಿಂತ ಭಿನ್ನವಾಗಿ, ಈ ಉಪಗ್ರಹಗಳನ್ನು ಒಂದು ವಿಶೇಷ ಕಕ್ಷೆಯಲ್ಲಿ (Orbit) ಸ್ಥಾಪಿಸಲಾಗಿದ್ದು, ಇದು ಇಡೀ ದಕ್ಷಿಣ ಏಷ್ಯಾ ಪ್ರದೇಶದ ಮೇಲೆ ದಿನಕ್ಕೆ ಹಲವು ಬಾರಿ ಹಾದುಹೋಗಲು ಮತ್ತು ಆ ಮೂಲಕ ಭಾರತದ ಚಟುವಟಿಕೆಗಳ ಮೇಲೆ ಸತತವಾಗಿ ನಿಗಾ ಇಡಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ, (ಏಜೆನ್ಸೀಸ್​).