Benjamin Netanyahu | ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು
Benjamin Netanyahu: ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಹೆಚ್ಚಾಗಿರುವ ಬೆನ್ನಲ್ಲೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ವಿರುದ್ಧ ಘೋಷಿಸಿರುವ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮಕ್ಕೆ ಇಸ್ರೇಲ್ ಬೆಂಬಲ ವ್ಯಕ್ತಪಡಿಸಿದ್ದು, ಈ ಕುರಿತು ಬುಧವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕಚೇರಿ, ಇರಾನ್ ವಿರುದ್ಧದ ಮಿಲಿಟರಿ ದಾಳಿಗಳನ್ನು 14 ದಿನಗಳ ಕಾಲ ಸ್ಥಗಿತಗೊಳಿಸುವ ಅಮೆರಿಕದ ನಿರ್ಧಾರವನ್ನು ಸ್ವಾಗತಿಸಿದೆ.
ಜಾಗತಿಕವಾಗಿ ತೈಲ ಸಾಗಣೆಗೆ ಅತ್ಯಂತ ಪ್ರಮುಖವಾಗಿರುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ತಕ್ಷಣವೇ ಮುಕ್ತಗೊಳಿಸುವುದು ಮತ್ತು ಅಮೆರಿಕ ಹಾಗೂ ಇಸ್ರೇಲ್ ಸೇರಿದಂತೆ ಪ್ರಾದೇಶಿಕ ಮಿತ್ರ ರಾಷ್ಟ್ರಗಳ ಮೇಲೆ ಇರಾನ್ ನಡೆಸುತ್ತಿರುವ ಎಲ್ಲಾ ದಾಳಿಗಳನ್ನು ನಿಲ್ಲಿಸುವುದು ಈ ವಿರಾಮದ ಪ್ರಮುಖ ಷರತ್ತಾಗಿದೆ ಎಂದು ಇಸ್ರೇಲ್ ಒತ್ತಿ ಹೇಳಿದೆ.
ಇದು ಇರಾನ್‌ಗೆ ಮಾತ್ರ ಸೀಮಿತ
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸದಂತೆ ತಡೆಯುವ ಮತ್ತು ಆ ಪ್ರಾಂತ್ಯಕ್ಕೆ ಬೆದರಿಕೆಯೊಡ್ಡಬಲ್ಲ ಕ್ಷಿಪಣಿ ಸಾಮರ್ಥ್ಯಗಳನ್ನು ಹತ್ತಿಕ್ಕುವ ವಾಷಿಂಗ್ಟನ್‌ನ ವಿಶಾಲ ರಾಜತಾಂತ್ರಿಕ ಪ್ರಯತ್ನಗಳಿಗೆ ಇಸ್ರೇಲ್ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ, ಆದರೆ, ಈ ಕದನ ವಿರಾಮ ಒಪ್ಪಂದವು ಕೇವಲ ಇರಾನ್‌ಗೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ನಲ್ಲಿ ಇಸ್ರೇಲ್ ಎದುರಿಸುತ್ತಿರುವ ಸವಾಲುಗಳನ್ನು ಇದು ಒಳಗೊಂಡಿಲ್ಲ ಎಂದು ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.
ಇರಾನ್ ಜೊತೆಗಿನ ತಾತ್ಕಾಲಿಕ ಶಾಂತಿಯು ಹೆಜ್ಬೊಲ್ಲಾ ಸಂಘಟನೆಯ ವಿರುದ್ಧದ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗೆ ಅನ್ವಯಿಸುವುದಿಲ್ಲ ಎಂದು ತಿಳಿಸುವ ಮೂಲಕ, ಉತ್ತರ ಗಡಿಯಲ್ಲಿ ಇಸ್ರೇಲ್ ಸೇನೆಯು ತನ್ನ ಆಕ್ರಮಣಕಾರಿ ನಡೆಯನ್ನು ಮುಂದುವರಿಸಲಿದೆ ಎಂಬ ಕಠಿಣ ಸಂದೇಶವನ್ನು ರವಾನಿಸಿದ್ದಾರೆ.
ಕದನ ವಿರಾಮ ಘೋಷಿಸಿದ ಟ್ರಂಪ್
ಡೊನಾಲ್ಡ್ ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಈ ಹಿಂದೆ ತಾವು ನೀಡಿದ್ದ ಗಡುವಿಗೆ ಸ್ವಲ್ಪ ಮುಂಚಿತವಾಗಿ ಈ ನಿರ್ಧಾರ ಪ್ರಕಟಿಸಿದ ಟ್ರಂಪ್, ಇರಾನ್ ವಿರುದ್ಧದ ಮಿಲಿಟರಿ ದಾಳಿಗಳನ್ನು ಎರಡು ವಾರಗಳ ಕಾಲ ತಡೆಹಿಡಿಯಲಾಗುವುದು ಎಂದು ಘೋಷಿಸಿದ್ದರು. ಇದನ್ನು ದ್ವಿಮುಖ ಕದನ ವಿರಾಮ ಎಂದು ಕರೆದಿರುವ ಅಮೆರಿಕ ಅಧ್ಯಕ್ಷರು, ಈ ಹದಿನಾಲ್ಕು ದಿನಗಳ ಕಾಲ ಅಮೆರಿಕ ಮತ್ತು ಇರಾನ್ ಎರಡೂ ದೇಶಗಳು ಪರಸ್ಪರ ಆಕ್ರಮಣಕಾರಿ ಕ್ರಮಗಳಿಂದ ದೂರವಿರಲಿವೆ ಎಂದು ತಿಳಿಸಿದ್ದಾರೆ. ಜಾಗತಿಕ ಆರ್ಥಿಕತೆಯ ದೃಷ್ಟಿಯಿಂದ ಪ್ರಮುಖವಾದ ಹಾರ್ಮುಜ್ ಜಲಸಂಧಿಯನ್ನು ಮರುಜಾರಿಗೊಳಿಸಲು ಇರಾನ್ ಸಮ್ಮತಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟ್ರಂಪ್ ಸ್ಪಷ್ಟನೆ ನೀಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ಇರಾನ್ ವಿಚಾರವಾಗಿ ಈಗಾಗಲೇ ನಿಗದಿಪಡಿಸಿದ್ದ ಮಿಲಿಟರಿ ಗುರಿಗಳನ್ನು ಅಮೆರಿಕ ಸಾಧಿಸಿದೆ ಎಂದು ಹೇಳಿಕೊಂಡಿರುವ ಟ್ರಂಪ್, ಟೆಹ್ರಾನ್‌ನಿಂದ ಹತ್ತು ಪ್ರಮುಖ ಅಂಶಗಳನ್ನೊಳಗೊಂಡ ಪ್ರಸ್ತಾವನೆಯನ್ನು ವಾಷಿಂಗ್ಟನ್ ಸ್ವೀಕರಿಸಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಹತ್ತು ಅಂಶಗಳ ಪ್ರಸ್ತಾವನೆಯು ಈವರೆಗೆ ಉಭಯ ದೇಶಗಳ ನಡುವೆ ಇದ್ದ ಎಲ್ಲಾ ವಿವಾದಾತ್ಮಕ ಮತ್ತು ಸಂಘರ್ಷಾತ್ಮಕ ವಿಷಯಗಳನ್ನು ಪರಿಹರಿಸಲು ಪೂರಕವಾದ ಆಧಾರವಾಗಿದೆ ಎನ್ನುವುದು ಟ್ರಂಪ್ ನಂಬಿಕೆ.
ಇರಾನ್ ಮೇಲೆ ಬಾಂಬ್ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ಎರಡು ವಾರಗಳ ಕಾಲ ಸ್ಥಗಿತಗೊಳಿಸುವುದರಿಂದ, ಇರಾನ್ ಜೊತೆಗಿನ ದೀರ್ಘಾವಧಿಯ ಶಾಂತಿ ಮತ್ತು ಇಡೀ ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಕಾಪಾಡುವ ಒಪ್ಪಂದವನ್ನು ಅಂತಿಮಗೊಳಿಸಲು ಮತ್ತು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ಟ್ರಂಪ್ ಆಶಾವಾದ ವ್ಯಕ್ತಪಡಿಸಿದ್ದು, ಈ ಬೆಳವಣಿಗೆಯಿಂದಾಗಿ ಕಳೆದ ಕೆಲವು ದಿನಗಳಿಂದ ಯುದ್ಧದ ಕಾರ್ಮೋಡದಲ್ಲಿ ಸಿಲುಕಿದ್ದ ಜಾಗತಿಕ ಮಾರುಕಟ್ಟೆ ಮತ್ತು ರಾಜತಾಂತ್ರಿಕ ವಲಯದಲ್ಲಿ ಸದ್ಯಕ್ಕೆ ಬಿಗು ವಾತಾವರಣ ಸ್ವಲ್ಪಮಟ್ಟಿಗೆ ತಿಳಿಯಾಗಿದೆ(ಏಜೆನ್ಸೀಸ್).