'ಒಂದು ಜಗತ್ತು – ಒಂದು ಮಾನವಕುಲ' ಅಂತಾರಾಷ್ಟ್ರೀಯ ಸಮ್ಮೇಳನ
ಅಮೆರಿಕ: ನ್ಯೂಯಾರ್ಕ್‌ನಲ್ಲಿ “One World – One Humanity” (ಒಂದು ಜಗತ್ತು – ಒಂದು ಮಾನವಕುಲ) ಎಂಬ ಆಶಯದ ಕುರಿತು ಮಹತ್ವದ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು.
ಸಮ್ಮೇಳನದಲ್ಲಿ ಸುಮಾರು 14 ವಿವಿಧ ಧರ್ಮಗಳನ್ನು ಪ್ರತಿನಿಧಿಸಿದ ಧಾರ್ಮಿಕ ನಾಯಕರು ಭಾಗವಹಿಸಿ, ವಿಶ್ವಶಾಂತಿ, ಮಾನವೀಯತೆ, ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಸಹಬಾಳ್ವೆಯ ಕುರಿತು ತಮ್ಮ ಸಂದೇಶಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಹಾಗೂ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಪರಮಾತ್ಮಾನಂದ ಅವರು ಸಹ ಸಮ್ಮೇಳನದಲ್ಲಿ ಭಾಗವಹಿಸಿದರು. ಪೂಜ್ಯ ಸ್ವಾಮೀಜಿಯವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿ, ಧರ್ಮ, ದೇಶ, ಭಾಷೆ, ಸಂಸ್ಕೃತಿ ಹಾಗೂ ವಿವಿಧ ನಂಬಿಕೆಗಳ ವೈವಿಧ್ಯತೆಯನ್ನು ಗೌರವಿಸುವುದರ ಜತೆಗೆ, ಇಡೀ ಮಾನವಕುಲ ಒಂದೇ ಎಂಬ ಅರಿವು ಮತ್ತು ಭಾವನೆಯನ್ನು ಬೆಳೆಸುವ ಅಗತ್ಯವನ್ನು ಒತ್ತಿ ಹೇಳಿದರು.
ವಿಭಿನ್ನ ಧರ್ಮಗಳ ನಾಯಕರು ಒಂದೇ ವೇದಿಕೆಯಲ್ಲಿ ಒಂದಾಗಿ ಸೇರಿ “ಒಂದು ಜಗತ್ತು – ಒಂದು ಮಾನವಕುಲ” ಎಂಬ ಸಾರ್ವತ್ರಿಕ ಸಂದೇಶವನ್ನು ಸಾರಿರುವುದು ವಿಶ್ವಸಾಮರಸ್ಯದ ದೃಷ್ಟಿಯಿಂದ ಮಹತ್ವದ ಹೆಜ್ಜೆಯಾಗಿದೆ. ಮಾನವ ಸಮಾಜವು ವಿಭಜನೆಗಳನ್ನು ಮೀರಿ ಪ್ರೀತಿ, ಕರುಣೆ, ಪರಸ್ಪರ ಗೌರವ ಮತ್ತು ಸಹಕಾರದೊಂದಿಗೆ ಮುನ್ನಡೆಯಬೇಕು. ಧರ್ಮಗಳು ಮಾನವೀಯತೆಯನ್ನು ಬೆಸೆಯುವ ಸೇತುವೆಗಳಾಗಬೇಕು ಎಂಬ ಆಶಯ ಸಮ್ಮೇಳನದಲ್ಲಿ ಪ್ರತಿಧ್ವನಿಸಿತು.