Iran-US Conflict 
ವಿದೇಶ

ಅಮೆರಿಕದೊಂದಿಗೆ ನೇರ ಮಾತುಕತೆ ಇಲ್ಲ, ಪಾಕಿಸ್ತಾನಕ್ಕೆ ಅಭಿಪ್ರಾಯ ತಿಳಿಸ್ತೇವೆ ಎಂದ ಇರಾನ್​​!..Iran-US Conflict

ಪ್ರಮುಖ ಮುಖ್ಯಾಂಶಗಳು

  • ಪಾಕಿಸ್ತಾನಕ್ಕೆ ಬಂದಿಳಿದ ಅರಘ್ಚಿ ನೇತೃತ್ವದಲ್ಲಿ ಇರಾನ್​​ನ ನಿಯೋಗ
  • ಅಮೆರಿಕದೊಂದಿಗೆ ನೇರ ಮಾತುಕತೆಯನ್ನು ಇರಾನ್ ತಿರಸ್ಕಾರ
  • ಪಾಕಿಸ್ತಾನದ ಮೂಲಕವೇ ತನ್ನ ವಾಷಿಂಗ್ಟನ್‌ಗೆ ನಿಲುವು ತಲುಪಿಸುವ ಇರಾನ್
ಅಮೆರಿಕ ಮತ್ತು ಇರಾನ್​ ನಡುವೆಯ ಉದ್ವಿಗ್ನತೆಯು ತಣ್ಣಗಾಗುವ ಲಕ್ಷಣವೇ ಕಾಣುತ್ತಿಲ್ಲ. ಶಾಂತಿ ಮಾತುಕತೆ ನಡೆಯುತ್ತಿದ್ದರೂ ಸಹ ವಿಫಲವಾಗುತ್ತಿದೆ. ಈ ಮಧ್ಯೆ  ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಶುಕ್ರವಾರ ಉನ್ನತ ಮಟ್ಟದ ನಿಯೋಗದೊಂದಿಗೆ ಪಾಕಿಸ್ತಾನಕ್ಕೆ ಕಾಲಿಟ್ಟಿದ್ದಾರೆ. ಜೊತೆಗೆ ಇರಾನ್ ಸರ್ಕಾರದ ವಕ್ತಾರ ಇಸ್ಮಾಯಿಲ್ ಬುಕಾಯ್ ನಿಯೋಗದಲ್ಲಿ ಇದ್ದಾರೆ. 
ಅಮೆರಿಕ ಮತ್ತು ಇರಾನ್​ ಸಂಘರ್ಷದ ನಡುವಿನ ಶಮನಕ್ಕೆ  ಪಾಕಿಸ್ತಾನ ಪ್ರಮುಖ ಮಧ್ಯಸ್ಥಿಕೆದಾರನಾಗಿ ಹೊರಹೊಮ್ಮಿದೆ. ಶುಕ್ರವಾರ ಅಬ್ಬಾಸ್​ ಅರಾಘ್ಚಿಯನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಇಶಾಕ್​ ದಾರ್​ ಮತ್ತು ಫೀಲ್ಡ್ ಮಾರ್ಷಲ್ ಮುನೀರ್ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಬರ ಮಾಡಿಕೊಂಡರು. 
ಪ್ರಾದೇಶಿಕವಾಗಿ ಶಾಂತಿ ಸ್ಥಾಪಿಸಲು ಯತ್ನ
ವಕ್ತಾರ ಇಸ್ಮಾಯಿಲ್ ಬಕಾಯ್  ಎಕ್ಸ್​ನಲ್ಲಿ ಪೋಸ್ಟ್​ನಲ್ಲಿ ಹೀಗಿದೆ, ಅಮೆರಿಕ ಇರಾನ್​ ಮೇಲೆ ಹೇರಿರುವ ಆಕ್ರಮಣಕಾರಿ ಯುದ್ಧವನ್ನು ಕೊನೆಗೊಳಿಸಲು. ಪ್ರಾದೇಶಿಕವಾಗಿ ಶಾಂತಿ ಮರುಸ್ಥಾಪಿಸಲು ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಯತ್ನಗಳಿಗೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ  ಪಾಕ್​ನ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಇರಾನ್​ ಮತ್ತು ಅಮೆರಿಕದ ನಡುವೆ ಯಾವುದೇ ಸಂಧಾನದ ಮಾತುಕತೆಯ ಸಭೆ ನಿಗದಿಯಾಗಿಲ್ಲ. ಆದರೆ,ನಮ್ಮ ಅಭಿಪ್ರಾಯಗಳನ್ನು ಪಾಕಿಸ್ತಾನಕ್ಕೆ ಮುಟ್ಟಿಸಲಿದ್ದೇವೆ ಎಂದು ಇರಾನ್ ಹೇಳಿದೆ. 

ಟ್ರಂಪ್​ ಹೀಗಂದ್ರು

ಇರಾನ್​​ ಒಂದು ಪ್ರಸ್ತಾಪವನ್ನು ಅಮೆರಿಕಕ್ಕೆ ನೀಡುತ್ತಿದ್ದೆ ಅದರ ಪರಿಶೀಲನೆಯನ್ನು  ಮಾಡಬೇಕಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದರು. ಏನೇ ಮಾತುಕತೆ ಒಪ್ಪಂದವಾಗಬೇಕಾದರೂ ಇರಾನ್​ ತನ್ನ ಯುರೇನಿಯಂ ಪುಷ್ಟೀಕರಣವನ್ನು ಕೈಬಿಡಬೇಕು. ಹೊರ್ಮುಜ್ ಜಲಸಂಧಿಯಲ್ಲಿ ತೈಲ ಹಡಗುಗಳ ಮುಕ್ತ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬ ಷರತ್ತನ್ನು ಈ ಮಧ್ಯೆ ಟ್ರಂಪ್ ವಿಧಿಸಿದ್ದಾರೆ. 

ಹೊರ್ಮುಜ್​ನಲ್ಲಿ ಸಂಚಾರ ಸ್ಥಗಿತ

ಕಳೆದ ಎಂಟು ವಾರಗಳಿಂದ ಹೊರ್ಮುಜ್ ಜಲಸಂಧಿಯಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಸಂಘರ್ಷಕ್ಕೆ ಮೊದಲು ದಿನಕ್ಕೆ ಸುಮಾರು 130 ಹಡಗುಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ ಈಗ ಕೇವಲ 5 ಹಡಗುಗಳು ಮಾತ್ರ ಸಂಚರಿಸುತ್ತಿವೆ. ಇರಾನ್ ಮೇಲೆ ಅಮೆರಿಕ ವಿಧಿಸಿರುವ ಹಡಗು ಸಂಚಾರ ದಿಗ್ಬಂಧನವನ್ನು ಹಿಂಪಡೆಯುವವರೆಗೆ ತಾವು ಜಲಸಂಧಿಯನ್ನು ಮುಕ್ತಗೊಳಿಸುವುದಿಲ್ಲ ಎಂದು ಇರಾನ್ ಪಟ್ಟು ಹಿಡಿದಿದೆ.
ಅಬ್ಬಾಸ್ ಅರಘ್ಚಿ ಅವರು ಪಾಕಿಸ್ತಾನದ ನಂತರ ಮಸ್ಕತ್ ಮತ್ತು ಮಾಸ್ಕೋಗೆ ಭೇಟಿ ನೀಡಲಿದ್ದು, ರಾಜತಾಂತ್ರಿಕ ಪ್ರಯತ್ನಗಳನ್ನು ಚುರುಕುಗೊಳಿಸಲಿದ್ದಾರೆ. ಅಮೆರಿಕದ ದಿಗ್ಬಂಧನ ಮತ್ತು ಇರಾನ್‌ನ ಪ್ರಸ್ತಾಪಗಳ ನಡುವೆ ಒಂದು ಶಾಶ್ವತ ಒಪ್ಪಂದಕ್ಕೆ ಬರಲು ಎರಡೂ ಕಡೆಯವರು ಪ್ರಯತ್ನಿಸುತ್ತಿದ್ದಾರೆ, (ಏಜೆನ್ಸೀಸ್).