ನವೆಂಬರ್ 13ಕ್ಕೆ ಪ್ರಪಂಚದ ಅಂತ್ಯವೇ? ಏನಿದು ಡೂಮ್ಸ್​ಡೇ? ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತೇನು? End Of World  
ವಿದೇಶ

ನವೆಂಬರ್ 13ಕ್ಕೆ ಪ್ರಪಂಚದ ಅಂತ್ಯವೇ? ಏನಿದು ಡೂಮ್ಸ್​ಡೇ? ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಅಸಲಿಯತ್ತೇನು? End Of World

ಪ್ರಮುಖ ಮುಖ್ಯಾಂಶಗಳು

  • ನವೆಂಬರ್ 13ರಂದು ಪ್ರಪಂಚದ ಅಂತ್ಯವಾಗಲಿದೆ ಎಂಬ ವಾದ ಸಂಪೂರ್ಣ ಸುಳ್ಳು
  • ಜನಸಂಖ್ಯೆ ಸ್ಫೋಟದ ಬಗ್ಗೆ 1960ರಲ್ಲೇ ಭವಿಷ್ಯ ನುಡಿದಿದ್ದ ವಿಜ್ಞಾನಿ ಹೈನ್ಜ್ ಫೋರ್ಸ್ಟರ್
  • ಅಂದು ಊಹಿಸಿದಂತೆ 2026ರಲ್ಲಿ ಅನಂತತೆಗೆ ತಲುಪದ ಜಾಗತಿಕ ಜನಸಂಖ್ಯೆ
  • ತಗ್ಗಿದ ಜನನ ಪ್ರಮಾಣದಿಂದಾಗಿ ತಪ್ಪಿದ ಗಣಿತಜ್ಞರ ಭವಿಷ್ಯವಾಣಿಯ ಲೆಕ್ಕಾಚಾರ
  • ನವೆಂಬರ್ 13ರ ಡೂಮ್ಸ್‌ಡೇ ಬಗ್ಗೆ ಸಾಮಾಜಿಕ ಜಾಲತಾಣದ ಗಾಸಿಪ್‌ಗೆ ತೆರೆ
ನವದೆಹಲಿ: ಭೂಮಿಯ ಹುಟ್ಟು ಮತ್ತು ಅದರ ಅಂತ್ಯದ ( End Of World ) ಕುರಿತಾದ ಕುತೂಹಲವು ಆದಿಕಾಲದಿಂದಲೂ ಮಾನವನನ್ನು ಕಾಡುತ್ತಲೇ ಬಂದಿದೆ. ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಬೆಳೆದಿದ್ದರೂ ಇಂದಿಗೂ 'ಪ್ರಪಂಚದ ಅಂತ್ಯ' ಎನ್ನುವುದು ನಮಗೆ ಒಂದು ರೀತಿಯ ರೋಚಕ ಹಾಗೂ ಭಯವನ್ನು ಉಂಟುಮಾಡುವ ಅಚ್ಚರಿಯ ವಿಷಯವಾಗಿರುವುದು ಸತ್ಯದ ಸಂಗತಿ. ಕೋಟಿ ಕೋಟಿ ವರ್ಷಗಳ ಇತಿಹಾಸವಿರುವ ನಮ್ಮ ಈ ಸುಂದರ ನೀಲಿ ಗ್ರಹದ ಭವಿಷ್ಯದ ಬಗ್ಗೆ ದೇವವಾಣಿ ಅಥವಾ ಪೌರಾಣಿಕ ಕಥೆಗಳಷ್ಟೇ ಅಲ್ಲದೆ, ಗಣಿತಜ್ಞರು ಕೂಡ ತಮ್ಮ ವಿಶ್ಲೇಷಣೆಗಳು ಮತ್ತು ಸಮೀಕರಣಗಳ ಮೂಲಕ ಹಲವು ಬೆಚ್ಚ ಬೀಳಿಸುವ ಭವಿಷ್ಯ ನುಡಿದಿದ್ದಾರೆ. ಹಾಗಾದರೆ, ವಿಜ್ಞಾನ ಮತ್ತು ಗಣಿತದ ಲೆಕ್ಕಾಚಾರಗಳ ಪ್ರಕಾರ ಜಗತ್ತಿನ ವಿನಾಶದ ಬಗ್ಗೆ ಇತಿಹಾಸದಲ್ಲಿ ಮಾಡಲಾದ ಆ ಪ್ರಮುಖ ಹಾಗೂ ಕುತೂಹಲಕಾರಿ ಊಹೆಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಮಾನವಕುಲದ ಇತಿಹಾಸದಲ್ಲಿ 'ಪ್ರಪಂಚದ ಅಂತ್ಯ' ಅಥವಾ ಜಗತ್ತಿನ ವಿನಾಶದ ಬಗ್ಗೆ ಹಲವಾರು ಭವಿಷ್ಯವಾಣಿಗಳು ಕೇಳಿಬಂದಿವೆ. ಆದರೆ, ಗಣಿತೀಯ ಲೆಕ್ಕಾಚಾರಗಳು ಮತ್ತು ವೈಜ್ಞಾನಿಕ ಮಾದರಿಗಳ ಆಧಾರದ ಮೇಲೆ ಜಗತ್ತು ಕೊನೆಗೊಳ್ಳುವ ದಿನಾಂಕವನ್ನು ನಿಗದಿಪಡಿಸಿರುವುದು ಒಂದು ಅಚ್ಚರಿಯ ಸಂಗತಿಯಾಗಿದೆ.
ಹೌದು, ಆಸ್ಟ್ರಿಯನ್ ಭೌತವಿಜ್ಞಾನಿ ಮತ್ತು ಸೈಬರ್ನೆಟಿಕ್ಸ್ ತಜ್ಞ ಹೈನ್ಜ್ ವಾನ್​ ಫೋರ್ಸ್ಟರ್ ( heinz von foerster ) ಹಾಗೂ ಅವರ ಸಹೋದ್ಯೋಗಿಗಳಾದ ಪ್ಯಾಟ್ರಿಸಿಯಾ ಎಂ. ಮೊರಾ, ಲಾರೆನ್ಸ್ ಡಬ್ಲ್ಯೂ ಅಮಿಒಟ್ ಮತ್ತು ಇತರರು ಸುಮಾರು ಎರಡು ಸಾವಿರ ವರ್ಷಗಳ ಐತಿಹಾಸಿಕ ಜನಸಂಖ್ಯೆಯ ದತ್ತಾಂಶವನ್ನು ಆಧರಿಸಿ ಒಂದು ಗಂಭೀರ ಅಧ್ಯಯನ ನಡೆಸಿದ್ದರು.
ಅವರು ನಡೆಸಿದ ಈ ಕುತೂಹಲಕಾರಿ ಅಧ್ಯಯನವು 'ಸೈನ್ಸ್' ಜರ್ನಲ್‌ನಲ್ಲಿ ಪ್ರಕಟಗೊಂಡು ಜಾಗತಿಕ ಮಟ್ಟದಲ್ಲಿ ಭಾರಿ ಸಂಚಲನ ಮೂಡಿಸಿತ್ತು. 'ಡೂಮ್ಸ್‌ಡೇ: ದಿ ಫ್ರೈಡೇ, ನವೆಂಬರ್ 13, ಎಡಿ 2026' (Doomsday: The Friday, November 13, AD 2026) ಎಂಬ ಶೀರ್ಷಿಕೆಯೊಂದಿಗೆ ಪ್ರಕಟವಾದ ಈ ಪ್ರಬಂಧದಲ್ಲಿ, ಮಾನವನ ಜನಸಂಖ್ಯೆಯು ಸಾಂಪ್ರದಾಯಿಕ ಬೆಳವಣಿಗೆ ಮಾದರಿಗಳನ್ನು ಮೀರಿ 'ಹೈಪರ್ಬೋಲಿಕ್' (Hyperbolic) ವೇಗದಲ್ಲಿ ಬೆಳೆಯುತ್ತಿದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದರು. ಅಂದರೆ, ಜನಸಂಖ್ಯೆಯು ದ್ವಿಗುಣಗೊಳ್ಳಲು ತೆಗೆದುಕೊಳ್ಳುವ ಸಮಯವು ಪ್ರತಿ ಶತಮಾನಕ್ಕೂ ಕಡಿಮೆಯಾಗುತ್ತಾ ಸಾಗುತ್ತಿದ್ದು, ನವೆಂಬರ್ 13, 2026 ರಂದು ಜಗತ್ತಿನ ಜನಸಂಖ್ಯೆಯು ಅನಂತತೆಗೆ (Infinity) ತಲುಪಲಿದೆ ಮತ್ತು ಅಂದೇ ಪ್ರಪಂಚದ ಅಂತ್ಯವಾಗಲಿದೆ ಎಂದು ಅವರು ಗಣಿತೀಯ ಸಮೀಕರಣಗಳ ಮೂಲಕ ಭವಿಷ್ಯ ನುಡಿದಿದ್ದರು.

ನವೆಂಬರ್ 13, 2026

ಹೈನ್ಜ್ ಫೋರ್ಸ್ಟರ್ ಅವರ ಗಣಿತೀಯ ಲೆಕ್ಕಾಚಾರಗಳ ಪ್ರಕಾರ, ಈ ಹಿಂದೆ ಜನಸಂಖ್ಯೆಯು ದ್ವಿಗುಣಗೊಳ್ಳಲು ಶತಮಾನಗಳೇ ಬೇಕಾಗುತ್ತಿತ್ತು. ಆದರೆ ಇಪ್ಪತ್ತನೇ ಶತಮಾನದ ವೇಳೆಗೆ ಈ ಅಂತರವು ಗಣನೀಯವಾಗಿ ಕಡಿಮೆಯಾಯಿತು. 1960ರ ದಶಕದಲ್ಲಿದ್ದ ಜನಸಂಖ್ಯೆಯ ಬೆಳವಣಿಗೆಯ ವೇಗವೇ ಮುಂದುವರಿದರೆ, ಪ್ರತಿಯೊಂದು ದ್ವಿಗುಣಗೊಳ್ಳುವಿಕೆಯ ನಡುವಿನ ಸಮಯದ ವ್ಯತ್ಯಾಸವು ಶೂನ್ಯಕ್ಕೆ ಹತ್ತಿರವಾಗುವ ಒಂದು ನಿರ್ಣಾಯಕ ಅಂತಿಮ ಹಂತ ಎದುರಾಗುತ್ತದೆ ಎಂದು ಅವರು ವಾದಿಸಿದ್ದರು. ಆ ಹಂತದಲ್ಲಿ ಜನಸಂಖ್ಯೆಯು ಅನಂತತೆಗೆ ಜಿಗಿಯುತ್ತದೆ ಎಂದು ಹೈನ್ಜ್ ಫೋರ್ಸ್ಟರ್ ಅವರು ಹೇಳಿದ್ದರು.
ತಮ್ಮ ಗಣಿತೀಯ ಮಾದರಿಯ ನಿಖರತೆಯನ್ನು ಪರಿಶೀಲಿಸಿದ ನಂತರ, ಫೋರ್ಸ್ಟರ್ ಮತ್ತು ಅವರ ತಂಡವು ಆ ನಿರ್ಣಾಯಕ ಕ್ಷಣದ ನಿಖರವಾದ ದಿನಾಂಕವನ್ನು ನವೆಂಬರ್ 13, 2026 ಎಂದು ನೀಡಿತ್ತು. ಇಲ್ಲಿ ಸಂಶೋಧಕರು ಯಾವುದೇ ಅಧ್ಯಾತ್ಮಿಕ ಅಥವಾ ಪ್ರಳಯದಂತಹ ಅಂದರೆ ಭೂಮಿಯ ಸಂಪೂರ್ಣ ವಿನಾಶದ ಘಟನೆಯನ್ನು ವಿವರಿಸುತ್ತಿಲ್ಲ. ಬದಲಾಗಿ, ಆ ಸಮಯದಲ್ಲಿ ಭೂಮಿಯ ಮೇಲೆ ಸಂಪನ್ಮೂಲಗಳ ತೀವ್ರ ಕೊರತೆ, ಹಸಿವು ಮತ್ತು ಜನಸಂಖ್ಯೆಯ ಅತಿಯಾದ ದಟ್ಟಣೆ ಉಂಟಾಗುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಅವರು ಎಚ್ಚರಿಸಿದ್ದರು.

ಇಂದಿನ ವಾಸ್ತವತೆ

ಹೈನ್ಜ್ ಫೋರ್ಸ್ಟರ್ ಮತ್ತು ಅವರ ತಂಡವು 1960ರಲ್ಲಿ ಮಾಡಿದ್ದ ಈ ಗಣಿತೀಯ ಭವಿಷ್ಯವಾಣಿಯು ನಿಗದಿತ ದಿನಕ್ಕೆ ಕೇವಲ ಎರಡು ತಿಂಗಳುಗಳು ಬಾಕಿ ಇರುವ ಈ ಸಂದರ್ಭದಲ್ಲಿ ಸಂಪೂರ್ಣವಾಗಿ ತಪ್ಪಾಗಿದೆ ಎಂದು ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ. ಪ್ರಕೃತಿ ಮತ್ತು ಮಾನವಕುಲವು ಫೋರ್ಸ್ಟರ್ ಅವರ ಗಣಿತದ ಮಾದರಿಗೆ ತದ್ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿವೆ. ಫೋರ್ಸ್ಟರ್ ತಮ್ಮ ಅಧ್ಯಯನವನ್ನು ನಡೆಸಿದಾಗ ಜಾಗತಿಕ ಜನಸಂಖ್ಯೆಯು ಕೇವಲ 300 ಕೋಟಿ (3 ಬಿಲಿಯನ್) ಇತ್ತು. 1963ರ ವೇಳೆಗೆ ವಿಶ್ವದ ಜನಸಂಖ್ಯೆಯ ವೃದ್ಧಿ ದರವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ಶೇ. 2.2 ತಲುಪಿತ್ತಾದರೂ, ಅಂದಿನಿಂದ ಈ ಬೆಳವಣಿಗೆಯ ದರವು ಕ್ರಮೇಣ ಇಳಿಕೆಯಾಗುತ್ತಾ ಬಂದಿದೆ.
ಅಂತಾರಾಷ್ಟ್ರೀಯ ಜನಗಣತಿ ಸಂಸ್ಥೆಗಳು ಮತ್ತು ವಿಶ್ವಸಂಸ್ಥೆಯ ವರದಿಗಳ ಪ್ರಕಾರ, 2026ರ ಪ್ರಸ್ತುತ ಅವಧಿಯಲ್ಲಿ ಜಾಗತಿಕ ಜನಸಂಖ್ಯೆಯ ವೃದ್ಧಿ ದರವು ಕೇವಲ ಶೇ. 0.84ರಷ್ಟಿದೆ. ಇಂದು ವಿಶ್ವದ ಜನಸಂಖ್ಯೆಯು 820 ಕೋಟಿ (8.2 ಬಿಲಿಯನ್) ದಾಟಿದ್ದರೂ, ಫೋರ್ಸ್ಟರ್ ಊಹಿಸಿದಂತೆ ಜನಸಂಖ್ಯೆಯು ಅನಂತತೆಗೆ ಹೋಗುವುದಿಲ್ಲ ಎಂದು ಇತರ ಸಂಶೋಧಕರು ಎತ್ತಿ ತೋರಿಸಿದ್ದಾರೆ. ಶಿಕ್ಷಣದ ಪ್ರಸಾರ, ಉತ್ತಮ ನಗರೀಕರಣ, ಮಹಿಳಾ ಸಬಲೀಕರಣ, ಜನನ ನಿಯಂತ್ರಣ ವಿಧಾನಗಳ ಬಳಕೆ ಹಾಗೂ ಜೀವನ ವೆಚ್ಚದಲ್ಲಿನ ಏರಿಕೆಯು ಜಗತ್ತಿನಲ್ಲಿ ಜನನ ಪ್ರಮಾಣವು ತೀವ್ರವಾಗಿ ಕುಸಿಯಲು ಕಾರಣವಾಗಿದೆ. ಆದ್ದರಿಂದ, ನವೆಂಬರ್ 13ರಂದು ಪ್ರಪಂಚದ ಅಂತ್ಯವಾಗುತ್ತದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ವಾದವು ಸಂಪೂರ್ಣ ಸುಳ್ಳು ಎಂದು ಸಂಶೋಧಕರು ಖಚಿತಪಡಿಸಿದ್ದಾರೆ, (ಏಜೆನ್ಸೀಸ್​).