ಒಂದೇ ಒಂದು ಏಟು, ಎಲ್ಲವೂ ಉಡೀಸ್! ಅಮೆರಿಕದ ಅಬ್ಬರಕ್ಕೆ ಇರಾನ್ ಶರಣು? ಡೊನಾಲ್ಡ್ ಟ್ರಂಪ್ ಬಿಚ್ಚಿಟ್ಟ ಸ್ಫೋಟಕ ಸತ್ಯವೇನು.!
ವಾಷಿಂಗ್ಟನ್: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಸದ್ಯಕ್ಕೆ ಗುಂಡಿನ ಸದ್ದು ಕಡಿಮೆಯಾಗಿದ್ದರೂ, ರಾಜತಾಂತ್ರಿಕ ಸಮರ ತಾರಕಕ್ಕೇರಿದೆ. ನಾನು ಇರಾನ್‌ಗೆ ಕರೆ ಮಾಡಿಲ್ಲ, ಅವರೇ ನನಗೆ ಕರೆ ಮಾಡಿ ಸಂಧಾನಕ್ಕೆ ಮೊರೆ ಇಟ್ಟಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಇರಾನ್‌ನ ಇಂಧನ ಮೂಲಗಳ ಮೇಲೆ ಅಮೆರಿಕ ದಾಳಿ ಮಾಡಬಹುದು ಎಂಬ ಭೀತಿಯಿಂದ ಟೆಹ್ರಾನ್ ಆಡಳಿತವು ಮಣಿದಿದೆ ಎಂದು ಟ್ರಂಪ್ ದೃಢವಾಗಿ ಪ್ರತಿಪಾದಿಸಿದ್ದಾರೆ.
ಒಂದೇ ಶಾಟ್‌ನಲ್ಲಿ ಇಂಧನ ಸಾಮ್ರಾಜ್ಯ ಧೂಳೀಪಟ
ಇರಾನ್‌ನ ಅತಿದೊಡ್ಡ ವಿದ್ಯುತ್ ಸ್ಥಾವರಗಳ ಮೇಲೆ ಕಣ್ಣಿಟ್ಟಿದ್ದ ಅಮೆರಿಕದ ಸೇನಾ ಪ್ಲಾನ್ ಬಗ್ಗೆ ಟ್ರಂಪ್ ವಿವರಿಸಿದ್ದಾರೆ. ಸುಮಾರು 10 ಬಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾದ ಬೃಹತ್ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸಲು ನಮಗೆ ಬೇಕಿರುವುದು ಕೇವಲ ಒಂದು ಶಾಟ್ ಅಷ್ಟೇ, ಒಂದೇ ಏಟಿಗೆ ಇಡೀ ವ್ಯವಸ್ಥೆ ಕುಸಿದು ಬೀಳುತ್ತದೆ. ಅಂತಹ ವಿನಾಶವನ್ನು ಅವರು ಬಯಸುತ್ತಾರೆಯೇ, ಖಂಡಿತ ಇಲ್ಲ. ಅದಕ್ಕಾಗಿಯೇ ಅವರು ನನಗೆ ಕರೆ ಮಾಡಿ ಡೀಲ್ ಮಾಡಲು ಮುಂದಾಗಿದ್ದಾರೆ ಎಂದು ಟ್ರಂಪ್ ಪತ್ರಿಕಾಗೋಷ್ಠಿಯಲ್ಲಿ ಗುಡುಗಿದ್ದಾರೆ.
ಅಣ್ವಸ್ತ್ರ ತ್ಯಜಿಸಲು ಇರಾನ್ ಒಪ್ಪಿಗೆ..?
ಟ್ರಂಪ್ ನೀಡಿರುವ ಮಾಹಿತಿಯ ಪ್ರಕಾರ, ಇರಾನ್ ಕೇವಲ ಯುದ್ಧ ವಿರಾಮಕ್ಕೆ ಮಾತ್ರವಲ್ಲದೆ, ತನ್ನ ಅಣ್ವಸ್ತ್ರ ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಲು ಒಪ್ಪಿಕೊಂಡಿದೆ. ಇನ್ನು ಮುಂದೆ ಯುದ್ಧಗಳಿಲ್ಲ, ಅಣ್ವಸ್ತ್ರಗಳಿಲ್ಲ. ಅವರು ಪರಮಾಣು ಅಸ್ತ್ರಗಳನ್ನು ಹೊಂದುವುದಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಇದೊಂದು ಅದ್ಭುತವಾದ ಒಪ್ಪಂದವಾಗಲಿದೆ ಎಂದು ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದಾರೆ. ಆದರೆ, ಇರಾನ್ ಮಾತ್ರ ತಾವು ಅಮೆರಿಕದೊಂದಿಗೆ ಯಾವುದೇ ಸಂಪರ್ಕ ಮಾಡಿಲ್ಲ ಎಂದು ವಾದಿಸುತ್ತಿರುವುದು ಗೊಂದಲ ಮೂಡಿಸಿದೆ.
ಇರಾನ್‌ನಲ್ಲಿ ಆಡಳಿತ ಬದಲಾವಣೆ ಖಚಿತ..?
ಇರಾನ್‌ನ ಪ್ರಸ್ತುತ ಆಡಳಿತದ ಪ್ರಮುಖ ನಾಯಕರು ಈಗಾಗಲೇ ಹತರಾಗಿದ್ದಾರೆ ಎಂದು ಹೇಳಿರುವ ಟ್ರಂಪ್, ಶೀಘ್ರದಲ್ಲೇ ಅಲ್ಲಿ ಆಡಳಿತ ಬದಲಾವಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವೆನೆಜುವೆಲಾದ ಉದಾಹರಣೆ ನೀಡಿದ ಟ್ರಂಪ್, ವೆನೆಜುವೆಲಾದಲ್ಲಿ ನಮಗೆ ತೈಲ ವ್ಯವಹಾರಕ್ಕೆ ಪೂರಕವಾದ ಅಧ್ಯಕ್ಷರು ಸಿಕ್ಕಿದ್ದಾರೆ. ಅದೇ ರೀತಿ ಇರಾನ್‌ನಲ್ಲೂ ನಮಗೆ ಗೌರವಾನ್ವಿತ ಮತ್ತು ಸಮಚಿತ್ತದ ನಾಯಕರು ಸಿಗಲಿದ್ದಾರೆ. ಅವರೊಂದಿಗೆ ನಾವು ತೈಲ ವ್ಯವಹಾರದ ಹೊಸ ಒಪ್ಪಂದ ಮಾಡಿಕೊಳ್ಳಲಿದ್ದೇವೆ ಎಂದಿದ್ದಾರೆ. ಈ ಒಪ್ಪಂದ ಯಶಸ್ವಿಯಾದರೆ ಜಾಗತಿಕವಾಗಿ ತೈಲ ಬೆಲೆ ಗಣನೀಯವಾಗಿ ಕುಸಿಯಲಿದೆ ಎಂಬ ಆಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಇರಾನ್‌ನ ನಿರಾಕರಣೆ ಮತ್ತು ಟ್ರಂಪ್ ತಿರುಗೇಟು
ಇರಾನ್ ಸರ್ಕಾರವು ಅಮೆರಿಕದೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದು ಅಧಿಕೃತವಾಗಿ ಹೇಳಿಕೆ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟ್ರಂಪ್, ನಾನಂತೂ ಅವರಿಗೆ ಕರೆ ಮಾಡಿಲ್ಲ, ಕರೆ ಬಂದಿದ್ದೇ ಅವರಿಂದ. ಅವರು ಸಂಕಷ್ಟದಲ್ಲಿದ್ದಾರೆ ಮತ್ತು ರಕ್ಷಣೆ ಬಯಸುತ್ತಿದ್ದಾರೆ ಎಂದು ತಮ್ಮ ನಿಲುವಿಗೆ ಅಂಟಿಕೊಂಡಿದ್ದಾರೆ.
ಈ ಬೆಳವಣಿಗೆಯು ಮಧ್ಯಪ್ರಾಚ್ಯದ ಭೌಗೋಳಿಕ ರಾಜಕೀಯದಲ್ಲಿ ಹೊಸ ಆಯಾಮವನ್ನು ಸೃಷ್ಟಿಸಿದೆ. ಒಂದು ವೇಳೆ ಟ್ರಂಪ್ ಹೇಳುತ್ತಿರುವಂತೆ ಇರಾನ್ ಮಣಿದಿದ್ದರೆ, ಇದು ಅಮೆರಿಕದ ವಿದೇಶಾಂಗ ನೀತಿಗೆ ಸಂದ ಅತಿದೊಡ್ಡ ಜಯವಾಗಲಿದೆ,(ಏಜೆನ್ಸೀಸ್).