ವಾಷಿಂಗ್ಟನ್/ಟೆಹ್ರಾನ್: ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳಿಗೆ ಎಳ್ಳುನೀರು ಬಿಟ್ಟಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump), ಇರಾನ್ ಸಂಘರ್ಷದ ವಿಷಯದಲ್ಲಿ ತಮ್ಮ ಅತ್ಯಂತ ಕಠಿಣ ಮತ್ತು ಸ್ಪಷ್ಟ ನಿಲುವನ್ನು ಪ್ರಕಟಿಸಿದ್ದಾರೆ. "ಇರಾನ್‌ನ ಬೇಷರತ್ ಶರಣಾಗತಿಯನ್ನು (Unconditional Surrender) ಹೊರತುಪಡಿಸಿ ನಾವು ಬೇರೆ ಯಾವುದೇ ಮಾತುಕತೆ ಅಥವಾ ಒಪ್ಪಂದಕ್ಕೆ ಸಿದ್ಧವಿಲ್ಲ" ಎಂದು ಅವರು ಘೋಷಿದ್ದಾರೆ.
ಇದೇ ಫೆಬ್ರವರಿ 28 ರಿಂದ ಆರಂಭವಾಗಿರುವ ಈ ಭೀಕರ ಯುದ್ಧದ ಗುರಿಯನ್ನು ಟ್ರಂಪ್ ತಮ್ಮ 'ಟ್ರೂತ್ ಸೋಶಿಯಲ್' (Truth Social) ವೇದಿಕೆಯಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ಅವರ ಈ ಹೇಳಿಕೆಯು ಶಾಂತಿ ಸ್ಥಾಪಿಸಲು ಪ್ರಯತ್ನಿಸುತ್ತಿದ್ದ ಹಲವು ರಾಷ್ಟ್ರಗಳ ರಾಜತಾಂತ್ರಿಕ ಪ್ರಯತ್ನಗಳಿಗೆ ದೊಡ್ಡ ಹೊಡೆತ ನೀಡಿದೆ.
ಹೊಸ ನಾಯಕತ್ವ!
ಟ್ರಂಪ್ ಕೇವಲ ಸೈನಿಕ ಶರಣಾಗತಿಯನ್ನು ಮಾತ್ರ ಬಯಸುತ್ತಿಲ್ಲ, ಬದಲಾಗಿ ಇರಾನ್‌ನಲ್ಲಿ ಆಡಳಿತ ಬದಲಾವಣೆಯಾಗಬೇಕು ಎಂಬ ಹಠಕ್ಕೆ ಬಿದ್ದಿದ್ದಾರೆ. "ಶರಣಾಗತಿಯ ನಂತರ, ಅಲ್ಲಿ ಒಬ್ಬ 'ಶ್ರೇಷ್ಠ ಮತ್ತು ಸ್ವೀಕಾರಾರ್ಹ' ನಾಯಕನ ಆಯ್ಕೆಯಾಗಬೇಕು" ಎಂದು ಅವರು ಬರೆದಿದ್ದಾರೆ. ಅಂದರೆ, ಇರಾನ್‌ನ ಮುಂದಿನ ಸರ್ಕಾರ ಅಥವಾ ನಾಯಕ ಯಾರು ಎಂಬುದನ್ನು ಅಮೆರಿಕವೇ ನಿರ್ಧರಿಸಲಿದೆ ಎಂಬ ಪರೋಕ್ಷ ಸಂದೇಶ ಇದಾಗಿದೆ.
ಫೆಬ್ರವರಿ 28ರಂದು ನಡೆದ ವೈಮಾನಿಕ ದಾಳಿಯಲ್ಲಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಹತರಾದ ನಂತರ ಇರಾನ್ ಸದ್ಯ ನಾಯಕತ್ವದ ಬಿಕ್ಕಟ್ಟನ್ನು ಎದುರಿಸುತ್ತಿದೆ. ಸದ್ಯ ಮಧ್ಯಂತರ ಮಂಡಳಿಯೊಂದು ಆಡಳಿತ ನಡೆಸುತ್ತಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಹೊಸ ಸುಪ್ರೀಂ ಲೀಡರ್ ಘೋಷಣೆಯಾಗುವ ಸಾಧ್ಯತೆಯಿದೆ. ಆದರೆ ಟ್ರಂಪ್ ಮಾತ್ರ ಅಮೆರಿಕಕ್ಕೆ ಪೂರಕವಾದ ವ್ಯಕ್ತಿಯನ್ನೇ ಆ ಸ್ಥಾನದಲ್ಲಿ ನೋಡಲು ಬಯಸುತ್ತಿದ್ದಾರೆ.
'MIGA' – ಮೇಕ್ ಇರಾನ್ ಗ್ರೇಟ್ ಎಗೇನ್!
ಟ್ರಂಪ್ ತಮ್ಮ ಎಂದಿನ ಶೈಲಿಯಲ್ಲಿ ಘೋಷಣೆಯೊಂದನ್ನು ಹೊರಹಾಕಿದ್ದಾರೆ. "ನಾವು ಮತ್ತು ನಮ್ಮ ಶೌರ್ಯದ ಮಿತ್ರರಾಷ್ಟ್ರಗಳು ಇರಾನ್ ಅನ್ನು ವಿನಾಶದ ಅಂಚಿನಿಂದ ಮರಳಿ ತರುತ್ತೇವೆ. ಆರ್ಥಿಕವಾಗಿ ಅದನ್ನು ಎಂದಿಗೂ ಕಾಣದಷ್ಟು ಬಲಿಷ್ಠ ಮತ್ತು ಬೃಹತ್ ರಾಷ್ಟ್ರವನ್ನಾಗಿ ಮಾಡುತ್ತೇವೆ. ಇರಾನ್‌ಗೆ ಸುಂದರ ಭವಿಷ್ಯವಿದೆ. 'ಮೇಕ್ ಇರಾನ್ ಗ್ರೇಟ್ ಎಗೇನ್' (MIGA!)" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಸಂಧಾನಕ್ಕೆ ನಮಗೆ ಆಸಕ್ತಿಯಿಲ್ಲ
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಟ್ರಂಪ್ ಆಫರ್ ಅನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ. "ಮಧ್ಯಸ್ಥಿಕೆಯ ಪ್ರಯತ್ನಗಳು ನಮ್ಮ ಮೇಲೆ ನಡೆಯಬಾರದು. ಬದಲಾಗಿ ಇರಾನ್ ಜನರನ್ನು ಕಡಿಮೆ ಅಂದಾಜು ಮಾಡಿ ಯಾರು ಬೆಂಕಿ ಹಚ್ಚಿದ್ದಾರೋ (ಅಮೆರಿಕ) ಅವರ ಮೇಲೆ ನಡೆಯಲಿ. ಸಂಧಾನದಲ್ಲಿ ನಮಗೆ ಯಾವುದೇ ಆಸಕ್ತಿಯಿಲ್ಲ" ಎಂದು ಅವರು ಖಡಕ್ ಆಗಿ ಉತ್ತರಿಸಿದ್ದಾರೆ.
ಮುಂದಿನ ಪರಿಣಾಮಗಳೇನು?
ಟ್ರಂಪ್ ಅವರ ಈ 'ಒಪ್ಪಂದವಿಲ್ಲದ' (No Deal) ಪಟ್ಟು ಯುದ್ಧವು ಸುದೀರ್ಘ ಕಾಲ ಮುಂದುವರಿಯುವ ಸೂಚನೆ ನೀಡಿದೆ. ಇರಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಹ ಅಮೆರಿಕದ ಈ ಬೇಡಿಕೆಯನ್ನು ಇರಾನ್ ಒಪ್ಪುವ ಸಾಧ್ಯತೆ ತೀರಾ ಕಡಿಮೆ ಇರುವುದರಿಂದ, ಮುಂಬರುವ ದಿನಗಳಲ್ಲಿ ಪಶ್ಚಿಮ ಏಷ್ಯಾದಲ್ಲಿ ಮತ್ತಷ್ಟು ರಕ್ತಪಾತ ಮತ್ತು ತೈಲ ಬಿಕ್ಕಟ್ಟು ಸಂಭವಿಸುವುದು ಖಚಿತವಾಗಿದೆ,(ಏಜೆನ್ಸೀಸ್).