ಎಲಾನ್ ಮಸ್ಕ್ ನೇತೃತ್ವದಲ್ಲಿ ಸ್ಟಾರ್‌ಲಿಂಕ್ ಇಂಟರ್ನೆಟ್
- ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಲಭ್ಯತೆಗೆ ಮುಂದಾಗಿರುವ ಮಸ್ಕ್
- ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಇಂಟರ್‌ನೆಟ್ ಕೊರತೆ ನೀಗಿಸಲಿದೆ ಸ್ಟಾರ್‌ಲಿಂಕ್
- ಮಸ್ಕ್ ಹೇಳಿಕೆಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು
ನವದೆಹಲಿ: ಪ್ರಸ್ತುತ, ಭಾರತೀಯ ಟೆಲಿಕಾಂ ಕಂಪನಿಗಳಿಗೆ ಸೆಡ್ಡು ಹೊಡೆಯಲು ಎದುರುನೋಡುತ್ತಿರುವ ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್, ಇನ್ನೂ ಕೆಲವೇ ದಿನಗಳಲ್ಲಿ ಭಾರತಕ್ಕೆ ಅಧಿಕೃತವಾಗಿ ಲಗ್ಗೆಯಿಡಲು ಸಜ್ಜಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸೇವೆ ಲಭ್ಯತೆಗೆ ಮುಂದಾಗಿರುವ ಮಸ್ಕ್, ಭಾರತೀಯ ಇಂಟರ್ನೆಟ್ ಬಳಕೆದಾರರಿಗೆ ಈ ಸ್ಯಾಟಲೈಟ್ ಅಂತರ್ಜಾಲ ಸೇವೆಯನ್ನು ಸ್ಟಾರ್‌ಲಿಂಕ್ ಮೂಲಕ ನೀಡಲು ಸಜ್ಜಾಗಿದ್ದಾರೆ.
ಈ ಇಂಟರ್ನೆಟ್ ಸೇವೆಯನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದಿಂದ ಎಲ್ಲಾ ಅನುಮತಿಗಳನ್ನು ಪಡೆಯಬೇಕಿದ್ದು, ಅದರ ಕೆಲಸಗಳಲ್ಲಿ ಸದ್ಯ ಮಸ್ಕ್ ಸಖತ್ ಬಿಜಿಯಾಗಿದ್ದಾರೆ. ಬಹುತೇಕ ಎಲ್ಲವನ್ನೂ (ಸ್ಟಾರ್‌ಲಿಂಕ್ ಲಾಂಚ್ ದಿನಾಂಕ) ಅನುಮೋದಿಸಲಾಗಿದ್ದೇ ಆದರೂ, ಇನ್ನೂ ಕೆಲವು ಔಪಚಾರಿಕತೆಗಳು ಬಾಕಿ ಉಳಿದಿವೆ. ಹೀಗಿರುವಾಗಲೇ, ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಇಂಟರ್‌ನೆಟ್ ಕೊರತೆಯನ್ನು ನೀಗಿಸಲು ತಮ್ಮ ಸ್ಟಾರ್‌ಲಿಂಕ್ ಸೇವೆ ಸೂಕ್ತ ಪರಿಹಾರ ಎಂಬ ಮಸ್ಕ್ ಅವರ ಹೇಳಿಕೆಗೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿದೆ.
ದೇಶದಲ್ಲಿ ಕೈಗೆಟುಕುವ ದರದಲ್ಲಿ ಸಿಗುತ್ತಿರುವ 5ಜಿ ಸೇವೆ, ರಾಷ್ಟ್ರೀಯ ಭದ್ರತೆ ಹಾಗೂ ವಿದೇಶಿ ಸಂಸ್ಥೆಗಳ ಮೇಲಿನ ಆತಂಕವನ್ನು ಉಲ್ಲೇಖಿಸಿ ನೆಟ್ಟಿಗರು ಮಸ್ಕ್ ಹೇಳಿಕೆಯನ್ನು ತೀವ್ರವಾಗಿ ತಳ್ಳಿಹಾಕಿದ್ದಾರೆ. ಭಾರತದ ಡಿಜಿಟಲ್ ವ್ಯತ್ಯಾಸದ ಕುರಿತು ಎಕ್ಸ್ (ಹಿಂದಿನ ಟ್ವಿಟರ್) ಪೋಸ್ಟ್ ಒಂದಕ್ಕೆ ಪ್ರತಿಕ್ರಿಯಿಸಿದ್ದ ಮಸ್ಕ್, "ಇಂದಿಗೂ ಭಾರತೀಯ ಟೆಲಿಕಾಮ್ ಸರ್ವೀಸ್ಗಳು ತಲುಪದ ಗ್ರಾಮೀಣ ಭಾಗಗಳಿಗೆ ನಮ್ಮ ಸ್ಟಾರ್‌ಲಿಂಕ್ ನೆರವಾಗಲಿದೆ" ಎಂದು ಉತ್ತರಿಸಿದ್ದರು. ಇದನ್ನು ನೋಡಿದ ಭಾರತೀಯರು, ಸದ್ಯದ ಮಟ್ಟಿಗೆ ನಿಮ್ಮ ಸ್ಟಾರ್‌ಲಿಂಕ್ ಭಾರತಕ್ಕೆ ಬೇಕಾಗಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ.
ಮಸ್ಕ್ ಹಾಕಿರುವ ಪೋಸ್ಟ್ ಪ್ರಕಾರ, ಮೇ 2026ರ ವೇಳೆಗೆ ಭಾರತದ 11,256 ಹಳ್ಳಿಗಳಲ್ಲಿ ಇಂದಿಗೂ 4ಜಿ ಸಂಪರ್ಕ ತಲುಪಿಲ್ಲ. ಮಾರ್ಚ್ 2026ರ ಅಂಕಿ-ಅಂಶಗಳಂತೆ ದೇಶದಲ್ಲಿರುವ 1.093 ಬಿಲಿಯನ್ ಇಂಟರ್‌ನೆಟ್ ಬಳಕೆದಾರರಲ್ಲಿ ಗ್ರಾಮೀಣ ಭಾಗದ ಪ್ರಮಾಣ ಕೇವಲ 440.87 ಮಿಲಿಯನ್. ಗ್ರಾಮೀಣ ಪ್ರದೇಶಗಳ ಇಂಟರ್‌ನೆಟ್ ಸಾಂದ್ರತೆ ಶೇ.48.31 ರಷ್ಟಿದ್ದರೆ, ನಗರ ಪ್ರದೇಶದಲ್ಲಿ ಇದು ಶೇ.126.80 ರಷ್ಟಿದೆ ಎಂದು ತಿಳಿಸಿದರು.
ಈ ಅಂಕಿ ಅಂಶಗಳನ್ನು ಮುಂದಿಟ್ಟು ಹೇಳಿಕೆ ನೀಡಿರುವ ಎಲಾನ್ ಮಸ್ಕ್, ಬೆಟ್ಟ-ಗುಡ್ಡಗಾಡು ಪ್ರದೇಶಗಳಲ್ಲಿ ಹಾಗೂ ದ್ವೀಪ ಪ್ರದೇಶಗಳಿಗೆ ಸ್ಟಾರ್‌ಲಿಂಕ್ ತಕ್ಷಣದ ಪರಿಹಾರ ನೀಡಲಿದೆ. ಗ್ರಾಮೀಣ ಭಾಗದವರಲ್ಲಿ ಬದುಕುತ್ತಿರುವ ಜನರಿಗೂ ಅತ್ಯಂತ ವೇಗವಾಗಿ ಇಂಟರ್ನೆಟ್ ಸಿಗಲಿದೆ ಎಂದು ಪರೋಕ್ಷವಾಗಿ ತಮ್ಮ ಸ್ಟಾರ್ಲಿಂಕ್ಗೆ ಆದ್ಯತೆ ನೀಡುವಂತೆ ಕೇಳಿದ ಬೆನ್ನಲ್ಲೇ ನೆಟ್ಟಿಗರು ಟೀಕಿಸಿ, ಸದ್ಯದ ಮಟ್ಟಿಗೆ ಬೇಡವೆಂದು ತಿರಸ್ಕರಿಸಿದ್ದಾರೆ.
ನೆಟ್ಟಿಗರು ಹೇಳಿದ್ದೇನು?
ಭಾರತದಲ್ಲಿ ತಿಂಗಳಿಗೆ ಕೇವಲ 3.5ರಿಂದ 4 ಡಾಲರ್ (ಸುಮಾರು 300ರಿಂದ 350 ರೂ.) ದರದಲ್ಲಿ ಅನಿಯಮಿತ 5ಜಿ ಇಂಟರ್‌ನೆಟ್ ದೊರೆಯುತ್ತಿದೆ. ಹೀಗಿರುವಾಗ, ಹೆಚ್ಚಿನ ಬೆಲೆಗೆ ಸೇವೆ ಒದಗಿಸುವ ಸ್ಟಾರ್‌ಲಿಂಕ್ ಇಂಟರ್ನೆಟ್ ನಮಗೆ ಅಗತ್ಯವಿಲ್ಲ ಎಂದಿದ್ದಾರೆ. ನಿಮ್ಮದು ತಿಂಗಳ ಪ್ಲ್ಯಾನ್ 100 ಡಾಲರ್ (8,300) ರೂ.ಗಿಂತ ಹೆಚ್ಚಿರಲಿದ್ದು, ಇದು ಭಾರತೀಯ ಗ್ರಾಮೀಣ ಜನರಿಗೆ ಅಥವಾ ನಗರ ಪ್ರದೇಶದ ಜನರಿಗೆ ಅತ್ಯಂತ ದುಬಾರಿಯಾಗಲಿದೆ ಎಂದು ವಾದಿಸಿದ್ದಾರೆ.
ರಾಷ್ಟ್ರೀಯ ಭದ್ರತೆ ಮತ್ತು ವಿದೇಶಿ ಹಸ್ತಕ್ಷೇಪ
ಉಗ್ರರು, ನಕ್ಸಲರು ಹಾಗೂ ತೀವ್ರಗಾಮಿ ಸಂಘಟನೆಗಳು ಸ್ಟಾರ್‌ಲಿಂಕ್ ಟರ್ಮಿನಲ್‌ಗಳನ್ನು ದುರುಪಯೋಗಪಡಿಸಿಕೊಂಡು ದೇಶದ ಭದ್ರತೆಗೆ ಧಕ್ಕೆ ತರುವ ಸಾಧ್ಯತೆಗಳಿವೆ. ಜತೆಗೆ ಸಂಘರ್ಷದ ಸಮಯದಲ್ಲಿ ವಿದೇಶಿ ಕಂಪನಿಗಳ ನಿಯಂತ್ರಣದಲ್ಲಿರುವ ಉಪಗ್ರಹ ಸೇವೆಗಳು ಸೆಕ್ಯೂರಿಟಿಗೆ ಸವಾಲಾಗಿ ಪರಿಣಮಿಸಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).