Operation Sindoor | ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ಸಂಬಂಧಿಸಿದ ಸಾಂದರ್ಭಿಕ ಚಿತ್ರ
Operation Sindoor: ಶುಕ್ರವಾರ ರಾಷ್ಟ್ರೀಯ ದೂರದರ್ಶನದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ವೀರರನ್ನೊಳಗೊಂಡ ವಿಶೇಷ ಕಾರ್ಯಕ್ರಮವನ್ನು ಇಂಡಿಯಾ ಟಿವಿ ಪ್ರಸ್ತುತಪಡಿಸಿದೆ.
ಸಿಂಧೂರ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಮತ್ತು ಅದನ್ನು ಕಾರ್ಯಗತಗೊಳಿಸಿದ ಸೈನಿಕರು, ಭಾರತವು ಮುಗ್ಧ ನಾಗರಿಕರನ್ನು ರಕ್ಷಿಸುವುದರೊಂದಿಗೆ, ಪಾಕಿಸ್ತಾನದ ಭಯೋತ್ಪಾದಕ ಕೇಂದ್ರಗಳನ್ನು ಹೇಗೆ ನಾಶಪಡಿಸಿತು ಎಂಬುದರ ಕುರಿತಾದ ವಿವರಗಳನ್ನು ಹಂಚಿಕೊಂಡರು.
ಕರ್ನಲ್ ಕೊಶಾಂಕ್ ಲಂಬಾ, ಲೆಫ್ಟಿನೆಂಟ್ ಕರ್ನಲ್ ಸುಶೀಲ್ ಬಿಶ್ಟ್, ಮೇಜರ್ ಜೆರ್ರಿ ಬ್ಲೇಜ್, ನೈಬ್ ಸುಬೇದಾರ್ ಸತೀಶ್ ಕುಮಾರ್ ಮತ್ತು ನೈಬ್ ಸುಬೇದಾರ್ ರತ್ನೇಶ್ ಘೋಷ್ 2025 ರ ಮೇ 6,7 ರ ಮಧ್ಯರಾತ್ರಿಯ ಬಗ್ಗೆ ಮುಕ್ತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಕರ್ನಲ್ ಲಾಂಬಾ ಹೇಳಿದ್ದೇನು...?
ಇಂಡಿಯಾ ಟಿವಿಯೊಂದಿಗೆ ಮಾತನಾಡಿದ ಕರ್ನಲ್ ಲಂಬಾ, ನಾನು ನನ್ನ ಘಟಕದ ಕಮಾಂಡಿಂಗ್ ಆಫೀಸರ್ ಆಗಿದ್ದೆ ಮತ್ತು ಕಾರ್ಯಾಚರಣೆಗೆ ಆಯ್ಕೆ ಮಾಡಿದ ತಂಡದ ನೇತೃತ್ವವಹಿಸಿಕೊಂಡಿದ್ದೆ. ಕಾರ್ಯಾಚರಣೆ ಸ್ಪಷ್ಟವಾಗಿತ್ತು, ನಾವು ಪಾಕಿಸ್ತಾನದ ಭಯೋತ್ಪಾದಕ ಅಡಗುತಾಣಗಳನ್ನು ನಾಶಪಡಿಸಬೇಕಾಗಿತ್ತು ಎಂದರು.
ಈ ಅಡಗುತಾಣಗಳು ಹಳ್ಳಿಗಳ ಒಳಗಿವೆ ಎಂಬ ಮಾಹಿತಿ ಸಿಕ್ಕಿತು, ರಾಷ್ಟ್ರೀಯತೆಯನ್ನು ಲೆಕ್ಕಿಸದೆ, ಮುಗ್ಧ ನಾಗರಿಕರಿಗೆ ಹಾನಿಯಾಗಬಾರದು ಎನ್ನುವುದನ್ನು ಸದಾ ನೆನಪಿಸಿಕೊಳ್ಳುತ್ತಿದ್ದೆವು, ಅದನ್ನು ಗಮನದಲ್ಲಿಟ್ಟುಕೊಂಡು, ಎಚ್ಚರಿಕೆಯಿಂದ ತಯಾರಿ ನಡೆಸಿದ್ದೇವೆ. ಮೇ 6 ಮತ್ತು 7 ರ ರಾತ್ರಿ ಎಲ್ಲಾ ಸೈನಿಕರಲ್ಲಿ ವಿಚಿತ್ರವಾದ ಶಾಂತತೆಯನ್ನು ನೋಡಿದೆ. ಅದು ಹಿಂಜರಿಕೆಯೇ ಎಂದು ಆಶ್ಚರ್ಯ ಪಡುತ್ತಿದ್ದೆ. ಆದರೆ ಅದು ಚಂಡಮಾರುತದ ಹಿಂದಿನ ಮೌನ ಎಂದು ಕೆಲಹೊತ್ತಿನ ಬಳಿಕ ಅರಿತುಕೊಂಡೆ ಎಂದರು.
ಭಯೋತ್ಪಾದಕ ನೆಲೆಗಳ ಧ್ವಂಸ..
ನಾವು ಆಜ್ಞೆಯನ್ನು ಸ್ವೀಕರಿಸಿ, ನಮ್ಮ ಫಿರಂಗಿದಳದ ಮೂಲಕ ಪಾಕಿಸ್ತಾನದ ಮೇಲೆ ದಾಳಿ ಮಾಡಲು ಪ್ರಾರಂಭಿಸಿದಾಗ, ಗುಂಡಿನ ಶಕ್ತಿ ಅಗಾಧವಾಗಿತ್ತು. ನಾವು ಗೊತ್ತುಪಡಿಸಿದ ಪ್ರತಿಯೊಂದು ಗುರಿಯನ್ನು ಶೇ 100 ರಷ್ಟು ನಿಖರವಾಗಿ ನಾಶಪಡಿಸಿದ್ದೇವೆ ಎಂದು ಕರ್ನಲ್ ಲಂಬಾ ಹೇಳಿದರು.
ಕರ್ನಲ್ ಕೋಶಾಂಕ್ ಲಂಬಾ ಯಾರು?
ಕರ್ನಲ್ ಲಂಬಾ ವೀರ ಚಕ್ರ ಪ್ರಶಸ್ತಿ ಪುರಸ್ಕೃತರಾಗಿದ್ದು, ಫಿರಂಗಿ ರೆಜಿಮೆಂಟ್ನ್ನು ಮುನ್ನಡೆಸಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕ ಭದ್ರಕೋಟೆಗಳನ್ನು ಗುರಿಯಾಗಿಸಿಕೊಂಡು ಅವರ ನೇತೃತ್ವದಲ್ಲಿ ಸುಮಾರು 88 ಗಂಟೆಗಳ ಕಾಲ ಪಾಕಿಸ್ತಾನದ ಮೇಲೆ ನಿರಂತರ ಒತ್ತಡವನ್ನು ಹೇರಲಾಯಿತು.
ಆಪರೇಷನ್ ಸಿಂಧೂರ
ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕ ನಾಗರಿಕರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರದ ರೂಪವಾಗಿ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಪಾಕಿಸ್ತಾನದೊಳಗಿನ ಅನೇಕ ಭಯೋತ್ಪಾದಕ ನೆಲೆಗಳನ್ನು ನಿಖರವಾಗಿ ಗುರಿಯಾಗಿಸಿಕೊಂಡು ದಾಳಿ ಮಾಡಲಾಯಿತು.
ನಾಶವಾದ ಪಾಕಿಸ್ತಾನದ ಒಂಬತ್ತು ಭಯೋತ್ಪಾದಕ ನೆಲೆಗಳು
• ಬಹವಾಲ್ಪುರ್: ಜೈಶ್-ಎ-ಮೊಹಮ್ಮದ್
• ಮುರಿಡ್ಕೆ: ಲಷ್ಕರ್-ಎ-ತೈಬಾ
• ತೆಹ್ರಾ ಕಲಾನ್: ಜೈಶ್-ಎ-ಮೊಹಮ್ಮದ್
• ಸಿಯಾಲ್ಕೋಟ್: ಹಿಜ್ಬುಲ್ ಮುಜಾಹಿದ್ದೀನ್
• ಕೋಟ್ಲಿ: ಜೈಶ್-ಎ-ಮೊಹಮ್ಮದ್
• ಮುಜಫರಾಬಾದ್: ಲಷ್ಕರ್-ಎ-ತೈಬಾ
• ಮುಜಫರಾಬಾದ್: ಜೈಶ್-ಎ-ಮೊಹಮ್ಮದ್
ಸುಮಾರು 25 ನಿಮಿಷಗಳ ಕಾಲ ನಡೆದ ಈ ಕಾರ್ಯಾಚರಣೆಯಲ್ಲಿ ಭಾರತೀಯ ಸಶಸ್ತ್ರ ಪಡೆಗಳು 24 ಕ್ಷಿಪಣಿಗಳನ್ನು ಉಡಾಯಿಸಿ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಒಟ್ಟು 21 ಭಯೋತ್ಪಾದಕ ಶಿಬಿರಗಳನ್ನು ನಾಶಪಡಿಸಿದವು. ನಾಲ್ಕು ದಿನಗಳ ಡ್ರೋನ್ ಮತ್ತು ಕ್ಷಿಪಣಿ ಗುಂಡಿನ ದಾಳಿಯು ಪಾಕಿಸ್ತಾನದ ಮಿಲಿಟರಿ ಮೂಲಸೌಕರ್ಯಕ್ಕೆ ದೊಡ್ಡಮಟ್ಟದಲ್ಲಿ ಹಾನಿಯನ್ನುಂಟುಮಾಡಿತು. ಈ ದಾಳಿಗೆ ನಲುಗಿದ ಪಾಕಿಸ್ತಾನ ಕದನ ವಿರಾಮವನ್ನು ಬಯಸಿತು ಮತ್ತು ಎರಡೂ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ (DGMOs) ನಡುವಿನ ಸಂಭಾಷಣೆಯ ನಂತರ ಯುದ್ಧವನ್ನು ನಿಲ್ಲಿಸಲಾಯಿತು(ಏಜೆನ್ಸೀಸ್).