Pakistan Fuel Crisis | ಪೆಟ್ರೋಲ್ ಬಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ವಾಹನ ಸವಾರರು 
ವಿದೇಶ

ಲೀಟರ್ ಪೆಟ್ರೋಲ್‌ಗೆ 321 ರೂ. ಕೊಡಬೇಕು!.. ಪಾಕ್​​ನ ಇಂಧನ ಬಿಕ್ಕಟ್ಟು ತಾರಕಕ್ಕೆ; ಕಿಲೋಮೀಟರ್‌ಗಟ್ಟಲೆ ಸರತಿ ಸಾಲು | Pakistan Fuel Crisis

ಇಸ್ಲಾಮಾಬಾದ್: ನೆರೆರಾಷ್ಟ್ರ ಪಾಕಿಸ್ತಾನ ಮತ್ತೊಮ್ಮೆ ತೀವ್ರ ಆರ್ಥಿಕ ಆಘಾತಕ್ಕೆ ಒಳಗಾಗಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನೆಪವೊಡ್ಡಿರುವ ಪಾಕಿಸ್ತಾನ ಸರ್ಕಾರ, ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಲೀಟರ್‌ಗೆ 55 ರೂಪಾಯಿ (Pakistan Fuel Crisis) ಹೆಚ್ಚಿಸಿದೆ.
ಪಾಕ್​​ ಉಪ ಪ್ರಧಾನಿ ಇಶಾಕ್ ದಾರ್ ಮತ್ತು ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್, ಪೆಟ್ರೋಲಿಯಂ ಸಚಿವ ಅಲಿ ಪರ್ವೈಜ್ ಮಲಿಕ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆ ಮಾಡಿದ್ದು, ಮಾರ್ಚ್ 7 ರ ಮಧ್ಯರಾತ್ರಿಯಿಂದ ಇದು ಜಾರಿಗೆ ಬರಲಿದೆ. ಸರ್ಕಾರದ ಈ ಆಘಾತಕಾರಿ ನಿರ್ಧಾರದಿಂದಾಗಿ ದೇಶಾದ್ಯಂತ ಇಂಧನ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇದರಿಂದಾಗಿ ಜನಸಾಮಾನ್ಯರು ಕಂಗಾಲಾಗಿದ್ದಾರೆ.
ಪೆಟ್ರೋಲ್ ದರವು ಪ್ರತಿ ಲೀಟರ್‌ಗೆ 266.17 ರೂಪಾಯಿಯಿಂದ 321.17 ರೂಪಾಯಿಗೆ ತಲುಪಿದೆ. ಅದೇ ರೀತಿ, ಡೀಸೆಲ್ ಬೆಲೆಯೂ ಕೂಡ ಪ್ರತಿ ಲೀಟರ್‌ಗೆ 280.86 ರೂಪಾಯಿಯಿಂದ 335.86 ರೂಪಾಯಿಗೆ ಏರಿಕೆಯಾಗಿದೆ.

ದರ ಏರಿಕೆಗೆ ಕಾರಣವೇನು..?

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತಾರಕಕ್ಕೇರಿರುವುದು ಮತ್ತು ಅಮೆರಿಕದ ಹಸ್ತಕ್ಷೇಪದಿಂದಾಗಿ ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಉಂಟಾಗಿರುವ ಕಂಪನವು ಪಾಕಿಸ್ತಾನವನ್ನು ಅಕ್ಷರಶಃ ದಿವಾಳಿಯ ಅಂಚಿಗೆ ತಳ್ಳಿದೆ. ಕಳೆದ ಒಂದು ವಾರದ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 78 ಡಾಲರ್‌ನಿಂದ 106 ಡಾಲರ್‌ಗೆ ಏರಿಕೆಯಾಗಿದೆ.
ಇದು ಪಾಕಿಸ್ತಾನದ ಮೇಲೆ ಶೇ. 50 ರಿಂದ 70 ರಷ್ಟು ಆರ್ಥಿಕ ಹೊರೆಯನ್ನು ಹೊರಿಸಿದೆ ಎಂದು ಉಪಪ್ರಧಾನಿ ಇಶಾಕ್ ಡಾರ್ ತಿಳಿಸಿದ್ದಾರೆ. ಪಾಕ್​ನ​ ಶೇ. 80ರಷ್ಟು ತೈಲ ಆಮದು ಹಾರ್ಮುಜ್ ಜಲಸಂಧಿಯ ಮೂಲಕವೇ ನಡೆಯುತ್ತದೆ. ಆದರೆ ಸದ್ಯದ ಯುದ್ಧದ ಸನ್ನಿವೇಶದಿಂದಾಗಿ ಈ ಮಾರ್ಗವು ಸಂಪೂರ್ಣ ಬಂದ್​ ಆಗಿದೆ. 
ನಮ್ಮ ಎರಡು ತೈಲ ಹಡಗುಗಳು ಈಗ ಪರ್ಯಾಯ ಮತ್ತು ಸುದೀರ್ಘ ಮಾರ್ಗಗಳ ಮೂಲಕ ಬರುತ್ತಿವೆ. ಇದರಿಂದಾಗಿ ಸಾರಿಗೆ ವೆಚ್ಚ ಮತ್ತು ವಿಮಾ ಮೊತ್ತವು ಗಗನಕ್ಕೇರಿದೆ ಎಂದು ಸಚಿವ ಮಲಿಕ್ ತಿಳಿಸಿದ್ದು, ಜಾಗತಿಕ ಅಸ್ಥಿರತೆಯ ಹಿನ್ನೆಲೆಯಲ್ಲಿ ಸರ್ಕಾರವು ಇನ್ನು ಮುಂದೆ ಪ್ರತಿ 15 ದಿನಕ್ಕೊಮ್ಮೆ ಬೆಲೆ ಪರಿಷ್ಕರಿಸುವ ಬದಲು ವಾರಕ್ಕೊಮ್ಮೆ ಬೆಲೆ ಪರಿಷ್ಕರಣೆ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ.

 ಕಿಲೋಮೀಟರ್‌ಗಟ್ಟಲೆ ಸಾಲು

ಪೆಟ್ರೋಲ್ ಬೆಲೆ ಏರಿಕೆಯ ಸುದ್ದಿ ಹರಡುತ್ತಿದ್ದಂತೆಯೇ ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್‌ನಂತಹ ಪ್ರಮುಖ ನಗರಗಳಲ್ಲಿನ ಪೆಟ್ರೋಲ್ ಬಂಕ್‌ಗಳ ಮುಂದೆ ವಾಹನ ಸವಾರರು ಮುಗಿಬಿದ್ದಿದ್ದು, ಬೆಲೆ ಇನ್ನಷ್ಟು ಏರಿಕೆಯಾಗಬಹುದು ಅಥವಾ ಇಂಧನ ಖಾಲಿಯಾಗಬಹುದು ಎಂಬ ಭೀತಿಯಲ್ಲಿ ಜನರು ಬ್ಯಾರೆಲ್ ಮತ್ತು ಕ್ಯಾನ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿದ್ದಾರೆ.

ಬಂಕ್‌ಗಳಿಗೆ ಬೀಗ

ಪಾಕ್​ನ ಕೆಲವು ಭಾಗಗಳಲ್ಲಿ ಪೆಟ್ರೋಲ್ ಬಂಕ್ ಮಾಲೀಕರು ಸ್ಟಾಕ್ ಮುಗಿದಿದೆ ಎಂಬ ಬೋರ್ಡ್ ಹಾಕಿ ಬಂಕ್‌ಗಳನ್ನು ಮುಚ್ಚುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹಲವೆಡೆ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ.
ಲೀಟರ್‌ಗೆ 55 ರೂಪಾಯಿ ಏರಿಕೆಯಾದ ಬೆನ್ನಲ್ಲೇ ಸಾರಿಗೆ ವೆಚ್ಚ ದುಪ್ಪಟ್ಟಾಗುವ ಸಾಧ್ಯತೆ ಇದೆ. ಇದರಿಂದಾಗಿ ದಿನಬಳಕೆಯ ವಸ್ತುಗಳು, ಹಾಲು, ತರಕಾರಿ ಬೆಲೆಗಳೂ ಗಗನಕ್ಕೇರಲಿವೆ. ಈಗಾಗಲೇ ಹಣದುಬ್ಬರದಿಂದ ತತ್ತರಿಸಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈ ಇಂಧನ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ(ಏಜೆನ್ಸೀಸ್​).