ಒಂದು ಟಚ್, 100 ಡ್ರೋನ್, ಇಡೀ ಗಡಿ ಧ್ವಂಸ! S-400 ಕಣ್ಣಿಗೂ ಬೀಳದ ಚೀನಾದ ಆ ಭಯಾನಕ ಅಸ್ತ್ರ ಯಾವುದು! ಭಾರತದ ರಕ್ಷಣಾ ಪಡೆಗೆ ಈಗ ಹೊಸ ಸವಾಲು!
ನವದೆಹಲಿ: ಆಧುನಿಕ ಯುದ್ಧಭೂಮಿಯ ಚಿತ್ರಣವೇ ಬದಲಾಗುತ್ತಿದೆ. ರಷ್ಯಾದ ಅತ್ಯಾಧುನಿಕ S-400 ಕ್ಷಿಪಣಿ ನಿರೋಧಕ ವ್ಯವಸ್ಥೆ ಅಥವಾ ಅಮೆರಿಕದ ಹೆಮ್ಮೆಯ AWACS ಕಣ್ಗಾವಲು ವಿಮಾನಗಳು - ಇವೆಲ್ಲವನ್ನೂ ಮಣ್ಣುಮುಕ್ಕಿಸಬಲ್ಲ ಹೊಸ ಸಣ್ಣ ಆಯುಧವೊಂದನ್ನು ಚೀನಾ ಸಿದ್ಧಪಡಿಸಿದೆ. ಕೇವಲ ಬೆರಳ ತುದಿಯ ಸಂಕೇತದಿಂದ ಇಡೀ ಯುದ್ಧದ ದಿಕ್ಕನ್ನೇ ಬದಲಿಸಬಲ್ಲ ಈ ಮಾರಕ ವ್ಯವಸ್ಥೆಯ ಹೆಸರು ಅಟ್ಲಾಸ್ ಡ್ರೋನ್ ಸ್ವಾರ್ಮ್ ಸಿಸ್ಟಮ್ (Atlas Drone Swarm System) ಭಾರತಕ್ಕೆ ಆಪಾಯಕಾರಿಯಾಗಿ ಪರಿಣಾಮಿಸುತ್ತದೆ.
ಸಾಂಪ್ರದಾಯಿಕ ಯುದ್ಧತಂತ್ರಕ್ಕೆ ಅಂತ್ಯಹಾಡಲಿದೆಯೇ ಈ ತಂತ್ರಜ್ಞಾನ?
ಈ ಹಿಂದೆ ಯುದ್ಧದ ಗೆಲುವು ಟ್ಯಾಂಕ್‌ಗಳು, ಯುದ್ಧ ವಿಮಾನಗಳು ಮತ್ತು ಬೃಹತ್ ಕ್ಷಿಪಣಿಗಳ ಮೇಲೆ ಅವಲಂಬಿತವಾಗಿತ್ತು. ಆದರೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಈಗ 'ಇಂಟೆಲಿಜೆಂಟ್ ವಾರ್‌ಫೇರ್' ಅಥವಾ ಕೃತಕ ಬುದ್ಧಿಮತ್ತೆಯ ಆಧಾರಿತ ಯುದ್ಧಕ್ಕೆ ನಾಂದಿ ಹಾಡಿದೆ. ಅಟ್ಲಾಸ್ ವ್ಯವಸ್ಥೆಯು ಕೇವಲ ಒಂದು ಆಯುಧವಲ್ಲ, ಅದೊಂದು ಚಿಂತಿಸುವ ಸೈನ್ಯ ಎಂದು ತಿಳಿದು ಬಂದಿದೆ.
ಏನಿದು ಅಟ್ಲಾಸ್ ಡ್ರೋನ್ ಸ್ವಾರ್ಮ್? ಇದರ ಶಕ್ತಿ ಎಂತಹುದು..?
ಚೀನಾ ಎಲೆಕ್ಟ್ರಾನಿಕ್ ಟೆಕ್ನಾಲಜಿ ಗ್ರೂಪ್ ಅಭಿವೃದ್ಧಿಪಡಿಸಿರುವ ಈ ವ್ಯವಸ್ಥೆಯು ಕೇವಲ ಒಬ್ಬ ಆಪರೇಟರ್‌ಗೆ ಸುಮಾರು 100 ಡ್ರೋನ್‌ಗಳನ್ನು ಏಕಕಾಲದಲ್ಲಿ ನಿಯಂತ್ರಿಸುವ ಶಕ್ತಿ ನೀಡುತ್ತದೆ.
ಮೂರು ಘಟಕಗಳ ಕಾರ್ಯತಂತ್ರ: ಈ ವ್ಯವಸ್ಥೆಯು ಭೂಸೇನಾ ಯುದ್ಧ ವಾಹನ, ಕಮಾಂಡ್ ವಾಹನ ಮತ್ತು ಬೆಂಬಲ ಘಟಕ ಎಂಬ ಮೂರು ಭಾಗಗಳನ್ನು ಹೊಂದಿದೆ.
ವೇಗವೋ ವೇಗ: ಪ್ರತಿ ಮೂರು ಸೆಕೆಂಡಿಗೆ ಒಂದು ಡ್ರೋನ್ ಉಡಾವಣೆಯಾಗುತ್ತದೆ. ಅಂದರೆ, ಕೇವಲ 5 ನಿಮಿಷಗಳಲ್ಲಿ 100 ಡ್ರೋನ್‌ಗಳ 'ಮೃತ್ಯು ಸೈನ್ಯ' ಆಕಾಶದಲ್ಲಿ ಹಾರಾಡುತ್ತಿರುತ್ತದೆ.
ಸ್ವಯಂ ನಿರ್ಧಾರದ ಶಕ್ತಿ: ಈ ಡ್ರೋನ್‌ಗಳಿಗೆ ಕೇವಲ ಆದೇಶ ನೀಡಬೇಕಿಲ್ಲ. ಇವುಗಳಿಗೆ ಸ್ವಂತವಾಗಿ ಯೋಚಿಸುವ ಶಕ್ತಿಯಿದೆ. ಗುರಿಯನ್ನು ಗುರುತಿಸುವುದು, ದಾಳಿಯ ದಿಕ್ಕನ್ನು ಬದಲಿಸುವುದು ಮತ್ತು ಶತ್ರುಗಳ ರಕ್ಷಣಾ ವ್ಯೂಹವನ್ನು ಭೇದಿಸುವುದು ಈ ಡ್ರೋನ್‌ಗಳಿಗೆ ಕರಗತವಾಗಿದೆ.
S-400 ಮತ್ತು AWACS ಏಕೆ ಸೋಲಬಹುದು..?
ಜಗತ್ತಿನ ಅತ್ಯಂತ ಸುಧಾರಿತ ರಕ್ಷಣಾ ವ್ಯವಸ್ಥೆಗಳಾದ ರಷ್ಯಾದ S-400 ಟ್ರಯಂಫ್ ದೊಡ್ಡ ಯುದ್ಧ ವಿಮಾನ ಅಥವಾ ಕ್ಷಿಪಣಿಗಳನ್ನು ಹೊಡೆದುರುಳಿಸಲು ವಿನ್ಯಾಸಗೊಳಿಸಲಾಗಿದೆ. ಆದರೆ, ನೂರಾರು ಸಣ್ಣ ಡ್ರೋನ್‌ಗಳು ಹಕ್ಕಿಗಳಂತೆ ಹರಿದು ಬಂದಾಗ, ರಾಡಾರ್‌ಗಳು ಗೊಂದಲಕ್ಕೊಳಗಾಗುತ್ತವೆ.
ಟಾರ್ಗೆಟ್ ಸ್ಯಾಚುರೇಶನ್: ನೂರಾರು ಗುರಿಗಳನ್ನು ಏಕಕಾಲದಲ್ಲಿ ಟ್ರ್ಯಾಕ್ ಮಾಡುವುದು ಮತ್ತು ಹೊಡೆದುರುಳಿಸುವುದು ಅಸಾಧ್ಯ.
ವೆಚ್ಚದ ವ್ಯತ್ಯಾಸ: ಒಂದು ಕೋಟಿ ರೂಪಾಯಿ ಬೆಲೆಯ ಕ್ಷಿಪಣಿಯನ್ನು ಬಳಸಿ ಕೆಲವು ಲಕ್ಷ ರೂಪಾಯಿ ಬೆಲೆಯ ಚಿಕ್ಕ ಡ್ರೋನ್ ಹೊಡೆಯುವುದು ಆರ್ಥಿಕವಾಗಿಯೂ ನಷ್ಟವಾಗುತ್ತದೆ.
ಸಂವಹನ ಜಾಲ: ಈ ಡ್ರೋನ್‌ಗಳು ಪರಸ್ಪರ ಸಂವಹನ ನಡೆಸುತ್ತವೆ. ಒಂದು ಡ್ರೋನ್ ನಾಶವಾದರೂ ಉಳಿದವು ತನ್ನ ಗುರಿಯನ್ನು ಮರೆಯದೆ ದಾಳಿ ಮುಂದುವರಿಸುತ್ತವೆ.
ಭಾರತಕ್ಕೆ ಇರುವ ಬಹುದೊಡ್ಡ ಅಪಾಯವೇನು..?
ಭಾರತ ಮತ್ತು ಚೀನಾದ ನಡುವೆ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಬಳಿ ಉದ್ವಿಗ್ನತೆ ಇರುವಾಗ, ಈ ತಂತ್ರಜ್ಞಾನ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಟಿಬೆಟ್‌ನಲ್ಲಿ ಸಿದ್ಧತೆ: ಚೀನಾ ಈಗಾಗಲೇ ಟಿಬೆಟ್ ಪ್ರಾಂತ್ಯದಲ್ಲಿ ರಸ್ತೆ ಮತ್ತು ರೈಲು ಜಾಲವನ್ನು ವಿಸ್ತರಿಸಿದ್ದು, ಈ ಮೊಬೈಲ್ ಡ್ರೋನ್ ವ್ಯವಸ್ಥೆಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ನಿಯೋಜಿಸಬಹುದು.
ಪೂರೈಕೆ ಜಾಲಕ್ಕೆ ಕುತ್ತು: ಭಾರತೀಯ ಸೇನೆಯ ಪೂರೈಕೆ ಮಾರ್ಗಗಳು, ಸೇತುವೆಗಳು ಮತ್ತು ಮುಂಚೂಣಿ ನೆಲೆಗಳನ್ನು ಇವು ಕ್ಷಣಮಾತ್ರದಲ್ಲಿ ಧ್ವಂಸಗೊಳಿಸಬಲ್ಲವು.
ಪರ್ವತ ಪ್ರದೇಶದ ಸವಾಲು: ಹಿಮಾಲಯದ ಕಡಿದಾದ ಪರ್ವತಗಳಲ್ಲಿ ರಾಡಾರ್‌ಗಳ ಕಣ್ಣು ತಪ್ಪಿಸಿ ಹಾರುವ ಈ ಸಣ್ಣ ಡ್ರೋನ್‌ಗಳನ್ನು ತಡೆಯುವುದು ಭಾರತೀಯ ಸೇನೆಗೆ ದೊಡ್ಡ ಸವಾಲಾಗಿ ಆಗುತ್ತದೆ.
ಜಾಗತಿಕ ಯುದ್ಧದ ಹೊಸ ಮುಖ
ರಷ್ಯಾ-ಯುಕ್ರೇನ್ ಯುದ್ಧದಿಂದ ಪಾಠ ಕಲಿತಿರುವ ಚೀನಾ, ಭವಿಷ್ಯದ ಯುದ್ಧವು ಮನುಷ್ಯರಿಲ್ಲದ 'ಅನ್ ಮ್ಯಾನ್ಡ್' ಯುದ್ಧ ಎಂದು ಘೋಷಿಸಿದೆ. ಇದು ಕೇವಲ ಭಾರತಕ್ಕಷ್ಟೇ ಅಲ್ಲ, ಜಗತ್ತಿನ ಎಲ್ಲಾ ಪ್ರಬಲ ರಾಷ್ಟ್ರಗಳಿಗೂ ಎಚ್ಚರಿಕೆಯ ಗಂಟೆ. ಆಕ್ರಮಣಕಾರಿ ತಂತ್ರಜ್ಞಾನದಲ್ಲಿ ಚೀನಾ ಮಂಚೂಣಿಗೆ ಬರುತ್ತಿರುವುದು ಜಾಗತಿಕ ಶಕ್ತಿ ಸಮತೋಲನವನ್ನು ಏರುಪೇರು ಮಾಡಬಹುದು.
ಯುದ್ಧಗಳು ಈಗ ಕೇವಲ ಸಂಖ್ಯಾಬಲದಿಂದ ಗೆಲ್ಲುವ ಕಾಲವಲ್ಲ, ಇದು ತಾಂತ್ರಿಕ ಜಾಣ್ಮೆಯ ಕಾಲ. ಭಾರತವು ಕೂಡ ತನ್ನದೇ ಆದ 'ಡ್ರೋನ್ ಸ್ವಾರ್ಮ್' ತಂತ್ರಜ್ಞಾನ ಮತ್ತು ಆಂಟಿ-ಡ್ರೋನ್ ವ್ಯವಸ್ಥೆಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸಬೇಕಾದ ಅನಿವಾರ್ಯತೆ ಇದೆ. ಚೀನಾದ ಈ ಅಟ್ಲಾಸ್ ಎಂಬ ರಾಕ್ಷಸ ಸೈನ್ಯವನ್ನು ಎದುರಿಸಲು ಭಾರತದ ರಕ್ಷಣಾ ಸಂಶೋಧನೆ (DRDO) ಯಾವ ರೀತಿ ಸಜ್ಜಾಗಲಿದೆ ಎಂಬುದನ್ನು ಕಾದು ನೋಡಬೇಕು,(ಏಜೆನ್ಸೀಸ್).