ನ್ಯೂಜಿಲೆಂಡ್ ಮತ್ತು ಭಾರತ ಪ್ರಧಾನಿ
- ಭಾರತ-ನ್ಯೂಜಿಲೆಂಡ್ ಮುಕ್ತ ವ್ಯಾಪಾರ ಒಪ್ಪಂದ
- ಎರಡೂ ದೇಶಗಳ ಪ್ರಧಾನಿಗಳ ನಡುವಿನ ದೂರವಾಣಿ ಸಂಭಾಷಣೆಯ ನಂತರವೇ ಒಪ್ಪಂದ
- ಭಾರತ ಜತೆಗಿನ ಒಪ್ಪಂದಕ್ಕೆ ನ್ಯೂಜಿಲೆಂಡ್ ಸಚಿವ ಕಿಡಿ
- ಇದೊಂದು 'ಕೆಟ್ಟ ಒಪ್ಪಂದ' ಎಂದ ವಿನ್ಸ್ಟನ್ ಪೀಟರ್ಸ್
ನವದೆಹಲಿ: ನ್ಯೂಜಿಲೆಂಡ್ ಜತೆಗಿನ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಭಾರತ ಸಹಿ ಹಾಕಿತು. ಸೋಮವಾರ (ಡಿ.22), ಪ್ರಧಾನಿ ನರೇಂದ್ರ ಮೋದಿ ಮತ್ತು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲಕ್ಸನ್ ದೂರವಾಣಿ ಮೂಲಕ ಮಾತುಕತೆ ನಡೆಸಿ, ನಂತರ ಜಂಟಿಯಾಗಿ ಎಫ್ಟಿಎ ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಘೋಷಿಸಿದರು. 9 ತಿಂಗಳ ಮಾತುಕತೆಯ ಬಳಿಕ ಈ ಒಪ್ಪಂದವನ್ನು ಈಗ ಫೈನಲ್ ಮಾಡಲಾಗಿದೆ.
ಈ ವರ್ಷದ ಮಾರ್ಚ್‌ನಲ್ಲಿ ನ್ಯೂಜಿಲೆಂಡ್ ಪ್ರಧಾನಿ ಲಕ್ಸನ್ ಭಾರತಕ್ಕೆ ಭೇಟಿ ನೀಡಿದರು. ಆ ಸಂದರ್ಭದಲ್ಲಿ ನಡೆದ ಮಾತುಕತೆಗಳಿವು. ಸೋಮವಾರ (ಡಿ.22) ನಡೆದ ಮಾತುಕತೆಯ ನಂತರ, ಎರಡು ರಾಷ್ಟ್ರಗಳ ನಾಯಕರು ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಘೋಷಿಸಿದರು. ಇದು ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಸುಧಾರಿಸಲು ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ಮೋದಿ ಹಾಗೂ ಲಕ್ಸನ್ ತಿಳಿಸಿದರು.
ಆದಾಗ್ಯೂ, ನ್ಯೂಜಿಲೆಂಡ್‌ನ ವಿದೇಶಾಂಗ ಸಚಿವ ವಿನ್‌ಸ್ಟನ್ ಪೀಟರ್ಸ್ ಮಾತ್ರ ಈ ಒಪ್ಪಂದವನ್ನು ಟೀಕಿಸಿದ್ದಾರೆ. "ನ್ಯೂಜಿಲೆಂಡ್‌ಗೆ ಇದೊಂದು ಕೆಟ್ಟ ಒಪ್ಪಂದ ಎಂದು ಕರೆದಿದ್ದಾರೆ. ಸರ್ಕಾರವು ಕಳಪೆ ಗುಣಮಟ್ಟದ ಒಪ್ಪಂದವನ್ನು ಮಾಡಿಕೊಂಡಿದೆ. ಡೀಲ್ನಲ್ಲಿ ಯಾವುದೇ ಸ್ವಾತಂತ್ರ್ಯ ಅಥವಾ ನ್ಯಾಯವಿಲ್ಲ. ಇದಕ್ಕೆ ಸಂಬಂಧಿಸಿದ ಮಸೂದೆ ಸಂಸತ್ತಿಗೆ ಬಂದಾಗ, ಅದನ್ನು ವಿರೋಧಿಸಿ ಮತ ಚಲಾಯಿಸುವುದಾಗಿ" ಕಿಡಿಕಾರಿದ್ದಾರೆ.
"ಒಪ್ಪಂದಕ್ಕೆ ಆತುರಪಡಬೇಡಿ ಎಂದು ತಮ್ಮ ಸಮ್ಮಿಶ್ರ ಪಾಲುದಾರರ ಬಳಿ ಪದೇ ಪದೇ ಮನವಿ ಮಾಡಿಕೊಂಡಿದ್ದೆ. ಮತ್ತು ಸಂಸತ್ತಿನ ಅನುಮೋದನೆಯಿಲ್ಲದೆ ಒಪ್ಪಂದಕ್ಕೆ ಸಹಿ ಹಾಕಬೇಡಿ ಎಂದು ಎಚ್ಚರಿಕೆ ಕೂಡ ನೀಡಿದ್ದೆ. ಆದರೆ, ನಮ್ಮ ಯಾವ ಮಾತನ್ನೂ ಇವರು ಪರಿಗಣಿಸಿಲ್ಲ" ಎಂದು ಪೀಟರ್ಸ್ ಬೇಸರ ಹೊರಹಾಕಿದ್ದಾರೆ,(ಏಜೆನ್ಸೀಸ್).