ಅಫ್ಘಾನಿಸ್ತಾನದ ಗಡಿಯಲ್ಲಿ ಪಾಕಿಸ್ತಾನದಿಂದ ವಾಯುದಾಳಿ  
ವಿದೇಶ

ಪಾಕ್-ಅಫ್ಘಾನ್ ಗಡಿ ಸಂಘರ್ಷ ಮತ್ತೆ ಉಲ್ಬಣ: ಚೀನಾ ಸಂಧಾನಕ್ಕೆ ಹೊಸ ಸವಾಲು! | Pakistan Afghanistan Conflict

ಅಫ್ಘಾನಿಸ್ತಾನದ ಕುನಾರ್ ಮತ್ತು ಪಕ್ತಿಕಾದಲ್ಲಿ ಪಾಕಿಸ್ತಾನ ವಾಯುದಾಳಿ ನಡೆಸಿದೆ. ದಾಳಿಯಲ್ಲಿ 28 ಉಗ್ರರು ಹತರಾಗಿದ್ದಾರೆ ಎಂದು ಪಾಕ್ ಹೇಳಿದೆ. ಆದರೆ, 3 ನಾಗರಿಕರು ಮೃತಪಟ್ಟಿದ್ದಾರೆ ಎಂದು ಕಾಬೂಲ್ ತಿಳಿಸಿದೆ.

ಅಫ್ಘಾನಿಸ್ತಾನದ ಗಡಿ ಪ್ರದೇಶದಲ್ಲಿ ಪಾಕ್​ನಿಂದ ಅಟ್ಯಾಕ್​

28 ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಅಧಿಕಾರಿಗಳು

ಕಾಬೂಲ್​ನ 3 ನಾಗರಿಕರು ಮೃತಪಟ್ಟಿದ್ದು, 4 ಮಂದಿಗೆ ಗಾಯ

Pakistan Airstrikes Afghanistan: ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿ ಉದ್ವಿಗ್ನತೆ ಮತ್ತೆ ಹೆಚ್ಚಾಗಿದೆ. ಅಫ್ಘಾನಿಸ್ತಾನದ ಪೂರ್ವ ಭಾಗದಲ್ಲಿರುವ ಉಗ್ರರ ಅಡಗುತಾಣಗಳ ಮೇಲೆ ಪಾಕಿಸ್ತಾನ ಯುದ್ಧವಿಮಾನಗಳು ದಾಳಿ ನಡೆಸಿವೆ.

ಇನ್ನು, ಈ ದಾಳಿಯಲ್ಲಿ 28 ಶಂಕಿತ ಉಗ್ರರು ಹತರಾಗಿದ್ದಾರೆ ಎಂದು ಪಾಕ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಕಾಬೂಲ್ ಪ್ರಕಾರ, ದಾಳಿಯಲ್ಲಿ 3 ನಾಗರಿಕರು ಮೃತಪಟ್ಟಿದ್ದು, 4 ಮಂದಿ ಗಾಯಗೊಂಡಿದ್ದಾರೆ. ಎರಡೂ ಹೇಳಿಕೆಗಳನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ.

ಪಾಕ್-ಅಫ್ಘಾನ್ ನಡುವೆ ಮತ್ತೆ ಟೆನ್ಷನ್

ಪಾಕಿಸ್ತಾನದ ಭದ್ರತಾ ಪಡೆಗಳ ಮೇಲೆ ನಡೆದ ದಾಳಿಗಳ ಬೆನ್ನಲ್ಲೇ ವಾಯುದಾಳಿ ನಡೆದಿದೆ. ಹಂಗು ಜಿಲ್ಲೆಯಲ್ಲಿ 6 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು. ಇದಕ್ಕೂ ಮುನ್ನ ಕೊಹಾಟ್‌ನಲ್ಲಿ ನಡೆದ ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದು, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಟಿಟಿಪಿ ವಿರುದ್ಧ ಪಾಕ್ ಆರೋಪ

ಈ ದಾಳಿಗಳ ಹಿಂದೆ ಪಾಕಿಸ್ತಾನ ತಾಲಿಬಾನ್‌ ಅಥವಾ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (TTP) ಮತ್ತು ಅದರ ಸಹಚರ ಸಂಘಟನೆಗಳ ಕೈವಾಡವಿದೆ ಎಂದು ಪಾಕಿಸ್ತಾನ ಆರೋಪಿಸಿದೆ. ಅಫ್ಘಾನಿಸ್ತಾನದಲ್ಲಿರುವ ಉಗ್ರರ ಅಡಗುತಾಣಗಳು ಮತ್ತು ತರಬೇತಿ ಜಾಲಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಬೂಲ್‌ಗೆ ಪಾಕಿಸ್ತಾನ ಒತ್ತಾಯಿಸಿದೆ.

ತಾಲಿಬಾನ್‌ನಿಂದ ಪ್ರತಿಕ್ರಿಯೆ

ಅಫ್ಘಾನ್ ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪಾಕಿಸ್ತಾನದ ವಾಯುದಾಳಿಯನ್ನು ಖಂಡಿಸಿ, ಇದಕ್ಕೆ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ. ಈ ದಾಳಿಗಳು ಎರಡು ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದ್ದು, ಗಡಿ ಭಾಗದಲ್ಲಿ ಮತ್ತೆ ಸಂಘರ್ಷ ಉಲ್ಬಣಿಸುವ ಆತಂಕವೂ ಎದುರಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅಬ್ಬರ; ಪಣತ್ತೂರು ರೈಲ್ವೇ ಅಂಡರ್‌ಪಾಸ್ ಜಲಾವೃತ, ವಾಹನ ಸವಾರರು ಹೈರಾಣು! Bengaluru Rain

ಕಳೆದ ಫೆಬ್ರವರಿಯಿಂದ ಪಾಕ್-ಅಫ್ಘಾನ್ ನಡುವೆ ಗಡಿ ಸಂಘರ್ಷ ಮತ್ತು ವಾಯುದಾಳಿ ಮುಂದುವರಿದಿವೆ. ಉದ್ವಿಗ್ನತೆ ಕಡಿಮೆ ಮಾಡಲು ಚೀನಾ ಸೇರಿದಂತೆ ಹಲವು ದೇಶಗಳು ಮಾತುಕತೆ ನಡೆಸುತ್ತಿವೆ. ಆದರೆ ಹೊಸ ದಾಳಿಯಿಂದ ಈ ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆಯಾಗಿದೆ.(ಏಜೆನ್ಸೀಸ್​)