ನೆತನ್ಯಾಹು ಒಬ್ಬ ಅತ್ಯಂತ ಹಠಮಾರಿ ಮನುಷ್ಯ, ಆತ ನಮಗೆ ಧನ್ಯವಾದ ಹೇಳಬೇಕು!: ಇರಾನ್ ಒಪ್ಪಂದದ ಬೆನ್ನಲ್ಲೇ ಇಸ್ರೇಲ್ ಪಿಎಂ ವಿರುದ್ಧ ಟ್ರಂಪ್ ಆಕ್ರೋಶ!  
ವಿದೇಶ

ನೆತನ್ಯಾಹು ಒಬ್ಬ ಅತ್ಯಂತ ಹಠಮಾರಿ ಮನುಷ್ಯ, ಆತ ನಮಗೆ ಧನ್ಯವಾದ ಹೇಳಬೇಕು!: ಇರಾನ್ ಒಪ್ಪಂದದ ಬೆನ್ನಲ್ಲೇ ಇಸ್ರೇಲ್ ಪಿಎಂ ವಿರುದ್ಧ ಟ್ರಂಪ್ ಆಕ್ರೋಶ! TrumpVsNetanyahu

ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವೆ ಐತಿಹಾಸಿಕ ಕದನ ವಿರಾಮ ಒಪ್ಪಂದ ಏರ್ಪಟ್ಟ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಪರಮ ಮಿತ್ರ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು(TrumpVsNetanyahu) ವಿರುದ್ಧ ಬಹಿರಂಗವಾಗಿಯೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪ್ರಸಿದ್ಧ ದಿ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ನೆತನ್ಯಾಹು ಅವರನ್ನು ಅತ್ಯಂತ ಹಠಮಾರಿ ಮತ್ತು ಕಠಿಣ ಮನುಷ್ಯ ಎಂದು ಕರೆದಿರುವ ಟ್ರಂಪ್, ವಾಷಿಂಗ್ಟನ್ ನಡೆಸಿರುವ ಈ ಚಾಣಾಕ್ಷ ರಾಜತಾಂತ್ರಿಕ ಒಪ್ಪಂದಕ್ಕಾಗಿ ಇಸ್ರೇಲ್ ನಾಯಕ ನಮಗೆ ಕೃತಜ್ಞನಾಗಿರಬೇಕು ಎಂದು ಚಾಟಿ ಬೀಸಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ತಿಂಗಳುಗಳಿಂದ ನಡೆಯುತ್ತಿದ್ದ ಭೀಕರ ಸಂಘರ್ಷಕ್ಕೆ ಪೂರ್ಣವಿರಾಮ ಇಡಲು ಅಮೆರಿಕ ಮತ್ತು ಇರಾನ್ ಭಾನುವಾರ ರಾತ್ರಿ ಐತಿಹಾಸಿಕ ತಿಳಿವಳಿಕೆ ಪತ್ರವನ್ನು (MoU) ಅಂತಿಮಗೊಳಿಸಿವೆ. ಆದರೆ, ಇಸ್ರೇಲ್ ಪ್ರಧಾನಿ ನೆತನ್ಯಾಹು ಅವರ ತೀವ್ರ ವಿರೋಧದ ನಡುವೆಯೂ ಟ್ರಂಪ್ ಈ ನಿರ್ಧಾರ ಕೈಗೊಂಡಿರುವುದು ಈಗ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

"ನಾವಿಲ್ಲದಿದ್ದರೆ ಇಸ್ರೇಲ್ ಕೇವಲ ಎರಡು ಗಂಟೆಯೂ ಉಳಿಯುತ್ತಿರಲಿಲ್ಲ!"

ತಮ್ಮ ರಾಜತಾಂತ್ರಿಕ ಹೆಜ್ಜೆಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಡೊನಾಲ್ಡ್ ಟ್ರಂಪ್, ಈ ಒಪ್ಪಂದದಿಂದ ಇಸ್ರೇಲ್ ದೇಶಕ್ಕೇ ಅತಿ ದೊಡ್ಡ ರಕ್ಷಣೆ ಸಿಕ್ಕಿದೆ ಎಂದಿದ್ದಾರೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನೆತನ್ಯಾಹು ನಮಗೆ ಧನ್ಯವಾದ ಅರ್ಪಿಸಬೇಕು. ಒಂದು ವೇಳೆ ಇರಾನ್ ದೇಶವು ಪರಮಾಣು ಬಾಂಬ್ ಅಭಿವೃದ್ಧಿಪಡಿಸಿದ್ದರೆ, ಇಸ್ರೇಲ್ ಜಗತ್ತಿನ ನಕಾಶೆಯಲ್ಲಿ ಕೇವಲ ಎರಡು ಗಂಟೆಯೂ ಜೀವಂತವಾಗಿ ಉಳಿಯುತ್ತಿರಲಿಲ್ಲ. ನಮ್ಮ ಮುತ್ಸದ್ದಿತನ ಇಸ್ರೇಲ್ ಅನ್ನು ಮಹಾ ವಿನಾಶದಿಂದ ಪಾರು ಮಾಡಿದೆ ಎಂದು ಟ್ರಂಪ್ ಮಾರ್ಮಿಕವಾಗಿ ನುಡಿದಿದ್ದಾರೆ.
ಇದೇ ವೇಳೆ ಇರಾನ್‌ಗೆ ಕಠಿಣ ಎಚ್ಚರಿಕೆ ನೀಡಿರುವ ಟ್ರಂಪ್, ಮುಂದಿನ ಮಾತುಕತೆಗಳು ಮುರಿದುಬಿದ್ದರೆ ಇರಾನ್ ಮೇಲೆ ಮತ್ತೆ ಮಿಲಿಟರಿ ದಾಳಿ ನಡೆಸಲಾಗುವುದು. ಇಲ್ಲವೇ ಇಡೀ ಮಧ್ಯಪ್ರಾಚ್ಯದ ರಕ್ಷಣೆಯ ಹೊಣೆಯನ್ನು ಅಮೆರಿಕ ಹೊತ್ತುಕೊಂಡು, ಪ್ರಾದೇಶಿಕ ಒಟ್ಟು ಆದಾಯದ ಶೇ. 20 ರಷ್ಟನ್ನು ರಕ್ಷಣಾ ಶುಲ್ಕವಾಗಿ ವಸೂಲಿ ಮಾಡುತ್ತದೆ ಎಂದಿದ್ದಾರೆ. ಅಲ್ಲದೆ ಈ ಒಪ್ಪಂದದಿಂದ ಹೊರ್ಮುಜ್ ಜಲಸಂಧಿಯು ಕಾಯಂ ಆಗಿ ತೆರಿಗೆ ಮುಕ್ತವಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಪ್ಪಂದಕ್ಕೆ ಗಂಟೆಯ ಮುನ್ನ ಇಸ್ರೇಲ್ ದಾಳಿ: ಟ್ರಂಪ್ ಕೆಂಡಾಮಂಡಲ

‘ದಿ ನ್ಯೂಯಾರ್ಕ್ ಟೈಮ್ಸ್’ ವರದಿಯ ಪ್ರಕಾರ, ಕಳೆದ ಕೆಲವು ವಾರಗಳಿಂದ ಇಸ್ರೇಲ್ ಪಡೆಗಳು ಲೆಬನಾನ್‌ನಲ್ಲಿ ನಡೆಸುತ್ತಿದ್ದ ನಿರಂತರ ಮಿಲಿಟರಿ ಕಾರ್ಯಾಚರಣೆಗಳು ಅಮೆರಿಕ-ಇರಾನ್ ರಹಸ್ಯ ಮಾತುಕತೆಗೆ ಪದೇಪದೆ ಅಡ್ಡಿಪಡಿಸುತ್ತಿದ್ದವು. ಇದು ಟ್ರಂಪ್ ಅವರ ಕೋಪಕ್ಕೆ ಕಾರಣವಾಗಿತ್ತು. ಭಾನುವಾರ ಒಪ್ಪಂದಕ್ಕೆ ಸಹಿ ಹಾಕುವ ಕೇವಲ ಒಂದು ಗಂಟೆ ಮುಂಚೆ ಇಸ್ರೇಲ್ ಪಡೆಗಳು ಲೆಬನಾನ್ ರಾಜಧಾನಿ ಬೈರೂತ್‌ನ ದಕ್ಷಿಣ ಉಪನಗರಗಳ ಮೇಲೆ ಭೀಕರ ಬಾಂಬ್ ದಾಳಿ ನಡೆಸಿದಾಗ ಟ್ರಂಪ್ ಅವರ ತಾಳ್ಮೆ ಮುರಿದುಬಿದ್ದಿದೆ.

ಟ್ರಂಪ್ ಆಕ್ರೋಶದ ನುಡಿಗಳು

ಇದು ಅತ್ಯಂತ ಕೆಟ್ಟ ನಡೆ, ನನಗೆ ನನ್ನ ಕಣ್ಣುಗಳನ್ನೇ ನಂಬಲು ಸಾಧ್ಯವಾಗಲಿಲ್ಲ. ನಾವು ಒಪ್ಪಂದಕ್ಕೆ ಸಹಿ ಹಾಕಲು ಇನ್ನು ಒಂದು ಗಂಟೆ ಬಾಕಿ ಇದೆ ಎನ್ನುವಾಗ ಇಸ್ರೇಲ್ ಈ ದಾಳಿ ನಡೆಸಿದೆ. ಇಸ್ರೇಲ್‌ನ ಈ ದಿಢೀರ್ ದಾಳಿಯಿಂದಾಗಿ ಇಡೀ ಜಗತ್ತು ನಡುಗುವಂತಾಯಿತು ಮತ್ತು ನಮ್ಮ ಶಾಂತಿ ಒಪ್ಪಂದದ ಸಹಿ ಪ್ರಕ್ರಿಯೆ ಕೆಲವು ಗಂಟೆಗಳ ಕಾಲ ತಡವಾಗುವಂತಾಯಿತು ಎಂದು ಟ್ರಂಪ್ ಅಕ್ಸಿಯೋಸ್ ಸಂಸ್ಥೆಗೆ ನೀಡಿದ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾಳಿಯ ಬೆನ್ನಲ್ಲೇ ತಾವು ನೆತನ್ಯಾಹು ಅವರನ್ನು ನೇರವಾಗಿ ಸಂಪರ್ಕಿಸಿ ತಮ್ಮ ತೀವ್ರ ಅಸಮಾಧಾನವನ್ನು ಮುಖಾಮುಖಿಯಾಗಿಯೇ ತಿಳಿಸಿದ್ದಾಗಿ ಟ್ರಂಪ್ ಹೆಳಿದ್ದಾರೆ. ಇಸ್ರೇಲ್ ಪ್ರಕಾರ, ಉತ್ತರ ಇಸ್ರೇಲ್ ಮೇಲೆ ಹಿಜ್ಬುಲ್ಲಾ ನಡೆಸಿದ ದಾಳಿಗೆ ಪ್ರತಿಯಾಗಿ ತಾನು ಬೈರೂತ್ ಮೇಲೆ ದಾಳಿ ಮಾಡಿರುವುದಾಗಿ ಸಮರ್ಥಿಸಿಕೊಂಡಿದೆ.

ಒಪ್ಪಂದ ಫೈನಲ್; ಆದರೆ ಸವಾಲುಗಳು ಬಾಕಿ ಇವೆ

ಪಾಕ್​ ಪ್ರಧಾನಿ ಶೆಹಬಾಜ್ ಷರೀಫ್ ಅವರ ಮಧ್ಯಸ್ಥಿಕೆಯ ಪ್ರಕಟಣೆಯ ಬೆನ್ನಲ್ಲೇ ಟ್ರಂಪ್ ತಮ್ಮ 'ಟ್ರುತ್ ಸೋಷಿಯಲ್' ಮೂಲಕ ಒಪ್ಪಂದ ಪೂರ್ಣಗೊಂಡಿರುವುದನ್ನು ಸಾರಿದ್ದಾರೆ. ಮುಂಬರುವ ಜೂನ್ 19 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಈ ಐತಿಹಾಸಿಕ ಕರಡಿಗೆ ಉಭಯ ದೇಶಗಳು ಅಧಿಕೃತ ಮುದ್ರೆ ಒತ್ತಲಿವೆ. ಲೆಬನಾನ್ ಸೇರಿದಂತೆ ಎಲ್ಲಾ ರಂಗಗಳಲ್ಲೂ ಸೋಮವಾರ ರಾತ್ರಿಯಿಂದಲೇ ಯುದ್ಧ ಕಾರ್ಯಾಚರಣೆಗಳು ಸಂಪೂರ್ಣವಾಗಿ ನಿಲ್ಲಲಿವೆ ಎಂದು ಇರಾನ್‌ನ ಉನ್ನತ ಭದ್ರತಾ ಮಂಡಳಿ ತಿಳಿಸಿದೆ.
ಆದರೆ, ಇರಾನ್‌ನ ಪರಮಾಣು ಯೋಜನೆಗಳ ಭವಿಷ್ಯ ಮತ್ತು ಆರ್ಥಿಕ ನಿರ್ಬಂಧಗಳ ಸಂಪೂರ್ಣ ತೆರವಿನಂತಹ ಅತ್ಯಂತ ಸಂಕೀರ್ಣ ವಿಷಯಗಳ ಕುರಿತು ಮುಂದಿನ 60 ದಿನಗಳ ಕದನ ವಿರಾಮದ ಅವಧಿಯಲ್ಲಿ ದೀರ್ಘ ಚರ್ಚೆಗಳು ನಡೆಯಬೇಕಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಪ್ರಸ್ತುತ ಅಮೆರಿಕದ ಈ ಏಕಪಕ್ಷೀಯ ನಿರ್ಧಾರದ ಕುರಿತು ಇಸ್ರೇಲ್ ಸರ್ಕಾರ ಇದುವರೆಗೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲವಾದರೂ, ತಾನು ಈ ಮಾತುಕತೆಯ ಭಾಗವಾಗಿಲ್ಲ ಎಂದು ಇಸ್ರೇಲಿ ಅಧಿಕಾರಿಗಳು ದೂರ ಸರಿದಿದ್ದಾರೆ,(ಏಜೆನ್ಸೀಸ್​).