ಕಾಬೂಲ್: ಅಫ್ಘಾನಿಸ್ಥಾನದ(Afghanistan) ಗಡಿ ಪ್ರದೇಶದಲ್ಲಿ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯಲ್ಲಿ 11 ಮಕ್ಕಳು ಸೇರಿ 13 ಮಂದಿ ಮೃತಪಟ್ಟಿದ್ದಾರೆ ಎಂದು ತಾಲಿಬಾನ್ ಸರ್ಕಾರ ಆರೋಪಿಸಿದೆ ಎಂದು ಬುಧವಾರ(ಜೂ. 10) ವರದಿಯಾಗಿದೆ.
ಈ ಕುರಿತು ಮಾತನಾಡಿರುವ ಅಫ್ಘಾನ್ ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ಪಾಕಿಸ್ತಾನದ ಸೇನೆಯು ಅಫ್ಘಾನಿಸ್ತಾನದ ಮೂರು ಪ್ರಾಂತ್ಯಗಳಲ್ಲಿ ವಾಯುದಾಳಿ ನಡೆಸಿದ ನಂತರ 11 ಮಕ್ಕಳು ಸೇರಿದಂತೆ ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.
ಅಫ್ಘಾನಿಸ್ತಾನದ ವಾಯುಪ್ರದೇಶವನ್ನು ಉಲ್ಲಂಘಿಸಿ ಕುನಾರ್, ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿನ ನಾಗರಿಕರ ಮನೆಗಳ ಮೇಲೆ ಪಾಕ್ ಬಾಂಬ್ ದಾಳಿ ನಡೆಸಿದೆ ಎಂದು ಅವರು ಆರೋಪಿಸಿದ್ದಾರೆ.
ಇನ್ನೂ ಪಾಕಿಸ್ತಾನಿ ಸೇನೆ ಅಥವಾ ಸರ್ಕಾರದಿಂದ ತಕ್ಷಣದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆದರೆ ಭದ್ರತಾ ಅಧಿಕಾರಿಗಳು ರಾಯಿಟರ್ಸ್ ಮಾಧ್ಯಮದ ಜೊತೆ ಮಾತನಾಡಿದ್ದು, ಪಾಕ್ ಉಗ್ರಗಾಮಿಗಳ ಅಡಗುತಾಣಗಳು ಮತ್ತು ಇತರ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಇನ್ನೂ ಅಫ್ಘಾನಿಸ್ಥಾನ ತಾಲಿಬಾನ್ ಸರ್ಕಾರ ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಪಾಕ್ ಆರೋಪಿಸಿದ್ದು, ಪಾಕಿಸ್ತಾನದಲ್ಲಿ ದಾಳಿ ನಡೆಸಲು ಸಂಚು ರೂಪಿಸುತ್ತಿದೆ ಎಂದು ಹೇಳಿದೆ. ಆದರೆ ತಾಲಿಬಾನ್ ಸರ್ಕಾರ ಆರೋಪಗಳನ್ನು ತಳ್ಳಿಹಾಕಿದ್ದು, ಅಲ್ಲಿಯೇ ಸಾಕಷ್ಟು ಆಂತರಿಕ ದಂಗೆಗಳನ್ನು ನಡೆಯುತ್ತಿದ್ದು, ಉಗ್ರವಾದವು ಅವರ ಆಂತರಿಕ ಸಮಸ್ಯೆಯಾಗಿದೆ ಎಂದು ತಿಳಿಸಿದೆ (ಏಜೆನ್ಸೀಸ್).