US Iran Peace | ಅಮೆರಿಕ-ಇರಾನ್ ಒಪ್ಪಂದದ 14 ಅಂಶಗಳ ಸಂಪೂರ್ಣ ವಿವರ ಇಲ್ಲಿದೆ 
ವಿದೇಶ

ಪರಮಾಣು ಅಸ್ತ್ರಕ್ಕೆ ಬ್ರೇಕ್, ಹೋರ್ಮುಜ್ ಓಪನ್!...ಅಮೆರಿಕ-ಇರಾನ್ ಒಪ್ಪಂದದ 14 ಅಂಶಗಳ ಸಂಪೂರ್ಣ ವಿವರ ಇಲ್ಲಿದೆ | US Iran Peace

US Iran Peace: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಅಮೆರಿಕ ಮತ್ತು ಇರಾನ್ ದೇಶಗಳು ಸಹಿ ಮಾಡಿರುವ ಒಪ್ಪಂದದ ಬೆನ್ನಲ್ಲೇ, ಅಮೆರಿಕದ ಹಿರಿಯ ಅಧಿಕಾರಿಗಳು ಈ ಐತಿಹಾಸಿಕ 14 ಅಂಶಗಳ ತಿಳುವಳಿಕಾ ಒಪ್ಪಂದದ (MoU) ಸಂಪೂರ್ಣ ಪಠ್ಯವನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಸಹಿ ಮಾಡಿರುವ ಈ ಒಪ್ಪಂದವನ್ನು ಜೆಂಟಲ್‌ಮ್ಯಾನ್ ಒಪ್ಪಂದ ಎಂದು ಬಣ್ಣಿಸಲಾಗಿದೆ.
ಈ ಒಪ್ಪಂದದ ಮೊದಲ ಮತ್ತು ಪ್ರಮುಖ ಅಂಶದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಯುದ್ಧದ ಆಕ್ರಮಣಗಳನ್ನು ತಕ್ಷಣವೇ ನಿಲ್ಲಿಸಲಾಗುತ್ತದೆ. ಎರಡನೆಯದಾಗಿ, ಅಮೆರಿಕವು ತನ್ನ ನೌಕಾ ದಿಗ್ಬಂಧನವನ್ನು ಹಿಂಪಡೆಯಲಿದ್ದು, ಇರಾನ್ ಹೋರ್ಮುಜ್​​ ಜಲಸಂಧಿಯನ್ನು ಪುನರಾರಂಭಿಸಲಿದೆ. ಅಲ್ಲದೆ ಜಲಮಾರ್ಗದ ಭವಿಷ್ಯದ ಆಡಳಿತದ ಕುರಿತು ಓಮನ್ ದೇಶದೊಂದಿಗೆ ಮಾತುಕತೆ ನಡೆಸಲಿದೆ. ಇದರೊಂದಿಗೆ, ಇರಾನ್‌ನ ಪುನರ್ನಿರ್ಮಾಣಕ್ಕಾಗಿ ಅಮೆರಿಕ 300 ಬಿಲಿಯನ್ ಡಾಲರ್ ನೀಡಲಿದ್ದು, ಇರಾನ್ ಯಾವುದೇ ಪರಮಾಣು ಅಸ್ತ್ರವನ್ನು ತಯಾರಿಸುವುದಿಲ್ಲ ಎಂದು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ.

14 ಅಂಶಗಳ ತಿಳುವಳಿಕಾ ಒಪ್ಪಂದದ (MoU) ವಿವರಗಳು

1. ಯುದ್ಧ ಮತ್ತು ಆಕ್ರಮಣಗಳ ತಕ್ಷಣದ ಮುಕ್ತಾಯ
ಅಮೆರಿಕ, ಇರಾನ್ ಮತ್ತು ಪ್ರಸ್ತುತ ಯುದ್ಧದಲ್ಲಿರುವ ಅವರ ಮಿತ್ರಪಕ್ಷಗಳು ಈ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣವೇ ಮತ್ತು ಶಾಶ್ವತವಾಗಿ ನಿಲ್ಲಿಸುವುದಾಗಿ ಘೋಷಿಸುತ್ತವೆ. ಇನ್ನು ಮುಂದೆ ಪರಸ್ಪರರ ವಿರುದ್ಧ ಯಾವುದೇ ಯುದ್ಧ ಅಥವಾ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಿಲ್ಲ ಎಂದು ಭರವಸೆ ನೀಡುತ್ತವೆ.
ಪರಸ್ಪರರ ವಿರುದ್ಧ ಬಲಪ್ರಯೋಗ ಮಾಡುವುದಿಲ್ಲ ಮತ್ತು ಲೆಬನಾನ್‌ನ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆಯನ್ನು ಕಾಪಾಡಲು ಬದ್ಧವಾಗಿರುತ್ತವೆ. ಅಂತಿಮ ಒಪ್ಪಂದವು ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲಿನ ಯುದ್ಧದ ಶಾಶ್ವತ ಮುಕ್ತಾಯವನ್ನು ಖಚಿತಪಡಿಸಲಿದೆ.
2. ಸಾರ್ವಭೌಮತ್ವಕ್ಕೆ ಗೌರವ
ಅಮೆರಿಕ ಮತ್ತು ಇರಾನ್ ದೇಶಗಳು ಪರಸ್ಪರರ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಲು ಹಾಗೂ ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡದಿರಲು ಬದ್ಧವಾಗಿವೆ.
3. ಅಂತಿಮ ಒಪ್ಪಂದಕ್ಕೆ ಕಾಲಾವಕಾಶ
ಉಭಯ ದೇಶಗಳು ಮುಂದಿನ ಗರಿಷ್ಠ 60 ದಿನಗಳೊಳಗಾಗಿ ಮಾತುಕತೆ ನಡೆಸಿ ಅಂತಿಮ ಒಪ್ಪಂದವನ್ನು ತಲುಪಲು ಒಪ್ಪಿಕೊಂಡಿವೆ. ಅಗತ್ಯಬಿದ್ದರೆ ಉಭಯ ದೇಶಗಳ ಪರಸ್ಪರ ಸಮ್ಮತಿಯೊಂದಿಗೆ ಈ ಅವಧಿಯನ್ನು ವಿಸ್ತರಿಸಬಹುದಾಗಿದೆ.
4. ನೌಕಾ ದಿಗ್ಬಂಧನ ತೆರವು ಮತ್ತು ಸೇನೆ ವಾಪಸಾತಿ
ಈ ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣವೇ ಅಮೆರಿಕವು ಇರಾನ್ ವಿರುದ್ಧದ ತನ್ನ ನೌಕಾ ದಿಗ್ಬಂಧನ ಮತ್ತು ಇತರ ಅಡೆತಡೆಗಳನ್ನು ತೆಗೆದುಹಾಕಲು ಪ್ರಾರಂಭಿಸುತ್ತದೆ ಹಾಗೂ 30 ದಿನಗಳ ಒಳಗೆ ಸಂಪೂರ್ಣವಾಗಿ ನೌಕಾ ದಿಗ್ಬಂಧನವನ್ನು ಕೊನೆಗೊಳಿಸುತ್ತದೆ. ಈ ಅವಧಿಯಲ್ಲಿ, ಯುದ್ಧಕ್ಕೂ ಮುನ್ನ ಇದ್ದ ಹಡಗುಗಳ ಸಂಚಾರದ ಪ್ರಮಾಣವನ್ನು ಇರಾನ್ ಮರುಸ್ಥಾಪಿಸಲಿದೆ. ಅಂತಿಮ ಒಪ್ಪಂದವಾದ 30 ದಿನಗಳ ಒಳಗೆ ಅಮೆರಿಕ ತನ್ನ ಸೇನಾ ಪಡೆಗಳನ್ನು ಇರಾನ್‌ನ ಸಮೀಪದಿಂದ ಹಿಂಪಡೆಯಲು ಒಪ್ಪಿಕೊಂಡಿದೆ.
5. ಹೋರ್ಮುಜ್ ಜಲಸಂಧಿ ಮತ್ತು ವಾಣಿಜ್ಯ ಹಡಗುಗಳ ಸಂಚಾರ
ಒಪ್ಪಂದಕ್ಕೆ ಸಹಿ ಬಿದ್ದ ತಕ್ಷಣ, ಇರಾನ್ ಪರ್ಷಿಯನ್ ಗಲ್ಫ್‌ನಿಂದ ಓಮನ್ ಸಮುದ್ರದವರೆಗೆ ವಾಣಿಜ್ಯ ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಯಾವುದೇ ಶುಲ್ಕವಿಲ್ಲದೆ 60 ದಿನಗಳ ಕಾಲ ತನ್ನ ಅತ್ಯುತ್ತಮ ಪ್ರಯತ್ನಗಳನ್ನು ಮಾಡಲಿದೆ. ವಾಣಿಜ್ಯ ಹಡಗುಗಳ ಸಂಚಾರ ತಕ್ಷಣವೇ ಪ್ರಾರಂಭವಾಗಲಿದ್ದು, ತಾಂತ್ರಿಕ ಮತ್ತು ಮಿಲಿಟರಿ ಅಡೆತಡೆಗಳು ಹಾಗೂ ಮೈನ್‌ಗಳನ್ನು (ಬಾಂಬ್) ತೆರವುಗೊಳಿಸುವ ಕೆಲಸವನ್ನು ಇರಾನ್ 30 ದಿನಗಳ ಒಳಗೆ ಮಾಡಲಿದೆ. ಅಲ್ಲದೆ, ಅನ್ವಯವಾಗುವ ಅಂತಾರಾಷ್ಟ್ರೀಯ ಕಾನೂನುಗಳ ಪ್ರಕಾರ ಹೋರ್ಮುಜ್ ಜಲಸಂಧಿಯ ಭವಿಷ್ಯದ ಆಡಳಿತ ಮತ್ತು ಕಡಲ ಸೇವೆಗಳನ್ನು ವ್ಯಾಖ್ಯಾನಿಸಲು ಇರಾನ್ ದೇಶವು ಓಮನ್ ಮತ್ತು ಇತರ ಪರ್ಷಿಯನ್ ಗಲ್ಫ್ ಕರಾವಳಿ ದೇಶಗಳೊಂದಿಗೆ ಮಾತುಕತೆ ನಡೆಸಲಿದೆ.
6. $300 ಬಿಲಿಯನ್ ಪುನರ್ನಿರ್ಮಾಣ ನಿಧಿ
ಇರಾನ್‌ನ ಪುನರ್ನಿರ್ಮಾಣ ಮತ್ತು ಆರ್ಥಿಕ ಅಭಿವೃದ್ಧಿಗಾಗಿ ಪ್ರಾದೇಶಿಕ ಪಾಲುದಾರರೊಂದಿಗೆ ಸೇರಿ ಕನಿಷ್ಠ 300 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ನಿರ್ಣಾಯಕ ಯೋಜನೆಯನ್ನು ರೂಪಿಸಲು ಅಮೆರಿಕ ಒಪ್ಪಿಕೊಂಡಿದೆ. ಇದರ ಅನುಷ್ಠಾನದ ಕಾರ್ಯವಿಧಾನವನ್ನು 60 ದಿನಗಳ ಒಳಗೆ ಅಂತಿಮ ಒಪ್ಪಂದದ ಭಾಗವಾಗಿ ಅಂತಿಮಗೊಳಿಸಲಾಗುವುದು. ಇದಕ್ಕೆ ಅಗತ್ಯವಿರುವ ಎಲ್ಲಾ ಲೈಸೆನ್ಸ್, ವಿನಾಯಿತಿ ಮತ್ತು ಪರವಾನಗಿಗಳನ್ನು ಅಮೆರಿಕದ ಟ್ರೆಷರಿ ನೀಡಲಿದೆ.
7. ಎಲ್ಲಾ ನಿರ್ಬಂಧಗಳ ರದ್ದು
ಅಂತಿಮ ಒಪ್ಪಂದದಲ್ಲಿ ನಿಗದಿಪಡಿಸಿದ ವೇಳಾಪಟ್ಟಿಯ ಪ್ರಕಾರ ಇರಾನ್ ಮೇಲಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ನಿರ್ಣಯಗಳು, ಐಎಇಎ (IAEA) ಬೋರ್ಡ್ ಆಫ್ ಗವರ್ನರ್ಸ್ ನಿರ್ಣಯಗಳು ಮತ್ತು ಅಮೆರಿಕದ ಎಲ್ಲಾ ಏಕಪಕ್ಷೀಯ (ಪ್ರಾಥಮಿಕ ಮತ್ತು ದ್ವಿತೀಯಕ) ನಿರ್ಬಂಧಗಳನ್ನು ರದ್ದುಗೊಳಿಸಲು ಅಮೆರಿಕ ಒಪ್ಪಿಕೊಂಡಿದೆ. ಉಭಯ ದೇಶಗಳು ಈ ನಿರ್ಬಂಧಗಳ ರದ್ದತಿ ವಿಷಯದ ಮಹತ್ವವನ್ನು ಒಪ್ಪಿಕೊಂಡಿದ್ದು, ಮಾತುಕತೆಯಲ್ಲಿ ತಕ್ಷಣವೇ ಇದನ್ನು ಬಗೆಹರಿಸಲು ಇಚ್ಛಿಸಿವೆ.
8. ಪರಮಾಣು ಅಸ್ತ್ರ ತಡೆ ಮತ್ತು ಯುರೇನಿಯಂ ನಿಯಂತ್ರಣ
ಯಾವುದೇ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುವುದಿಲ್ಲ ಅಥವಾ ಪಡೆಯುವುದಿಲ್ಲ ಎಂದು ಇರಾನ್ ಪುನರುಚ್ಚರಿಸಿದೆ. ಇರಾನ್ ಬಳಿ ಇರುವ ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನುಗಳನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆಯ (IAEA) ಮೇಲ್ವಿಚಾರಣೆಯಲ್ಲಿ ಸ್ಥಳದಲ್ಲೇ ತಗ್ಗಿಸುವ (ಡೌನ್‌ಬ್ಲೆಂಡಿಂಗ್) ಕನಿಷ್ಠ ವಿಧಾನದ ಮೂಲಕ ವಿಲೇವಾರಿ ಮಾಡಲು ಉಭಯ ದೇಶಗಳು ಒಪ್ಪಿಕೊಂಡಿವೆ. ಇರಾನ್‌ನ ಪರಮಾಣು ಅಗತ್ಯತೆಗಳಿಗೆ ಸಂಬಂಧಿಸಿದಂತೆ ಅಂತಿಮ ಒಪ್ಪಂದದಲ್ಲಿ ತೃಪ್ತಿಕರ ಚೌಕಟ್ಟಿನ ಆಧಾರದ ಮೇಲೆ ಚರ್ಚಿಸಲು ಉಭಯ ಪಕ್ಷಗಳು ಒಪ್ಪಿಕೊಂಡಿವೆ.
9. ಸದ್ಯದ ಸ್ಥಿತಿ ಕಾಯ್ದುಕೊಳ್ಳುವುದು
ಅಂತಿಮ ಒಪ್ಪಂದವಾಗುವವರೆಗೆ ಪ್ರಸ್ತುತ ಇರುವ ಸ್ಥಿತಿಯನ್ನೇ ಕಾಯ್ದುಕೊಳ್ಳಲು ಉಭಯ ದೇಶಗಳು ಒಪ್ಪಿವೆ. ಇರಾನ್ ತನ್ನ ಪರಮಾಣು ಕಾರ್ಯಕ್ರಮದ ಸದ್ಯದ ಸ್ಥಿತಿಯನ್ನು ಹಾಗೇ ಇಡಲಿದೆ ಮತ್ತು ಅಮೆರಿಕ ಯಾವುದೇ ಹೊಸ ನಿರ್ಬಂಧಗಳನ್ನು ಹೇರುವುದಿಲ್ಲ ಹಾಗೂ ಪ್ರದೇಶದಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವುದಿಲ್ಲ.
10. ತೈಲ ರಫ್ತು ವಿನಾಯಿತಿಗಳು
ಒಪ್ಪಂದಕ್ಕೆ ಸಹಿ ಹಾಕಿದ ತಕ್ಷಣ ಮತ್ತು ನಿರ್ಬಂಧಗಳು ಸಂಪೂರ್ಣವಾಗಿ ರದ್ದಾಗುವವರೆಗೆ, ಇರಾನ್‌ನ ಕಚ್ಚಾ ತೈಲ, ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಮತ್ತು ಬ್ಯಾಂಕಿಂಗ್ ವ್ಯವಹಾರಗಳು, ವಿಮೆ, ಸಾರಿಗೆ ಸೇರಿದಂತೆ ಎಲ್ಲಾ ಸಂಬಂಧಿತ ಸೇವೆಗಳಿಗೆ ಅಮೆರಿಕದ ಖಜಾನೆ ಇಲಾಖೆಯು (US Department of Treasury) ವಿನಾಯಿತಿಗಳನ್ನು (Waivers) ನೀಡಲಿದೆ.
11. ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಬಿಡುಗಡೆ
ಈ ಒಪ್ಪಂದ ಜಾರಿಗೆ ಬಂದ ತಕ್ಷಣ, ಅಮೆರಿಕವು ಇರಾನ್‌ನ ಫ್ರೀಜ್ ಆಗಿರುವ ಅಥವಾ ನಿರ್ಬಂಧಕ್ಕೊಳಗಾಗಿರುವ ಎಲ್ಲಾ ಹಣ ಮತ್ತು ಆಸ್ತಿಗಳನ್ನು ಸಂಪೂರ್ಣವಾಗಿ ಬಳಸಲು ಮುಕ್ತಗೊಳಿಸಲಿದೆ. ಈ ಹಣವನ್ನು ಬಿಡುಗಡೆ ಮಾಡುವ ಪ್ರಕ್ರಿಯೆಯನ್ನು ಮಾತುಕತೆಯ ಮೂಲಕ ನಿರ್ಧರಿಸಲಾಗುವುದು. ಇರಾನ್‌ನ ಸೆಂಟ್ರಲ್ ಬ್ಯಾಂಕ್ ಸೂಚಿಸುವ ಯಾವುದೇ ಫಲಾನುಭವಿಗೆ ಪಾವತಿ ಮಾಡಲು ಈ ಹಣವನ್ನು ಬಳಸಬಹುದಾಗಿದ್ದು, ಅಮೆರಿಕ ಇದಕ್ಕೆ ಅಗತ್ಯವಿರುವ ಎಲ್ಲಾ ಪರವಾನಗಿಗಳನ್ನು ನೀಡಲಿದೆ.
12. ಉಸ್ತುವಾರಿ ಕಾರ್ಯವಿಧಾನ
ಈ ತಿಳುವಳಿಕೆ ಒಪ್ಪಂದದ (MoU) ಯಶಸ್ವಿ ಅನುಷ್ಠಾನ ಮತ್ತು ಭವಿಷ್ಯದ ಅಂತಿಮ ಒಪ್ಪಂದದ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಲು ಒಂದು ವಿಶೇಷ ಕಾರ್ಯನಿರ್ವಾಹಕ ಕಾರ್ಯವಿಧಾನವನ್ನು (Executive Mechanism) ಸ್ಥಾಪಿಸಲು ಉಭಯ ದೇಶಗಳು ಒಪ್ಪಿಕೊಂಡಿವೆ.
13. ಹಂತ ಹಂತದ ಮಾತುಕತೆ
ಈ ಒಪ್ಪಂದದ 1, 4, 5, 10 ಮತ್ತು 11 ರ ಪ್ಯಾರಾಗ್ರಾಫ್‌ಗಳ ಅನುಷ್ಠಾನದ ಆರಂಭಕ್ಕೆ ಒಳಪಟ್ಟು, ಅಮೆರಿಕ ಮತ್ತು ಇರಾನ್ ದೇಶಗಳು ಉಳಿದ ಪ್ಯಾರಾಗ್ರಾಫ್‌ಗಳ ಬಗ್ಗೆ ಮಾತ್ರ ಪ್ರತ್ಯೇಕವಾಗಿ ಅಂತಿಮ ಒಪ್ಪಂದಕ್ಕಾಗಿ ಮಾತುಕತೆಗಳನ್ನು ಪ್ರಾರಂಭಿಸಲಿವೆ.
14. ವಿಶ್ವಸಂಸ್ಥೆಯ ಬೆಂಬಲ
ಅಂತಿಮವಾಗಿ ಮೂಡಿಬರುವ ಶಾಂತಿ ಒಪ್ಪಂದವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ (UNSC) ಕಡ್ಡಾಯ ನಿರ್ಣಯದ ಮೂಲಕ ಅನುಮೋದಿಸುತ್ತದೆ(ಏಜೆನ್ಸೀಸ್​).