Pakistan Air Strike | ವಾಯುದಾಳಿಯ ಸಂಗ್ರಹ ಚಿತ್ರ 
ವಿದೇಶ

ಅಫ್ಘಾನ್ ಗಡಿಯೊಳಗೆ ನುಗ್ಗಿ ಪಾಕ್ ವಾಯುಸೇನೆ ದಾಳಿ: ಟಿಟಿಪಿ ಉಗ್ರರ 7 ಪ್ರಮುಖ ಅಡಗುತಾಣಗಳು ಪುಡಿಪುಡಿ! | Pakistan Air Strike

Pakistan Air Strike: ಪಾಕಿಸ್ತಾನವು ಭಾನುವಾರ ಬೆಳಿಗ್ಗೆ ಅಫ್ಘಾನಿಸ್ತಾನದೊಂದಿಗಿನ ತನ್ನ ಗಡಿಯಲ್ಲಿ ಭೀಕರ ವಾಯುದಾಳಿಗಳನ್ನು ನಡೆಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದ್ದು, ಇತ್ತೀಚೆಗೆ ಪಾಕ್​ನಲ್ಲಿ ನಡೆದ ಮಾರಕ ದಾಳಿಗಳಿಗೆ ಪ್ರತಿಯಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಕ್ ಸರ್ಕಾರ ಅಧಿಕೃತವಾಗಿ ಘೋಷಿಸಿದೆ.
ಪಾಕ್​ನ ಮಾಹಿತಿ ಸಚಿವ ಅತ್ತೌಲ್ಲಾ ತರಾರ್, ಸೇನೆಯು ಗುಪ್ತಚರ ಆಧಾರಿತ ಮತ್ತು ಆಯ್ದ ಕಾರ್ಯಾಚರಣೆಗಳನ್ನು ನಡೆಸಿದೆ ಎಂದು ಹೇಳಿಕೊಂಡಿದ್ದು, ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಸಂಬಂಧಿಸಿದ ಏಳು ಶಿಬಿರಗಳನ್ನು ಗುರಿಯಾಗಿಸಿಕೊಂಡಿದೆ. ಟಿಟಿಪಿ ಪಾಕಿಸ್ತಾನಿ ಉಗ್ರಗಾಮಿ ಗುಂಪಾಗಿದ್ದು, ದೇಶದಲ್ಲಿ ನಡೆದ ಅನೇಕ ದಾಳಿಗಳಿಗೆ ಹೊಣೆ ಹೊತ್ತುಕೊಂಡಿದೆ.
ಅಫ್ಘಾನಿಸ್ತಾನದ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಟಿಟಿಪಿಗೆ ಸೇರಿದ ಸುಮಾರು ಏಳು ಪ್ರಮುಖ ಉಗ್ರಗಾಮಿ ಶಿಬಿರಗಳನ್ನು ಗುರಿಯಾಗಿಸಿಕೊಂಡು ಧ್ವಂಸಗೊಳಿಸಲಾಗಿದೆ.
ಟಿಟಿಪಿ ಸಂಘಟನೆಯು ಕಳೆದ ಅನೇಕ ದಿನಗಳಿಂದ ಪಾಕಿಸ್ತಾನದ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ನಿರಂತರ ದಾಳಿಗಳನ್ನು ನಡೆಸುತ್ತಿದ್ದು, ಈ ಗುಂಪಿಗೆ ಅಫ್ಘಾನಿಸ್ತಾನವು ಆಶ್ರಯ ನೀಡುತ್ತಿದೆ ಎನ್ನುವುದು ಪಾಕ್​ನ ಆರೋಪವಾಗಿದೆ. ಈಗ ನೇರವಾಗಿ ಅಫ್ಘಾನ್ ಗಡಿಯೊಳಗೆ ನುಗ್ಗಿ ದಾಳಿ ಮಾಡಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ತಾಲಿಬಾನ್ ಸರ್ಕಾರ ಹೇಳಿದ್ದೇನು..?

ಈ ವಾಯುದಾಳಿಯನ್ನು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತೀವ್ರವಾಗಿ ಖಂಡಿಸಿದ್ದು, ಇದು ತನ್ನ ಸಾರ್ವಭೌಮತ್ವದ ಉಲ್ಲಂಘನೆ ಎಂದು ಕರೆದಿದೆ.

ಘಟನೆಗೆ ಕಾರಣವೇನು.?

ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಬಜೌರ್ ಜಿಲ್ಲೆಯಲ್ಲಿ ನಡೆದ ಮಾರಕ ಆತ್ಮಾಹುತಿ ಬಾಂಬ್ ದಾಳಿಯ ಕೆಲವೇ ದಿನಗಳ ಬಳಿಕ ಈ ವೈಮಾನಿಕ ದಾಳಿ ನಡೆದಿದ್ದು, ದಾಳಿಕೋರ ಸ್ಫೋಟಕಗಳಿಂದ ತುಂಬಿದ ವಾಹನವನ್ನು ಭದ್ರತಾ ಠಾಣೆಯೊಳಗೆ ನುಗ್ಗಿಸಿ 11 ಸೈನಿಕರು ಮತ್ತು ಒಂದು ಮಗುವಿನ ಸಾವಿಗೆ ಕಾರಣನಾಗಿದ್ದ, ಅಧಿಕಾರಿಗಳು ದಾಳಿಕೋರ ಅಫ್ಘಾನ್ ಪ್ರಜೆ ಎಂದು ಗುರುತಿಸಿದ್ದರು.
ಬನ್ನು ಜಿಲ್ಲೆಯಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ, ಮತ್ತೊಂದು ಆತ್ಮಹತ್ಯಾ ಬಾಂಬರ್ ಭದ್ರತಾ ಪಡೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಒಬ್ಬ ಲೆಫ್ಟಿನೆಂಟ್ ಕರ್ನಲ್ ಸೇರಿದಂತೆ ಇಬ್ಬರು ಸೈನಿಕರು ಸಾವನ್ನಪ್ಪಿದರು. ಈ ದಾಳಿಗೆ ಕಾರಣರಾದವರ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಪಾಕಿಸ್ತಾನ ಸೇನೆ ಎಚ್ಚರಿಕೆ ನೀಡಿತ್ತು.
ಇಸ್ಲಾಮಾಬಾದ್‌ನ ಶಿಯಾ ಮಸೀದಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 31 ಭಕ್ತರು ಸಾವನ್ನಪ್ಪಿದ್ದು ಸೇರಿದಂತೆ ಇತ್ತೀಚಿನ ದಾಳಿಗಳನ್ನು ಅಫ್ಘಾನಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರಗಾಮಿಗಳು ಯೋಜಿಸಿದ್ದಾರೆ ಎಂಬುದಕ್ಕೆ ಪಾಕಿಸ್ತಾನದ ಬಳಿ ಸ್ಪಷ್ಟ ಪುರಾವೆಗಳಿವೆ ಎಂದು ಸಚಿವ ತರಾರ್ ಹೇಳಿದ್ದಾರೆ.
2021 ರಲ್ಲಿ ತಾಲಿಬಾನ್ ಅಧಿಕಾರಿಗಳು ಕಾಬೂಲ್‌ನಲ್ಲಿ ನಿಯಂತ್ರಣವನ್ನು ಮರಳಿ ಪಡೆದಾಗಿನಿಂದ ಉಭಯ ದೇಶಗಳ ನಡುವಿನ ಸಂಬಂಧ ಸಂಪೂರ್ಣ ಹದಗೆಟ್ಟಿದೆ. ಅಫ್ಘಾನಿಸ್ತಾನದ ತಾಲಿಬಾನ್ ಅಧಿಕಾರಿಗಳು ಅಫ್ಘಾನ್ ಮಣ್ಣನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಬಳಸುತ್ತಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿದೆ(ಏಜೆನ್ಸೀಸ್​).