- ನೇಪಾಳ ಬಿಡುಗಡೆಗೊಳಿಸಿರುವ ಹೊಸ 100 ರೂ. ನೋಟು
- ಕಲಾಪಾಣಿ, ಲಿಪುಲೇಖ್, ಲಿಂಪಿಯಾಧುರವನ್ನು ನೇಪಾಳದ ಭಾಗವಾಗಿ ತೋರಿಸುವ ಪರಿಷ್ಕೃತ ನಕ್ಷೆ
- ಉತ್ಪ್ರೇಕ್ಷಿತ ನಕ್ಷೆ ಸ್ವೀಕಾರಾರ್ಹವಲ್ಲ ಎಂದು ಭಾರತ ಹೇಳಿದೆ
ಕಠ್ಮಂಡು: ನೇಪಾಳ ಬಿಡುಗಡೆಗೊಳಿಸಿರುವ ಹೊಸ 100 ರೂ. ನೋಟು ಭಾರತ ಮತ್ತು ನೇಪಾಳ ನಡುವೆ ಹೊಸ ಪಂಚಾಯ್ತಿಗೆ ಬಾಗಿಲು ತೆರೆದಿಟ್ಟಿದೆ.
ಗುರುವಾರ (ನ.27) ಹೊಸ 100 ರೂ. ನೋಟನ್ನು ರಿಲೀಸ್ ಮಾಡಿದೆ. ಈ ನೋಟಿನಲ್ಲಿ ಕಲಾಪಾಣಿ, ಲಿಪುಲೇಖ್ ಮತ್ತು ಲಿಂಪಿಯಾಧುರವನ್ನು ನೇಪಾಳದ ಭಾಗವಾಗಿ ತೋರಿಸುವ ಪರಿಷ್ಕೃತ ನಕ್ಷೆಯಿದೆ. ಈ ಪ್ರದೇಶಗಳನ್ನು ನೇಪಾಳದ ಭಾಗವಾಗಿ ಸೇರಿಸುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಹೊಸ ನೋಟಿನಲ್ಲಿ ಮಾಜಿ ಗವರ್ನರ್ ಮಹಾ ಪ್ರಸಾದ್ ಅಧಿಕಾರಿ ಅವರ ಸಹಿ ಇರುವುದು ಗಮನಾರ್ಹ.
ಈ ಹೊಸ ನೋಟಿನ ಬಿಡುಗಡೆ ದಿನಾಂಕ 2081 ವಿಕ್ರಮಿ ಸಂವತ್ (ವರ್ಷ 2024). ಮೇ 2020ರಲ್ಲಿ, ಆಗಿನ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ಸರ್ಕಾರವು ನೇಪಾಳದ ಗಡಿಯೊಳಗಿನ ಈ ಮೂರು ವಿವಾದಿತ ಪ್ರದೇಶಗಳನ್ನು ತೋರಿಸುವ ಹೊಸ ರಾಜಕೀಯ ನಕ್ಷೆಯನ್ನು ಬಿಡುಗಡೆ ಮಾಡಿತು. ಈ ನಕ್ಷೆಯನ್ನು ಬಳಿಕ ನೇಪಾಳ ಸಂಸತ್ತು ಅನುಮೋದಿಸಿತು. ಆ ಸಮಯದಲ್ಲಿ ನೇಪಾಳದ ಕ್ರಮವನ್ನು ಭಾರತ ತೀವ್ರವಾಗಿ ಪ್ರತಿಭಟಿಸಿತು, ಇದನ್ನು ಏಕಪಕ್ಷೀಯ ನಿರ್ಧಾರ ಎಂದು ಕರೆಯಲಾಯಿತು.
ಅಂತಹ ಉತ್ಪ್ರೇಕ್ಷಿತ ನಕ್ಷೆ ಸ್ವೀಕಾರಾರ್ಹವಲ್ಲ ಎಂದು ಭಾರತ ಹೇಳಿದೆ. ಈ ಮೂರು ಪ್ರದೇಶಗಳು ತನಗೆ ಸೇರಿವೆ ಎಂದು ಭಾರತ ಹೇಳಿಕೊಂಡಿದೆ. ನೇಪಾಳ ರಾಷ್ಟ್ರ ಬ್ಯಾಂಕಿನ ವಕ್ತಾರರ ಪ್ರಕಾರ, ಹಳೆಯ 100 ರೂ. ನೋಟಿನಲ್ಲಿ ನೇಪಾಳದ ನಕ್ಷೆಯೂ ಇತ್ತು. ಆದರೆ, ಸರ್ಕಾರದ ನಿರ್ಧಾರದ ನಂತರ, ಹೊಸ ನೋಟನ್ನು ಪರಿಷ್ಕರಿಸಲಾಗಿದೆ. 10, 50, 500 ಮತ್ತು 1000 ರೂಪಾಯಿ ನೋಟುಗಳಲ್ಲಿ ನಕ್ಷೆ ಇಲ್ಲ ಎಂದು ಹೇಳಲಾಗಿದೆ.
100 ರೂ. ನೋಟಿನಲ್ಲಿ ಮಾತ್ರ ನೇಪಾಳದ ನಕ್ಷೆಯಿದೆ ಎಂದು ಬಹಿರಂಗಪಡಿಸಿದ್ದಾರೆ. ಈ ಹೊಸ ನೋಟಿನ ವಿನ್ಯಾಸವು ಹಲವಾರು ಅಂಶಗಳನ್ನು ಹೊಂದಿದೆ. ನೋಟಿನಲ್ಲಿ ಎಡಭಾಗದಲ್ಲಿ ಮೌಂಟ್ ಎವರೆಸ್ಟ್‌ನ ಚಿತ್ರ, ಬಲಭಾಗದಲ್ಲಿ ನೇಪಾಳದ ರಾಷ್ಟ್ರೀಯ ಹೂವು ಮತ್ತು ಕೆಂಪು ರೋಡೋಡೆಂಡ್ರಾನ್ ವಾಟರ್‌ಮಾರ್ಕ್ ಇದೆ. ನೋಟಿನ ಮಧ್ಯದಲ್ಲಿ ನೇಪಾಳದ ತಿಳಿ ಹಸಿರು ನಕ್ಷೆ ಗೋಚರಿಸುತ್ತದೆ. ನಕ್ಷೆಯ ಪಕ್ಕದಲ್ಲಿ ಅಶೋಕ ಸ್ತಂಭ ಮತ್ತು ಲುಂಬಿನಿಯನ್ನು ಮುದ್ರಿಸಲಾಗಿದೆ.
ಅದೇ ನೋಟಿನ ಹಿಂಭಾಗದಲ್ಲಿ ಒಂದು ಕೊಂಬಿನ ಘೇಂಡಾಮೃಗವನ್ನು ಮುದ್ರಿಸಲಾಗಿದೆ, ಜತೆಗೆ ದೃಷ್ಟಿಹೀನರು ಸುಲಭವಾಗಿ ಗುರುತಿಸಲು ಭದ್ರತಾ ದಾರ ಮತ್ತು ಕಪ್ಪು ಚುಕ್ಕೆ ಕೂಡ ಇದೆ. ನೇಪಾಳವು ಭಾರತದೊಂದಿಗೆ ಸುಮಾರು 1,850 ಕಿ.ಮೀ ಗಡಿಯನ್ನು ಹಂಚಿಕೊಂಡಿದೆ. ಇದು ಸಿಕ್ಕಿಂ, ಪಶ್ಚಿಮ ಬಂಗಾಳ, ಬಿಹಾರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳನ್ನು ಸಂಪರ್ಕಿಸುತ್ತದೆ. 100 ನೇಪಾಳಿ ರೂಪಾಯಿ ಭಾರತದಲ್ಲಿ 62.56 ರೂ. ಮೌಲ್ಯದ್ದಾಗಿದೆ,(ಏಜೆನ್ಸೀಸ್).