ನಾರ್ತ್ ಕ್ಯಾರೋಲಿನ ಸಂಪಿಗೆ ಕನ್ನಡ ಸಂಘದದಿಂದ 30 ವರ್ಷದ ಸಂಭ್ರಮಾಚರಣೆ 
ವಿದೇಶ

ನಾರ್ತ್ ಕ್ಯಾರೋಲಿನ ಸಂಪಿಗೆ ಕನ್ನಡ ಸಂಘದ ಭರ್ಜರಿ 30ರ ಸಂಭ್ರಮ! Kannada Sangha

ಪ್ರಮುಖ ಮುಖ್ಯಾಂಶಗಳು

  • ಅಮೆರಿಕದ ನಾರ್ತ್ ಕೆರೋಲಿನಾದಲ್ಲಿ ಕನ್ನಡದ ಸಂಘದ 30 ವರ್ಷದ ಸಂಭ್ರಮಾಚರಣೆ
  • 'ಸಂಪಿಗೆ ಕನ್ನಡ ಬಳಗ'ದ ಮೂವತ್ತರ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ
  • ಸಂಪಿಗೆಯ ಅಧ್ಯಕ್ಷರಾಗಿರುವ ಕಿರಣ್ ಗಂಗನಳ್ಳಿಯವರ ನೇತೃತ್ವದಲ್ಲಿ ಅದ್ಧೂರಿ ಕಾರ್ಯಕ್ರಮ
| ವೀರೇಂದ್ರ ನಾಯಕ್ ಚಿತ್ರಬೈಲು
Kannada Sangha : ನವೆಂಬರ್ ಹದಿನೈದರ ಮುಂಜಾನೆ ಅಮೆರಿಕದ ನಾರ್ತ್ ಕೆರೋಲಿನಾ ರಾಜ್ಯದಲ್ಲಿರುವ ಮಾರಿಸ್ ವಿಲ್ ನಗರದಲ್ಲಿನ ಹಿಂದೂ ಸೊಸೈಟಿ ಆಫ್ ನಾರ್ತ್ ಕೆರೋಲಿನಾ (HSNC)ದ ಸಭಾಂಗಣ ಮದುವಣಗಿತ್ತಿಯಂತೆ ಸಿಂಗರಗೊಂಡಿತ್ತು. ಕಾರಣ ಇಲ್ಲಿನ ಅನಿವಾಸಿ ಕನ್ನಡಿಗರ ಅಧಿಕೃತ ಸಂಘಟನೆಯಾಗಿರುವ 'ಸಂಪಿಗೆ ಕನ್ನಡ ಬಳಗ'ದ ಮೂವತ್ತರ ಸಂಭ್ರಮ ಹಾಗೂ ಕನ್ನಡ ರಾಜ್ಯೋತ್ಸವ ಆಚರಣೆ.
ಸಂಪಿಗೆಯ ಅಧ್ಯಕ್ಷರಾಗಿರುವ ಕಿರಣ್ ಗಂಗನಳ್ಳಿಯವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ತಿಂಗಳುಗಟ್ಟಲೆ ಶ್ರಮವಹಿಸಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಮಂದಿ ಪಾಲ್ಗೊಂಡದ್ದು ಅನಿವಾಸಿ ಕನ್ನಡಿಗರಿಗೆ ತಮ್ಮ ಬೇರಿನ ಕುರಿತಾಗಿರುವ ಅಭಿಮಾನಕ್ಕೆ ಸಾಕ್ಷಿಯಾಗಿತ್ತು. ಸಂಪಿಗೆಯ ಸ್ಥಾಪಕಾಧ್ಯಕ್ಷರಾದ ಶ್ರೀಮತಿ ಸುಪ್ರಿಯಾ ದೇಸಾಯಿಯವರಿಂದ ಹಿಡಿದು ಹಿಂದಿನ ಎಲ್ಲಾ ಅಧ್ಯಕ್ಷರುಗಳ ಉಪಸ್ಥಿತಿಯು ಕಾರ್ಯಕ್ರಮಕ್ಕೆ ಮೆರುಗನ್ನು ತಂದುಕೊಟ್ಟಿತ್ತು.
ಬೆಳಗ್ಗೆ ತಾಯಿ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆಯೊಂದಿಗೆ ಪ್ರಾರಂಭವಾದ ಕನ್ನಡದ ಹಬ್ಬದಲ್ಲಿ ಹಲವು ತಂಡಗಳು ಕರ್ನಾಟಕದ ಸಾಂಸ್ಕೃತಿಕ ಸೊಗಡನ್ನು ಸಾರುವ ತರಹೇವಾರಿ ವೇಷಭೂಷಣಗಳೊಂದಿಗೆ ಹೆಜ್ಜೆ ಹಾಕಿದವು. ಡೋಲು ಹಾಗೂ ಚೆಂಡೆಯ ಸದ್ದಿನೊಂದಿಗೆ, ಕರಗ, ಚೌಡವ್ವ ಕುಣಿತಗಳ ಮಾದರಿಗಳು, ಹುಲಿಕುಣಿತ, ಮೈಸೂರು ರಾಜ ಪರಿವಾರದ ವೇಷಗಳನ್ನು ಧರಿಸಿದ ತಂಡ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ವೇಷತೊಟ್ಟ ಮಕ್ಕಳು, ಸಾಲುಮರದ ತಿಮ್ಮಕ್ಕ, ಒನಕೆ ಓಬವ್ವ, ಮುದ್ದುಕೃಷ್ಣ, ಇನ್ನೂ ಮುಂತಾದ ವೇಷಗಳು ಸುಮಾರು ಒಂದು ಗಂಟೆಯ ಕಾಲ ಕರ್ನಾಟಕವನ್ನೇ ಮರುಸೃಷ್ಠಿಸಿದಂತಿದ್ದವು.
ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕರ್ನಾಟಕದ ಉದ್ದಗಲದಿಂದ ಬಂದು ನೆಲೆಸಿರುವ ಅನಿವಾಸಿ ಕನ್ನಡದ ಪ್ರತಿಭಾ ಸಂಪನ್ನತೆಗೆ ಸಾಕ್ಷಿಯಾಗಿದ್ದವು. ಐದಾರು ವರ್ಷ ವಯಸ್ಸಿನ ಪುಟಾಣಿಗಳಿಂದ ಹಿಡಿದು ಎಪ್ಪತ್ತರ ಹಿರಿಯರವರೆಗೂ ವಿವಿಧ ವಯಸ್ಸಿನ ಮಂದಿ ವೇದಿಕೆಯಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡಿದರು. ನಿತ್ಯೋತ್ಸವ ಹಾಡಿನೊಂದಿಗೆ ಆರಂಭಗೊಂಡ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅರವತ್ತು- ಎಪ್ಪತ್ತರ ದಶಕದ ಕನ್ನಡ ಚಲನಚಿತ್ರಗೀತೆಗಳಿಂದ ಹಿಡಿದು ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳ ಹಾಡುಗಳಿಗೆ ಹಲವು ನೃತ್ಯ ತಂಡಗಳು ಹೆಜ್ಜೆಹಾಕಿದವು. ಅದರ ಜೊತೆಗೆ ಹಾಸ್ಯ ಪ್ರಹಸನಗಳು, ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ವಾದನ ಗೋಷ್ಠಿಗಳೂ ಗಮನ ಸೆಳೆದವು.
ಇತ್ತೀಚೆಗೆ ನಿಧನರಾದ ಕಾದಂಬರಿಕಾರ ಎಸ್ ಎಲ್ ಭೈರಪ್ಪ ಹಾಗೂ ವೃಕ್ಷಮಾತೆ ಸಾಲುಮರದ ತಿಮ್ಮಕ್ಕರಿಗೆ ನುಡಿನಮನ ಕಾರ್ಯಕ್ರಮ ನಡೆಯಿತು. ಅದರ ಜೊತೆಗೆ ಸಂಪಿಗೆ ಬಳಗದ ಮೂವತ್ತರ ಸಂಭ್ರಮದ ಸವಿನೆನಪಿಗಾಗಿ ಈ ಹಿಂದೆ ಅಧ್ಯಕ್ಷರುಗಳಾಗಿ ಸೇವೆ ಸಲ್ಲಿಸಿದ್ದ ಎಲ್ಲರನ್ನೂ ಗೌರವಿಸುವ ಕಾರ್ಯಕ್ರಮವೂ ಜರುಗಿತು. ಸುಮಾರು ಐವತ್ತು ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿ ಭಾರತೀಯ ಸಮುದಾಯದ ಏಕೀಕರಣಕ್ಕಾಗಿ 'ಹಿಂದೂ ಸೊಸೈಟಿ ಆಫ್ ನಾರ್ತ್ ಕೆರೋಲಿನಾ'ವನ್ನು ಹುಟ್ಟುಹಾಕಿದ ತೊಂಬತ್ತೈದರ ಹಿರಿಯ ಮಹಿಳೆ ಸರೋಜ್ ಶರ್ಮಾರನ್ನು ಗೌರವಿಸಿದ ಕ್ಷಣ ಬಹಳ ಭಾವನಾತ್ಮಕವಾಗಿತ್ತು.
ಡಾ ಶಮಿತಾ ಮಲ್ನಾಡ್ ಅವರ ನೇತೃತ್ವದ 'ಜನನಿ' ಮಹಿಳಾ ಬ್ಯಾಂಡ್ ನ 'ಮ್ಯೂಸಿಕಲ್ ಕನ್ಸರ್ಟ್'ನೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ಬೆಳಗ್ಗೆ ಹತ್ತು ಗಂಟೆಗೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ ಗಂಟೆ ಹತ್ತಾದರೂ ಪ್ರೇಕ್ಷಕರ ಉತ್ಸಾಹ ಬತ್ತಿರಲಿಲ್ಲ. ರುಚಿ ಶುಚಿಯಾದ ಊಟದೊಂದಿಗೆ ಕನ್ನಡದ ಗುಂಗನ್ನು ಮನದೊಳಗಿಳಿಸಿಕೊಂಡು ಎಲ್ಲರೂ ನಿಧಾನವಾಗಿ ಚದುರಿದರು.