Operation Hawkeye Strike 
ವಿದೇಶ

ಆಪರೇಷನ್ ಹಾಕೈ ಸ್ಟ್ರೈಕ್: 70ಕ್ಕೂ ಅಧಿಕ ಉಗ್ರರ ನೆಲೆಗಳ ಮೇಲೆ ಅಮೆರಿಕ ಭೀಕರ ವೈಮಾನಿಕ ದಾಳಿ! | Operation Hawkeye

ಸಿರಿಯಾ: ಸಿರಿಯಾದಲ್ಲಿ ಸಕ್ರಿಯವಾಗಿರುವ ಇಸ್ಲಾಮಿಕ್ ಸ್ಟೇಟ್ (ISIS) ಭಯೋತ್ಪಾದಕರನ್ನು ಮಟ್ಟಹಾಕಲು ಅಮೆರಿಕಾ ಸೇನೆಯು 'ಆಪರೇಷನ್ ಹಾಕೈ ಸ್ಟ್ರೈಕ್' (Operation Hawkeye Strike) ಹೆಸರಿನಡಿ ಬೃಹತ್ ವೈಮಾನಿಕ ದಾಳಿಯನ್ನು ಶನಿವಾರ ನಡೆಸಿದ ಬಗ್ಗೆ ವರದಿಯಾಗಿದೆ. 
ಡಿಸೆಂಬರ್ 13, 2025 ರಂದು ಸಿರಿಯಾದ ಪಾಲ್ಮಿರಾದಲ್ಲಿ ಐಸಿಸ್ ಉಗ್ರರು ನಡೆಸಿದ ಹೊಂಚು ದಾಳಿಯಲ್ಲಿ ಅಯೋವಾ ನ್ಯಾಷನಲ್ ಗಾರ್ಡ್‌ನ ಇಬ್ಬರು ಅಮೆರಿಕನ್ ಸೈನಿಕರು (ಸಾರ್ಜೆಂಟ್ ಎಡ್ಗರ್ ಬ್ರಿಯಾನ್ ಟೊರೆಸ್-ತೋವರ್ ಮತ್ತು ಸಾರ್ಜೆಂಟ್ ವಿಲಿಯಂ ನಥಾನಿಯಲ್ ಹೋವರ್ಡ್) ಹಾಗೂ ಒಬ್ಬ ನಾಗರಿಕ ಭಾಷಾಂತರಕಾರ ಮೃತಪಟ್ಟಿದ್ದರು. ಈ ಭೀಕರ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೇರ ನಿರ್ದೇಶನದ ಮೇರೆಗೆ ಅಮೆರಿಕ ಈ ಬೃಹತ್ ಮಿಲಿಟರಿ ಕಾರ್ಯಾಚರಣೆಯನ್ನು ಕೈಗೊಂಡಿದೆ ಎಂದು ವರದಿಯಾಗಿದೆ.

ಎಲ್ಲೆಲ್ಲಿ ದಾಳಿ...?

ಸಿರಿಯಾದಾದ್ಯಂತ ಇರುವ ಐಸಿಸ್‌ನ ಸುಮಾರು 70ಕ್ಕೂ ಹೆಚ್ಚು ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಇದರಲ್ಲಿ ಉಗ್ರರ ಕಮಾಂಡ್ ಸೆಂಟರ್‌ಗಳು, ಶಸ್ತ್ರಾಸ್ತ್ರ ಸಂಗ್ರಹಣಾ ತಾಣಗಳು, ತರಬೇತಿ ಶಿಬಿರಗಳು ಮತ್ತು ಲಾಜಿಸ್ಟಿಕ್ ಹಬ್‌ಗಳು ಸೇರಿವೆ. ದಾಳಿಗಾಗಿ ಅಮೆರಿಕಾವು ಎಫ್-15 ಈಗಲ್ ಜೆಟ್‌ಗಳು, ಎ-10 ಥಂಡರ್‌ಬೋಲ್ಟ್ ವಿಮಾನಗಳು, ಅಪಾಚೆ ಹೆಲಿಕಾಪ್ಟರ್‌ಗಳು ಮತ್ತು ಹೈಮಾರ್ಸ್ (HIMARS) ರಾಕೆಟ್ ಫಿರಂಗಿಗಳನ್ನು ಬಳಸಿದೆ. ಈ ಕಾರ್ಯಾಚರಣೆಯಲ್ಲಿ ಜೋರ್ಡಾನ್ ದೇಶದ ವಾಯುಪಡೆಯೂ ಅಮೆರಿಕಾದೊಂದಿಗೆ ಕೈಜೋಡಿಸಿದೆ ಎಂದು ವರದಿಯಾಗಿದೆ.

"ಇದು ಯುದ್ಧವಲ್ಲ, ಸೇಡಿನ ಘೋಷಣೆ"

ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಈ ದಾಳಿಯ ಕುರಿತು ಪ್ರತಿಕ್ರಿಯಿಸುತ್ತಾ, "ಇದು ಹೊಸ ಯುದ್ಧದ ಆರಂಭವಲ್ಲ, ಬದಲಾಗಿ ಅಮೆರಿಕನ್ನರ ರಕ್ತ ಹರಿಸಿದವರ ವಿರುದ್ಧದ ಸೇಡಿನ ಘೋಷಣೆ" ಎಂದು ಗುಡುಗಿದ್ದಾರೆ. ಅಮೆರಿಕನ್ನರ ಮೇಲೆ ದಾಳಿ ಮಾಡುವವರು ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಅವರನ್ನು ಹುಡುಕಿ ಕೊಲ್ಲಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ,(ಏಜೆನ್ಸೀಸ್​).