ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 
ವಿದೇಶ

ಗ್ರೀನ್​ಲ್ಯಾಂಡ್ ವಶಕ್ಕೆ ವಿರೋಧ; ಯುಕೆ, ಫ್ರಾನ್ಸ್ ಸೇರಿ 8 ಯುರೋಪಿಯನ್ ದೇಶಗಳ ಮೇಲೆ ಶೇ.10ರಷ್ಟು ಸುಂಕ ವಿಧಿಸಿದ ಟ್ರಂಪ್ | Donald Trump

ವಾಷಿಂಗ್ಟನ್: ಗ್ರೀನ್​ಲ್ಯಾಂಡ್ ವಶಕ್ಕೆ ಪಡೆಯುವ ತನ್ನ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಯುಕೆ, ಫ್ರಾನ್ಸ್​ ಹಾಗೂ ಡೆನ್ಮಾರ್ಕ್ ಸೇರಿ ಎಂಟು ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ. 10ರಷ್ಟು ಸುಂಕವನ್ನು ಹೆಚ್ಚಿಸುವುದಾಗಿ ಶನಿವಾರ(ಜ. 17) ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದು, ಇದು ಫೆಬ್ರವರಿ 1ರಿಂದ ಜಾರಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಈ ಕುರಿತು ತಮ್ಮ ಸೋಷಿಯಲ್ ಮೀಡಿಯಾ ಟ್ರೂತ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಯುನೈಟೆಡ್ ಸ್ಟೇಟ್​​ನಿಂದ ಗ್ರೀನ್​ಲ್ಯಾಂಡ್ ವಶಕ್ಕೆ ಅಥವಾ ಸಂಪೂರ್ಣ ಖರೀದಿಗೆ ಒಪ್ಪಂದ ಮಾಡಿಕೊಳ್ಳದಿದ್ದರೆ ಜೂನ್ 1 ರಂದು ಸುಂಕವನ್ನು ಶೇಕಡಾ 25 ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದ್ದಾರೆ. ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ನೆದರ್‌ಲ್ಯಾಂಡ್ಸ್ ಮತ್ತು ಫಿನ್‌ಲ್ಯಾಂಡ್ ಈ ಸುಂಕವನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಗ್ರೀನ್​ಲ್ಯಾಂಡ್ ವಶಪಡಿಸಿಕೊಳ್ಳುವ ಟ್ರಂಪ್ ಅವರ ಹೇಳಿಕೆಗೆ ಈ ಹಿಂದೆ ವಿರೋಧ ವ್ಯಕ್ತಪಡಿಸಿದ್ದ ಯುರೋಪಿಯನ್​ ರಾಷ್ಟ್ರಗಳ ನಾಯಕರು, ಗ್ರೀನ್​​ಲ್ಯಾಂಡ್​ ಮತ್ತು ಅದರ ಭೂಮಿಯ ಯಾವುದೇ ವಿಷಯಗಳನ್ನು ನಿರ್ಧರಿಸುವ ಹಕ್ಕು ಇರುವುದು ಡೆನ್ಮಾರ್ಕ್​ಗೆ ಮಾತ್ರ ಎಂದು ಹೇಳಿದ್ದರು.
ಡೆನ್ಮಾರ್ಕ್​ ಸಹ, ತನ್ನ ಮಿತ್ರ ರಾಷ್ಟ್ರಗ ಸಹಕಾರದಿಂದ ಗ್ರೀನ್​ಲ್ಯಾಂಡ್​ನಲ್ಲಿ ಅಮೆರಿಕಾದ ದಾಳಿ ಬೆದರಿಕೆಯನ್ನು ಎದುರಿಸಲು ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸುವುದಾಗಿ ಹೇಳಿದೆ. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶ್ವೇತಭವನ, ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳುವ ಟ್ರಂಪ್ ಅವರ ಗುರಿಯ ಮೇಲೆ ಯುರೋಪಿಯನ್ ಮಿಲಿಟರಿ ಉಪಸ್ಥಿತಿಯು ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ (ಏಜೆನ್ಸೀಸ್).