Earth : ಆರಂಭದಲ್ಲಿ ನಮ್ಮ ಭೂಮಿ ವಿಶಾಲವಾಗಿತ್ತು ಇಲ್ಲಿ ಯಾವುದೇ ರೀತಿಯಾದ ಜೀವ ಸಂಕುಲ ಇನ್ನು ಹುಟ್ಟಿರಲಿಲ್ಲ. ಹಾಗಾದರೆ, ಭೂಮಿಯ ಮೇಲೆ ಜೀವ ಸಂಕುಲ ಹೇಗೆ ಹುಟ್ಟಿತು? ಕೋಟ್ಯಂತರ ವರ್ಷಗಳ ಹಿಂದೆ ಜೀವಿಗಳೇ ಇಲ್ಲದ ಈ ಗ್ರಹದಲ್ಲಿ ಮೊದಲ ಜೀವಕೋಶಗಳ ನಿರ್ಮಾಣಕ್ಕೆ ಬೇಕಾದ ಮೂಲ ಪದಾರ್ಥಗಳು ಎಲ್ಲಿಂದ ಬಂದವು? ಈ ಪ್ರಶ್ನೆಗೆ ವಿಜ್ಞಾನಿಗಳು ಹಲವು ವರ್ಷಗಳಿಂದ ಉತ್ತರ ಹುಡುಕುತ್ತಿದ್ದಾರೆ. ಈ ನಡುವೆ, ಬಾಹ್ಯಾಕಾಶದಿಂದ ಬಂದ ಧೂಮಕೇತುಗಳೇ ಭೂಮಿಗೆ ಜೀವ ಸೃಷ್ಟಿಗೆ ಅಗತ್ಯವಾದ ರಾಸಾಯನಿಕ ಪದಾರ್ಥಗಳನ್ನು ಹೊತ್ತು ತಂದಿದ್ದವು ಎಂಬ ದೀರ್ಘಕಾಲದ ನಂಬಿಕೆಗೆ ಹೊಸ ಅಧ್ಯಯನವೊಂದು ಸವಾಲು ಹಾಕಿದೆ. ಅಷ್ಟೇ ಅಲ್ಲ, ಧೂಮಕೇತುಗಳ ಮೂಲಕ ಜೀವದ ಮೂಲ ಪದಾರ್ಥಗಳು ಭೂಮಿಗೆ ತಲುಪಿರುವ ಸಾಧ್ಯತೆ ಅತ್ಯಂತ ಕಡಿಮೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು ಒಂದು ಶತಮಾನದಿಂದ ವಿಜ್ಞಾನ ಲೋಕದಲ್ಲಿ ಧೂಮಕೇತುಗಳ ಬಗ್ಗೆ ವಿಶೇಷವಾದ ಸಿದ್ಧಾಂತವೊಂದು ಚರ್ಚೆಯಲ್ಲಿದೆ. ಹಿಮ, ಧೂಳು ಮತ್ತು ವಿವಿಧ ರಾಸಾಯನಿಕ ಸಂಯುಕ್ತಗಳಿಂದ ಕೂಡಿರುವ ಧೂಮಕೇತುಗಳು ಇಂಗಾಲ ಹಾಗೂ ಸಾರಜನಕದಂತಹ ಜೀವಕ್ಕೆ ಅಗತ್ಯವಾದ ಮೂಲಧಾತುಗಳನ್ನು ಹೊಂದಿರುತ್ತವೆ. ಆರಂಭಿಕ ಭೂಮಿಗೆ ಅಪ್ಪಳಿಸಿದ ಇಂತಹ ಬಾಹ್ಯಾಕಾಶ ಕಾಯಗಳು ಜೀವದ ಉಗಮಕ್ಕೆ ಬೇಕಾದ ರಾಸಾಯನಿಕ ಪದಾರ್ಥಗಳನ್ನು ಒದಗಿಸಿರಬಹುದು ಎಂಬುದು ಈ ಹಿಂದಿನ ಊಹೆಯಾಗಿತ್ತು. ಆದರೆ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಹೊಸ ಅಧ್ಯಯನ ಈ ಕಲ್ಪನೆಯನ್ನೇ ಪ್ರಶ್ನಿಸಿದೆ. ಧೂಮಕೇತುಗಳು ಹೊತ್ತು ತರುವ ಸೂಕ್ಷ್ಮ ಸಾವಯವ ಅಣುಗಳು ಭೂಮಿಗೆ ಅಪ್ಪಳಿಸುವ ಪ್ರಕ್ರಿಯೆಯಲ್ಲಿ ಸುರಕ್ಷಿತವಾಗಿ ಉಳಿಯುವುದು ಬಹುತೇಕ ಅಸಾಧ್ಯ ಎಂಬುದನ್ನು ಸಂಶೋಧಕರು ಕಂಪ್ಯೂಟರ್ ಮಾದರಿಗಳ ಮೂಲಕ ಪರಿಶೀಲಿಸಿದ್ದಾರೆ.
ಧೂಮಕೇತುಗಳು ಬಾಹ್ಯಾಕಾಶದಿಂದ ಭೂಮಿಯ ವಾತಾವರಣ ಪ್ರವೇಶಿಸುವಾಗ ಅತ್ಯಂತ ಹೆಚ್ಚಿನ ವೇಗವನ್ನು ಹೊಂದಿರುತ್ತವೆ. ಈ ಸಂದರ್ಭದಲ್ಲಿ ಉಂಟಾಗುವ ತೀವ್ರ ಉಷ್ಣತೆ ಮತ್ತು ಒತ್ತಡದಿಂದ ಅವುಗಳಲ್ಲಿರುವ ಸೂಕ್ಷ್ಮ ಸಾವಯವ ಅಣುಗಳು ನಾಶವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರಲ್ಲೂ ಧೂಮಕೇತುಗಳು ಭೂಮಿಗೆ ಅಪ್ಪಳಿಸುವ ಕೋನ ಮತ್ತು ವೇಗ ಪ್ರಮುಖ ಪಾತ್ರ ವಹಿಸುತ್ತವೆ.
ಸಂಶೋಧಕರು ವಿಶೇಷವಾಗಿ ಹೈಡ್ರೋಜನ್ ಸೈನೈಡ್ ಎಂಬ ರಾಸಾಯನಿಕ ಅಣುವಿನ ಮೇಲೆ ಗಮನಹರಿಸಿದ್ದಾರೆ. ಇದು ಜೀವದ ಉಗಮಕ್ಕೆ ಅಗತ್ಯವಾದ ಹಲವು ಮೂಲ ರಾಸಾಯನಿಕ ಸಂಯುಕ್ತಗಳ ನಿರ್ಮಾಣದಲ್ಲಿ ಪಾತ್ರ ವಹಿಸಬಲ್ಲದು. ಆದರೆ, ಧೂಮಕೇತುಗಳ ಮೂಲಕ ಈ ಅಣು ಭೂಮಿಯನ್ನು ತಲುಪಿದರೂ, ಜೀವದ ಉಗಮಕ್ಕೆ ಬೇಕಾದಷ್ಟು ಪ್ರಮಾಣದಲ್ಲಿ ಉಳಿಯುವುದು ಅತ್ಯಂತ ಅಪರೂಪ ಎಂದು ಅಧ್ಯಯನ ತಿಳಿಸಿದೆ.
ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಖಗೋಳಶಾಸ್ತ್ರ ಸಂಸ್ಥೆಯ ಪ್ರಮುಖ ಸಂಶೋಧಕ ಡಾ. ರಿಚರ್ಡ್ ಆನ್ಸ್ಲೋ ಅವರ ಪ್ರಕಾರ, ಧೂಮಕೇತುಗಳು ಜೀವದ ಉಗಮಕ್ಕೆ ಅಗತ್ಯವಾದ ಎಲ್ಲ ಪದಾರ್ಥಗಳನ್ನು ಭೂಮಿಗೆ ತಂದುಕೊಟ್ಟವು ಎಂಬುದು ಆಕರ್ಷಕ ಕಲ್ಪನೆಯಾದರೂ, ವಾಸ್ತವದಲ್ಲಿ ಅದು ಸಂಭವಿಸಿರುವ ಸಾಧ್ಯತೆ ತೀರಾ ಕಡಿಮೆ. ಧೂಮಕೇತು ಸರಿಯಾದ ವೇಗದಲ್ಲಿ, ಸೂಕ್ತ ಕೋನದಲ್ಲಿ ಭೂಮಿಗೆ ಅಪ್ಪಳಿಸಬೇಕು. ಅದರಲ್ಲಿರುವ ರಾಸಾಯನಿಕ ಅಣುಗಳು ನಾಶವಾಗದೆ ಉಳಿಯಬೇಕು. ನಂತರ ಅವು ಜೀವದ ಉಗಮಕ್ಕೆ ಅಗತ್ಯವಾದ ರಾಸಾಯನಿಕ ಪ್ರಕ್ರಿಯೆಗಳನ್ನು ಆರಂಭಿಸುವಷ್ಟು ಪ್ರಮಾಣದಲ್ಲಿ ಇರಬೇಕು. ಈ ಎಲ್ಲ ಸಂಗತಿಗಳು ಒಂದೇ ಸಮಯದಲ್ಲಿ ಸಂಭವಿಸುವುದು ಅತ್ಯಂತ ಅಪರೂಪ ಎಂದು ವಿವರಿಸಿದ್ದಾರೆ.
ಸಂಶೋಧಕರ ಪ್ರಕಾರ, ಧೂಮಕೇತುಗಳ ಮೂಲಕ ಜೀವದ ಮೂಲ ಪದಾರ್ಥಗಳು ಭೂಮಿಗೆ ತಲುಪಿದ್ದರೆ ಅದು ದಶಲಕ್ಷದಲ್ಲಿ ಒಂದು ಸಂಭವದಂತಿರಬಹುದು. ಅದನ್ನು ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲವಾದರೂ, ಇದನ್ನೇ ಜೀವದ ಉಗಮಕ್ಕೆ ಪ್ರಮುಖ ಕಾರಣವೆಂದು ಪರಿಗಣಿಸುವುದು ಕಷ್ಟ.
ಧೂಮಕೇತುಗಳ ಸಿದ್ಧಾಂತ ದುರ್ಬಲವಾಗುತ್ತಿರುವ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಈಗ ಭೂಮಿಯಲ್ಲಿಯೇ ನಡೆದ ರಾಸಾಯನಿಕ ಪ್ರಕ್ರಿಯೆಗಳು ಮತ್ತು ಕ್ಷುದ್ರಗ್ರಹಗಳ ಪಾತ್ರದ ಬಗ್ಗೆಯೂ ಗಮನ ಹರಿಸುತ್ತಿದ್ದಾರೆ. ಧೂಮಕೇತುಗಳಿಗೆ ಹೋಲಿಸಿದರೆ ಕ್ಷುದ್ರಗ್ರಹಗಳು ಭೂಮಿಗೆ ಹೆಚ್ಚು ಬಾರಿ ಅಪ್ಪಳಿಸಿದ್ದವು. ಹೀಗಾಗಿ ಅವುಗಳ ಮೂಲಕ ಕೆಲವು ಅಗತ್ಯ ರಾಸಾಯನಿಕ ಪದಾರ್ಥಗಳು ಭೂಮಿಗೆ ಬಂದಿರಬಹುದೆಂಬ ಸಾಧ್ಯತೆಯೂ ಇದೆ. ಇನ್ನೊಂದು ಸಾಧ್ಯತೆಯೆಂದರೆ, ಜೀವದ ಉಗಮಕ್ಕೆ ಅಗತ್ಯವಾದ ಮೂಲ ರಾಸಾಯನಿಕ ಸಂಯುಕ್ತಗಳು ಭೂಮಿಯಲ್ಲಿಯೇ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ರೂಪುಗೊಂಡಿರಬಹುದು. ಆದರೆ ಈ ಎರಡು ಸಾಧ್ಯತೆಗಳ ಪೈಕಿ ಯಾವುದು ನಿಜ ಎಂಬುದಕ್ಕೆ ಇನ್ನೂ ಅಂತಿಮ ಉತ್ತರ ಸಿಕ್ಕಿಲ್ಲ.
ಸಂಶೋಧಕರು ಭೂಮಿಯ ಜತೆಗೆ ಮಂಗಳ ಗ್ರಹದ ಮೇಲೂ ಧೂಮಕೇತುಗಳ ಅಪ್ಪಳಿಸುವಿಕೆಯ ಪರಿಣಾಮವನ್ನು ಅಧ್ಯಯನ ಮಾಡಿದ್ದಾರೆ. ಭೂಮಿಗಿಂತ ಕಡಿಮೆ ಗಾತ್ರ ಮತ್ತು ತೆಳುವಾದ ವಾತಾವರಣ ಹೊಂದಿರುವ ಮಂಗಳ ಗ್ರಹದಲ್ಲಿ ಧೂಮಕೇತುಗಳು ಮೇಲ್ಮೈ ತಲುಪುವ ಸಾಧ್ಯತೆ ತುಸು ಹೆಚ್ಚಿರಬಹುದು ಎಂದು ಅಧ್ಯಯನ ಸೂಚಿಸಿದೆ. ಆದರೆ ಅಲ್ಲಿಯೂ ಜೀವದ ಉಗಮಕ್ಕೆ ಅಗತ್ಯವಾದ ಪದಾರ್ಥಗಳು ತಲುಪಿವೆ ಎಂಬುದಕ್ಕೆ ಖಚಿತ ಪುರಾವೆಗಳಿಲ್ಲ.
ಈ ಅಧ್ಯಯನವು ಜೀವದ ಉಗಮದ ಬಗ್ಗೆ ಹಲವು ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಭೂಮಿಯಲ್ಲಿ ಜೀವ ಹುಟ್ಟಲು ಬಾಹ್ಯಾಕಾಶದ ಕೊಡುಗೆ ಎಷ್ಟಿತ್ತು? ಜೀವದ ಮೂಲ ಪದಾರ್ಥಗಳು ಭೂಮಿಯಲ್ಲಿಯೇ ರೂಪುಗೊಂಡಿದ್ದವೇ? ಅಥವಾ ಕ್ಷುದ್ರಗ್ರಹಗಳ ಮೂಲಕ ಬಂದಿದ್ದವೇ? ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ವಿಜ್ಞಾನಿಗಳು ಇನ್ನಷ್ಟು ಸಂಶೋಧನೆ ನಡೆಸಬೇಕಿದೆ. ಈ ಸಂಶೋಧನೆಯ ಫಲಿತಾಂಶಗಳು ಸೈಂಟಿಫಿಕ್ ರಿಪೋರ್ಟ್ಸ್ ಎಂಬ ಅಂತಾರಾಷ್ಟ್ರೀಯ ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟವಾಗಿವೆ, (ಏಜೆನ್ಸೀಸ್).