Sergio Gor | 35 ನಾಯಕರ ಪಟ್ಟಿಯಲ್ಲಿ ಮೋದಿಗೆ ಮೊದಲ ಆದ್ಯತೆ!. 
ವಿದೇಶ

ಟ್ರಂಪ್ ಲಿಸ್ಟ್‌ನಲ್ಲಿ ಪ್ರಧಾನಿ ಮೋದಿಗೆ ಮೊದಲ ಸ್ಥಾನ: 35 ಗಣ್ಯರಲ್ಲಿ ಭಾರತದ ಪ್ರಧಾನಿಯೇ ಟಾಪ್ ಫೇವರಿಟ್ ಎಂದ ಯುಎಸ್ ರಾಯಭಾರಿ! | Sergio Gor

ನವದೆಹಲಿ: ಡಿಸೆಂಬರ್‌ನಲ್ಲಿ ಫ್ಲೋರಿಡಾದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯಾಗಲಿರುವ ನಾಯಕರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿರುತ್ತಾರೆ ಎಂದು ಭಾರತದಲ್ಲಿನ ಯುಎಸ್ ರಾಯಭಾರಿ ಸರ್ಜಿಯೋ ಗೋರ್ (Sergio Gor) ಹೇಳಿದ್ದಾರೆ. ಉಭಯ ನಾಯಕರ ನಡುವಿನ ವೈಯಕ್ತಿಕ ಬಾಂಧವ್ಯ ಮತ್ತು ದ್ವಿಪಕ್ಷೀಯ ಸಂಬಂಧಗಳ ವೇಗವನ್ನು ಈ ವೇಳೆ ಅವರು ಉಲ್ಲೇಖಿಸಿದ್ದಾರೆ.
ಜಿ20 ಶೃಂಗಸಭೆಗಾಗಿ ಪ್ರಧಾನಿ ಮೋದಿ ಫ್ಲೋರಿಡಾಕ್ಕೆ ಭೇಟಿ ನೀಡುವುದು ಕೇವಲ ಬಹುಪಕ್ಷೀಯ ಸಭೆಗೆ ಮಾತ್ರ ಸೀಮಿತವಾಗಿರುವುದಿಲ್ಲ ಎಂಬ ಭರವಸೆಯನ್ನು ರಾಯಭಾರಿ ವ್ಯಕ್ತಪಡಿಸಿದ್ದು, ಇನ್ನು ಯಾವುದೇ ಅಧಿಕೃತ ದ್ವಿಪಕ್ಷೀಯ ಸಭೆಯ ಘೋಷಣೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಅಗ್ರಸ್ಥಾನದಲ್ಲಿ ಪ್ರಧಾನಿ ಮೋದಿ!...

ನಿಮ್ಮ ಬಳಿಗೆ 35 ನಾಯಕರು ಬರುತ್ತಿದ್ದಾರೆ, ಅವರಲ್ಲಿ ಯಾರನ್ನು ಭೇಟಿಯಾಗಲು ಬಯಸುತ್ತೀರಿ..? ಎಂದು ಅಧ್ಯಕ್ಷರನ್ನು ಕೇಳಿದರೆ, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಆ ಪಟ್ಟಿಯ ಅಗ್ರಸ್ಥಾನದಲ್ಲಿರುತ್ತಾರೆ ಎಂದು ಗೋರ್ ಇಂಡಿಯಾ ಟುಡೇ ಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಅಧ್ಯಕ್ಷರು ಪ್ರಧಾನ ಮಂತ್ರಿಯವರನ್ನು ತಮ್ಮ ಆಪ್ತ ಸ್ನೇಹಿತ ಎಂದು ಪರಿಗಣಿಸುವುದರಿಂದ, ಆ ಭೇಟಿಯು ಕೇವಲ ಸಾಂಪ್ರದಾಯಿಕ ಗುಂಪು ಸಭೆಗಿಂತ ಹೆಚ್ಚಿನದಾಗಿರಲಿದೆ ಎಂದು ಅವರು ಆಶಿಸಿದ್ದಾರೆ.
ಮುಂದಿನ ವರ್ಷ ಟ್ರಂಪ್ ಮತ್ತೆ ಭಾರತಕ್ಕೆ ಆಗಮಿಸುವ ಸಾಧ್ಯತೆಯನ್ನು ಸುಳಿವು ನೀಡಿರುವ ಗೋರ್​, ತಮ್ಮ 2020 ರ ಭಾರತ ಭೇಟಿಯನ್ನು ಇಂದಿಗೂ ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ. ನಾನು ಅವರೊಂದಿಗೆ ಮಾತನಾಡುವ ಪ್ರತಿಯೊಂದು ಬಾರಿಯೂ, ಅವರು ಇಲ್ಲಿಗೆ ನೀಡಿದ್ದ ಅದ್ಭುತ ಭೇಟಿ, ತಾವು ಭೇಟಿಯಾದ ಜನರು ಮತ್ತು ತಮ್ಮ ಪ್ರಿಯ ಮಿತ್ರ ಪ್ರಧಾನ ಮಂತ್ರಿಯವರನ್ನು ಅತ್ಯಂತ ಗೌರವದಿಂದ ನೆನಪಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.
ಪ್ರಸ್ತಾವಿತ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ ಗೋರ್, ಯುಎಸ್ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮಾತುಕತೆಗಳನ್ನು ಮರುರೂಪಿಸಲಾಗುತ್ತಿದೆ, ಆದರೂ ಉಭಯ ದೇಶಗಳು ಒಪ್ಪಂದವನ್ನು ತಲುಪಲು ತುಂಬಾ ಹತ್ತಿರದಲ್ಲಿವೆ ಎಂದು ಸುಳಿವು ನೀಡಿದ್ದಾರೆ. ಸುಪ್ರೀಂ ಕೋರ್ಟ್‌ನ ದುರದೃಷ್ಟಕರ ನಿರ್ಧಾರದ ನಂತರ ವ್ಯಾಪಾರ ಒಪ್ಪಂದವನ್ನು ಮರುಪರಿಶೀಲಿಸಲಾಗುತ್ತಿದೆ, ಆದರೆ ನಾವು ಅದನ್ನು ಅಂತಿಮಗೊಳಿಸಲು ಅತ್ಯಂತ ಹತ್ತಿರದಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ. ಮುಂದಿನ ಕೆಲವು ತಿಂಗಳುಗಳಲ್ಲಿ ಈ ಒಪ್ಪಂದವು ಅಂತಿಮಗೊಳ್ಳುವ ನಿರೀಕ್ಷೆಯಿದೆ ಎಂದಿರುವ ಗೋರ್, ಇಂತಹ ದೊಡ್ಡ ಮಟ್ಟದ ಮಾತುಕತೆಗಳಿಗೆ ಸಮಯ ಹಿಡಿಯುವುದು ಸಹಜ ಎಂದು ಒತ್ತಿ ಹೇಳಿದ್ದಾರೆ.

ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧ!...

ವ್ಯಾಪಾರ ಒಪ್ಪಂದದ ಕುರಿತ ಚರ್ಚೆ ಒಂದು ವರ್ಷವಾಯಿತು ಎಂದು ಜನರು ಪ್ರಶ್ನಿಸುತ್ತಾರೆ. ಆದರೆ ಯುರೋಪಿಯನ್ ಯೂನಿಯನ್ 20 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಮಾತುಕತೆ ನಡೆಸುತ್ತಿದ್ದರೂ ಅದು ಇನ್ನೂ ಪೂರ್ಣಗೊಂಡಿಲ್ಲ, ನಾವು ಇತರ ಅನೇಕ ಪಾಲುದಾರರಿಗಿಂತ ಸಾಕಷ್ಟು ವೇಗವಾಗಿ ಸಾಗುತ್ತಿದ್ದೇವೆ ಎಂದು ಟ್ರಂಪ್ ನಿಕಟವರ್ತಿಯಾಗಿರುವ ಟ್ರಂಪ್​ ಹೇಳಿದ್ದಾರೆ.
ಈ ಒಪ್ಪಂದವು ಎರಡೂ ದೇಶಗಳಿಗೆ ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದಿರುವ ಅಮೆರಿಕಾ ರಾಯಭಾರಿ, ನವದೆಹಲಿ ಮತ್ತು ವಾಷಿಂಗ್ಟನ್ ಇದು ತೆರೆಯಲಿರುವ ಹೊಸ ಅವಕಾಶಗಳನ್ನು ಸ್ಪಷ್ಟವಾಗಿ ಗುರುತಿಸಿವೆ ಎಂದಿದ್ದಾರೆ. ಪ್ರಸ್ತುತ ಭಾರತ-ಯುಎಸ್ ದ್ವಿಪಕ್ಷೀಯ ವ್ಯಾಪಾರವು ಸುಮಾರು $240 ಬಿಲಿಯನ್‌ನಷ್ಟಿದ್ದು, ಪ್ರಧಾನಿ ಮೋದಿ ಮತ್ತು ಟ್ರಂಪ್ ಮುಂದಿನ ಕೆಲವು ವರ್ಷಗಳಲ್ಲಿ ಇದನ್ನು $500 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ.

ಸ್ಥಿರತೆಗಾಗಿ ಪ್ರಧಾನಿಯನ್ನು ಶ್ಲಾಘಿಸಿದ ಗೋರ್​!...

ಭಾರತದಲ್ಲಿ ಸ್ಥಿರತೆಯನ್ನು ತಂದಿದ್ದಕ್ಕಾಗಿ ಪ್ರಧಾನ ಮಂತ್ರಿಯವರನ್ನು ಗೋರ್ ಶ್ಲಾಘಿಸಿದ್ದು, ಇದು ಭಾರತವನ್ನು ಅಮೆರಿಕಕ್ಕೆ ಅತ್ಯಂತ ಆಕರ್ಷಕ ಪಾಲುದಾರನನ್ನಾಗಿ ಮಾಡಿದೆ ಎಂದಿದ್ದಾರೆ. ಭಾರತ ಚೆನ್ನಾಗಿ ಸಾಧನೆ ಮಾಡುವುದು ನಮಗೆ ಅತ್ಯಂತ ಉತ್ತಮ ವಿಷಯವಾಗಿದ್ದು, ನಮಗೆ ಸ್ಥಿರವಾದ ಭಾರತ ಬೇಕು ಮತ್ತು ನಾವು ಅಂತಹ ದೇಶದೊಂದಿಗೆ ಕೆಲಸ ಮಾಡಲು ಬಯಸುತ್ತೇವೆ ಎಂದು ಅವರು ಹೇಳಿದ್ದಾರೆ. ಉಭಯ ದೇಶಗಳ ನಡುವಿನ ಹೂಡಿಕೆಗಳನ್ನು ಉಲ್ಲೇಖಿಸಿದ ಗೋರ್, ಭಾರತದಲ್ಲಿನ ಯುಎಸ್ ರಾಯಭಾರ ಕಚೇರಿಯು ಯುನೈಟೆಡ್ ಸ್ಟೇಟ್ಸ್‌ಗೆ $24 ಬಿಲಿಯನ್ ಹೊಸ ಹೂಡಿಕೆಯನ್ನು ತರಲು ನೆರವಾಗಿದೆ, ಅದೇ ಸಮಯದಲ್ಲಿ ಅಮೇರಿಕನ್ ಕಂಪನಿಗಳು ಭಾರತದಲ್ಲಿ ತಮ್ಮ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತಿವೆ ಎಂದಿದ್ದಾರೆ.
ಅಮೆರಿಕಾ ಭಾರತದೊಂದಿಗೆ ಅತ್ಯಂತ ನಿಕಟ ಬಾಂಧವ್ಯವನ್ನು ಬಯಸುತ್ತಿರುವುದರಿಂದ, ಹಿರಿಯ ಯುಎಸ್ ಅಧಿಕಾರಿಗಳ ಸರಣಿ ಭೇಟಿಗಳಿಗೆ ಭಾರತ ಅಭ್ಯಾಸ ಮಾಡಿಕೊಳ್ಳಬೇಕು ಎಂದು ಗೋರ್ ಹೇಳಿದ್ದಾರೆ. ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ತಮ್ಮ ನಾಲ್ಕು ದಿನಗಳ ಭಾರತ ಭೇಟಿ ಮುಗಿದ ಕೆಲವೇ ತಿಂಗಳುಗಳಲ್ಲಿ, ಅಂದರೆ ಅಕ್ಟೋಬರ್‌ನಲ್ಲಿ ಮತ್ತೆ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಅವರು ದೃಢಪಡಿಸಿದ್ದಾರೆ. ವಿದೇಶಾಂಗ ಕಾರ್ಯದರ್ಶಿಯೊಬ್ಬರು ಇಷ್ಟು ಕಡಿಮೆ ಅವಧಿಯಲ್ಲಿ ಎರಡು ಬಾರಿ ಭೇಟಿ ನೀಡುವುದು ಅತ್ಯಂತ ಅಪರೂಪದ ಸಂಗತಿಯಾಗಿದ್ದು, ಇದಕ್ಕೆ ಸಿದ್ಧರಾಗಿ ಎಂಬುದೇ ನನ್ನ ಸ್ಪಷ್ಟ ಸಂದೇಶವಾಗಿತ್ತು ಎಂದು ಗೋರ್ ತಿಳಿಸಿದ್ದಾರೆ(ಏಜೆನ್ಸೀಸ್​).