ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಉಡಾಯಿಸಿದ ಉತ್ತರ ಕೊರಿಯಾ
- ಜಗತ್ತಿನ ನಿಗೂಢ ಹಾಗೂ ಅಪಾಯಕಾರಿ ದೇಶಗಳಲ್ಲಿ ಒಂದಾಗಿರುವ ಉತ್ತರ ಕೊರಿಯಾ
- ಭಾನುವಾರ (ಜ.4) ತನ್ನ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿದ ಉತ್ತರ ಕೊರಿಯಾ
- ನೇರವಾಗಿ ಕ್ಷಿಪಣಿ ಪರೀಕ್ಷೆಯ ಮೇಲ್ವಿಚಾರಣೆ ನಡೆಸಿದ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್
ಪ್ಯೊಂಗ್ಯಾಂಗ್: ಜಗತ್ತಿನ ನಿಗೂಢ ಹಾಗೂ ಅಪಾಯಕಾರಿ ದೇಶಗಳಲ್ಲಿ ಒಂದಾಗಿರುವ ಉತ್ತರ ಕೊರಿಯಾ, ಭಾನುವಾರ (ಜ.4) ತನ್ನ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಪರೀಕ್ಷಿಸಿರುವುದಾಗಿ ( Kim Jong Un ) ಕೊರಿಯಾದ ರಾಜ್ಯ ಮಾಧ್ಯಮ ಕೊರಿಯನ್ ಸೆಂಟ್ರಲ್ ನ್ಯೂಸ್ ಏಜೆನ್ಸಿ (KCNA) ವರದಿ ಮಾಡಿದೆ.
ಇದು ಈ ವರ್ಷದ ಮೊದಲ ಕ್ಷಿಪಣಿ ಪರೀಕ್ಷೆಯಾಗಿದ್ದು, ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ( Kim Jong Un ) ಅವರೇ ನೇರವಾಗಿ ಕ್ಷಿಪಣಿ ಪರೀಕ್ಷೆಯ ಮೇಲ್ವಿಚಾರಣೆಯನ್ನು ನಡೆಸಿದ್ದಾರೆ. ಇನ್ನು ಈ ಕ್ಷಿಪಣಿ ಪರೀಕ್ಷೆ ಉದ್ದೇಶ ಯುದ್ಧ ತಡೆಗಟ್ಟುವಿಕೆ (war deterrence)ಗೆ ಸಂಬಂಧಿಸಿದಂತೆ ಮಿಲಿಟರಿ ಕಾರ್ಯಾಚರಣೆಯ ಸಾಮರ್ಥ್ಯವನ್ನು ನಿರ್ಣಯಿಸುವುದು ಮತ್ತು ಹೈಪರ್‌ಸಾನಿಕ್ ಆಯುಧ ವ್ಯವಸ್ಥೆಯ ಸಿದ್ಧತೆಯನ್ನು ಪರೀಕ್ಷಿಸುವುದಾಗಿದೆ.
ಈ ಬಗ್ಗೆ ಮಾತನಾಡಿರುವ ಕಿಮ್ ಜಾಂಗ್ ಉನ್, ಜಾಗತಿಕವಾಗಿ ಇತ್ತೀಚೆಗೆ ಹೆಚ್ಚಾಗುತ್ತಿರುವ ರಾಜಕೀಯ ಬಿಕ್ಕಟ್ಟು ಮತ್ತು ಅಂತಾರಾಷ್ಟ್ರೀಯವಾಗಿ ಎದುರಾಗುತ್ತಿರುವ ಯುದ್ಧದ ಸನ್ನಿವೇಶಗಳಿಂದಾಗಿ ಬಲವಾದ ಮತ್ತು ವಿಶ್ವಾಸಾರ್ಹ ಪರಮಾಣು ನಿರೋಧಕವನ್ನು ಕಾಪಾಡಿಕೊಳ್ಳುವುದು ಅಥವಾ ವಿಸ್ತರಿಸುವುದು ಬಹಳ ಮುಖ್ಯವಾದ ತಂತ್ರವಾಗಿದೆ ಎಂದು ಹೇಳಿದ್ದಾರೆ.
ಪರೀಕ್ಷಾರ್ಥವಾಗಿ ಉತ್ತರ ಕೊರಿಯಾದ ರಾಜಧಾನಿ ಪ್ಯೊಂಗ್ಯಾಂಗ್ ಸಮೀಪದಿಂದ ಉಡಾಯಿಸಿದ ಕ್ಷಿಪಣಿಗಳು ಸುಮಾರು 1,000 ಕಿ.ಮೀ. ದೂರದ ಗುರಿಯನ್ನು ತಲುಪಿವೆ ಎಂದು KCNA ವರದಿಯಾಗಿದೆ. ಇನ್ನು ಹೈಪರ್‌ಸಾನಿಕ್ ಕ್ಷಿಪಣಿಗಳು ಮ್ಯಾಕ್ 5ಕ್ಕಿಂತ ಹೆಚ್ಚು ವೇಗದಲ್ಲಿ ಸಾಗುತ್ತದೆ. ಅಲ್ಲದೆ, ಮಾರ್ಗ ಮಧ್ಯದಲ್ಲಿ ದಿಕ್ಕು ಬದಲಿಸುವ ಸಾಮರ್ಥ್ಯ ಹೊಂದಿರುವುದರಿಂದ ಈ ಕ್ಷಿಪಣಿಗಳನ್ನು ತಡೆಯುವುದು ಕಷ್ಟ ಎನ್ನಲಾಗಿದೆ.
ಅಂದಹಾಗೆ, ಈ ಪರೀಕ್ಷೆಯು ಅಮೆರಿಕ ಸೇನೆ ವೆನೆಜುವೆಲಾ ಮೇಲೆ ದಾಳಿ ಮಾಡಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಹಾಗೂ ಅವರ ಪತ್ನಿ ಸಿಲಿಯಾ ಫ್ಲೋರ್ಸ್ರನ್ನು ಬಂಧಿಸಿದ ಬೆನ್ನಲ್ಲೇ ನಡೆದಿರುವುದು ತೀವ್ರ ಕುತೂಹಲ ಮೂಡಿದೆ. ವೆನೆಜುವೆಲಾ ಮೇಲಿನ ಅಮರಿಕ ದಾಳಿಯನ್ನು ಖಂಡಿಸಿರುವ ಉತ್ತರ ಕೊರಿಯಾ, ಒಂದು ದೇಶದ ಸಾರ್ವಭೌಮತ್ವ ಉಲ್ಲಂಘನೆ ಎಂದಿದೆ. ಹೀಗಾಗಿ, ಇಂದಿನ ಕ್ಷಿಪಣಿ ಪರೀಕ್ಷೆಯು ಪರೋಕ್ಷವಾಗಿ ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ಎಂಬ ಆಯಾಮದಲ್ಲಿ ಕೆಲವು ವಿಶ್ಲೇಷಕರು ನೋಡುತ್ತಿದ್ದಾರೆ.
ಅಕ್ಟೋಬರ್ 2025 ರಲ್ಲಿ ಉತ್ತರ ಕೊರಿಯಾ ತನ್ನ ಹೈಪರ್‌ಸಾನಿಕ್ ಕ್ಷಿಪಣಿಗಳನ್ನು ಹಾರಿಸಿತ್ತು. ಇದನ್ನು ಮಿಲಿಟರಿ ಮೆರವಣಿಗೆಯಲ್ಲಿ ದೀರ್ಘ-ಶ್ರೇಣಿಯ ಖಂಡಾಂತರ ಕ್ಷಿಪಣಿಯೊಂದಿಗೆ ಅನಾವರಣಗೊಳಿಸಲಾಯಿತು, (ಏಜೆನ್ಸೀಸ್).