ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್
- ವೆನೆಜುವೆಲಾದ ಮೇಲೆ ಅಮೆರಿಕ ಸೇನೆಯಿಂದ ಅಚ್ಚರಿಯ ದಾಳಿ
- ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ, ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ ಬಂಧನ
- ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಬೆಂಬಲದೊಂದಿಗೆ ಅಮೆರಿಕ ಸೇನೆ ಕಾರ್ಯಾಚರಣೆ
ಕ್ಯಾರಾಕಸ್: ನಿನ್ನೆ ರಾತ್ರಿ ಅಮೆರಿಕ ಯೋಧರು ನಡೆಸಿದ ಅಚ್ಚರಿಯ ದಾಳಿಯ ವೇಳೆ ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ( Nicolas Maduro ) ಮತ್ತು ಪ್ರಥಮ ಮಹಿಳೆ ಸಿಲಿಯಾ ಫ್ಲೋರ್ಸ್ ಅವರನ್ನು ಬೆಡ್ರೂಮ್ನಿಂದಲೇ ಎಳೆದೊಯ್ದಿದ್ದಾರೆ ಎಂದು ಸಿಎನ್ಎನ್ ಮಾಧ್ಯಮ ವರದಿ ಮಾಡಿದೆ.
ಮಡುರೊ ಮತ್ತು ಸಿಲಿಯಾ, ವೆನೆಜುವೆಲಾದ ರಾಜಧಾನಿ ಕ್ಯಾರಾಕಸ್ನಲ್ಲಿರುವ ಹೆಚ್ಚಿನ ಭದ್ರತೆಯ ಫೋರ್ಟ್ ಟಿಯುನಾ ಮಿಲಿಟರಿ ಕಾಂಪೌಂಡ್ ಹೊಂದಿರುವ ತಮ್ಮ ಮನೆಯಲ್ಲಿ ನಿದ್ರೆಗೆ ಜಾರಿದ್ದರು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಯುಎಸ್ ಸೇನಾ ಪಡೆ, ಬೆಡ್ರೂಮ್ನಿಂದಲೇ ಅವರಿಬ್ಬರನ್ನು ಬಲವಂತವಾಗಿ ಎಳೆದೊಯ್ದಿದೆ ಎಂದು ತಿಳಿದುಬಂದಿದೆ.
ಅಂದಹಾಗೆ, ಈ ಕಾರ್ಯಾಚರಣೆಯನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್ಬಿಐ) ಬೆಂಬಲದೊಂದಿಗೆ ಅಮೆರಿಕ ಸೇನೆಯ ಡೆಲ್ಟಾ ಪಡೆ ನಡೆಸಿತು. ಸುಮಾರು 30 ನಿಮಿಷಗಳ ಕಾಲ ಈ ಕಾರ್ಯಾಚರಣೆ ನಡೆಯಿತು. ಈ ವೇಳೆ ನಮ್ಮ ಯಾವೊಬ್ಬ ಯೋಧನು ಕೂಡ ಮೃತಪಟ್ಟಿಲ್ಲ ಎಂದು ಅಮೆರಿಕ ತಿಳಿಸಿದೆ.
ಈ ಕಾರ್ಯಾಚರಣೆಯ ಬಗ್ಗೆ ಮಾತನಾಡಿರುವ ಟ್ರಂಪ್, ಮಡೊರೊನನ್ನು ಒಂದು ಕೋಟೆ ಎಂದು ಬಣ್ಣಿಸಿದ್ದರಿಂದ ಆತನನ್ನು ಆ ಕೋಟೆಯಿಂದಲೇ ಹೊರತೆಗೆಯಲಾಗಿದೆ. ಆತ ಒಂದು ಕೋಟೆಯಲ್ಲಿದ್ದನು ಎಂದು ಟ್ರಂಪ್ ಗರ್ವದ ಮಾತಗಳನ್ನಾಡಿದ್ದಾರೆ. ಅಲ್ಲದೆ, ನಿಮಗೆ ಗೊತ್ತಾ? ನಮ್ಮಲ್ಲಿ ಯಾರಿಗೂ ಏನೂ ಆಗಲಿಲ್ಲ ಎಂಬುದೇ ಒಂದು ಅದ್ಭುತ. ಈ ದಾಳಿಯಿಂದ ಒಂದಿಬ್ಬರು ಗಾಯಗೊಂಡರು ಆದರೆ, ಅವರು ವಾಪಸ್ ಬಂದಿದ್ದಾರೆ ಎಂದು ಫಾಕ್ಸ್ ನ್ಯೂಸ್ ಜತೆಗಿನ ಟೆಲಿಫೋನ್ ಸಂಭಾಷಣೆ ವೇಳೆ ಟ್ರಂಪ್ ತಿಳಿಸಿದ್ದಾರೆ.
ಶನಿವಾರ ಮುಂಜಾನೆ ಅಮೆರಿಕದ ಸೇನಾ ಪಡೆ, ವೆನೆಜುವೆಲಾದ ಮೇಲೆ ಅಚ್ಚರಿಯ ದಾಳಿ ನಡೆಸಿ, ಮಡುರೊ ಮತ್ತು ಫ್ಲೋರ್ಸ್ ಅವರನ್ನು ಬಂಧಿಸಿ ವೆನೆಜುವೆಲಾದಿಂದ ಅಮೆರಿಕಕ್ಕೆ ಎಳೆದುತಂದಿದೆ. ಈ ಜೋಡಿಯನ್ನು ಅಮೆರಿಕದಲ್ಲಿ ಮಾದಕವಸ್ತು-ಭಯೋತ್ಪಾದನಾ ಆರೋಪದ ಮೇಲೆ ವಿಚಾರಣೆಗೆ ಒಳಪಡಿಸಲಾಗುತ್ತದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಕೇವಲ 30 ನಿಮಿಷಗಳ ಕಾಲ ನಡೆದ ಈ ದಾಳಿಯ ಸಮಯದಲ್ಲಿ ಕ್ಯಾರಕಾಸ್ ನಿವಾಸಿಗಳು ಹಲವಾರು ಸ್ಫೋಟಗಳನ್ನು ವರದಿ ಮಾಡಿದ್ದಾರೆ. ಕನಿಷ್ಠ ಏಳು ಸ್ಫೋಟಗಳು ನಡೆದಿದ್ದು, ಮಿಲಿಟರಿ ಸ್ಥಾಪನೆಗಳನ್ನು ಧ್ವಂಸವಾಗಿವೆ ಎಂದು ವರದಿಯಾಗಿದೆ. ಕೆಲವು ವೆನೆಜುವೆಲಾದ ನಾಗರಿಕರು ಮತ್ತು ಮಿಲಿಟರಿ ಸದಸ್ಯರು ಮೃತಪಟ್ಟಿದ್ದಾರೆ ಎಂದು ಉಪಾಧ್ಯಕ್ಷ ಡೆಲ್ಸಿ ರೊಡ್ರಿಗಸ್ ನಿಖರವಾದ ಸಂಖ್ಯೆಯನ್ನು ತಿಳಿಸದೇ ಹೇಳಿಕೆ ನೀಡಿದ್ದಾರೆ.
ಇನ್ನು ಅಧ್ಯಕ್ಷನ ಬಂಧನದ ಬಳಿಕ ವೆನೆಜುವೆಲಾ ಆಡಳಿತವನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಅಮೆರಿಕವೇ ಉತ್ತರ ನೀಡಿದೆ. ಮುಂದಿನ ಅಧ್ಯಕ್ಷರ ಆಯ್ಕೆಯವರೆಗೆ ಮಧ್ಯಂತರ ಅವಧಿಗೆ ವೆನೆಜುವೆಲಾ ಆಳುವ ಜವಾಬ್ದಾರಿಯನ್ನು ನಾವೇ ನೋಡಿಕೊಳ್ಳುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಬಂಧನ ಏಕೆ?
ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರು ಶ್ವೇತಭವನದಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ 2025ರ ಆಗಸ್ಟ್ 09ರಂದು ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಸುಳಿವು ನೀಡಿದವರಿಗೆ 437 ಕೋಟಿ ರೂ. ನೀಡುವುದಾಗಿ ಬಂಪರ್ ಆಫರ್ ಘೋಷಿಸಿದ್ದರು. ಇದಕ್ಕೆ ಕಾರಣ ನೀಡಿರುವ ಅಮೆರಿಕ ಅಟಾರ್ನಿ ಜನರಲ್ ಪಂಬೊಂಡಿ, ನಿಕೋಲಸ್ ಮಡುರೊ ಎಂಬ ವ್ಯಕ್ತಿ ಟ್ರೆನ್ ಡಿ ಅರಾಗುವಾ, ಸಿನಾಲೋವಾ ಮತ್ತು ಕಾರ್ಟೆಲ್ ಆಫ್ ದಿ ಸನ್ಸ್ (ಕಾರ್ಟೆಲ್ ಡಿ ಸೊಲೈಲ್) ನಂತಹ ಉಗ್ರ ಸಂಘಟನೆಗಳನ್ನು ಬಳಸಿಕೊಂಡು ಅಮೆರಿಕದಲ್ಲಿ ಘೋರ ಹಿಂಸಾಚಾರವನ್ನು ನಡೆಸುತ್ತಿದ್ದ. ಆತ ವಿಶ್ವದ ಅತಿದೊಡ್ಡ ಮಾದಕವಸ್ತು ಕಳ್ಳಸಾಗಣೆದಾರರಲ್ಲಿ ಒಬ್ಬ. ಅಮೆರಿಕಕ್ಕೆ ಫೆಂಟನಿಲ್ ಮತ್ತು ಇತರ ಮಾದಕ ದ್ರವ್ಯಗಳನ್ನು ಬೆರೆಸಿದ ಕೊಕೇನ್ ಅನ್ನು ಪೂರೈಸುವ ಮೂಲಕ ಡ್ರಗ್ ಜಾಲಗಳಲ್ಲಿ ತೊಡಗಿದ್ದಾನೆ. ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಮಡುರೊ ಯಾವುದೇ ಸಂದರ್ಭದಲ್ಲೂ ಟ್ರಂಪ್ ಆಡಳಿತದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಡುರೊ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದರು. ಕಡೆಗೂ, ಮಡುರೊ ಅಮೆರಿಕ ಕೈಗೆ ಸಿಕ್ಕಿಬಿದ್ದಿದ್ದಾರೆ.
ಅಮೆರಿಕ ಮತ್ತು ವೆನೆಜುವೆಲಾ ನಡುವಿನ ಸಂಘರ್ಷ ಹೊಸದೇನಲ್ಲ. 2020ರಿಂದ, ಮಡುರೊ ಮೇಲೆ ಮಾದಕ ದ್ರವ್ಯ, ಭಯೋತ್ಪಾದನೆ ಮತ್ತು ಕೊಕೇನ್ ಕಳ್ಳಸಾಗಣೆ ಆರೋಪಗಳ ಸರಮಾಲೆಯೇ ಇದೆ. ಅವರ ಮೇಲೆ ಯುನೈಟೆಡ್ ಸ್ಟೇಟ್ಸ್ ಆರ್ಥಿಕ ನಿರ್ಬಂಧಗಳನ್ನು ವಿಧಿಸಿತು. ಇದು ರಾಜತಾಂತ್ರಿಕ ಒತ್ತಡವನ್ನೂ ತಂದಿತು. ಆದಾಗ್ಯೂ, 2024ರಲ್ಲಿ, ಮಡುರೊರನ್ನು ವೆನೆಜುವೆಲಾದ ಅಧ್ಯಕ್ಷರಾಗಿ ಮರು ಆಯ್ಕೆ ಮಾಡಲಾಯಿತು. ಇದನ್ನು ಖಂಡಿಸಿರುವ ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಅನೇಕ ಲ್ಯಾಟಿನ್ ಅಮೇರಿಕನ್ ದೇಶಗಳು ಚುನಾವಣೆಯನ್ನು ಅಕ್ರಮ ಎಂದು ಬಣ್ಣಿಸಿತು,(ಏಜೆನ್ಸೀಸ್).