ಮೂವರನ್ನು ಗಲ್ಲಿಗೇರಿಸಿದ ಇರಾನ್ ಸರ್ಕಾರ
- ಆಂತರಿಕ ಭಿನ್ನಾಭಿಪ್ರಾಯದ ಮೇಲೆ ಇರಾನ್‌ನ ಕಬ್ಬಿಣದ ಮುಷ್ಟಿ
- ಜನವರಿಯಲ್ಲಿ ಸರ್ಕಾರದ ವಿರುದ್ಧದ ತೀವ್ರ ಪ್ರತಿಭಟನೆ
- ಅಂದು ಗುರಿಯಿಟ್ಟಿದ್ದ ಮೂವರನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಿದ ಇರಾನ್ ಸರ್ಕಾರ
- ಯುದ್ಧ ಮಧ್ಯೆಯೂ ಹಳೆಯ ಸೇಡಿನ ಕಿಚ್ಚು
ಟೆಹ್ರಾನ್: ಸದ್ಯ ಮಧ್ಯಪ್ರಾಚ್ಯದಲ್ಲಿ ಯಾವುದು ಸರಿಯಿಲ್ಲ. ಅತ್ತ ಇಸ್ರೇಲ್ ಜೊತೆ ಕೈಜೋಡಿಸಿರುವ ಅಮೆರಿಕ, ಜಂಟಿಯಾಗಿ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸುವ ಮೂಲಕ ಹಲವು ಪ್ರಮುಖ ನಾಯಕರನ್ನು ಬಲಿ ಪಡೆಯುತ್ತಿದ್ದರೆ, ಇತ್ತ ಇರಾನ್, ತಮ್ಮ ಸರ್ಕಾರದ ವಿರುದ್ಧ ಜನವರಿಯಲ್ಲಿ ಕೋಲಾಹಲ ಎಬ್ಬಿಸಿದ ಪ್ರತಿಭಟನಾಕಾರರಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ (Public hanging).
ಯುವ ಕುಸ್ತಿಪಟು ಸೇರಿದಂತೆ ಒಟ್ಟು ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಇರಾನ್ ಸರ್ಕಾರ, ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ತಮ್ಮ ಆಡಳಿತದ ವಿರುದ್ಧ ತೀವ್ರ ಪ್ರತಿಭಟನೆಗಳನ್ನು ಹಮ್ಮಿಕೊಂಡವರನ್ನು ಗಂಭೀರವಾಗಿ ಪರಿಗಣಿಸಿರುವ ಇರಾನ್, ಕೋಮ್ ನಗರದಲ್ಲಿ ಸಾರ್ವಜನಿಕವಾಗಿ ಮೂವರನ್ನು ಗಲ್ಲಿಗೇರಿಸಿದೆ. ಮರಣದಂಡನೆ ಶಿಕ್ಷೆಗೆ ಗುರಿಯಾದವರಲ್ಲಿ ಯುವ ಕುಸ್ತಿಪಟು ಕೂಡ ಸೇರಿದ್ದಾರೆ.
ಕಳೆದ ವರ್ಷ ಡಿಸೆಂಬರ್ನಲ್ಲಿ ಇರಾನ್‌ನಲ್ಲಿ ಬೃಹತ್ ಪ್ರತಿಭಟನೆಗಳು ನಡೆದವು. ಸರ್ಕಾರದ ವಿರುದ್ಧ ಯುವಜನತೆ ತೀವ್ರ ಹೋರಾಟಕ್ಕೆ ಮುಗಿಬಿದ್ದರು. ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗಿದ ಸಮಯದಲ್ಲಿ, ಈ ವರ್ಷದ ಜ.09ರಂದು ಇಬ್ಬರು ಪೊಲೀಸ್ ಅಧಿಕಾರಿಗಳು ಪ್ರತಿಭಟನಾಕಾರರ ದಾಳಿಗೆ ಮೃತಪಟ್ಟರು. ಈ ಘಟನೆಯಲ್ಲಿ ಸಲೇಹ್ ಮೊಹಮ್ಮದಿ, ಸಯೀದ್ ದಾವೋದಿ ಮತ್ತು ಮೆಹದಿ ಘಾಸೆಮಿ ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಇದನ್ನು ಅಂದೇ ಬರೆದಿಟ್ಟಿದ್ದ ಇರಾನ್, ಕಡೆಗೂ ಈ ಮೂವರ ಉಸಿರನ್ನು ನಿಲ್ಲಿಸಿದೆ,(ಏಜೆನ್ಸೀಸ್).