Locked In Apartment (ಸಾಂದರ್ಭಿಕ ಚಿತ್ರ) 
ವಿದೇಶ

ಅಪಾರ್ಟ್‌ಮೆಂಟ್‌ನಲ್ಲಿ ಲಾಕ್ ಆಗಿದ್ದಕ್ಕೆ 27ನೇ ಮಹಡಿಯಿಂದ ಕೆಳಗಿಳಿದ ವೃದ್ಧೆ! ಅಜ್ಜಿಯ ಸಾಹಸಕ್ಕೆ ನೆಟ್ಟಿಗರು ಫಿದಾ! Locked In Apartment

ಬೀಜಿಂಗ್: 89 ವರ್ಷದ ವೃದ್ಧೆಯೊಬ್ಬರು ತಮ್ಮ ಅಪಾರ್ಟ್​ಮೆಂಟ್​ನಲ್ಲಿ ಆಕಸ್ಮಿಕವಾಗಿ ಲಾಕ್​ ಆದ ನಂತರ ಮನೆಯೊಳಗೆ ಪ್ರವೇಶಿಸಲು ಬಹು ಮಹಡಿ ಕಟ್ಟಡದ ಹೊರ ಗೋಡೆ ಏರಿ ಕೆಳಗಿಳಿದ ಘಟನೆ ಚೀನಾದ ಬೀಜಿಂಗ್​ನಲ್ಲಿ ನಡೆದಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. 

ಘಟನೆ ಏನು?

ಬೀಜಿಂಗ್‌ನ ವಸತಿ ಕಟ್ಟಡವೊಂದರಲ್ಲಿ ವಾಸವಾಗಿರುವ ಈ ವೃದ್ಧೆ ಮನೆಯಿಂದ ಹೊರಬಂದಾಗ ಆಕಸ್ಮಿಕವಾಗಿ ಬಾಗಿಲು ಲಾಕ್ ಆಗಿತ್ತು. ಈ ವೇಳೆ ಬೀಗದ ಕೈ ಒಳಗೆ ಉಳಿದಿದ್ದರಿಂದ  ಮನೆಯಿಂದ ಹೊರ ಬರಲು ಯಾವುದೇ ದಾರಿ ಇರಲಿಲ್ಲ. ಹಾಗಾಗಿ ಅವರು ಕಿಟಕಿಯ ಮೂಲಕ ಹೊರಬಂದು ಗೋಡೆಯ ಪಕ್ಕದಲ್ಲಿರುವ ಕಿರಿದಾದ ಜಾಗದ ಮೂಲಕ ಕೆಳಗಿನ ಅಂತಸ್ತಿಗೆ ಇಳಿಯಲು ನಿರ್ಧರಿಸಿದ್ದಾರೆ.
ಈ ವೇಳೆ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದ ಕ್ಲೀನರ್ ಮತ್ತು ಭದ್ರತಾ ಸಿಬ್ಬಂದಿಗೆ ಶಬ್ದಗಳು ಕೇಳಿಬಂದು ಮೇಲಕ್ಕೆ ನೋಡಿದಾಗ ಅವರು ಕಟ್ಟಡದ ಹೊರಭಾಗದಲ್ಲಿರುವ ಏರ್ ಕಂಡಿಷನರ್ ರೇಲಿಂಗ್ ಅನ್ನು ಹಿಡಿದಿರುವುದನ್ನು ಕಂಡುಕೊಂಡರು. ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರ ಸಹಾಯಕ್ಕಾಗಿ ಬರಲು ಮನವಿ ಮಾಡಿದರು.

ಪಾರುಗಾಣಿಕಾ ಕಾರ್ಯಾಚರಣೆ

ವೃದ್ಧೆ ಗೋಡೆಯ ಮೇಲೆ ಸಿಲುಕಿಕೊಂಡಿರುವುದನ್ನು ಗಮನಿಸಿದ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅವರು ಕೆಳಗೆ ಬೀಳದಂತೆ  ಸುರಕ್ಷತಾ ಹಗ್ಗದಿಂದ ಭದ್ರಪಡಿಸಿ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಅದೃಷ್ಟವಶಾತ್ ಈ ಅಪಾಯಕಾರಿ ಸಾಹಸದಲ್ಲಿ ವೃದ್ಧೆಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಯ ಹಿನ್ನಲೆ 

ತನಿಖೆಯಲ್ಲಿ ವೃದ್ಧ ಮಹಿಳೆ 27 ನೇ ಮಹಡಿಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ. ಆಕಸ್ಮಿಕವಾಗಿ ಅವರು ತಮ್ಮ ಮಲಗುವ ಕೋಣೆಯಲ್ಲಿ ಲಾಕ್ ಆಗಿ ತಮ್ಮ ಮೊಬೈಲ್ ಫೋನ್ ಅನ್ನು ಹೊರಗೆ ಲಿವಿಂಗ್ ರೂಮಿನಲ್ಲಿ ಬಿಟ್ಟು ಹೋಗಿದ್ದಾರೆ. ಈ ವೇಳೆ ಅಲ್ಲಿಂದ ಹೊರಬರಲು  ಹವಾನಿಯಂತ್ರಣ ವ್ಯವಸ್ಥೆಯ ರೇಲಿಂಗ್​ ಬಳಸಿ ಕೆಳಗೆ ಇಳಿಸುವ ಅಪಾಯಕಾರಿ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ (ಏಜೆನ್ಸೀಸ್​). 
.