Volodymyr Zelensky | ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ
ಕೈವ್: ರಷ್ಯಾ ಜತೆಗಿನ ಯುದ್ಧದ ಕುರಿತು ಗೌರವಾನ್ವಿತ ಪರಿಹಾರವನ್ನು ಕಂಡುಹಿಡಿಯಲು ಅಗತ್ಯವಿರುವ ಪ್ರಮುಖ ಹಂತಗಳ ಕುರಿತು ಮುಂದಿನ ಕೆಲವು ದಿನಗಳಲ್ಲಿ ಯುಕ್ರೇನ್ ಮತ್ತು ಅಮೆರಿಕ ಒಪ್ಪಂದಕ್ಕೆ ಬರಬಹುದು ಎಂದು ಯುಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ(Volodymyr Zelensky) ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಝೆಲೆನ್ಸ್ಕಿ, ಜಿನೀವಾ ವಿಷಯಗಳ ಆಧಾರದ ಮೇಲೆ ಮಾತುಕತೆಗಳನ್ನು ಮುಂದುವರಿಸಲು ಯುಕ್ರೇನ್ ನಿಯೋಗ ಶನಿವಾರ ಸಂಜೆ ಅಮೆರಿಕಕ್ಕೆ ಹೋಗಲಿದೆ ಎಂದು ತಿಳಿಸಿದ್ದಾರೆ: ಅಲ್ಲದೆ, ಉಭಯ ದೇಶಗಳ ಮಧ್ಯೆ ರಾಜತಾಂತ್ರಿಕತೆ ಸಕ್ರಿಯವಾಗಿದೆ ಎಂದಿದ್ದಾರೆ.
ಅಮೆರಿಕದ ಕಡೆಯವರು ರಚನಾತ್ಮಕ ವಿಧಾನವನ್ನು ಪ್ರದರ್ಶಿಸುತ್ತಿದ್ದಾರೆ ಮತ್ತು ಮುಂಬರುವ ದಿನಗಳಲ್ಲಿ ಯುದ್ಧವನ್ನು ಗೌರವಾನ್ವಿತ ಅಂತ್ಯಕ್ಕೆ ಹೇಗೆ ತರುವುದು ಎಂಬುದನ್ನು ನಿರ್ಧರಿಸಲು ಕ್ರಮಗಳನ್ನು ರೂಪಿಸಲು ಸಾಧ್ಯವಿದೆ. ಉಕ್ರೇನಿಯನ್ ನಿಯೋಗವು ಅಗತ್ಯ ಪ್ರಸ್ತಾಪಗಳನ್ನು ಹೊಂದಿದೆ. ಅಲ್ಲದೆ, ಜನರ ಸ್ಪಷ್ಟ ಉಕ್ರೇನ್ ಆದ್ಯತೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.
ಮುಂದುವರೆದು ಮಾತನಾಡಿದ ಝೆಲೆನ್ಸ್ಕಿ, ಮುಂದಿನ ವಾರ ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಮತ್ತಷ್ಟು ತೊಡಗಿಸಿಕೊಳ್ಳಲು ಸಿದ್ಧತೆಗಳು ನಡೆಯುತ್ತಿವೆ. ವಿಶೇಷವಾಗಿ ಯುಕ್ರೇನ್‌ನ ವಾಯು ರಕ್ಷಣಾ ಸಾಮರ್ಥ್ಯಗಳನ್ನು ಬಲಪಡಿಸುವ ಕುರಿತು, ಕೀವ್ ಮಿತ್ರರಾಷ್ಟ್ರಗಳ ಬೆಂಬಲದ ಮೇಲೆ ಹೆಚ್ಚಿನ ಭರವಸೆ ಇಡುತ್ತಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಶನಿವಾರ, ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಮಂಡಳಿಯ ಕಾರ್ಯದರ್ಶಿ ರುಸ್ತಮ್ ಉಮಿರೋವ್ ನೇತೃತ್ವದ ಯುಕ್ರೇನ್ ನಿಯೋಗವು ವಾಷಿಂಗ್ಟನ್‌ನ ಪ್ರಸ್ತಾವಿತ ಶಾಂತಿ ಯೋಜನೆ ಕುರಿತು ಹೆಚ್ಚಿನ ಮಾತುಕತೆಗಾಗಿ ಅಮೆರಿಕಕ್ಕೆ ತೆರಳಿತು. ಅಲ್ಲದೆ, ಭಾನುವಾರ ಝೆಲೆನ್ಸ್ಕಿ ಸಂಪೂರ್ಣ ವರದಿಯನ್ನು ನಿರೀಕ್ಷಿಸುತ್ತಿದ್ದರು,(ಏಜೆನ್ಸೀಸ್).