- ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದ ಸದ್ಯ ಪಾಕಿಸ್ತಾನದ ಸ್ಥಿತಿ ಅದೋಗತಿ
- ವೈರಿ ರಾಷ್ಟ್ರವು, ತೀವ್ರ ಆರ್ಥಿಕ ಮತ್ತು ಇಂಧನ ಸಮಸ್ಯೆಯನ್ನು ಎದುರಿಸುತ್ತಿದೆ
ಕರಾಚಿ: ಮಧ್ಯಪ್ರಾಚ್ಯ ಉದ್ವಿಗ್ನತೆಯಿಂದ ಸದ್ಯ ಪಾಕಿಸ್ತಾನದ ಸ್ಥಿತಿ ಅದೋಗತಿಯಾಗಿದೆ. ಗಂಭೀರ ಬಿಕ್ಕಟ್ಟಿನಲ್ಲಿ ಒದ್ದಾಡುತ್ತಿರುವ ವೈರಿ ರಾಷ್ಟ್ರವು, ತೀವ್ರ ಆರ್ಥಿಕ ಮತ್ತು ಇಂಧನ ಸಮಸ್ಯೆಯನ್ನು ಎದುರಿಸುತ್ತಿದೆ. ಈಗಾಗಲೇ ಹಿಟ್ಟು, ನೀರು ಮತ್ತು ವಿದ್ಯುತ್‌ನಂತಹ ಹಲವು ಕೊರತೆಗಳಿಂದ ಬಳಲುತ್ತಿರುವ ದೇಶಕ್ಕೆ ಈಗ ತೈಲ ಕೊರತೆಯಿಂದಾಗಿ ಸಾಕಷ್ಟು ತೊಂದರೆಗಳು ಎದುರಾಗಿವೆ.
ಈ ಸಂದರ್ಭಗಳಲ್ಲಿ, ಜನರ ಜೀವನ ಬಿಗುಡಾಯಿಸಿದೆ. ಏರುತ್ತಿರುವ ಇಂಧನ ಬೆಲೆಗಳು ಮತ್ತು ಹಣದುಬ್ಬರವು ಸಾಮಾನ್ಯ ಜನರ ಮೇಲೆ ಭಾರೀ ಹೊರೆಯನ್ನು ತಂದಿಟ್ಟಿದೆ. ಇಂಧನ ಬಿಕ್ಕಟ್ಟನ್ನು ಎದುರಿಸಲು ಪಾಕ್ ಸರ್ಕಾರವು ಪ್ರಮುಖ ನಿರ್ಧಾರವನ್ನು ಕೈಗೊಂಡಿದ್ದು, ಏಪ್ರಿಲ್ 7ರಿಂದ ರಾತ್ರಿ 8 ಗಂಟೆಯೊಳಗೆ ದೇಶದ ಹೆಚ್ಚಿನ ಭಾಗಗಳಲ್ಲಿ ಮಾರ್ಕೆಟ್ಗಳು ಮತ್ತು ಶಾಪಿಂಗ್ ಮಾಲ್‌ಗಳನ್ನು ಮುಚ್ಚಲು ಆದೇಶಿಸಿದೆ. ತೈಲ ಮತ್ತು ಗ್ಯಾಸ್ ಬಳಕೆಯನ್ನು ಆದಷ್ಟು ಕಡಿತಗೊಳಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಬಹಿರಂಗಪಡಿಸಿದೆ.
ಸರ್ಕಾರದ ಈ ನಿರ್ಧಾರದಿಂದ ಸದ್ಯ ಪಾಕಿಸ್ತಾನಿಗಳು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಂದೆಡೆ, ಪೆಟ್ರೋಲ್ ಬೆಲೆಗಳು ಗಗನಕ್ಕೇರುತ್ತಿವೆ. ಪ್ರಸ್ತುತ, ಲೀಟರ್‌ನ ಪೆಟ್ರೋಲ್ ಬೆಲೆ 458 ರೂ. ಆಗೋಗಿದೆ. ಆದರೆ, ಭಾರೀ ಆಕ್ರೋಶದ ಬಳಿಕ 378 ರೂ.ಗೆ ಇಳಿಕೆಯಾಗಿದೆ. ಇಷ್ಟಾದರೂ ಸಹ ತಮ್ಮ ಸರ್ಕಾರದ ವಿರುದ್ಧ ಜನರು ವ್ಯಾಪಕ ಛೀಮಾರಿ ಹಾಕಿದ್ದಾರೆ. ಈ ಬಿಕ್ಕಟ್ಟಿಗೆ ಅಂತಾರಾಷ್ಟ್ರೀಯ ಪರಿಸ್ಥಿತಿಗಳು ಪ್ರಮುಖ ಕಾರಣವೆಂದು ಪಾಕ್ ಹೇಳಿಕೊಂಡಿದೆ. ಇರಾನ್ ಮತ್ತು ಯುಎಸ್ ನಡುವಿನ ಉದ್ವಿಗ್ನತೆ ಮತ್ತು ಮಧ್ಯಪ್ರಾಚ್ಯದಲ್ಲಿನ ಯುದ್ಧದ ವಾತಾವರಣದಿಂದಾಗಿ ತೈಲ ಪೂರೈಕೆಯಲ್ಲಿ ಅಡಚಣೆ ಉಂಟಾಗಿದೆ. ಜೊತೆಗೆ, ಹೊರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧವು ದೊಡ್ಡ ಪೆಟ್ಟು ನೀಡಿದೆ ಎಂದು ತಿಳಿಸಿದೆ.
ಇಂಧನ ಬೆಲೆಗಳ ಏರಿಕೆಯೊಂದಿಗೆ, ಆಹಾರ ಬೆಲೆಗಳು ಸಹ ಹೆಚ್ಚಾಗಿವೆ. ಹಿಟ್ಟು, ಅಕ್ಕಿ, ಬೇಳೆಕಾಳುಗಳು ಮತ್ತು ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಕೊರತೆಯು ಜನರನ್ನು ಹೈರಾಣಾಗಿಸಿದೆ. ಪಾಕ್ನಲ್ಲಿ ಹಣದುಬ್ಬರವೂ ಹೆಚ್ಚುತ್ತಿದ್ದು, ಸಾಲದ ಹೊರೆ ಪಾಕಿಸ್ತಾನದ ಆರ್ಥಿಕತೆಯ ಮೇಲೆ ಹೊರೆಯಾಗುತ್ತಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಸೇರಿದಂತೆ ಹಲವಾರು ದೇಶಗಳಿಂದ ಪಡೆದ ಸಾಲಗಳನ್ನು ಮರುಪಾವತಿಸುವ ಒತ್ತಡ ಕೂಡ ಪಾಕ್ ಹೆಗಲೇರಿದೆ. ಈ ನಿಟ್ಟಿನಲ್ಲಿ, ಹೊಸ ಸಾಲಗಳನ್ನು ಪಡೆಯುವುದು ಸಹ ಕಷ್ಟಸಾಧ್ಯವಾಗಿದೆ. ಇದು ಆರ್ಥಿಕ ಪರಿಸ್ಥಿತಿಯನ್ನು ಇನ್ನಷ್ಟು ಕಠಿಣವಾಗಿಸಿದೆ.
ಪರಿಸ್ಥಿತಿ ಈಗಾಗಲೇ ಕೈಮೀರಿ ಹೋಗಿರುವುದರಿಂದ ಪಾಕ್ ಸರ್ಕಾರವು ಕೋವಿಡ್ ಶೈಲಿಯ ನಿರ್ಬಂಧಗಳನ್ನು ಜಾರಿಗೆ ತರಲು ಮುಂದಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಸರ್ಕಾರಿ ವೆಚ್ಚವನ್ನು ಕಡಿತಗೊಳಿಸುವುದು, ವಾಹನ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ವರ್ಚುವಲ್ ಸಭೆಗಳಿಗೆ ಹೆಚ್ಚು ಆದ್ಯತೆ ನೀಡುವಂತಹ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಆದಾಗ್ಯೂ, ಪರಿಸ್ಥಿತಿ ಮಾತ್ರ ಹತೋಟಿಗೆ ಬರುತ್ತಿಲ್ಲ. ಒಟ್ಟಾರೆಯಾಗಿ, ಪಾಕಿಸ್ತಾನದಲ್ಲಿನ ಬಿಕ್ಕಟ್ಟು ಎಲ್ಲಾ ವಲಯಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಇದನ್ನೆಲ್ಲ ನೋಡಿದರೆ, ಪಾಕ್ಗೆ ಲಾಕ್ಡೌನ್ ಬಿಟ್ಟರೆ ಬೇರೆ ಯಾವ ಆಯ್ಕೆಯೂ ಮುಂದಿಲ್ಲ ಎಂಬುದು ಖಚಿತ,(ಏಜೆನ್ಸೀಸ್).