ಸಾಂದರ್ಭಿಕ ಚಿತ್ರ  
ವಿದೇಶ

ರಷ್ಯಾಗೆ ತೈಲ ಸಂಕಷ್ಟ! ಯೂಕ್ರೇನ್ ದಾಳಿ ನಲುಗಿದ ದೇಶ

ವಿಶ್ವದಾದ್ಯಂತ ಹಲವು ದೇಶಗಳಿಗೆ ಕಚ್ಚಾ ತೈಲವನ್ನು ರಫ್ತು ಮಾಡುತ್ತಿದ್ದ ಜಗತ್ತಿನ ಬಲಾಢ್ಯ ದೇಶ ರಷ್ಯಾ, ಇದೀಗ ತಾನೇ ಬೇರೆ ರಾಷ್ಟ್ರಗಳಿಂದ ಪೆಟ್ರೋಲ್ ಆಮದು ಮಾಡಿಕೊಳ್ಳಬೇಕಾದ ದಯನೀಯ ಸ್ಥಿತಿಗೆ ತಲುಪಿದೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಷ್ಯಾದ ಪೆಟ್ರೋಲ್ ಬಂಕ್​ಗಳ ಮುಂದೆ ವಾಹನ ಸವಾರರ ಕಿಲೋಮೀಟರ್ ಉದ್ದದ ಕ್ಯೂ ಕಂಡುಬಂದಿದ್ದು, ಇಂಧನ ಖರೀದಿಗೆ ಕಡಿವಾಣ ಹಾಕಲಾಗಿದೆ. ಈ ಬೆಳವಣಿಗೆ ರಷ್ಯಾದ ಆರ್ಥಿಕತೆಯ ಮೇಲೂ ಪ್ರತಿಕೂಲ ಪರಿಣಾಮವನ್ನು ಬೀರಿದೆ. ಈ ಸ್ಥಿತಿ ಏಕೆ ಸೃಷ್ಟಿಯಾಯಿತು, ಯೂಕ್ರೇನ್ ದಾಳಿಗಳು ರಷ್ಯಾವನ್ನು ಹೈರಾಣಾಗಿಸಿರುವುದು ಹೇಗೆ? ಇಲ್ಲಿದೆ ವಿವರ.

ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಆರಂಭವಾದಾಗಿನಿಂದ, ಯೂಕ್ರೇನ್ ಸೇನೆಯು ರಷ್ಯಾದ ತೈಲ ಮೂಲಸೌಕರ್ಯಗಳನ್ನು ಪ್ರಮುಖ ಗುರಿಯಾಗಿಸಿಕೊಂಡು ಸರಣಿ ದಾಳಿಗಳನ್ನು ನಡೆಸುತ್ತಿದೆ. 2026ರ ಮಾರ್ಚ್​ನಿಂದ ಇದುವರೆಗೆ ರಷ್ಯಾದ ತೈಲ ಶುದ್ಧೀಕರಣ ಘಟಕಗಳ ಮೇಲೆ ಯೂಕ್ರೇನ್ 50ಕ್ಕೂ ಹೆಚ್ಚು ಭೀಕರ ದಾಳಿಗಳನ್ನು ನಡೆಸಿದೆ. ರಷ್ಯಾದ ಟಾಪ್-10 ತೈಲ ಶುದ್ಧೀಕರಣ ಘಟಕಗಳ ಪೈಕಿ 8 ಘಟಕಗಳ ಮೇಲೆ ಯೂಕ್ರೇನ್ ಈಗಾಗಲೇ ಯಶಸ್ವಿ ದಾಳಿ ನಡೆಸಿದೆ. ಈ ಭೀಕರ ದಾಳಿಗಳ ಪರಿಣಾಮವಾಗಿ ರಷ್ಯಾದ ಒಟ್ಟಾರೆ ತೈಲ ಶುದ್ಧೀಕರಣ ಸಾಮರ್ಥ್ಯವು ಶೇಕಡ 42.7ರಷ್ಟು ಕುಸಿದಿದೆ. ರಷ್ಯಾದ 60ಕ್ಕೂ ಹೆಚ್ಚು ಪ್ರಮುಖ ತೈಲ ಸಂಗ್ರಹಣಾ ಗೋದಾಮುಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಇವುಗಳಲ್ಲಿ ರಷ್ಯಾದ ಶೇ.58ರಷ್ಟು ಪೆಟ್ರೋಲಿಯಂ ಉತ್ಪನ್ನಗಳು (ಪೆಟ್ರೋಲ್ ಮತ್ತು ಡೀಸೆಲ್) ಹಾಗೂ ಶೇ.42ರಷ್ಟು ಕಚ್ಚಾ ತೈಲ ಸಂಗ್ರಹವಾಗಿತ್ತು. ಆರ್ಥಿಕ ಮತ್ತು ಇಂಧನ ಮೂಲಗಳ ಮೇಲಿನ ಈ ನಿರಂತರ ದಾಳಿಯು ರಷ್ಯಾ ಸರ್ಕಾರಕ್ಕೆ ಭಾರಿ ಆಘಾತ ನೀಡಿದ್ದು, ಯುದ್ಧದ ಸಂದರ್ಭದಲ್ಲೇ ದೇಶದೊಳಗೆ ಇಂಧನ ದರ ಏರಿಕೆ ಮತ್ತು ಕೊರತೆಯ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದೆ. 2025ರ ಆಗಸ್ಟ್​ನಿಂದ ಇದುವರೆಗೆ ರಷ್ಯಾಕ್ಕೆ 13.5 ಬಿಲಿಯನ್ ಡಾಲರ್ ನಷ್ಟವಾಗಿದೆ. ರಷ್ಯಾದ ಒಟ್ಟು 83 ಪ್ರದೇಶಗಳ ಪೈಕಿ 55ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದ ಮೇಲೆ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ತೈಲ ಶುದ್ಧೀಕರಿಸುವ (ರಿಫೈನಿಂಗ್) ಸಾಮರ್ಥ್ಯ ಕಡಿಮೆಯಾಗಿರುವ ಪರಿಣಾಮವು, ಯೂಕ್ರೇನ್ ದಾಳಿ ನಡೆಸದ ಪ್ರದೇಶಗಳ ಮೇಲೂ ಬೀರಿದೆ. ರಷ್ಯಾದ ಇರ್ಕಟ್ಸ್ಕ್ ನಗರದಲ್ಲಿ ಇಂಧನದ ಕೊರತೆಯಿಂದಾಗಿ ಸಾರ್ವಜನಿಕ ಸಾರಿಗೆ ದುಬಾರಿಯಾಗಿದೆ. ಪೆಟ್ರೋಲ್ ಬಂಕ್​ಗಳ ಮುಂದೆ ವಾಹನಗಳ ಸಾಲು ಎಷ್ಟು ಉದ್ದವಾಗಿದೆ ಎಂದರೆ, ಜನರಿಗಾಗಿ ಪೋರ್ಟಬಲ್ ಶೌಚಗೃಹಗಳ ವ್ಯವಸ್ಥೆಯನ್ನು ಮಾಡಬೇಕಾಗಿ ಬಂದಿದೆ.

ಪ್ರಮುಖ ಬೆಳವಣಿಗೆಗಳು

ತೈಲ ಉತ್ಪಾದನೆಯಲ್ಲಿ ಕುಸಿತ: ಕಳೆದ ವರ್ಷದ (2025) ಜೂನ್​ಗೆ ಹೋಲಿಸಿದರೆ, ಈ ವರ್ಷ ರಷ್ಯಾದ ಒಟ್ಟು ತೈಲ ಉತ್ಪಾದನೆಯು 25%ರಷ್ಟು ಕಡಿಮೆಯಾಗಿದೆ.

ಪೆಟ್ರೋಲ್ ಉತ್ಪಾದನೆ ಇಳಿಕೆ: ರಷ್ಯಾದಲ್ಲಿ ಗ್ಯಾಸೋಲಿನ್ (ಪೆಟ್ರೋಲ್) ಉತ್ಪಾದನೆಯು ಕಳೆದ ವರ್ಷದ ಜೂನ್​ನಲ್ಲಿ ದಿನಕ್ಕೆ 10 ಲಕ್ಷ ಬ್ಯಾರೆಲ್ ಇತ್ತು. ಆದರೆ, ಈ ವರ್ಷ ಅದು ದಿನಕ್ಕೆ 8.5 ಲಕ್ಷ ಬ್ಯಾರೆಲ್​ಗಳಿಗೆ ಕುಸಿದಿದೆ. ಅಂದರೆ ಉತ್ಪಾದನೆಯಲ್ಲಿ 17%ರಷ್ಟು ಇಳಿಕೆಯಾಗಿದೆ.

ಬೆಲೆ ಏರಿಕೆ: ರಷ್ಯಾದ ಸರ್ಕಾರಿ ತೈಲ ಕಂಪನಿಗಳು ಸದ್ಯಕ್ಕೆ ಇಂಧನ ಬೆಲೆಗಳನ್ನು ಹೆಚ್ಚಿಸಿಲ್ಲ, ಆದರೆ ಖಾಸಗಿ ಪೆಟ್ರೋಲ್ ಬಂಕ್​ಗಳಲ್ಲಿ ಬೆಲೆಗಳು ಗಗನಕ್ಕೇರಿವೆ.

ತೈಲ ಮಿತಿ: ಓಮ್ಕ್ಸ್​ ಪ್ರದೇಶವು ಸೈಬೀರಿಯಾದ ಅತಿ ದೊಡ್ಡ ರಿಫೈನರಿಯನ್ನು ಹೊಂದಿದೆ ಮತ್ತು ಅದರ ಮೇಲೆ ಯಾವುದೇ ದಾಳಿ ನಡೆದಿಲ್ಲ. ಆದಾಗ್ಯೂ, ಇಲ್ಲಿನ ಜನರು ಕೇವಲ 40 ಲೀಟರ್​ವರೆಗಷ್ಟೇ ಪೆಟ್ರೋಲ್ ಖರೀದಿಸಲು ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲ, ಸೈಬೀರಿಯಾದ ಜಬಾಯ್ಕಾಲ್ಸಿ್ಕ ಪ್ರದೇಶದಲ್ಲಿ ಕಸ ಸಂಗ್ರಹಿಸುವ ಕಂಪನಿಯು ತನ್ನ ಕೆಲಸವನ್ನು ನಿಲ್ಲಿಸಿದೆ. ಅಲ್ಲದೆ, ಇಲ್ಲಿನ ಬಸ್ ಸೇವೆಗಳನ್ನೂ ಕಡಿತಗೊಳಿಸಲಾಗಿದೆ.

ತೈಲ ಘಟಕಗಳ ಮೇಲೆ ದಾಳಿ

ಯೂಕ್ರೇನ್ ಗಡಿಯಿಂದ 850 ಕಿಲೋಮೀಟರ್ ದೂರದಲ್ಲಿರುವ ರಷ್ಯಾದ ಸೆಂಟ್ ಪೀಟರ್ಸ್​ಬರ್ಗ್ ರಿಫೈನರಿ (ತೈಲ ಶುದ್ಧೀಕರಣ ಘಟಕ) ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ ಎಂದು ಜುಲೈ 4ರಂದು ಯೂಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ್ಕ ತಿಳಿಸಿದ್ದಾರೆ. ಈ ರಿಫೈನರಿಯಿಂದ ಪ್ರತಿ ವರ್ಷ 1.25 ಕೋಟಿ ಟನ್ ಪೆಟ್ರೋಲಿಯಂ ಉತ್ಪನ್ನಗಳನ್ನು ಉತ್ಪಾದಿಸಲಾಗುತ್ತದೆ. ಜೂನ್ 3ರಂದು ಕೂಡ ಈ ರಿಫೈನರಿ ಮೇಲೆ ದಾಳಿ ನಡೆದಿತ್ತು. ಇದಲ್ಲದೆ, ಜೂನ್ 18ರಂದು ಮಾಸ್ಕೋದ ಹೊರವಲಯದಲ್ಲಿರುವ ಮತ್ತೊಂದು ಪ್ರಮುಖ ರಿಫೈನರಿಯನ್ನು ಯೂಕ್ರೇನ್ ಧ್ವಂಸಗೊಳಿಸಿತ್ತು.

ಒಪ್ಪಂದವಾಗದ ಹೊರತು ದುರಸ್ತಿ ವ್ಯರ್ಥ

ಯೂಕ್ರೇನ್ ಮತ್ತು ರಷ್ಯಾ ನಡುವೆ ಕದನವಿರಾಮ ಅಥವಾ ಯಾವುದೇ ರಾಜತಾಂತ್ರಿಕ ಒಪ್ಪಂದ ಏರ್ಪಡದ ಹೊರತು, ಹಾನಿಗೊಳಗಾದ ರಿಫೈನರಿಗಳನ್ನು ದುರಸ್ತಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಏಕೆಂದರೆ ದುರಸ್ತಿಯಾದ ತಕ್ಷಣವೇ ಅವುಗಳ ಮೇಲೆ ಮತ್ತೆ ದಾಳಿ ನಡೆಯುವ ಆತಂಕ ದಟ್ಟವಾಗಿದೆ. ರಷ್ಯಾದ ತೈಲ ಮೂಲಸೌಕರ್ಯಗಳಿಗೆ ಮುಂದೆ ಯಾವುದೇ ಹಾನಿ ಸಂಭವಿಸದಿದ್ದರೂ, ಸೆಪ್ಟೆಂಬರ್ ತಿಂಗಳವರೆಗೂ ಇಂಧನ ಕೊರತೆ ಮುಂದುವರಿಯಲಿದೆ. ಏಕೆಂದರೆ ಈ ಅವಧಿಯಲ್ಲಿ ರಷ್ಯಾದಲ್ಲಿ ಕೃಷಿ ಚಟುವಟಿಕೆಗಳು ಗರಿಷ್ಠ ಮಟ್ಟದಲ್ಲಿ ಇರುವುದರಿಂದ ಇಂಧನದ ಬೇಡಿಕೆ ಹೆಚ್ಚಾಗಿರುತ್ತದೆ.

ಇತರ ದೇಶಗಳಿಂದ ಇಂಧನ ಖರೀದಿ

ಸುದ್ದಿಸಂಸ್ಥೆ ರಾಯಿಟರ್ಸ್ ವರದಿಯ ಪ್ರಕಾರ, ರಷ್ಯಾ ಪ್ರಸ್ತುತ ಜಗತ್ತಿನ ವಿವಿಧ ದೇಶಗಳಿಂದ ಪ್ರತಿ ತಿಂಗಳು 4 ಲಕ್ಷ ಟನ್ ಪೆಟ್ರೋಲ್ ಖರೀದಿಸುತ್ತಿದೆ. ರಷ್ಯಾದ ಉಪ ಪ್ರಧಾನ ಮಂತ್ರಿ ಅಲೆಕ್ಸಾಂಡರ್ ನೊವಾಕ್ ಮಾಹಿತಿ ನೀಡಿರುವಂತೆ, ನೆರೆಯ ದೇಶವಾದ ಬೆಲಾರಸ್​ನಿಂದ ಪ್ರತಿ ತಿಂಗಳು 1ರಿಂದ 1.5 ಲಕ್ಷ ಮೆಟ್ರಿಕ್ ಟನ್ ಪೆಟ್ರೋಲ್ ರಷ್ಯಾಕ್ಕೆ ಪೂರೈಕೆಯಾಗುತ್ತಿದೆ. 2026ರ ಮೇ ತಿಂಗಳ ಮೊದಲ 15 ದಿನಗಳಲ್ಲೇ ಬೆಲಾರಸ್​ನಿಂದ 70 ಸಾವಿರ ಟನ್ ತೈಲವನ್ನು ಆಮದು ಮಾಡಿಕೊಳ್ಳಲಾಗಿದ್ದು, ಇದು ಹಿಂದಿನ ಪ್ರಮಾಣಕ್ಕಿಂತ 3 ಪಟ್ಟು ಹೆಚ್ಚಾಗಿದೆ. ಇದರೊಂದಿಗೆ ಜುಲೈ-ಆಗಸ್ಟ್ ಅವಧಿಗಾಗಿ ಕಜಕಸ್ತಾನ್ ದೇಶದೊಂದಿಗೂ 50 ಸಾವಿರ ಟನ್ ತೈಲ ಖರೀದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇನ್ನು ಜಪಾನ್​ನಿಂದ 2 ಲಕ್ಷ ಬ್ಯಾರೆಲ್ ಜೆಟ್ ಇಂಧನ (ವಿಮಾನದ ಇಂಧನ) ಶೀಘ್ರದಲ್ಲೇ ರಷ್ಯಾ ತಲುಪಲಿದೆ.

ಪೆಟ್ರೋಲ್ ರಫ್ತಿಗೆ ನಿರ್ಬಂಧ

ರಷ್ಯಾ 2025ರ ನವೆಂಬರ್​ನಿಂದಲೇ ಹಡಗುಗಳಲ್ಲಿ ಬಳಸಲಾಗುವ ಜೆಟ್ ಇಂಧನದ ರಫ್ತಿನ ಮೇಲೆ ನಿರ್ಬಂಧಗಳನ್ನು ಹೇರಲು ಪ್ರಾರಂಭಿಸಿತ್ತು. ಕಮೋಡಿಟಿ ಅನಾಲಿಟಿಕ್ಸ್ ಸಂಸ್ಥೆಯಾದ ಕೆಪ್ಲರ್ ನೀಡಿರುವ ವರದಿಯ ಪ್ರಕಾರ, ರಷ್ಯಾ 2025ರಲ್ಲಿ ದಿನಕ್ಕೆ 30 ಸಾವಿರ ಬ್ಯಾರೆಲ್ ಜೆಟ್ ಇಂಧನವನ್ನು ರಫ್ತು ಮಾಡುತ್ತಿತ್ತು, ಆದರೆ ಈ ವರ್ಷ ಅದು ಕೇವಲ 13 ಸಾವಿರ ಬ್ಯಾರೆಲ್​ಗಳಿಗೆ ಕುಸಿದಿದೆ. ದೇಶೀಯ ಮಾರುಕಟ್ಟೆಯ ಪರಿಸ್ಥಿತಿಯನ್ನು ನಿಭಾಯಿಸಲು ಏಪ್ರಿಲ್ 1ರಿಂದ ಜುಲೈ 31ರವರೆಗೆ ಪೆಟ್ರೋಲ್ ರಫ್ತನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರಷ್ಯಾದ ಹಲವು ಭಾಗಗಳಲ್ಲಿ ಸಾರ್ವಜನಿಕರಿಗೂ ಇಂಧನ ಖರೀದಿಯ ಮೇಲೆ ಮಿತಿ ಹೇರಲಾಗಿದ್ದು, ಒಂದು ವಾಹನಕ್ಕೆ 30ರಿಂದ 40 ಲೀಟರ್ ಪೆಟ್ರೋಲ್ ಮಾತ್ರ ನೀಡಲಾಗುತ್ತಿದೆ. ಅಲ್ಲದೆ ಪ್ರತ್ಯೇಕವಾಗಿ ಕ್ಯಾನ್​ಗಳಲ್ಲಿ ಪೆಟ್ರೋಲ್ ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಡೀಸೆಲ್ ರಫ್ತಿನ ಮೇಲೂ ನಿಷೇಧ ಹೇರುವ ಕುರಿತು ಆಲೋಚಿಸುತ್ತಿರುವುದಾಗಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ತಿಳಿಸಿದ್ದಾರೆ. ತೈಲ ಶುದ್ಧೀಕರಣ ಘಟಕಗಳಲ್ಲಿರುವ ಇಂಧನ ವ್ಯರ್ಥವಾಗದಂತೆ ತಡೆಯಲು, ಕಡಿಮೆ ಸಾಮರ್ಥ್ಯದ (ಲೋ-ಗ್ರೇಡ್) ಇಂಧನ ಮಾರಾಟಕ್ಕೂ ಅನುಮತಿ ನೀಡಲಾಗಿದೆ.

ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಈ ಕುರಿತು ಪ್ರತಿಕ್ರಿಯಿಸಿದ್ದು, ರಿಫೈನರಿಗಳ ಮೇಲಿನ ದಾಳಿಯಿಂದಾಗಿ ಇಂಧನದ ಕೊರತೆಯಾಗಿರುವುದು ನಿಜ, ಆದರೆ ಪರಿಸ್ಥಿತಿಯೇನೂ ಗಂಭೀರವಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ದೇಶದ ಪೆಟ್ರೋಲ್ ದಾಸ್ತಾನಿನಲ್ಲಿ 4%ರಷ್ಟು ಮಾತ್ರ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.

ರಷ್ಯಾದಲ್ಲಿ ಇಂಧನದ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಆದರೆ, ಸಮಸ್ಯೆ ಏನೆಂದರೆ, ಅದು ಸರಿಯಾದ ಸ್ಥಳಗಳಲ್ಲಿ ಲಭ್ಯವಿಲ್ಲ. ಪ್ರಸ್ತುತ ಇಂಧನದ ತೀವ್ರ ಕೊರತೆ ಇರುವ ಪ್ರದೇಶಗಳಿಗೆ ತಕ್ಷಣವೇ ಇಂಧನ ಪೂರೈಕೆ ಮಾಡುವುದು ಅಸಾಧ್ಯ. ಈ ಬೃಹತ್ ಇಂಧನ ಸಾಗಣೆಯ ಕಾರ್ಯಾಚರಣೆಗೆ (ಲಾಜಿಸ್ಟಿಕ್ಸ್) ಹಲವು ವಾರಗಳ ಸಮಯ ಬೇಕಾಗುತ್ತದೆ. ಇದೇ ವೇಳೆ, ಯೂಕ್ರೇನ್ ದಾಳಿಯಿಂದ ಹಾನಿಗೊಳಗಾಗಿರುವ ರಷ್ಯಾದ ತೈಲ ಶುದ್ಧೀಕರಣ ಘಟಕಗಳನ್ನು ದುರಸ್ತಿ ಮಾಡುವುದು ಕೂಡ ಅತಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ಈ ಘಟಕಗಳಲ್ಲಿ ಬಳಕೆಯಾಗುವ ಕೆಲವು ಪ್ರಮುಖ ಯಂತ್ರೋಪಕರಣಗಳು ಹಾಗೂ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಬೇಕಾಗಿದೆ. ಆದರೆ, ರಷ್ಯಾದ ಮೇಲೆ ಹೇರಲಾಗಿರುವ ಅಂತಾರಾಷ್ಟ್ರೀಯ ವ್ಯಾಪಾರ ನಿರ್ಬಂಧಗಳಿಂದಾಗಿ ಈ ಆಮದು ಪ್ರಕ್ರಿಯೆ ಸ್ಥಗಿತಗೊಂಡಿದೆ.

ಮಾಸ್ಕೋ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಶೇ.40ರಷ್ಟು ಇಂಧನದ ಅಗತ್ಯವನ್ನು ಪೂರೈಸುವ ಪ್ರಮುಖ ‘ಮಾಸ್ಕೋ ರಿಫೈನರಿ’ಯ ದುರಸ್ತಿ ಕಾರ್ಯ ಪೂರ್ಣಗೊಳ್ಳಲು ಕನಿಷ್ಠ 3 ತಿಂಗಳುಗಳ ಕಾಲಾವಕಾಶ ಬೇಕಾಗಬಹುದು. ಮತ್ತೊಂದೆಡೆ, ದುರಸ್ತಿ ಕಾರ್ಯಗಳು ನಡೆದ ಹೊರತಾಗಿಯೂ ರಿಫೈನರಿಗಳು ತಮ್ಮ ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ದಾಳಿಯಿಂದಾಗಿ ತೀವ್ರ ಹಾನಿ ಸಂಭವಿಸಿರುವುದರಿಂದ, ಬೇಸಿಗೆಯ ಅವಧಿಯಲ್ಲಿ, ಅಂದರೆ ಆಗಸ್ಟ್ ತಿಂಗಳವರೆಗೂ ತೈಲ ಶುದ್ಧೀಕರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮರುಆರಂಭಿಸಲು ಸಾಧ್ಯವಿಲ್ಲ.