ಕ್ವೆಟ್ಟಾ/ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಭದ್ರತಾ ಪಡೆಗಳು ಮತ್ತು ಬಲೂಚ್ ಪ್ರತ್ಯೇಕತಾವಾದಿಗಳ ನಡುವಿನ ಸಂಘರ್ಷ ಈಗ ತಾರಕಕ್ಕೇರಿದೆ. ಶನಿವಾರ (ಜನವರಿ 31) ಮುಂಜಾನೆ ಬಲೂಚ್ ಲಿಬರೇಶನ್ ಆರ್ಮಿ (BLA) ನಡೆಸಿದ 'ಸಂಘಟಿತ' ಆತ್ಮಹತ್ಯಾ ಮತ್ತು ಗುಂಡಿನ ದಾಳಿಗಳಲ್ಲಿ ಕನಿಷ್ಠ 10 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಪ್ರತಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಪಾಕ್ ಸೇನೆಯು 37 ಬಂಡುಕೋರರನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಆಪರೇಷನ್ ಹಿರೋಫ್ 2.0
ಬಲೂಚ್ ಲಿಬರೇಶನ್ ಆರ್ಮಿ ಈ ಭೀಕರ ಸರಣಿ ದಾಳಿಗಳಿಗೆ 'ಆಪರೇಷನ್ ಹಿರೋಫ್ 2.0' ಎಂದು ಹೆಸರಿಟ್ಟಿದೆ. ಇಂದು ಮುಂಜಾನೆ 6 ಗಂಟೆಯಿಂದಲೇ ಆರಂಭವಾದ ಈ ದಾಳಿಗಳು ಬಲೂಚಿಸ್ತಾನದ 12ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಸಂಭವಿಸಿವೆ. ಕ್ವೆಟ್ಟಾ, ಪನ್ಶ್ನಿ, ಮಸ್ತುಂಗ್, ನುಷ್ಕಿ ಮತ್ತು ಗ್ವಾದರ್ ಜಿಲ್ಲೆಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.
ದಾಳಿಯ ಸ್ವರೂಪ: ಬಂಡುಕೋರರು ಅತ್ಯಾಧುನಿಕ ಬಂದೂಕುಗಳು, ಗ್ರೆನೇಡ್‌ಗಳು ಮತ್ತು ಆತ್ಮಹತ್ಯಾ ಬಾಂಬ್‌ಗಳನ್ನು ಬಳಸಿದ್ದಾರೆ. ಕ್ವೆಟ್ಟಾದಲ್ಲಿ ಮಾತ್ರವೇ ನಾಲ್ವರು ಪೊಲೀಸರು ಈ ದಾಳಿಗೆ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.
ಜೈಲು ಮತ್ತು ಸೇನಾ ನೆಲೆಗಳ ಮೇಲೆ ದಾಳಿ
ವರದಿಗಳ ಪ್ರಕಾರ, ಮಸ್ತುಂಗ್‌ನಲ್ಲಿರುವ ಹೈ-ಸೆಕ್ಯೂರಿಟಿ ಜೈಲಿನ ಮೇಲೆ ದಾಳಿ ನಡೆಸಿರುವ ಬಂಡುಕೋರರು ಸುಮಾರು 30ಕ್ಕೂ ಹೆಚ್ಚು ಕೈದಿಗಳನ್ನು ಬಿಡುಗಡೆಗೊಳಿಸಿದ್ದಾರೆ ಎನ್ನಲಾಗಿದೆ. ಕ್ವೆಟ್ಟಾದ ಸರ್ಯಾಬ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಪೊಲೀಸ್ ವ್ಯಾನ್ ಮೇಲೆ ನಡೆದ ಗುಂಡಿನ ದಾಳಿಯು ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಈ ಹಿನ್ನೆಲೆಯಲ್ಲಿ ಇಡೀ ಪ್ರಾಂತ್ಯದಲ್ಲಿ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದ್ದು, ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಪಾಕ್ ಸೇನೆಯ ಪ್ರತಿದಾಳಿ
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, "ನಮ್ಮ ಪಡೆಗಳು ಬಂಡುಕೋರರ ಸಂಚನ್ನು ವಿಫಲಗೊಳಿಸಿವೆ. 37 ಉಗ್ರರನ್ನು ಹೊಡೆದುರುಳಿಸಲಾಗಿದೆ" ಎಂದು ತಿಳಿಸಿದ್ದಾರೆ. ಆದರೆ, ಸ್ಥಳೀಯ ಮೂಲಗಳ ಪ್ರಕಾರ ಕ್ವೆಟ್ಟಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇನ್ನೂ ಗುಂಡಿನ ಚಕಮಕಿ ಮುಂದುವರಿದಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ.
ಯಾರಿದು ಬಿಎಲ್‌ಎ?
ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳನ್ನು ಪಾಕಿಸ್ತಾನ ಸರ್ಕಾರ ಮತ್ತು ಚೀನಾ ಲೂಟಿ ಮಾಡುತ್ತಿವೆ ಎಂಬುದು ಬಲೂಚ್ ಹೋರಾಟಗಾರರ ಪ್ರಮುಖ ಆರೋಪ. ಕಳೆದ ಕೆಲವು ವರ್ಷಗಳಿಂದ ಬಿಎಲ್‌ಎ ತನ್ನ ದಾಳಿಯ ತೀವ್ರತೆಯನ್ನು ಹೆಚ್ಚಿಸಿದ್ದು, ಪಾಕ್ ಸೇನೆ ಮತ್ತು ಚೀನಾದ ಹೂಡಿಕೆಗಳನ್ನೇ ಪ್ರಮುಖವಾಗಿ ಟಾರ್ಗೆಟ್ ಮಾಡುತ್ತಿದೆ,(ಏಜೆನ್ಸೀಸ್).