1,643 ಮಕ್ಕಳ ಜೀವ ಉಳಿಸಿದ ಶಿಕ್ಷಕನೇ 'ರಿಯಲ್​ ಹೀರೋ' ಎಂದ ನೆಟ್ಟಿಗರು 
ವಿದೇಶ

ಪ್ರವಾಹದ 15 ನಿಮಿಷಗಳ ಮೊದಲು... 1,643 ಮಕ್ಕಳ ಜೀವ ಉಳಿಸಿದ ಈ ರಿಯಲ್​ ಹೀರೋಗೆ ನೆಟ್ಟಿಗರು ಸಲಾಂ | Nepali Teacher

ಪ್ರಮುಖ ಮುಖ್ಯಾಂಶಗಳು

  • ನೇಪಾಳದಲ್ಲಿ ಸಂಭವಿಸಿರುವ ಹಠಾತ್ ರಣ ಭೀಕರ ಪ್ರವಾಹಕ್ಕೆ 750ಕ್ಕೂ ಹೆಚ್ಚು ಮಂದಿ ಬಲಿ
  • ಜಲಪ್ರಳಯದಲ್ಲಿ 1643 ವಿದ್ಯಾರ್ಥಿಗಳ ಜೀವವನ್ನು ಉಳಿಸಿದ ಶಿಕ್ಷಕನ ಸಾಹಸಕ್ಕೆ ನೆಟ್ಟಿಗರ ಸಲಾಂ
  • ಪಾಠ ಹೇಳಲು ಮಾತ್ರವಲ್ಲ, ವಿದ್ಯಾರ್ಥಿಗಳ ಜೀವ ಉಳಿಸಿ ರಿಯಲ್ ಹೀರೋ ಆದ ಶಿಕ್ಷಕ ಇವರು
ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿರುವ ಹಠಾತ್ ರಣ ಭೀಕರ ಪ್ರವಾಹಕ್ಕೆ ಇಡೀ ಊರಿಗೇ ಊರೇ ನದಿಯಲ್ಲಿ ಕೊಚ್ಚಿಹೋಗಿದ್ದು, ಕನಿಷ್ಠ 724 ಮಂದಿ ದುರ್ಮರಣ ಹೊಂದಿದ್ದಾರೆ. ಈ ಪೈಕಿ, ಇನ್ನೂ 2,500ಕ್ಕೂ ಅಧಿಕ ಜನರು ಕಾಣೆಯಾಗಿದ್ದಾರೆ. ಮತ್ತೊಂದೆಡೆ, ಜಲಪ್ರಳಯದಲ್ಲಿ 1643 ವಿದ್ಯಾರ್ಥಿಗಳ ಜೀವವನ್ನು ತಮ್ಮ ಬುದ್ಧಿವಂತಿಕೆಯಿಂದಲೇ ಉಳಿಸಿದ ಶಿಕ್ಷಕನ ಸಾಹಸಕ್ಕೆ ಇದೀಗ ನೆಟ್ಟಿಗರು ಮೆಚ್ಚುಗೆಗೆಳ ಮಹಾಪೂರವನ್ನೇ ಹರಿಸಿದ್ದಾರೆ.
ಬುಧವಾರ (ಆ.26) ಬೆಳಗ್ಗೆ 9:20ಕ್ಕೆ ಬಂದ ಆ ಒಂದು ಫೋನ್ ಕರೆ ರಸುವಾ ಮತ್ತು ನುವಾಕೋಟ್‌ ಜಿಲ್ಲೆಗಳಲ್ಲಿ ಭೀಕರ ಅನಾಹುತ ಸಂಭವಿಸಲಿದೆ ಎಂಬುದರ ಸ್ಪಷ್ಟ ಸುಳಿವನ್ನು ನೀಡಿತ್ತು. ನೇಪಾಳದ ತ್ರಿಶೂಲಿ ಕಣಿವೆಯಲ್ಲಿರುವ ತ್ರಿಭುವನ್ ತ್ರಿಶೂಲಿ ಪ್ರೌಢಶಾಲೆಯ ಪ್ರಾಂಶುಪಾಲರಾದ ರಾಜೇಂದ್ರ ದಾವಾಡಿ, ತಮ್ಮ ಶಾಲೆಯ ಮೂರು ಅಂತಸ್ತಿನ ಕಟ್ಟಡದಲ್ಲಿದ್ದ 1,643 ಮಕ್ಕಳ ಪ್ರಾಣವನ್ನು ಉಳಿಸಲು ಕೇವಲ ಕೆಲವೇ ನಿಮಿಷಗಳಷ್ಟೇ ಸಮಯವಿದೆ ಎಂಬುದನ್ನು ಅರಿತ ಕೂಡಲೇ ತೋರಿದ ಧೈರ್ಯ, ಬುದ್ಧಿವಂತಿಕೆಯಿಂದ ಇದೀಗ ನೂರಾರು ಕುಟುಂಬಗಳ ಕಣ್ಣೀರಾಕುವುದು ತಪ್ಪಿದೆ.

ಸಮಯಪ್ರಜ್ಞೆಯಿಂದ ಉಳಿಯಿತು 1,643 ಮಕ್ಕಳ ಪ್ರಾಣ

ಆರಂಭದಲ್ಲಿ ಶಾಲೆಯು ನದಿಯ ಮಟ್ಟಕ್ಕಿಂತ 60 ಮೀಟರ್ ಎತ್ತರದಲ್ಲಿದೆ ಹಾಗೂ ಸಿಮೆಂಟ್‌ನಿಂದ ಗಟ್ಟಿಯಾಗಿ ನಿರ್ಮಾಣವಾಗಿದ್ದರಿಂದ ಸುರಕ್ಷಿತವಾಗಿದೆ ಎಂದೇ ರಾಜೇಂದ್ರ ಭಾವಿಸಿದ್ದರು. ಆದರೆ, ನೀರು ಅತ್ಯಂತ ವೇಗವಾಗಿ ಏರುತ್ತಿರುವುದನ್ನು ಕಂಡ ತಕ್ಷಣವೇ ಸಮಯ ವ್ಯರ್ಥ ಮಾಡದೆ, ಶಾಲೆಯ ಗಂಟೆಯನ್ನು ಜೋರಾಗಿ ಬಾರಿಸಿ, ತರಗತಿಗಳಿಂದ ತಕ್ಷಣವೇ ವಿದ್ಯಾರ್ಥಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸುವಂತೆ ಶಿಕ್ಷಕರಿಗೆ ಆದೇಶಿಸಿದರು.
ಬಸ್ ಚಾಲಕರಿಗೆ ಕರೆ ಮಾಡಿ, ಶಾಲೆಯತ್ತ ಬರದಂತೆ ಹೇಳಿದರು. ಆತಂಕದಿಂದ ಕಂಗಾಲಾಗಿದ್ದ ಮಕ್ಕಳನ್ನು ಪಕ್ಕದಲ್ಲಿದ್ದ ಬೆಟ್ಟದ ಮೇಲಿದ್ದ ಬೋಧಿ ವೃಕ್ಷದತ್ತ ಸುರಕ್ಷಿತವಾಗಿ ಸ್ಥಳಾಂತರಿಸಿದರು. ವಿದ್ಯಾರ್ಥಿಗಳು ಬೆಟ್ಟದ ಮೇಲೆ ಹೋಗಿ ನೋಡುವಷ್ಟರಲ್ಲಿ, ಶಾಲೆಯು ನದಿಯ ಕೆಸರುಮಿಶ್ರಿತ ರಕ್ಕಸ ಪ್ರವಾಹದಲ್ಲಿ ಕೊಚ್ಚಿಹೋಗಿದೆ. ರಾಜೇಂದ್ರ ಅವರು ತೆಗೆದುಕೊಂಡ ಈ ತಕ್ಷಣದ ನಿರ್ಧಾರದಿಂದಾಗಿ ಇಂದು 1,643 ಮಕ್ಕಳು ಮತ್ತು ಶಾಲಾ ಸಿಬ್ಬಂದಿಗಳು ಪವಾಡ ಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಿಕ್ಷಕ, ಸಿಬ್ಬಂದಿ ದುರಂತ ಸಾವು

ಮಕ್ಕಳೆಲ್ಲರೂ ಪಾರಾಗಿದ್ದೇ ಆದರೂ, ಇಬ್ಬರು ಶಿಕ್ಷಕರು ಮಾತ್ರ ದುರಂತವಾಗಿ ಸಾವನ್ನಪ್ಪಿದ್ದಾರೆ. ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಸಂತೋಷ್ ಪರಿಹಾರ್ (32) ಊಟ ತಯಾರಿಸಲು ನದಿ ತೀರದಲ್ಲಿದ್ದ ತಮ್ಮ ಕೊಠಡಿಗೆ ತೆರಳಿದ್ದಾಗ ಪ್ರವಾಹಕ್ಕೆ ಸಿಲುಕಿ ಕೊಚ್ಚಿಹೋದರೆ, ಸಿಬ್ಬಂದಿ ಸುಲ್ತಾನ್ ಲಾಮಾ ಕೂಡ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕ ರಾಜೇಂದ್ರ ಅವರನ್ನು ರಿಯಲ್​ ಹೀರೋ ಎಂದು ಕೊಂಡಾಡುತ್ತಿರುವ ನೆಟ್ಟಿಗರು, ಮಕ್ಕಳ ಜೀವ ಉಳಿಸಿದ ಶಿಕ್ಷಕನಿಗೆ ನಮ್ಮದೊಂದು ಸಲಾಂ ಎಂದಿದ್ದಾರೆ. ಆದರೆ, ಘಟನಾ ಸ್ಥಳವನ್ನು ನೋಡುತ್ತಾ ಕಣ್ಣೀರಿಟ್ಟ ರಾಜೇಂದ್ರ, ನನ್ನ ಜಾಗದಲ್ಲಿ ಬೇರೆ ಯಾರೇ ಇದ್ದರೂ ಇದೇ ಕೆಲಸವನ್ನು ಮಾಡುತ್ತಿದ್ದರು. ನಾನೇನು ದೊಡ್ಡ ಸಾಹಸ ಮಾಡಿಲ್ಲ. ಆದರೂ, ನನ್ನಿಂದ ಇನ್ಯಾರನ್ನೂ ಬದುಕಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗಿದೆ ಎಂದು ಹೇಳಿದರು.

750 ಜನರು ಮೃತ

ಪ್ರಸ್ತುತ ಲಭಿಸಿರುವ ಅಂಕಿ-ಅಂಶಗಳ ಪ್ರಕಾರ, ಈ ಪ್ರವಾಹಕ್ಕೆ ನೇಪಾಳದಲ್ಲಿ 734 ಹಾಗೂ ಟಿಬೆಟ್‌ನಲ್ಲಿ 16 ಸೇರಿದಂತೆ ಒಟ್ಟು 750 ಜನರು ಮೃತಪಟ್ಟಿದ್ದಾರೆ. ಅಲ್ಲದೆ, ನೇಪಾಳದಲ್ಲಿ 2,498 ಹಾಗೂ ಟಿಬೆಟ್‌ನ ಗೈರಾಂಗ್ ಕೌಂಟಿಯಲ್ಲಿ 546 ಜನರು ಸೇರಿ ಸುಮಾರು 3,000ಕ್ಕೂ ಹೆಚ್ಚು ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 2015ರ ಭೀಕರ ಭೂಕಂಪದ ಬಳಿಕ ನೇಪಾಳ ಕಂಡ ಅತ್ಯಂತ ಘೋರ ನೈಸರ್ಗಿಕ ವಿಕೋಪ ಇದಾಗಿದೆ,(ಏಜೆನ್ಸೀಸ್).