ಸಂಭ್ರಮದ ಹೆಸರಲ್ಲಿ 700ಕ್ಕೂ ಹೆಚ್ಚು ತಿಮಿಂಗಿಲಗಳು, ಡಾಲ್ಫಿನ್‌ಗಳ ಮಾರಣಹೋಮ: ಮೂಕ ಪ್ರಾಣಿಗಳ ಆಕ್ರಂದನಕ್ಕೆ ಕಣ್ಣೀರಿಟ್ಟ ಸಾಗರ! Whales And Dolphins Massacre 
ವಿದೇಶ

ಸಂಭ್ರಮದ ಹೆಸರಲ್ಲಿ 700ಕ್ಕೂ ಹೆಚ್ಚು ತಿಮಿಂಗಿಲಗಳು, ಡಾಲ್ಫಿನ್‌ಗಳ ಮಾರಣಹೋಮ: ಮೂಕ ಪ್ರಾಣಿಗಳ ಆಕ್ರಂದನಕ್ಕೆ ಕಣ್ಣೀರಿಟ್ಟ ಸಾಗರ! Whales And Dolphins Massacre

ಪ್ರಮುಖ ಮುಖ್ಯಾಂಶಗಳು

  • ಇಡೀ ಕರಾವಳಿಯನ್ನೇ ಕಣ್ಣೀರಲ್ಲಿ ಮುಳುಗಿಸುವಂತಹ ಭೀಕರ ಘಟನೆಯೊಂದು ಜಗತ್ತನ್ನೇ ಬೆಚ್ಚಿಬೀಳಿಸಿದೆ
  • ಫಾರೋ ದ್ವೀಪಗಳ ಸುತ್ತಮುತ್ತ 700ಕ್ಕೂ ಹೆಚ್ಚು ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳ ಭೀಕರ ಹತ್ಯೆ
  • ಪ್ರತಿವರ್ಷದ ಸಂಪ್ರದಾಯದ ಹೆಸರಿನಲ್ಲಿ 'ಗ್ರಿಂಡಾಡ್ರಾಪ್' ಅಥವಾ 'ಗ್ರಿಂಡ್' ಎಂಬ ಕ್ರೂರ ಬೇಟೆ
  • ಈ ಸಾಂಪ್ರದಾಯಿಕ ಕ್ರೌರ್ಯಕ್ಕೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ
Whales And Dolphins Massacre : ಸಾಗರದ ನೀಲಿ ಅಲೆಗಳು ಕ್ಷಣಮಾತ್ರದಲ್ಲಿ ರಕ್ತದ ಮಡುವಾಗಿ ಮಾರ್ಪಟ್ಟು, ಮೂಕ ಪ್ರಾಣಿಗಳ ಮರಣದ ಆಕ್ರಂದನ ಇಡೀ ಕರಾವಳಿಯನ್ನೇ ಕಣ್ಣೀರಲ್ಲಿ ಮುಳುಗಿಸುವಂತಹ ಭೀಕರ ಘಟನೆಯೊಂದು ಜಗತ್ತನ್ನೇ ಬೆಚ್ಚಿಬೀಳಿಸಿದೆ. ಫಾರೋ ದ್ವೀಪಗಳ (Faroe Islands) ಸುತ್ತಮುತ್ತಲಿನ ಸಮುದ್ರ ತೀರದಲ್ಲಿ ಪ್ರತಿವರ್ಷದ ಸಂಪ್ರದಾಯದ ಹೆಸರಿನಲ್ಲಿ 'ಗ್ರಿಂಡಾಡ್ರಾಪ್' ಅಥವಾ 'ಗ್ರಿಂಡ್' ಎಂಬ ಕ್ರೂರ ಬೇಟೆಗೆ ಬರೋಬ್ಬರಿ 700ಕ್ಕೂ ಹೆಚ್ಚು ತಿಮಿಂಗಿಲಗಳು ಮತ್ತು ಡಾಲ್ಫಿನ್‌ಗಳನ್ನು ಅತ್ಯಂತ ದಯನೀಯವಾಗಿ ಹತ್ಯೆ ಮಾಡಲಾಗಿದ್ದು, ಇಡೀ ಸಮುದ್ರವೇ ರಕ್ತಸಿಕ್ತವಾಗಿ ಕಡು ಕೆಂಪು ಬಣ್ಣಕ್ಕೆ ತಿರುಗಿದೆ.
ಫಾರೋ ದ್ವೀಪಗಳ ಸ್ಥಳೀಯ ನಿವಾಸಿಗಳು ಕೊಕ್ಕೆ ಮತ್ತು ಚೂಪಾದ ಕತ್ತಿಗಳನ್ನು ಬಳಸಿ ಅಟ್ಲಾಂಟಿಕ್ ಡಾಲ್ಫಿನ್‌ಗಳು ಮತ್ತು ಉದ್ದನೆಯ ರೆಕ್ಕೆಗಳ ಪೈಲಟ್ ತಿಮಿಂಗಿಲಗಳನ್ನು ಅಟ್ಟಿಸಿಕೊಂಡು ಬಂದು ಆಳವಿಲ್ಲದ ಕೊಲ್ಲಿಗಳಿಗೆ ತಳ್ಳುತ್ತಾರೆ. ತೀರದಲ್ಲಿದ್ದ ಸಣ್ಣ ಮಕ್ಕಳು ಸೇರಿದಂತೆ ನೂರಾರು ಪ್ರೇಕ್ಷಕರು ನೋಡನೋಡುತ್ತಿದ್ದಂತೆಯೇ ಈ ಅಸಹಾಯಕ ಜೀವಿಗಳ ದೇಹಗಳನ್ನು ಸೀಳಿ, ಭೀಕರವಾಗಿ ಹತ್ಯೆ ಮಾಡಲಾಗಿದೆ. ಈ ರಕ್ತಪಾತದ ನಂತರ, ಆ ಪ್ರಾಣಿಗಳ ಮೃತದೇಹಗಳನ್ನು ಒಂದೆಡೆ ರಾಶಿ ಹಾಕಿ, ಎಳೆದುಕೊಂಡು ಹೋಗಿ ಮಾಂಸಕ್ಕಾಗಿ ಕತ್ತರಿಸಿ ಹಂಚಲಾಗಿದ್ದು, ಈ ಸಾಂಪ್ರದಾಯಿಕ ಕ್ರೌರ್ಯಕ್ಕೆ ಜಗತ್ತಿನಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಜಾಗತಿಕ ಪರಿಸರ ಕಾರ್ಯಕರ್ತರ ಸ್ವಯಂಸೇವಾ ಸಂಸ್ಥೆಯಾದ 'ಸೀ ಶೆಫರ್ಡ್' ನೀಡಿದ ಮಾಹಿತಿಯ ಪ್ರಕಾರ, ಸ್ಕಾಟ್‌ಲ್ಯಾಂಡ್‌ನಿಂದ ಕೇವಲ 200 ಮೈಲಿ ಉತ್ತರದಲ್ಲಿರುವ ಫಾರೋ ದ್ವೀಪಗಳ ವ್ಯಾಪ್ತಿಯಲ್ಲಿ ಒಂದೇ ದಿನದಲ್ಲಿ (ಮೇ 27, ಬುಧವಾರ) ಮೂರು ಪ್ರತ್ಯೇಕ ಬೇಟೆಗಳ ಮೂಲಕ ಈ ಭೀಕರ ಮಾರಣಹೋಮ ನಡೆಸಲಾಗಿದೆ. ಟೋರ್ಶಾವನ್‌ನಲ್ಲಿ 402 ಪೈಲಟ್ ತಿಮಿಂಗಿಲಗಳು ಮತ್ತು ನಾಲ್ಕು ಬಾಟಲ್‌ನೋಸ್ ಡಾಲ್ಫಿನ್‌ಗಳನ್ನು, ಸ್ಕಾಲಾಬೋಟ್ನರ್‌ನಲ್ಲಿ 168 ಬಿಳಿ ಅಂಚಿನ ಡಾಲ್ಫಿನ್‌ಗಳನ್ನು ಹಾಗೂ ಹ್ವಾಲ್ವಿಕ್‌ನಲ್ಲಿ 132 ಬಿಳಿ ಅಂಚಿನ ಡಾಲ್ಫಿನ್‌ಗಳನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಲಾಗಿದ್ದು, ಈ ಮೂಲಕ ಬಲಿಯಾದ ಮೂಕ ಜೀವಿಗಳ ಒಟ್ಟು ಸಂಖ್ಯೆ ಬರೋಬ್ಬರಿ 706ಕ್ಕೆ ಏರಿಕೆಯಾಗಿದೆ.
ವರದಿಗಳ ಪ್ರಕಾರ, ಈ ಅಸಹಾಯಕ ಪ್ರಾಣಿಗಳನ್ನು ಬೇಟೆಗಾರರು ತಕ್ಷಣವೇ ಕೊಲ್ಲದೆ, ಸುದೀರ್ಘ ಸಮಯ ತೆಗೆದುಕೊಂಡು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಇದರಿಂದಾಗಿ ದಡಕ್ಕೆ ಬಂದು ಸಿಲುಕಿಕೊಂಡಿದ್ದ ಆ ಜೀವಿಗಳು ತೀವ್ರವಾದ ನೋವು ಮತ್ತು ನರಳಾಟದಿಂದ ದೀರ್ಘಕಾಲದವರೆಗೆ ಮರಣಯಾತನೆ ಅನುಭವಿಸುವಂತಾಯಿತು. ಈ ಭೀಕರ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿರುವ ಸೀ ಶೆಫರ್ಡ್ ಸಂಸ್ಥೆಯು, ಈ ಮಟ್ಟದ ಸಾಮೂಹಿಕ ಹತ್ಯೆಯು ಹಿಂದೆಂದೂ ಕೇಳರಿಯದಂತಹುದಾಗಿದೆ, ಕಳೆದ ಇಡೀ ವರ್ಷದಲ್ಲಿ ಈ ದ್ವೀಪಗಳಲ್ಲಿ ಕೊಲ್ಲಲಾದ ಒಟ್ಟು ಕಡಲ ಸಸ್ತನಿಗಳ ಸಂಖ್ಯೆಯ ಮೂರನೇ ಎರಡರಷ್ಟು ಭಾಗವನ್ನು ಕೇವಲ ಒಂದೇ ದಿನದಲ್ಲಿ ಕ್ರೂರವಾಗಿ ಕೊಂದು ಹಾಕಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದೆ.
ಡಾಲ್ಫಿನ್‌ಗಳನ್ನು ಕೊಲ್ಲಲು ಕಡ್ಡಾಯವಾಗಿ ಬಳಸಬೇಕಾದ 'ಸ್ಪೈನಲ್ ಲ್ಯಾನ್ಸ್' (ಬೆನ್ನುಮೂಳೆಯ ಚೂಪಾದ ಆಯುಧ) ಕೊರತೆ ಇರುವುದನ್ನು ಬೇಟೆಗಾರರೇ ಒಪ್ಪಿಕೊಂಡಿದ್ದರಿಂದ ಇಡೀ ಬೇಟೆಯ ಪ್ರಕ್ರಿಯೆಯು ಅತ್ಯಂತ ಗೊಂದಲಮಯ ಹಾಗೂ ಕ್ರೂರವಾಗಿತ್ತು. ಆಯುಧಗಳಿಲ್ಲದೆ ಅನೇಕ ಕಡಲ ಸಸ್ತನಿಗಳನ್ನು ಕೇವಲ ಕತ್ತಿಗಳಿಂದ ಇರಿದು ಕಲ್ಲೆಸೆಯಲಾಗಿದ್ದು, ಆ ಮೂಕ ಜೀವಿಗಳು ರಕ್ತದ ಮಡುವಿನಲ್ಲಿ ಮುಳುಗಿ ಸಾಯುವ ಮುನ್ನ ದೀರ್ಘಕಾಲದವರೆಗೆ ತೀವ್ರ ಯಾತನೆ ಅನುಭವಿಸುವಂತಾಗಿದೆ. ಈ ಕುರಿತು ತೀವ್ರ ಆಕ್ರೋಶ ಹೊರಹಾಕಿರುವ ಸೀ ಶೆಫರ್ಡ್ ಸಂಸ್ಥೆಯ ಫಾರೋ ದ್ವೀಪಗಳ ಪ್ರಚಾರ ನಿರ್ದೇಶಕಿ ವ್ಯಾಲೆಂಟಿನಾ ಕ್ರಾಸ್ಟ್, ಈ ಮುಗ್ಧ ಪ್ರಾಣಿಗಳಿಗೆ ನೀಡಲಾದ ಇಂತಹ ತೀವ್ರ ಮರಣಯಾತನೆಯನ್ನು ಯಾರೂ ಎಂದಿಗೂ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.
ಆಚರಣೆ ಹೆಸರಿನಲ್ಲಿ ನಡೆಯುವ ಈ ಕಟುಕತನವನ್ನು ನಿಷೇಧಿಸುವಂತೆ ಯುರೋಪಿನ ಸರ್ಕಾರಗಳಿಗೆ ವ್ಯಾಲೆಂಟಿನಾ ಕ್ರಾಸ್ಟ್ ಒತ್ತಾಯಿಸಿದ್ದಾರೆ. ನಿಯಮಾವಳಿಗಳ ಪ್ರಕಾರ ಇರಬೇಕಾದ ಕಡ್ಡಾಯ ಉಪಕರಣಗಳಿಲ್ಲದೆಯೇ ಡಾಲ್ಫಿನ್‌ಗಳನ್ನು ಕೊಲ್ಲಲಾಗಿದ್ದು, ಪ್ರಾಣಿಗಳನ್ನು ಬಂಡೆಗಳಿಗೆ ಅಪ್ಪಳಿಸಿ ಹಾಗೂ ದೋಣಿಯ ಪ್ರೊಪೆಲ್ಲರ್‌ಗಳಿಂದ ಬಡಿದು ಹಿಂಸಿಸಲಾಗಿದೆ, ಅಷ್ಟೇ ಅಲ್ಲದೆ, ಸಾರ್ವಜನಿಕವಾಗಿ ತಿಳಿಯದಂತೆ ರಹಸ್ಯವಾಗಿ ಮೂರನೇ ಬೇಟೆಯನ್ನು ಆರಂಭಿಸಿದಾಗ, ಅದನ್ನು ವಿಡಿಯೋ ಮಾಡಿ ದಾಖಲಿಸುತ್ತಿದ್ದ ಕಡಲ ಸಂರಕ್ಷಣಾ ಕಾರ್ಯಕರ್ತರನ್ನು ಅಲ್ಲಿನ ಪೊಲೀಸರು ಬಂಧಿಸಿದ್ದಾರೆ ಎಂದು ಕ್ರಾಸ್ಟ್ ಆಘಾತಕಾರಿ ಸತ್ಯವನ್ನು ಬಯಲಿಗೆಳೆದಿದ್ದಾರೆ.

ವೈಕಿಂಗ್ ಯುಗದ ಸಂಪ್ರದಾಯ

ಈ ಸಾಮೂಹಿಕ ತಿಮಿಂಗಿಲಗಳ ಮಾರಣಹೋಮವನ್ನು ಅಲ್ಲಿನ ಬೆಂಬಲಿಗರು 1,000 ವರ್ಷಗಳ ಹಳೆಯ ವೈಕಿಂಗ್ ಯುಗದ (Viking-era) ಸಂಪ್ರದಾಯ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತರು ಇದಕ್ಕೆ ತೀವ್ರ ಆಕ್ರೋಶ ಹೊರಹಾಕಿದ್ದು, ಆಧುನಿಕ ಜಗತ್ತಿನ ಬದುಕಿಗೆ ಯಾವುದೇ ಅಗತ್ಯವಿಲ್ಲದ ಈ ಆಚರಣೆಯು ಅತ್ಯಂತ ಬರ್ಬರ ಹಾಗೂ ಹಳೇ ಕಾಲದ ಕ್ರೂರ ಪದ್ಧತಿಯಾಗಿದೆ ಎಂದು ಖಂಡಿಸಿದ್ದಾರೆ. ಆದಾಗ್ಯೂ, ಡೆನ್ಮಾರ್ಕ್‌ನ ಸ್ವಾಯತ್ತ ಪ್ರದೇಶವಾಗಿರುವ ಫಾರೋಸ್ ಸರ್ಕಾರವು ತನ್ನ ನಿಲುವನ್ನು ಸಮರ್ಥಿಸಿಕೊಂಡಿದ್ದು, ಇದು ಸ್ಥಳೀಯ ಸಮುದಾಯಕ್ಕೆ ಆಹಾರವನ್ನು ಒದಗಿಸುವ ಒಂದು ಪ್ರಮುಖ ಸಾಂಸ್ಕೃತಿಕ ಆಚರಣೆಯಾಗಿದೆ ಎಂದು ವಾದಿಸಿದೆ.
ಇನ್ನೊಂದು ಆಘಾತಕಾರಿ ವಿಷಯವೆಂದರೆ, ಈ ಭೀಕರ ಸಾಮೂಹಿಕ ಹತ್ಯೆ ನಡೆಯುವ ಕೇವಲ ಒಂದು ದಿನ ಮುಂಚಿತವಾಗಿ, ಅಂದರೆ ಮೇ 26 ರಂದು ಫಾರೋಸ್ ಸಂಸತ್ತು ಪ್ರಾಣಿ ಕಲ್ಯಾಣ ಕಾಯ್ದೆಯನ್ನು ತಿದ್ದುಪಡಿ ಮಾಡಿ, ಬೇಟೆಯಾಡಲಾಗುವ ಡಾಲ್ಫಿನ್‌ಗಳಿಗೆ ಕಾನೂನಿನಿಂದ ಸಿಗುತ್ತಿದ್ದ ರಕ್ಷಣೆಯನ್ನು ಹಿಂಪಡೆದಿದೆ ಎಂದು 'ಓಷನ್ ಕೇರ್' ಸಂಸ್ಥೆ ತಿಳಿಸಿದೆ. ಈ ಕುರಿತು ಆಕ್ರೋಶ ಹೊರಹಾಕಿರುವ ಓಷನ್ ಕೇರ್ ಸಂಸ್ಥೆಯ ವಿಜ್ಞಾನ ವಿಭಾಗದ ನಿರ್ದೇಶಕ ಮಾರ್ಕ್ ಸಿಮಂಡ್ಸ್, ಒಂದು ಕ್ರೂರ ಚಟುವಟಿಕೆಯನ್ನು ಕಾನೂನಿನ ರಕ್ಷಣೆಯಿಂದ ಹೊರಗಿಟ್ಟ ತಕ್ಷಣ ಅದು ಮಾನವೀಯ ಎನಿಸಿಕೊಳ್ಳುವುದಿಲ್ಲ, ದ್ವೀಪದ ರಾಜಧಾನಿಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಬೇಟೆ ನಡೆಯುವ ಕೆಲವೇ ಗಂಟೆಗಳ ಮುನ್ನ ಸಂಸತ್ತು ಈ ನಿರ್ಧಾರ ಕೈಗೊಂಡಿರುವುದು ಸಂಪ್ರದಾಯದ ರಕ್ಷಣೆಯಲ್ಲ, ಬದಲಿಗೆ ಆ ಮೂಕ ಪ್ರಾಣಿಗಳಿಗೆ ಕಾನೂನಿನ ರಕ್ಷಣೆ ಸಿಗದಂತೆ ಮಾಡಿದ ಉದ್ದೇಶಪೂರ್ವಕ ಸಂಚು ಎಂದು ಕಿಡಿಕಾರಿದ್ದಾರೆ, (ಏಜೆನ್ಸೀಸ್​).