ಇಸ್ಲಾಮಾಬಾದ್: ಮಾಜಿ ಪ್ರಧಾನಿ ಮತ್ತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್(Imran Khan) ಅವರನ್ನು ಜೈಲಿನಿಂದ 48 ಗಂಟೆಗಳಲ್ಲಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಪಾಕ್ ಸುಪ್ರೀಂಕೋರ್ಟ್ ನೀಡಿರುವ ಆದೇಶದ ವಿರುದ್ಧ ಪಾಕ್ ಸರ್ಕಾರ ಮೇಲ್ಮನವಿ ಸಲ್ಲಿಸಲು ಮುಂದಾಗಿದೆ ಎಂದು ಬುಧವಾರ(ಆ. 19) ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಕಾನೂನು ಸಚಿವ ಅಜಮ್ ನಜೀರ್ ತರೂರ್, ಜೈಲಿನಲ್ಲಿರುವ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಖಾಸಗಿ ಆಸ್ಪತ್ರೆಗೆ ವರ್ಗಾಯಿಸಲು ನಿರ್ದೇಶಿಸಿದ ಸುಪ್ರೀಂ ಕೋರ್ಟ್ ಆದೇಶವನ್ನು ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಪ್ರಶ್ನಿಸಲಿದೆ ಎಂದು ಹೇಳಿದ್ದಾರೆ.
ಅಧಿಕಾರಿಗಳು ತೀರ್ಪನ್ನು ಪರಿಶೀಲಿಸಿದ್ದಾರೆ. ಪುನರ್ ಪರಿಶೀಲನೆ ಕೋರಿ ನ್ಯಾಯಾಲಯವನ್ನು ಸಂಪರ್ಕಿಸಲು ನಿರ್ಧರಿಸಿದ್ದಾರೆ. ಶಿಕ್ಷೆಗೊಳಗಾದ ಕೈದಿಗೆ ಕಾನೂನಿನ ಪ್ರಕಾರ ಜೈಲಿನ ಒಳಗೆ ಅಥವಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು. ಆದೇಶವನ್ನು ಮಾರ್ಪಡಿಸಲು ಸರ್ಕಾರ ಕೋರುತ್ತದೆ ಎಂದಿದ್ದಾರೆ.
73 ವರ್ಷದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರು 2022ರಲ್ಲಿ ಅಧಿಕಾರ ಕಳೆದುಕೊಂಡ ಬಳಿಕ ವಿವಿಧ ರಾಜಕೀಯ ಪ್ರೇರಿತ ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿ 2023 ಆಗಸ್ಟ್ ತಿಂಗಳಿನಿಂದಲೂ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಜೈಲಿನಲ್ಲಿ ಅವರ ಆರೋಗ್ಯ ಹದಗೆಟ್ಟಿದ್ದು, ಬಲಗಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಅವರ ಪುತ್ರರು, ವಕೀಲರು ಕಳವಳ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆ ವೈದ್ಯಕೀಯ ನೆರವು ಕೋರಿ ಇಮ್ರಾನ್ ಖಾನ್ ಕುಟುಂಬಸ್ಥರು ಮತ್ತು ಪಿಟಿಐ ಪಕ್ಷದ ನಾಯಕರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆ. 18ರಂದು ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, 48 ಗಂಟೆಗಳ ಒಳಗೆ ಇಮ್ರಾನ್ ಖಾನ್ ಅವರನ್ನು ಶಿಫಾ ಅಂತರರಾಷ್ಟ್ರೀಯ ಆಸ್ಪತ್ರೆಗೆ ಸ್ಥಳಾಂತರಿಸಲು ಮತ್ತು ಸೆಪ್ಟೆಂಬರ್ 16ರವರೆಗೆ ಅಲ್ಲಿಯೇ ಚಿಕಿತ್ಸೆ ಪಡೆಯಲು ಅವಕಾಶ ನೀಡಿ ಆದೇಶ ನೀಡಿದೆ (ಏಜೆನ್ಸೀಸ್).