Salalah  
ವಿದೇಶ

ಇರಾನ್​ ಡ್ರೋನ್ ದಾಳಿಗೆ ಓಮನ್​ನ ಅತಿದೊಡ್ಡ ತೈಲ ಘಟಕ ಉಡೀಸ್​! | Salalah

ಮಸ್ಕಟ್: ಮಧ್ಯಪ್ರಾಚ್ಯದ ಸಂಘರ್ಷ ಈಗ ಹೊಸ ಆಯಾಮವನ್ನು ಪಡೆದುಕೊಂಡಿದೆ. ಶಾಂತಿಪ್ರಿಯ ಮತ್ತು ತಟಸ್ಥ ರಾಷ್ಟ್ರವೆಂದೇ ಗುರುತಿಸಲ್ಪಟ್ಟಿರುವ ಓಮನ್ ಸುಲ್ತಾನೇಟ್‌ನ ಸಲಾಹ್ (Salalah) ಬಂದರಿನ ಮೇಲೆ ಇರಾನ್ ಬೆಂಬಲಿತ ಎನ್ನಲಾದ ಡ್ರೋನ್ ದಾಳಿಗಳು ನಡೆದಿವೆ. ಈ ದಾಳಿಯು ಗಲ್ಫ್ ಪ್ರಾಂತ್ಯದ ಇಂಧನ ಭದ್ರತೆಯನ್ನು ಅಲುಗಾಡಿಸಿದ್ದು, ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಸೃಷ್ಟಿಸಿದೆ.
ಅಲ್ ಜಜೀರಾ ಮತ್ತು ಓಮನ್ ಟಿವಿಯ ವರದಿಗಳ ಪ್ರಕಾರ, ಸಲಾಹ್ ಬಂದರಿನಲ್ಲಿರುವ ತೈಲ ಸಂಗ್ರಹಣಾ ಟ್ಯಾಂಕರ್‌ಗಳನ್ನು ಗುರಿಯಾಗಿಸಿಕೊಂಡು ಸರಣಿ ಡ್ರೋನ್ ದಾಳಿಗಳನ್ನು ನಡೆಸಲಾಗಿದೆ. ಬ್ರಿಟಿಷ್ ಕಡಲ ಭದ್ರತಾ ಸಂಸ್ಥೆ 'ಅಂಬ್ರೆ' (Ambrey) ಈ ದಾಳಿಯನ್ನು ಖಚಿತಪಡಿಸಿದ್ದು, ಬಂದರಿನ ಮೂಲಸೌಕರ್ಯಗಳಿಗೆ ಹಾನಿಯಾಗಿದೆ ಎಂದು ತಿಳಿಸಿದೆ. ಆದರೆ, ಅದೃಷ್ಟವಶಾತ್ ಹತ್ತಿರದಲ್ಲಿದ್ದ ವಾಣಿಜ್ಯ ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

ತಟಸ್ಥ ಓಮನ್ ಮೇಲೆ ದಾಳಿ ಏಕೆ?

ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಕಾರವಾಗಿ ಇರಾನ್ ಈ ದಾಳಿಗಳನ್ನು ನಡೆಸುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಓಮನ್ ದೇಶವು ದಶಕಗಳಿಂದ ಇರಾನ್ ಮತ್ತು ಅಮೆರಿಕದ ನಡುವೆ ಸಂಧಾನಕಾರನಾಗಿ ಕೆಲಸ ಮಾಡುತ್ತಿದೆ. ಇತ್ತೀಚೆಗಷ್ಟೇ ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅವರು ಇರಾನ್‌ನ ನೂತನ ಸುಪ್ರೀಂ ಲೀಡರ್ ಆಯತೊಲ್ಲಾ ಮೊಜ್ತಾಬಾ ಖಮೇನಿ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. ಇಷ್ಟಾದರೂ ಓಮನ್ ಭೂಭಾಗದ ಮೇಲೆ ದಾಳಿ ನಡೆಸಿರುವುದು ರಾಜತಾಂತ್ರಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಸುಲ್ತಾನರ ಆಕ್ರೋಶ ಮತ್ತು ಎಚ್ಚರಿಕೆ!
ದಾಳಿಯ ಬೆನ್ನಲ್ಲೇ ಓಮನ್ ಸುಲ್ತಾನ್ ಹೈತಮ್ ಬಿನ್ ತಾರಿಕ್ ಅಲ್-ಸೈದ್ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ತಮ್ಮ ತೀವ್ರ ಅಸಮಾಧಾನ ಮತ್ತು ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ. "ಓಮನ್ ಯುದ್ಧದಲ್ಲಿ ತಟಸ್ಥ ನಿಲುವನ್ನು ಹೊಂದಿದೆ. ಆದರೆ ನಮ್ಮ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ನಾವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ," ಎಂದು ಸುಲ್ತಾನರು ಕಡಕ್ ಎಚ್ಚರಿಕೆ ನೀಡಿದ್ದಾರೆ.

ಹಾರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ

ಇತ್ತ ಯುಕೆ ಮ್ಯಾರಿಟೈಮ್ ಟ್ರೇಡ್ ಆಪರೇಷನ್ ಸೆಂಟರ್ (UKMTO) ವರದಿ ಮಾಡಿರುವಂತೆ, ಹಾರ್ಮುಜ್ ಜಲಸಂಧಿಯ ಬಳಿ ಮೂರು ವಾಣಿಜ್ಯ ಹಡಗುಗಳ ಮೇಲೆ ಅಪರಿಚಿತ ಕ್ಷಿಪಣಿಗಳಿಂದ ದಾಳಿ ನಡೆಸಲಾಗಿದೆ. ಇದು ಸಮುದ್ರ ಮಾರ್ಗದ ಮೂಲಕ ನಡೆಯುವ ಜಾಗತಿಕ ವ್ಯಾಪಾರಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ.
ಈ 11 ದಿನಗಳ ಸುದೀರ್ಘ ಯುದ್ಧವು ಈಗ ಕೇವಲ ಇಸ್ರೇಲ್-ಇರಾನ್​-ಅಮೆರಿಕ ಸಂಘರ್ಷವಾಗಿ ಉಳಿಯದೆ, ಇಡೀ ಅರಬ್ ಜಗತ್ತನ್ನು ಆವರಿಸಿಕೊಳ್ಳುವ ಭೀತಿ ಎದುರಾಗಿದೆ. ಓಮನ್‌ನಂತಹ ಶಾಂತಿಯುತ ದೇಶದ ಮೇಲಿನ ದಾಳಿಯು ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದಕ್ಕೆ ಸಾಕ್ಷಿಯಾಗಿದೆ,(ಏಜೆನ್ಸೀಸ್​).