ಪಾಕ್ ಸೇನೆಯಲ್ಲಿ ಮಹತ್ವದ ಬದಲಾವಣೆ, ಚಿತ್ರಕೃಪೆ: ರಾಯಿಟರ್ಸ್
- ಪಾಕ್ ಸೇನೆಯ ಕೈಗೆ ಪರಮಾಣು ಅಸ್ತ್ರಗಳ ಸಂಪೂರ್ಣ ಕಂಟ್ರೋಲ್
- ಇನ್ಮುಂದೆ ಪ್ರಧಾನಿ ಅಧಿಕಾರಕ್ಕೆ ಆಟಗಳು ನಡೆಯೋದಿಲ್ಲ
- ಚೀನಾ ಮಾದರಿಯಲ್ಲಿ ಜಂಟಿ ಸೇನಾ ಬಲ
ಇಸ್ಲಾಮಾಬಾದ್: ವೈರಿ ರಾಷ್ಟ್ರ ಪಾಕಿಸ್ತಾನ ತನ್ನ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೊಳಿಸಿದ್ದು, ನೂತನವಾಗಿ 'ನ್ಯಾಷನಲ್ ಸ್ಟ್ರೇಟೆಜಿಕ್ ಕಮಾಂಡ್' (NSC) ಸಂಸ್ಥೆಯನ್ನು ರಚಿಸಿದೆ.
ಈ ನಿರ್ಧಾರವನ್ನು ಕೈಗೊಂಡಿರುವ ಪಾಕ್, ದೇಶದ ಪರಮಾಣು ಅಸ್ತ್ರಗಳು ಹಾಗೂ ವ್ಯೂಹಾತ್ಮಕ ಮಿಲಿಟರಿ ಸಾಮಗ್ರಿಗಳ ಸಂಪೂರ್ಣ ಕಾರ್ಯಾಚರಣೆಯ ನಿಯಂತ್ರಣವು ಇನ್ಮುಂದೆ ನೇರವಾಗಿ ಸೇನಾ ಪಡೆಯ ಮುಖ್ಯಸ್ಥರ ಕೈಯಲ್ಲಿ ಇರಲಿದೆ ಎಂದು ಹೇಳಿದೆ. ಇಲ್ಲಿಯವರೆಗೆ ಪರಮಾಣು ವಿಚಾರದಲ್ಲಿ ನಿರ್ಧಾರ ಕೈಗೊಳ್ಳುತ್ತಿದ್ದ ನಾಗರಿಕ ಸರ್ಕಾರದ ಅಧಿಕಾರ ಕಟ್ ಆಗಿದ್ದು, ಪ್ರಧಾನಿಗೆ ಕೇವಲ ಮಾಹಿತಿಯಷ್ಟೇ ಲಭಿಸಲಿದೆ.
ಸೇನಾ ಮುಖ್ಯಸ್ಥ ಹಾಗೂ ರಕ್ಷಣಾ ಪಡೆಗಳ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸೈಯದ್ ಆಸೀಮ್ ಮುನೀರ್ ಅವರ ಮಾರ್ಗದರ್ಶನದಲ್ಲೇ ಈ ಬದಲಾವಣೆ ನಡೆದಿದೆ. ನೂತನ 'ನ್ಯಾಷನಲ್ ಸ್ಟ್ರೇಟೆಜಿಕ್ ಕಮಾಂಡ್'ಗೆ ಜನರಲ್ ಸೈಯದ್ ಆಮೆರ್ ರಾಜಾ ಅವರನ್ನು ಮೊದಲ ಕಮಾಂಡರ್ ಆಗಿ ನೇಮಕ ಮಾಡಿಕೊಳ್ಳಲಾಗಿದೆ.
ಈ ಹೊಸ ಪಡೆ ಚೀನಾದ 'ಪಿಎಲ್‌ಎ ರಾಕೆಟ್ ಫೋರ್ಸ್' ಮಾದರಿಯಲ್ಲೇ ಕೆಲಸ ನಡೆಯಲಿದೆ. ಭೂಸೇನೆ, ನೌಕಾಪಡೆ, ವಾಯುಪಡೆ ಹಾಗೂ ರಾಕೆಟ್ ಉಡಾವಣೆಗೊಳಿಸುವ ತಂಡಗಳನ್ನು ಒಂದೇ ಕೇಂದ್ರೀಕೃತ ಕಮಾಂಡ್ ಅಡಿಯಲ್ಲಿ ತರಲು ನಿರ್ಧರಿಸಲಾಗಿದೆ. ಈ ನಿರ್ಧಾರಗಳೆಲ್ಲವೂ ಅತ್ಯುನ್ನತ ಮಿಲಿಟರಿ ಹಂತದಲ್ಲೇ ಕೇಂದ್ರೀಕರಣ ಆಗುತ್ತಿರುವುದರಿಂದ, ಹಿರಿಯ ಅಧಿಕಾರಿಗಳ ಬಡ್ತಿ ಪ್ರಕ್ರಿಯೆಗಳು ಮುಂದೂಡಲ್ಪಟ್ಟಿವೆ ಹಾಗೂ ಪ್ರಾದೇಶಿಕ ಕಾರ್ಪ್ಸ್ ಕಮಾಂಡರ್‌ಗಳ ಸಾಂಪ್ರದಾಯಿಕ ಅಧಿಕಾರ ವ್ಯಾಪ್ತಿಗೆ ಬ್ರೇಕ್ ಬಿದ್ದಿದೆ,(ಏಜೆನ್ಸೀಸ್).