ಇರಾನಿನ ಪರಮಾಣು ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಆರೋಪ
- ಮಧ್ಯಪ್ರಾಚ್ಯದಲ್ಲಿ ಮುಂದುವರೆದ ಯುದ್ಧ
- ಇರಾನಿನ ಪರಮಾಣು ಕೇಂದ್ರದ ಮೇಲೆ ಅಮೆರಿಕ-ಇಸ್ರೇಲ್ ದಾಳಿ ಆರೋಪ
- ವಿಕಿರಣ ಸೋರಿಕೆಯಾದರೆ ದೇಶವೇ ಸ್ಮಶಾನವಾಗಲಿದೆ: ಇರಾನ್ ರಾಯಭಾರಿ ಹೇಳಿಕೆ
ಇರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಈಗ ಅತ್ಯಂತ ಅಪಾಯಕಾರಿ ಹಂತಕ್ಕೆ ತಲುಪಿದೆ. ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್‌ನ ಪರಮಾಣು ಕೇಂದ್ರ(Nuclear Attack)ಗಳ ಮೇಲೆ ದಾಳಿ ನಡೆಸಿವೆ ಎಂಬ ಸ್ಫೋಟಕ ಮಾಹಿತಿಯನ್ನು ಅಂತರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (IAEA) ಯಲ್ಲಿರುವ ಇರಾನ್ ರಾಯಭಾರಿ ರೆಜಾ ನಜಾಫಿ ಬಹಿರಂಗಪಡಿಸಿದ್ದಾರೆ.
ನಟಾಂಜ್ ಮೇಲೆ ಜಂಟಿ ಪ್ರಹಾರ?
ಸುದ್ದಿಗಾರರೊಂದಿಗೆ ಮಾತನಾಡಿದ ರೆಜಾ ನಜಾಫಿ, ಇರಾನ್‌ನ ಶಾಂತಿಯುತ ಮತ್ತು ಸುರಕ್ಷಿತ ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಿನ್ನೆ (ಮಾ.1) ದಾಳಿ ನಡೆಸಿವೆ. ವಿಶೇಷವಾಗಿ ಇರಾನ್‌ನ ಪ್ರಮುಖ ಪರಮಾಣು ಕೇಂದ್ರವಾದ ನಟಾಂಜ್ (Natanz) ನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆದಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕದ ಆಪರೇಷನ್ ಎಪಿಕ್ ಫ್ಯೂರಿ ಮತ್ತು ಇಸ್ರೇಲ್‌ನ ಆಪರೇಷನ್ ರೋರಿಂಗ್ ಲಯನ್ ಕಾರ್ಯಾಚರಣೆಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯತೊಲ್ಲಾ ಖಮೇನಿ ಹತರಾದ ಬೆನ್ನಲ್ಲೇ ಈ ದಾಳಿ ನಡೆದಿದೆ ಎನ್ನಲಾಗಿದೆ.
ವಿಶ್ವಸಂಸ್ಥೆ ಎಚ್ಚರಿಕೆ: ನಗರಗಳೇ ಖಾಲಿಯಾಗಬಹುದು!
ಪರಮಾಣು ಕೇಂದ್ರಗಳ ಸುತ್ತ ನಡೆಯುತ್ತಿರುವ ಈ ಸಂಘರ್ಷದ ಬಗ್ಗೆ IAEA ಮುಖ್ಯಸ್ಥ ರಾಫೆಲ್ ಮರಿಯಾನೊ ಗ್ರೋಸಿ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದೆ. ಒಂದು ವೇಳೆ ಈ ಕೇಂದ್ರಗಳಿಂದ ವಿಕಿರಣ (Radiological release) ಸೋರಿಕೆಯಾದರೆ, ದೊಡ್ಡ ದೊಡ್ಡ ನಗರಗಳನ್ನೇ ಖಾಲಿ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂದು ಅವರು ಎಚ್ಚರಿಸಿದ್ದಾರೆ. ಇರಾನ್ ಮಾತ್ರವಲ್ಲದೆ ಯುಎಇ, ಜೋರ್ಡಾನ್ ಮತ್ತು ಸಿರಿಯಾದಲ್ಲಿರುವ ಪರಮಾಣು ಕೇಂದ್ರಗಳಿಗೂ ಈ ಯುದ್ಧದಿಂದ ಅಪಾಯ ಎದುರಾಗಿದೆ.
ಸದ್ಯದ ಪರಿಸ್ಥಿತಿ ಏನು?
ದಾಳಿಯ ಆರೋಪ ಕೇಳಿಬಂದಿದ್ದರೂ, ಇರಾನ್‌ನ ಬಶೆಹರ್ ಪರಮಾಣು ವಿದ್ಯುತ್ ಸ್ಥಾವರ ಅಥವಾ ಟೆಹ್ರಾನ್ ಸಂಶೋಧನಾ ಕೇಂದ್ರಗಳಿಗೆ ಸದ್ಯಕ್ಕೆ ಯಾವುದೇ ದೊಡ್ಡ ಹಾನಿಯಾದ ಪುರಾವೆಗಳಿಲ್ಲ ಎಂದು ಗ್ರೋಸಿ ಸ್ಪಷ್ಟಪಡಿಸಿದ್ದಾರೆ. ಆದರೆ, ಇರಾನ್‌ನ ಪರಮಾಣು ಅಧಿಕಾರಿಗಳೊಂದಿಗೆ ಸಂಪರ್ಕ ಕಡಿತಗೊಂಡಿದ್ದು, ಪರಿಸ್ಥಿತಿ ಅಸ್ಪಷ್ಟವಾಗಿದೆ,(ಏಜನ್ಸೀಸ್).