ಅಸಾಧ್ಯವಾದ ಕಣಿವೆಗಳಲ್ಲಿ ಹೆಲಿಕಾಪ್ಟರ್ ಹಾರಿಸಿದ ಕ್ಯಾಪ್ಟನ್ ಪ್ರಿಯಾ ಅಧಿಕಾರಿ ಸಾಹಸ 
ವಿದೇಶ

ನೇಪಾಳದಲ್ಲಿ ರಣಭೀಕರ ಪ್ರವಾಹ: ಪ್ರಾಣದ ಹಂಗು ತೊರೆದು ಕಾರ್ಯಾಚರಣೆ; 100 ಕ್ಕೂ ಹೆಚ್ಚು ಜೀವ ಉಳಿಸಿದ ಧೀರ ಮಹಿಳೆ 'ಪ್ರಿಯಾ ಅಧಿಕಾರಿ'! Nepal Floods Priya Adhikari

Nepal Floods: ಪ್ರಕೃತಿಯ ಮುನಿಸಿಗೆ ಇಡೀ ದೇಶವೇ ತತ್ತರಿಸಿರುವ ಸಮಯದಲ್ಲಿ, ತನ್ನ ಜೀವದ ಹಂಗು ತೊರೆದು ನೂರಾರು ಜನರನ್ನು ಸಾವಿನ ದವಡೆಯಿಂದ ಪಾರು ಮಾಡಿರುವ ಮಹಿಳೆಯೊಬ್ಬಳ ಸಾಹಸಗಾಥೆ ಈಗ ಜಾಗತಿಕ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದೆ.
ಪ್ರವಾಹ ಮತ್ತು ಭೂಕುಸಿತದಿಂದ ನಲುಗಿ ಹೋಗಿರುವ ನೇಪಾಳದಲ್ಲಿ, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಕ್ಯಾಪ್ಟನ್ ಪ್ರಿಯಾ ಅಧಿಕಾರಿ (Nepal Floods Priya Adhikari) ಅವರ ಧೈರ್ಯ ನಿಜಕ್ಕೂ ರೋಮಾಂಚನಕಾರಿಯಾಗಿದೆ.

100ಕ್ಕೂ ಹೆಚ್ಚು ರಕ್ಷಣಾ ಕಾರ್ಯಾಚರಣೆ, ಜೀವದ ಭಯವಿಲ್ಲದ ಸಾಹಸ!

ನೇಪಾಳದಲ್ಲಿ ಮಳೆಯ ಅಬ್ಬರಕ್ಕೆ ನದಿಗಳು ಉಕ್ಕಿ ಹರಿದು ರಸ್ತೆಗಳು, ಮನೆಗಳು ಸರ್ವನಾಶವಾಗಿವೆ. ಈ ಕಷ್ಟದ ಸಮಯದಲ್ಲಿ ಹೆಲಿಕಾಪ್ಟರ್ ಏರಿ ಹೊರಟ ಪ್ರಿಯಾ ಅಧಿಕಾರಿ, ಕೇವಲ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಸುಮಾರು 100ಕ್ಕೂ ಹೆಚ್ಚು ರಕ್ಷಣಾ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ.
ಅಮೆರಿಕದ ಖಾಸಗಿ ವಾಹಿನಿ ಜೊತೆ ಮಾತನಾಡಿರುವ ಪ್ರಿಯಾ, 2015ರ ಭೀಕರ ಭೂಕಂಪದ ಸಂದರ್ಭದಲ್ಲೂ ನಾನು ಕೆಲಸ ಮಾಡಿದ್ದೇನೆ. ಆದರೆ ಈ ಪ್ರವಾಹದ ವಿನಾಶ ಅದಕ್ಕಿಂತಲೂ ಭಯಾನಕವಾಗಿದೆ. ಕಿರಿದಾದ ಕಣಿವೆಗಳಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಮಾಡುವುದು ಅಷ್ಟು ಸುಲಭವಲ್ಲ ಎಂದು ವಿವರಿಸಿದ್ದಾರೆ.

ಪರಿಸರ ವಿಜ್ಞಾನಿಯಿಂದ ಹೆಲಿಕಾಪ್ಟರ್​ ಸವಾರಿವರೆಗೆ!

ಪ್ರಿಯಾ ಅವರ ಈ ಯಶಸ್ಸಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಮೂಲತಃ ಪರಿಸರ ವಿಜ್ಞಾನ ಓದಿರುವ ಅವರು, ಆರಂಭದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ಆ ಕಾಲದಲ್ಲಿ ಹೆಲಿಕಾಪ್ಟರ್‌ನಲ್ಲಿ ಓಡಾಡುವಾಗ ಅವರಿಗೆ ಆಕಾಶದ ಮೇಲೆ ಒಲವು ಮೂಡಿದೆ.
ಅದೇ ಆಸಕ್ತಿ ಅವರನ್ನು ಫಿಲಿಪೈನ್ಸ್‌ಗೆ ಕರೆದೋಯ್ದು ಹೆಲಿಕಾಪ್ಟರ್ ಪೈಲಟ್ ತರಬೇತಿ ಪಡೆಯುವಂತೆ ಪ್ರೇರೇಪಿಸಿತು. ಕಠಿಣ ತರಬೇತಿಯ ಬಳಿಕ 2017ರಲ್ಲಿ ಪೂರ್ಣ ಪ್ರಮಾಣದ ಹೆಲಿಕಾಪ್ಟರ್ ಪೈಲಟ್ ಆದ ಅವರು, ಹಿಮಾಲಯದ ಎತ್ತರದ ಪ್ರದೇಶಗಳಲ್ಲಿ ಗಾಯಗೊಂಡ ಪ್ರವಾಸಿಗರನ್ನು ಹಾಗೂ ಸಾಹಸಿಗಳನ್ನು ರಕ್ಷಿಸುವುದರಲ್ಲಿ ನಪುಣ್ಯತೆ ಪಡೆದಿದ್ದಾರೆ.

ಅಪಾಯದ ಅಂಚಿನಲ್ಲಿರುವ ರಕ್ಷಣಾ ಕಾರ್ಯಾಚರಣೆ!

ಸದ್ಯ ಟಿಮುರೆ ಪ್ರದೇಶದಲ್ಲಿ ಸುಮಾರು 20 ಹೆಲಿಕಾಪ್ಟರ್‌ಗಳು ಒಂದೇ ಕಡೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ. ಮೇಲಿನಿಂದ ನೋಡಿದರೆ ಎಲ್ಲವೂ ಸರಿಯಿದೆ ಎನಿಸಿದರೂ, ಕೆಳಗೆ ಇಳಿಯುವಾಗ ಮಣ್ಣು ಎಷ್ಟು ಗಟ್ಟಿಯಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಪ್ರವಾಹದಿಂದಾಗಿ ಅಲ್ಲಿನ ಮಣ್ಣು ಅತ್ಯಂತ ಅಸ್ಥಿರವಾಗಿದೆ. ಕೆಲವೊಮ್ಮೆ ಹೆಲಿಕಾಪ್ಟರ್ ಇಳಿಸಿದರೆ ಅದು ಹೂತುಕೊಳ್ಳುವ ಅಪಾಯವಿರುವುದರಿಂದ, ಇಂಜಿನ್ ಆಫ್ ಮಾಡದೆಯೇ ಗಾಳಿಯಲ್ಲಿ ತೂಗಾಡುತ್ತಾ ಬದುಕುಳಿದವರನ್ನು ಒಳಗೆ ಕರೆಸಿಕೊಳ್ಳಬೇಕಾದ ಸವಾಲಿನ ಪರಿಸ್ಥಿತಿ ಎದುರಾಗಿದೆ.
ಗಾಳಿಯಿಂದ ಕಂಡ ಭೀಕರ ದೃಶ್ಯಗಳು!
ಆಕಾಶದಿಂದ ಕೆಳಗೆ ನೋಡಿದರೆ ಎಲ್ಲೆಲ್ಲೂ ಪ್ರವಾಹದಿಂದ ಕೊಚ್ಚಿಹೋದ ಶವಗಳು ಮತ್ತು ಸಹಾಯಕ್ಕಾಗಿ ಕಾಯುತ್ತಿರುವ ಜನರ ನರಳಾಟ ಕಣ್ಣಿಗೆ ರಾಚುತ್ತದೆ. ಕಾರ್ಯಾಚರಣೆಯ ಮೊದಲ ಎರಡು ದಿನಗಳಲ್ಲಿ ಒಂದೇ ಕಡೆಯಿಂದ 200ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತರಲಾಗಿದೆ. ಶವಗಳನ್ನು ಸಾಗಿಸಲು ಬಾಕ್ಸ್‌ಗಳು ಹಾಗೂ ಬ್ಯಾಗ್‌ಗಳೇ ಸಿಗದಷ್ಟು ತುರ್ತು ಪರಿಸ್ಥಿತಿ ಇದೆ ಎಂದು ಪ್ರಿಯಾ ನೋವಿನಿಂದ ನೆನಪಿಸಿಕೊಂಡಿದ್ದಾರೆ.
ಹಾಗಿದ್ದರೂ, ಹೆಲಿಕಾಪ್ಟರ್ ಇಳಿಯುತ್ತಿದ್ದಂತೆ ಕೈಬೀಸಿ ಸ್ವಾಗತಿಸುವ ಜನರ ಮುಖದಲ್ಲಿನ ಬದುಕುಳಿದ ಖುಷಿಯೇ ತಮಗೆ ಅತಿ ದೊಡ್ಡ ಶಕ್ತಿ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ನಾವೆಲ್ಲರೂ ದಣಿದಿದ್ದೇವೆ ನಿಜ, ಆದರೆ ಇಂತಹ ಸಂಕಷ್ಟದ ಸಮಯದಲ್ಲಿ ಜನರನ್ನು ಉಳಿಸುವುದೇ ನಮ್ಮ ನಿಜವಾದ ಕರ್ತವ್ಯ ಎಂದು ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ, (ಏಜನ್ಸೀಸ್​).