ಒಂದು ಸಣ್ಣ ತಪ್ಪು ಆಗುವಂತಿಲ್ಲ! ಇರಾನ್ ಜೊತೆಗಿನ ರಹಸ್ಯ ಒಪ್ಪಂದದ ತರಾತುರಿಯಲ್ಲಿರೋ ಅಧಿಕಾರಿಗಳಿಗೆ ಟ್ರಂಪ್ ವಾರ್ನಿಂಗ್?
ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ನಡೀತಿರೋ ಭೀಕರ ಯುದ್ಧವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಇರಾನ್ ಜೊತೆಗಿನ ಶಾಂತಿ ಮಾತುಕತೆಗಳು ಅಂತಿಮ ಹಂತ ತಲುಪಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತಮ್ಮ ದೇಶದ ಉನ್ನತ ಅಧಿಕಾರಿಗಳಿಗೆ ಅತ್ಯಂತ ಕಠಿಣ ಹಾಗೂ ಬಿಗುವಿನ ಸಂದೇಶ ರವಾನಿಸಿದ್ದಾರೆ. ಇರಾನ್ ಜೊತೆಗಿನ ಮಾತುಕತೆಯ ವೇಳೆ ಜಾಗರೂಕತೆಯಿಂದ ಹೆಜ್ಜೆ ಇಡುವಂತೆ ಸೂಚಿಸಿರುವ ಟ್ರಂಪ್, ಒಪ್ಪಂದ ಮಾಡಿಕೊಳ್ಳುವ ತರಾತುರಿಯಲ್ಲಿ ಯಾವುದೇ ಕಾರಣಕ್ಕೂ ಒಂದು ಸಣ್ಣ ತಪ್ಪೂ ಆಗಬಾರದು ಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ಖಡಕ್ ಆಗಿ ಆಜ್ಞಾಪಿಸಿದ್ದಾರೆ.
ಈ ಬಗ್ಗೆ ಭಾನುವಾರ (ಮೇ, 24) ತಮ್ಮ ಅಧಿಕೃತ ಟ್ರುತ್ ಸೋಶಿಯಲ್ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿರುವ ಅಧ್ಯಕ್ಷ ಟ್ರಂಪ್, ಇರಾನ್ ವಿಷಯದಲ್ಲಿ ಅಮೆರಿಕ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಇರಾನ್ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಬಾರದು: ಟ್ರಂಪ್ ಪಟ್ಟು
ಮಧ್ಯಪ್ರಾಚ್ಯದ ಯುದ್ಧ ನಿಲ್ಲಿಸಲು ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಒಪ್ಪಂದ ಸನ್ನಿಹಿತವಾಗಿದೆ ಎಂಬ ಜಾಗತಿಕ ವರದಿಗಳ ನಡುವೆಯೇ ಟ್ರಂಪ್ ಈ ಹೇಳಿಕೆ ನೀಡಿರುವುದು ಭಾರಿ ಕುತೂಹಲ ಮೂಡಿಸಿದೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸಲು ಅಥವಾ ಸ್ವಾಧೀನಪಡಿಸಿಕೊಳ್ಳಲು ಅಮೆರಿಕ ಬಿಡುವುದಿಲ್ಲ. ಎರಡೂ ಕಡೆಯವರು ಸಾಕಷ್ಟು ಸಮಯ ತೆಗೆದುಕೊಂಡು, ವಿಷಯಗಳನ್ನು ಸರಿಯಾಗಿ ವಿಶ್ಲೇಷಿಸಿಯೇ ಮುಂದಿನ ಹೆಜ್ಜೆ ಇಡಬೇಕು. ಮಾತುಕತೆಯಲ್ಲಿ ಯಾವುದೇ ಲೋಪದೋಷಗಳಿಗೆ ಅವಕಾಶವಿರಬಾರದು ಎಂದು ಬರೆದುಕೊಂಡಿದ್ದಾರೆ.
ಒಬಾಮಾ ಆಡಳಿತದ ಹಳೆ ಒಪ್ಪಂದದ ವಿರುದ್ಧ ತೀವ್ರ ವಾಗ್ದಾಳಿ!
ತಮ್ಮ ಪೋಸ್ಟ್‌ನಲ್ಲಿ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ ಟ್ರಂಪ್, 2015ರಲ್ಲಿ ಒಬಾಮಾ ಆಡಳಿತ ಮಾಡಿಕೊಂಡಿದ್ದ ಇರಾನ್ ಪರಮಾಣು ಒಪ್ಪಂದವನ್ನು ವಿಶ್ವದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಒಪ್ಪಂದಗಳಲ್ಲಿ ಒಂದು ಎಂದು ಜರೆದಿದ್ದಾರೆ. ಅಂದಿನ ಒಬಾಮಾ ಸರ್ಕಾರದ ತಪ್ಪು ನಿರ್ಧಾರಗಳೇ ಇರಾನ್ ದೇಶವು ಅಣ್ವಸ್ತ್ರಗಳನ್ನು ರಹಸ್ಯವಾಗಿ ಅಭಿವೃದ್ಧಿಪಡಿಸಲು ರಾಜಮಾರ್ಗವನ್ನು ನಿರ್ಮಿಸಿಕೊಟ್ಟಿತು ಎಂದು ಟ್ರಂಪ್ ಬಲವಾಗಿ ಬ್ಲೇಮ್ ಮಾಡಿದ್ದಾರೆ.
ಆದರೆ, ಪ್ರಸ್ತುತ ತಮ್ಮ ಆಡಳಿತದಲ್ಲಿ ಇರಾನ್ ಜೊತೆಗಿನ ಸಂವಹನವು ಅತ್ಯಂತ ವ್ಯವಸ್ಥಿತ, ವೃತ್ತಿಪರ ಮತ್ತು ರಚನಾತ್ಮಕವಾಗಿ ನಡೆಯುತ್ತಿದೆ ಎಂದು ಟ್ರಂಪ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ನಮ್ಮ ದೇಶದ ಪ್ರತಿನಿಧಿಗಳಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಅಲ್ಲದೆ, ಒಪ್ಪಂದಕ್ಕಾಗಿ ಯಾರೂ ಅವಸರ ಪಡಬೇಕಾಗಿಲ್ಲ. ಇರಾನ್ ಸಂಪೂರ್ಣ ಒಪ್ಪಂದಕ್ಕೆ ಸಹಿ ಹಾಕಿ, ಅದು ಅಧಿಕೃತವಾಗಿ ಪ್ರಮಾಣೀಕೃತವಾಗುವವರೆಗೂ ಇರಾನ್ ಮೇಲಿನ ನಮ್ಮ ಆರ್ಥಿಕ ಹಾಗೂ ಜಾಗತಿಕ ದಿಗ್ಬಂಧನಗಳು ಸಂಪೂರ್ಣವಾಗಿ ಜಾರಿಯಲ್ಲಿರುತ್ತವೆ ಎಂದು ಇರಾನ್‌ಗೆ ಆರ್ಥಿಕ ಶಾಕ್ ನೀಡಿದ್ದಾರೆ.
ಅಬ್ರಹಾಂ ಒಪ್ಪಂದಕ್ಕೆ ಇರಾನ್ ಸೇರ್ಪಡೆ? ಜಾಗತಿಕ ರಾಜಕೀಯದಲ್ಲಿ ಸಂಚಲನ!
ಇದೇ ವೇಳೆ ಮಧ್ಯಪ್ರಾಚ್ಯದ ಗಲ್ಫ್ ಮಿತ್ರ ರಾಷ್ಟ್ರಗಳು ಅಮೆರಿಕಕ್ಕೆ ನೀಡುತ್ತಿರುವ ಬೆಂಬಲ ಮತ್ತು ಸಹಕಾರಕ್ಕೆ ಡೊನಾಲ್ಡ್ ಟ್ರಂಪ್ ಧನ್ಯವಾದ ಅರ್ಪಿಸಿದ್ದಾರೆ. ಅಷ್ಟೇ ಅಲ್ಲದೆ, ಐತಿಹಾಸಿಕ ಅಬ್ರಹಾಂ ಒಪ್ಪಂದದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುವ ಇಂಗಿತ ವ್ಯಕ್ತಪಡಿಸಿರುವ ಟ್ರಂಪ್, ಜಾಗತಿಕ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಬಲ್ಲ ಒಂದು ರಹಸ್ಯ ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ.
ಮಧ್ಯಪ್ರಾಚ್ಯದ ಎಲ್ಲಾ ದೇಶಗಳ ಸಹಕಾರಕ್ಕೆ ಧನ್ಯವಾದಗಳು. ಈ ದೇಶಗಳು ಐತಿಹಾಸಿಕ ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಗೊಳ್ಳುವುದರಿಂದ ಪ್ರಾದೇಶಿಕ ಸಂಬಂಧಗಳು ಮತ್ತಷ್ಟು ಗಟ್ಟಿಯಾಗಲಿವೆ. ಯಾರಿಗೆ ಗೊತ್ತು, ಭವಿಷ್ಯದಲ್ಲಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಕೂಡ ಈ ಅಬ್ರಹಾಂ ಒಪ್ಪಂದದ ಚೌಕಟ್ಟನ್ನು ಸೇರಲು ಬಯಸಬಹುದು ಎಂದು ಬರೆಯುವ ಮೂಲಕ ಇರಾನ್ ಮುಂದಿನ ದಿನಗಳಲ್ಲಿ ಅಮೆರಿಕದ ಮಿತ್ರರಾಷ್ಟ್ರಗಳ ಒಕ್ಕೂಟಕ್ಕೆ ಬರುವ ಆಫರ್ ಅನ್ನು ಮುಕ್ತವಾಗಿಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷರ ಈ ಕಠಿಣ ಹಾಗೂ ಮುತ್ಸದ್ದಿತನದ ಆಟವು ಮಧ್ಯಪ್ರಾಚ್ಯದ ಯುದ್ಧದ ದಿಕ್ಕನ್ನು ಬದಲಿಸಲಿದೆಯೇ ಅಥವಾ ಇರಾನ್ ಮೇಲೆ ಮತ್ತಷ್ಟು ರಾಜತಾಂತ್ರಿಕ ಒತ್ತಡ ಹೇರಲಿದೆಯೇ ಎಂಬುದನ್ನು ಇಡೀ ಜಗತ್ತು ಈಗ ಕುತೂಹಲದಿಂದ ಗಮನಿಸುತ್ತಿದೆ,(ಏಜೆನ್ಸೀಸ್).