ನಮ್ಮ ಬೆರಳುಗಳು ಟ್ರಿಗ್ಗರ್ ಮೇಲಿವೆ! ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಇರಾನ್ ಅಧ್ಯಕ್ಷ ಕೆಂಡಾಮಂಡಲ!  
ವಿದೇಶ

ನಮ್ಮ ಬೆರಳುಗಳು ಟ್ರಿಗ್ಗರ್ ಮೇಲಿವೆ! ಲೆಬನಾನ್ ಮೇಲಿನ ಇಸ್ರೇಲ್ ದಾಳಿಗೆ ಇರಾನ್ ಅಧ್ಯಕ್ಷ ಕೆಂಡಾಮಂಡಲ! Masoud Pezeshkian

ಟೆಹ್ರಾನ್: ಅಮೆರಿಕ ಮತ್ತು ಇರಾನ್ ನಡುವೆ ಸಿದ್ಧವಾಗಿದ್ದ ಕದನ ವಿರಾಮದ ಕನಸು ಈಗ ನುಚ್ಚುನೂರಾಗುವ ಲಕ್ಷಣಗಳು ಕಾಣುತ್ತಿವೆ. ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ನಿರಂತರ ದಾಳಿಗಳನ್ನು ತೀವ್ರವಾಗಿ ಖಂಡಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್(Masoud Pezeshkian), ನಮ್ಮ ಬೆರಳುಗಳು ಈಗಲೂ ಟ್ರಿಗ್ಗರ್ ಮೇಲಿವೆ ಎಂದು ಹೇಳುವ ಮೂಲಕ ಯುದ್ಧ ಸನ್ನದ್ಧತೆಯ ಎಚ್ಚರಿಕೆ ನೀಡಿದ್ದಾರೆ. ಇಸ್ರೇಲ್‌ನ ಈ ನಡೆಯು ರಾಜತಾಂತ್ರಿಕ ಮಾತುಕತೆಗಳನ್ನು ಅರ್ಥಹೀನಗೊಳಿಸುತ್ತಿದೆ ಎಂದು ಗುಡುಗಿದ್ದಾರೆ.

ಇರಾನ್ ಅಧ್ಯಕ್ಷರ ತೀಕ್ಷ್ಣ ಪ್ರತಿಕ್ರಿಯೆ: ಇದು ವಿಶ್ವಾಸದ್ರೋಹ

ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅಧ್ಯಕ್ಷ ಪೆಜೆಶ್ಕಿಯಾನ್, ಇಸ್ರೇಲ್‌ನ ಕ್ರಮವನ್ನು ವಂಚನೆ ಮತ್ತು ಬದ್ಧತೆಯ ಕೊರತೆ ಎಂದು ಬಣ್ಣಿಸಿದ್ದಾರೆ.
ಒಪ್ಪಂದದ ಉಲ್ಲಂಘನೆ: ಲೆಬನಾನ್ ಮೇಲೆ ಇಸ್ರೇಲ್ ನಡೆಸುತ್ತಿರುವ ಮರು ದಾಳಿಯು ಆರಂಭಿಕ ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಇಸ್ರೇಲ್‌ನ ಮೋಸದಾಟಕ್ಕೆ ಸಾಕ್ಷಿ ಎಂದು ಇರಾನ್​ ಅಧ್ಯಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಹೋದರರ ರಕ್ಷಣೆ: ಇರಾನ್ ಎಂದಿಗೂ ತನ್ನ ಲೆಬನಾನ್ ಸಹೋದರ ಮತ್ತು ಸಹೋದರಿಯರನ್ನು ಕೈಬಿಡುವುದಿಲ್ಲ. ಒಂದು ವೇಳೆ ಈ ದಾಳಿಗಳು ಮುಂದುವರಿದರೆ, ನಾವು ಸಂಧಾನದ ಮೇಜಿನಿಂದ ಎದ್ದು ಬರಬೇಕಾಗುತ್ತದೆ ಎಂದು ಪೆಜೆಶ್ಕಿಯಾನ್ ಎಚ್ಚರಿಸಿದ್ದಾರೆ.

ಇರಾನ್ ಸಂಸತ್ತಿನ ಸ್ಪೀಕರ್ ಗುಡುಗು: ಬೆಂಕಿ ತಕ್ಷಣ ಆರಿಸಿ!

ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಾಘರ್ ಘಾಲಿಬಾಫ್ ಕೂಡ ಇಸ್ರೇಲ್ ಮತ್ತು ಅಮೆರಿಕಕ್ಕೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
ರೆಸಿಸ್ಟೆನ್ಸ್ ಆಕ್ಸಿಸ್: ಲೆಬನಾನ್ ಮತ್ತು ಇಡೀ ರೆಸಿಸ್ಟೆನ್ಸ್ ಆಕ್ಸಿಸ್ ಇರಾನ್‌ನ ಅವಿಭಾಜ್ಯ ಅಂಗವಾಗಿದೆ. ಕದನ ವಿರಾಮವು ಇವರಿಗೂ ಅನ್ವಯಿಸುತ್ತದೆ ಎಂದು ಘಾಲಿಬಾಫ್ ನೆನಪಿಸಿದ್ದಾರೆ.
ಪಾಕಿಸ್ತಾನದ ಪಾತ್ರ: ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಅವರು ಲೆಬನಾನ್ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಒಪ್ಪಂದ ಉಲ್ಲಂಘನೆಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಘಾಲಿಬಾಫ್ ಎಚ್ಚರಿಸಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆ: ಅತಂತ್ರ ಸ್ಥಿತಿ

ವಿಶೇಷವೆಂದರೆ, ಶನಿವಾರದಂದು ಅಮೆರಿಕದ ನಿಯೋಗದೊಂದಿಗೆ ಮೊದಲ ಸುತ್ತಿನ ಶಾಂತಿ ಮಾತುಕತೆ ನಡೆಸಲು ಇರಾನ್ ಸಂಧಾನಕಾರರು ಇಂದು ಪಾಕಿಸ್ತಾನಕ್ಕೆ ತೆರಳಬೇಕಿದೆ. ಆದರೆ, ಇತ್ತ ಇಸ್ರೇಲ್ ಗುರುವಾರವೂ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿದೆ. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಸಂಧಾನ ಪ್ರಯತ್ನಗಳಿಗೆ ಆರಂಭದಲ್ಲೇ ಕೊಡಲಿ ಪೆಟ್ಟು ಬಿದ್ದಂತಾಗಿದೆ.

ಇಸ್ರೇಲ್‌ನ ನಿರಂತರ ಆಕ್ರಮಣ

ಇಸ್ರೇಲ್ ಮಾತ್ರ ತನ್ನ ನಿಲುವಿನಿಂದ ಹಿಂದೆ ಸರಿಯುತ್ತಿಲ್ಲ. ಹಿಜ್ಬುಲ್ಲಾ ನೆಲೆಗಳನ್ನು ಧ್ವಂಸಗೊಳಿಸುವುದೇ ನಮ್ಮ ಗುರಿ ಎಂದು ಅದು ಹೇಳುತ್ತಿದೆ. ಇಸ್ರೇಲ್‌ನ ಈ ಹಠಮಾರಿ ಧೋರಣೆಯು ಮಧ್ಯಪ್ರಾಚ್ಯದಲ್ಲಿ ಮತ್ತಷ್ಟು ರಕ್ತಪಾತಕ್ಕೆ ಕಾರಣವಾಗುವ ಆತಂಕ ಮೂಡಿಸಿದೆ. ಒಂದು ವೇಳೆ ಇರಾನ್ ಮಾತುಕತೆಯಿಂದ ಹಿಂದೆ ಸರಿದರೆ, ಹೋರ್ಮುಜ್ ಜಲಸಂಧಿಯ ಬಿಕ್ಕಟ್ಟು ಮತ್ತೆ ತೀವ್ರಗೊಳ್ಳಲಿದೆ,(ಏಜೆನ್ಸೀಸ್).