Nellie Bly: 19ನೇ ಶತಮಾನದ ಪತ್ರಿಕೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹೆಸರು ನೆಲ್ಲಿ ಬ್ಲೈ. ತನಿಖಾ ಪತ್ರಿಕೋದ್ಯಮಕ್ಕೆ ಹೊಸ ರೂಪ, ಆಯಾಮ ನೀಡಿದ ಈಕೆ ಕೇವಲ ಪತ್ರಕರ್ತೆಯಷ್ಟೇ ಅಲ್ಲ, ಸಾಹಸಿ ಪ್ರವಾಸಿ ಮತ್ತು ಸಮಾಜ ಸುಧಾರಕಿಯಾಗಿಯೂ ಹೌದು ಎಂಬುದಕ್ಕೆ ಆಕೆ ಕೈಗೊಂಡ ದಿಟ್ಟ ನಿರ್ಧಾರಗಳು ಮತ್ತು ಸಾಗಿದ ಅತ್ಯಂತ ಕಠಿಣದ ಹಾದಿಗಳು. ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಯಾರೂ ಊಹಿಸದ ಸಾಹಸಕ್ಕೆ ಕೈಹಾಕಿದ್ದ ನೆಲ್ಲಿ ಬ್ಲೈ ಜೀವನವೇ ಒಂದು ರೋಚಕ ಅನ್ನೋದಕ್ಕೆ ಇಲ್ಲಿವೆ ನೋಡಿ ಹುಬ್ಬೇರಿಸುವ ಮಾಹಿತಿ.
ನೆಲ್ಲಿ ಬ್ಲೈ ಅಸಲಿ ಹೆಸರು ಎಲಿಜಬೆತ್ ಜೇನ್ ಕೊಕ್ರೇನ್. 1864ರ ಮೇ 5ರಂದು ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ ಜನಿಸಿದರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡ ಕಾರಣ ಅವರ ಕುಟುಂಬ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಒಂದು ಪತ್ರಿಕೆಯಲ್ಲಿ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ಪ್ರಕಟವಾಗಿದ್ದ ಲೇಖನವನ್ನು ನೋಡಿದ ನೆಲ್ಲಿ, ಅದಕ್ಕೆ ಪ್ರತಿಕ್ರಿಯೆಯಾಗಿ, 'ಲಿಟಲ್ ಆರ್ಫನ್ ಗರ್ಲ್' ಎಂಬ ಶೀರ್ಷಿಕೆಯಡಿ ಒಂದು ಪತ್ರ ಬರೆದಿದ್ದರು. ಈ ಪತ್ರದಲ್ಲಿದ್ದ ಧೈರ್ಯ ಮತ್ತು ಬರವಣಿಗೆಯ ಶೈಲಿಯಿಂದ ಪ್ರಭಾವಿತರಾದ ಪತ್ರಿಕೆಯ ಸಂಪಾದಕರು ಅವರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವಂತೆ ಕೇಳಿಕೊಂಡರು. ಅಲ್ಲಿಂದಲೇ ನೋಡಿ, ಇವರ ಜರ್ನಿ ಸಂಪೂರ್ಣವಾಗಿ ಬದಲಾಗಿದ್ದು.
ನೆಲ್ಲಿ ಬ್ಲೈ ಅವರು ಪತ್ರಿಕೋದ್ಯಮಕ್ಕೆ ಕಾಲಿಡುತ್ತಿದ್ದಂತೆ ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ಸಮಾಜದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಅದಾಗಲೇ ಅರಿತಿದ್ದ ಅವರು, ಯಾರೂ ಕೈಹಾಕದ ಸಾಹಸಕ್ಕೆ ದಿಢೀರ್ ಜಿಗಿದರು. ಅದೇ, ನ್ಯೂಯಾರ್ಕ್ನ ಬ್ಲ್ಯಾಕ್ವೆಲ್ ದ್ವೀಪದಲ್ಲಿದ್ದ ಮಾನಸಿಕ ಅಸ್ವಸ್ಥರ ಆಸ್ಪತ್ರೆಯ ಒಳಗಿನ ಪರಿಸ್ಥಿತಿಗಳನ್ನು ಬಯಲಿಗೆಳೆಯುವುದು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡಲಾಗುತ್ತಿದ್ದ ಅಮಾನವೀಯ ವರ್ತನೆ, ಹಿಂಸೆ ಮತ್ತು ಅಲ್ಲಿನ ಅವ್ಯವಸ್ಥೆಯನ್ನು ಹೊರಜಗತ್ತಿಗೆ ತಿಳಿಸುವ ಉದ್ದೇಶದಿಂದ ತಾನು ಏನು ಮಾಡಬೇಕೆಂದು ಯೋಚಿಸಿದಾಗ, ಬಿಗಿ ಭದ್ರತೆ ಮತ್ತು ಅಕ್ರಮ ಮಾಡುವವರ ಸರ್ಪಗಾವಲನ್ನು ನುಸುಳಿ ಹೋಗುವುದು ದೊಡ್ಡ ಸವಾಲಾಗಿತ್ತು. ಈ ಸಮಯದಲ್ಲಿ, ಮಾನಸಿಕ ಅಸ್ವಸ್ಥೆಯಂತೆ ನಟಿಸಿ, ಆಸ್ಪತ್ರೆಗೆ ದಾಖಲಾದ ಅವರು. ಬಳಿಕ ಅಲ್ಲೇ ಸತತ 10 ದಿನಗಳ ಕಾಲ ಇದ್ದು, ರೋಗಿಗಳು ಎದುರಿಸುತ್ತಿದ್ದ ನರಕಯಾತನೆ ಮತ್ತು ಅನಾರೋಗ್ಯಕರ ವಾತಾವರಣವನ್ನು ಕಣ್ಣಾರೆ ಕಂಡರು.
ಅಲ್ಲಿಂದ ಹೊರಬಂದ ನಂತರ ಪತ್ರಿಕೆಯಲ್ಲಿ ತಮ್ಮ ಅನುಭವಗಳನ್ನು ವರದಿ ಮಾಡಿ, ಇಡೀ ಜಗತ್ತಿನ ಗಮನ ಸೆಳೆದರು. ನೆಲ್ಲಿಯ ವರದಿಗಳು ಆಸ್ಪತ್ರೆಯ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸಂಪೂರ್ಣವಾಗಿ ಬೆತ್ತಲಾಗಿಸಿತು. ಇದರಿಂದ ಅಲ್ಲಿನ ಪರಿಸ್ಥಿತಿಯಲ್ಲಿ ಸುಧಾರಣೆ ತರಲು ಹಾಗೂ ಕಾನೂನು ಬದಲಾವಣೆಗಳಿಗೆ ದಾರಿ ಮಾಡಿಕೊಡಲು ನೆರವಾಯಿತು ಎಂದು ವಿವರಿಸಲಾಗಿದೆ.
ನೆಲ್ಲಿ ಬ್ಲೈ ಅವರ ಸಾಹಸ ಅಷ್ಟಕ್ಕೇ ನಿಲ್ಲಲಿಲ್ಲ. ಖ್ಯಾತ ಲೇಖಕ ಜೂಲ್ಸ್ ವರ್ನ್ ಅವರ 'ಅರೌಂಡ್ ದಿ ವರ್ಲ್ಡ್ ಇನ್ ಎಯ್ಟಿ ಡೇಸ್' ಕಾದಂಬರಿಯಿಂದ ಸ್ಫೂರ್ತಿ ಪಡೆದ ಅವರು, 1889ರಲ್ಲಿ ವಿಶ್ವ ಪರ್ಯಟನೆಯತ್ತ ಮುಖ ಮಾಡಿದರು. 80 ದಿನಗಳಲ್ಲಿ ಜಗತ್ತನ್ನು ಸುತ್ತಬಹುದು ಎಂಬ ಕಲ್ಪನೆಯನ್ನು ಸವಾಲಾಗಿ ಸ್ವೀಕರಿಸಿದ ಅವರು, ಹಡಗು ಮತ್ತು ರೈಲುಗಳ ಮೂಲಕ ವಿವಿಧ ದೇಶಗಳನ್ನು ಸುತ್ತಿದರು. ಸಿಂಗಾಪುರ, ಜಪಾನ್ ಮತ್ತು ಈಜಿಪ್ಟ್ ಸೇರಿ ಹಲವು ಪ್ರದೇಶಗಳಿಗೆ ಭೇಟಿ ನೀಡಿದರು. ಅಂತಿಮವಾಗಿ, ಕೇವಲ 72 ದಿನ, 6 ಗಂಟೆ ಮತ್ತು 11 ನಿಮಿಷಗಳಲ್ಲಿ ತಮ್ಮ ವಿಶ್ವ ಪರ್ಯಟನೆಯನ್ನು ಪೂರ್ಣಗೊಳಿಸಿ ಆ ಕಾಲದಲ್ಲೇ ಊಹೆಗೂ ಮೀರಿದ ವಿಶ್ವದಾಖಲೆಯನ್ನು ನಿರ್ಮಿಸಿದರು.
ಪತ್ರಿಕೋದ್ಯಮದ ಜತೆಗೆ ಉದ್ಯಮ ಕ್ಷೇತ್ರದಲ್ಲಿಯೂ ನೆಲ್ಲಿ ಬ್ಲೈ ಅವರು ತಾವು ಯಾವುದಕ್ಕೂ ಕಮ್ಮಿಯಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಉಕ್ಕಿನ ಬ್ಯಾರೆಲ್ಗಳು ಸೇರಿದಂತೆ ವಿವಿಧ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಪೇಟೆಂಟ್ಗಳನ್ನು ಪಡೆದಿದ್ದರು. ಬಡ ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಹೀಗೆ ಪತ್ರಿಕೋದ್ಯಮ, ಸಾಹಸ ಪ್ರವಾಸ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದ್ದ ನೆಲ್ಲಿ ಬ್ಲೈ 1922ರಲ್ಲಿ ನ್ಯೂಯಾರ್ಕ್ನಲ್ಲಿ ಕೊನೆಯುಸಿರೆಳೆದರು.
ಒಟ್ಟಾರೆ, ಸತ್ಯವನ್ನು ಹೊರತರುವ ಧೈರ್ಯ, ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಮತ್ತು ಸಮಾಜದ ಹಿತಕ್ಕಾಗಿ ದುಡಿಯುವ ಬದ್ಧತೆ ನೆಲ್ಲಿ ಬ್ಲೈ ಅವರನ್ನು ಇತಿಹಾಸದ ಸ್ಮರಣೀಯ ಪತ್ರಕರ್ತೆಯರ ಸಾಲಿನಲ್ಲಿ ನಿಲ್ಲಿಸಿವೆ. ಸವಾಲು ಸ್ವೀಕರಿಸುವ ಇವರ ಗುಣ, ಹಠ, ಹುಂಬುತನ ಮತ್ತು ದಿಟ್ಟತನ ನಿಜಕ್ಕೂ ಶ್ಲಾಘನೀಯ, ಸ್ಮರಣೀಯ ಮತ್ತು ಇಂದಿನ ಯುವಪೀಳಿಗೆಗೂ ಸೂರ್ತಿದಾಯಕ ಎಂದರೆ ಖಂಡಿತ ತಪ್ಪಾಗಲಾರದು,(ಏಜೆನ್ಸೀಸ್).