ಕತಾರ್ ಕರ್ನಾಟಕ ಸಂಘಕ್ಕೆ ನೂತನ ಸಾರಥ್ಯ: 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ  
ವಿದೇಶ

ಕತಾರ್ ಕರ್ನಾಟಕ ಸಂಘಕ್ಕೆ ನೂತನ ಸಾರಥ್ಯ: 15ನೇ ಅಧ್ಯಕ್ಷರಾಗಿ ಸುಬ್ರಮಣ್ಯ ಹೆಬ್ಬಾಗಿಲು ಅವಿರೋಧ ಆಯ್ಕೆ | Qatar Karnataka Sangha

ದೋಹಾ: ಕತಾರ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಸಕ್ರಿಯವಾಗಿರುವ ಪ್ರಮುಖ ಸಾಂಸ್ಕೃತಿಕ ಸಂಘಟನೆ 'ಕರ್ನಾಟಕ ಸಂಘ ಕತಾರ್'ನ(Qatar Karnataka Sangha) 2026 ರಿಂದ 2028ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಭಾರತೀಯ ಸಾಂಸ್ಕೃತಿಕ ಕೇಂದ್ರದ (ICC) ಸಭಾಂಗಣದಲ್ಲಿ ನಡೆದ ವಾರ್ಷಿಕ ಸರ್ವಸದಸ್ಯರ ಮಹಾಸಭೆಯಲ್ಲಿ, ಕನ್ನಡಿಗರ ಗೌರವಾನ್ವಿತ ನಾಯಕ ಶ್ರೀ ಸುಬ್ರಮಣ್ಯ ಹೆಬ್ಬಾಗಿಲು ಅವರು ಸಂಘದ 15ನೇ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ಉಡುಪಿ ಜಿಲ್ಲೆಯ ಬೈಂದೂರಿನವರಾದ ಸುಬ್ರಮಣ್ಯ ಹೆಬ್ಬಾಗಿಲು ಅವರು ಕತಾರ್‌ನ ಭಾರತೀಯ ಸಮುದಾಯದಲ್ಲಿ ದೀರ್ಘಕಾಲದಿಂದ ಸಾಂಸ್ಕೃತಿಕ ಹಾಗೂ ಮಾನವೀಯ ಸೇವಾ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದಾರೆ. ಈ ಹಿಂದೆ ಅವರು ಐಸಿಸಿ (ICC) ಉಪಾಧ್ಯಕ್ಷರಾಗಿ, ಭಾರತೀಯ ಕ್ರೀಡಾ ಕೇಂದ್ರದ (ISC) ಸಲಹಾ ಮಂಡಳಿ ಸದಸ್ಯರಾಗಿ ಮತ್ತು ಐಸಿಬಿಎಫ್ (ICBF) ಜಂಟಿ ಕಾರ್ಯದರ್ಶಿಯಾಗಿ ಯಶಸ್ವಿ ಸೇವೆ ಸಲ್ಲಿಸಿದ ಅಪಾರ ಅನುಭವ ಹೊಂದಿದ್ದಾರೆ.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷ ಸುಬ್ರಮಣ್ಯ ಹೆಬ್ಬಾಗಿಲು, ನನ್ನ ಮೇಲೆ ವಿಶ್ವಾಸವಿಟ್ಟು ಈ ಜವಾಬ್ದಾರಿ ನೀಡಿದ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳು. ನೂತನ ಸಮಿತಿಯು ಕತಾರ್‌ನಲ್ಲಿರುವ ಅನಿವಾಸಿ ಕನ್ನಡಿಗರ ಏಕತೆಯನ್ನು ಮತ್ತಷ್ಟು ಬಲಪಡಿಸಲಿದೆ. ಕರ್ನಾಟಕದ ಶ್ರೀಮಂತ ಕಲೆ, ಸಾಹಿತ್ಯ ಮತ್ತು ಪರಂಪರೆಯನ್ನು ಜಾಗತಿಕ ವೇದಿಕೆಯಲ್ಲಿ ಎತ್ತಿಹಿಡಿಯುವುದರ ಜೊತೆಗೆ ಸಾಮಾಜಿಕ ಸೇವೆಗೆ ನಮ್ಮ ಸಮಿತಿ ಮೊದಲ ಆದ್ಯತೆ ನೀಡಲಿದೆ ಎಂದು ಭರವಸೆ ನೀಡಿದರು.

ನೂತನ ಪದಾಧಿಕಾರಿಗಳ ಮಂಡಳಿ

ಸಂಘದ ಕಾರ್ಯಚಟುವಟಿಕೆಗಳನ್ನು ಮುನ್ನಡೆಸಲು ಪ್ರಭಾವಿ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಪ್ರಮುಖ ಪದಾಧಿಕಾರಿಗಳ ವಿವರ ಹೀಗಿದೆ:
ಉಪಾಧ್ಯಕ್ಷರು: ಶ್ರೀ ಅನಿಲ ಭಾಸಗಿ
ಪ್ರಧಾನ ಕಾರ್ಯದರ್ಶಿ: ಶ್ರೀ ಸುಜಿತ ಕುಮಾರ ಹೊಸದುರ್ಗ
ಖಜಾಂಚಿ: ಶ್ರೀ ಮಂಜೋತ ಸುರೇಶ
ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಭಾವನಾ ನವೀನ
ಕನ್ನಡ ಚಟುವಟಿಕೆಗಳ ಜಂಟಿ ಕಾರ್ಯದರ್ಶಿ: ಶ್ರೀ ಶಶಿಧರ ಹೆಚ್.ಬಿ.
ಕ್ರೀಡಾ ಕಾರ್ಯದರ್ಶಿ: ಶ್ರೀ ಎಲ್.ಜಿ. ಪಾಟೀಲ (ಜಂಟಿ ಕಾರ್ಯದರ್ಶಿ: ಶ್ರೀಮತಿ ದಾಕ್ಷಾಯಿಣಿ ಜಿ.)
ಮಾಧ್ಯಮ ಮತ್ತು ಪಿಆರ್ ಕಾರ್ಯದರ್ಶಿ: ಶ್ರೀ ಪ್ರಶಾಂತ ಹಿರೇಮಠ
ಇವೆಂಟ್ ಮತ್ತು ಲಾಜಿಸ್ಟಿಕ್ಸ್ ಕಾರ್ಯದರ್ಶಿ: ಶ್ರೀ ಪ್ರಭುರಾಜು ಜಗಲೂರು
ಮಹಿಳಾ ಮತ್ತು ಮಕ್ಕಳ ವಿಭಾಗ: ಶ್ರೀಮತಿ ಶುಭಾ ಆರ್. ರಾವ್
ಪರಿಸರ ಮತ್ತು ಸದಸ್ಯತ್ವ: ಶ್ರೀ ಗುರು ಪ್ರಸಾದ್ ಬಿ.ಕೆ.
ಸಲಹಾ ಸಮಿತಿ ಅಧ್ಯಕ್ಷರು: ಶ್ರೀ ಎಂ. ರವಿ ಶೆಟ್ಟಿ (ನಿಕಟಪೂರ್ವ ಅಧ್ಯಕ್ಷರು)

ಮಹತ್ವಾಕಾಂಕ್ಷಿ ಯೋಜನೆಗಳು

ನೂತನ ಸಮಿತಿಯು 2026-2028ರ ಅವಧಿಗೆ ಈಗಾಗಲೇ ವಿನೂತನ ಕಾರ್ಯಕ್ರಮಗಳ ಬ್ಲೂಪ್ರಿಂಟ್ ಸಿದ್ಧಪಡಿಸಿದೆ. ಮುಂಬರುವ ದಿನಗಳಲ್ಲಿ ಭವ್ಯ ಕನ್ನಡ ರಾಜ್ಯೋತ್ಸವ, ಸಂಭ್ರಮ 2026, ಸಾಂಸ್ಕೃತಿಕ ಸಮ್ಮೇಳನ, ಕವಿಗೋಷ್ಠಿ ಹಾಗೂ ಸಾಂಪ್ರದಾಯಿಕ ಹಬ್ಬಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ರಕ್ತದಾನ ಶಿಬಿರಗಳು, ಮಹಿಳೆಯರು ಮತ್ತು ಕಾರ್ಮಿಕರಿಗಾಗಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಗಳು ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಮಿತಿ ಉತ್ಸುಕವಾಗಿದೆ.
ಸಭೆಯಲ್ಲಿ ಉಪಸ್ಥಿತರಿದ್ದ ಸಲಹಾ ಸಮಿತಿಯ ಪ್ರಮುಖರಾದ ಅರುಣ್ ಕುಮಾರ್, ವಿ.ಎಸ್. ಮನ್ನಂಗಿ, ದೀಪಕ ಶೆಟ್ಟಿ, ಡಾ. ಸಂಜಯ ಕುದರಿ, ಮಹೇಶ ಗೌಡ ಹಾಗೂ ಐಸಿಸಿ ಮಾಜಿ ಅಧ್ಯಕ್ಷೆ ಮಿಲನ್ ಅರುಣ್ ನೂತನ ಸಾರಥಿಗಳಿಗೆ ಯಶಸ್ವಿ ಅವಧಿಯ ಶುಭ ಹಾರೈಸಿದರು. ನಿರ್ಗಮಿತ ಅಧ್ಯಕ್ಷ ರವಿ ಶೆಟ್ಟಿ ಅವರು ತಮ್ಮ ಅವಧಿಯ ಸಹಕಾರಕ್ಕೆ ಎಲ್ಲರಿಗೂ ಧನ್ಯವಾದ ತಿಳಿಸಿ, ಹೊಸ ತಂಡಕ್ಕೆ ಪೂರ್ಣ ಬೆಂಬಲ ಘೋಷಿಸಿದರು.