ಇರಾನ್-ಅಮೆರಿಕ ಸಮರಕ್ಕೆ ಬಲಿಯಾಯ್ತು ನೆರೆ ರಾಷ್ಟ್ರ: ಪಾಕ್ನಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಕೇಳಿದ್ರೆ ಬೆಚ್ಚಿಬೀಳ್ತಿರಾ..!
ಇಸ್ಲಾಮಾಬಾದ್: ಅತ್ತ ಗಲ್ಫ್ ರಾಷ್ಟ್ರಗಳಲ್ಲಿ ಕ್ಷಿಪಣಿಗಳು ಅಬ್ಬರಿಸುತ್ತಿದ್ದರೆ, ಇತ್ತ ಪಾಕಿಸ್ತಾನದ ಆರ್ಥಿಕತೆ ಅಕ್ಷರಶಃ ಕುಸಿದು ಬಿದ್ದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ನಿಯಂತ್ರಣ ತಪ್ಪುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಇಂಧನ(Pakistan Fuel Price) ದರಗಳನ್ನು ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಸಿದೆ. ಕೇವಲ ಒಂದು ತಿಂಗಳ ಅವಧಿಯಲ್ಲಿ ಇದು ಎರಡನೇ ಬಾರಿ ಮಾಡಲಾದ ಭಾರಿ ಏರಿಕೆಯಾಗಿದೆ.
ಬೆಲೆ ಏರಿಕೆಯ ಶಾಕಿಂಗ್ ಅಂಕಿ-ಅಂಶಗಳು:
ಶುಕ್ರವಾರದಿಂದ ಜಾರಿಗೆ ಬರುವಂತೆ ಪಾಕಿಸ್ತಾನದ ಪೆಟ್ರೋಲಿಯಂ ಸಚಿವಾಲಯವು ಹೊಸ ದರಗಳನ್ನು ಘೋಷಿಸಿದೆ.
ಡೀಸೆಲ್: ಶೇ. 54.9 ರಷ್ಟು ಏರಿಕೆ ಕಂಡಿದ್ದು, ಈಗ ಪ್ರತಿ ಲೀಟರ್‌ಗೆ 520.35 ಪಾಕಿಸ್ತಾನಿ ರೂಪಾಯಿ ($1.88) ತಲುಪಿದೆ.
ಪೆಟ್ರೋಲ್: ಶೇ. 42.7 ರಷ್ಟು ಏರಿಕೆ ಕಂಡಿದ್ದು, ಈಗ ಪ್ರತಿ ಲೀಟರ್‌ಗೆ 458.40 ರೂಪಾಯಿ ಆಗಿದೆ.
ಯುದ್ಧ ಮತ್ತು ಹೋರ್ಮುಜ್ ಜಲಸಂಧಿಯ ಎಫೆಕ್ಟ್
ಪಾಕಿಸ್ತಾನವು ತನ್ನ ಇಂಧನ ಅಗತ್ಯಕ್ಕಾಗಿ ಸೌದಿ ಅರೇಬಿಯಾ ಮತ್ತು ಯುಎಇ ರಾಷ್ಟ್ರಗಳ ಮೇಲೆ ಅವಲಂಬಿತವಾಗಿದೆ. ಆದರೆ, ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದಿಂದಾಗಿ 'ಹೋರ್ಮುಜ್ ಜಲಸಂಧಿ ಮೂಲಕ ನಡೆಯುವ ಪೂರೈಕೆ ಸರಪಳಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಿಲಿಟರಿ ಕಾರ್ಯಾಚರಣೆಯನ್ನು ತೀವ್ರಗೊಳಿಸುವುದಾಗಿ ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ. 7 ಕ್ಕಿಂತ ಹೆಚ್ಚು ಜಿಗಿದಿದೆ. ಇದು ಪಾಕಿಸ್ತಾನದಂತಹ ಆಮದು ಅವಲಂಬಿತ ದೇಶಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಪರ್ವೇಜ್ ಮಲಿಕ್ ಮತ್ತು ಹಣಕಾಸು ಸಚಿವ ಮುಹಮ್ಮದ್ ಔರಂಗಜೇಬ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರಗಳು ಕೈಮೀರಿ ಹೋಗುತ್ತಿವೆ, ನಮಗೆ ಬೆಲೆ ಏರಿಸುವುದನ್ನು ಬಿಟ್ಟು ಬೇರೆ ದಾರಿಯೇ ಇಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಘೋಷಿಸಿದ ಅಲ್ಪಾವಧಿ ಸಮಾಧಾನಕರ ಕ್ರಮಗಳು
ಜನಸಾಮಾನ್ಯರ ಆಕ್ರೋಶ ತಣ್ಣಗಾಗಿಸಲು ಸರ್ಕಾರ ಕೆಲವು ಸಬ್ಸಿಡಿಗಳನ್ನು ಘೋಷಿಸಿದೆ.
ದ್ವಿಚಕ್ರ ವಾಹನ ಸವಾರರಿಗೆ: ಮುಂದಿನ ಮೂರು ತಿಂಗಳವರೆಗೆ ಪ್ರತಿ ಲೀಟರ್‌ಗೆ 100 ರೂಪಾಯಿ ಸಬ್ಸಿಡಿ (ತಿಂಗಳಿಗೆ ಗರಿಷ್ಠ 20 ಲೀಟರ್‌ವರೆಗೆ ಮಾತ್ರ).
ಸಣ್ಣ ರೈತರಿಗೆ: ಕೃಷಿ ಚಟುವಟಿಕೆಗಳಿಗಾಗಿ ಪ್ರತಿ ಎಕರೆಗೆ ಒಂದು ಬಾರಿಯ ಪರಿಹಾರವಾಗಿ 1,500 ರೂಪಾಯಿಗಳ ಸಹಾಯಧನ.
ಆದರೆ, ಕಳೆದ ಮೂರು ವಾರಗಳಲ್ಲಿ ಈಗಾಗಲೇ 129 ಬಿಲಿಯನ್ ರೂಪಾಯಿಗಳ ಸಬ್ಸಿಡಿ ನೀಡಿರುವ ಸರ್ಕಾರಕ್ಕೆ, ಯುದ್ಧ ಸುದೀರ್ಘವಾಗಿ ಮುಂದುವರಿದರೆ ಈ ಸಬ್ಸಿಡಿಗಳನ್ನು ಮುಂದುವರಿಸುವುದು ಆರ್ಥಿಕವಾಗಿ ಅಸಾಧ್ಯ ಎಂಬ ಸತ್ಯವನ್ನೂ ಹಣಕಾಸು ಸಚಿವರು ಒಪ್ಪಿಕೊಂಡಿದ್ದಾರೆ.
ಪಾಕಿಸ್ತಾನದ ಮುಂದೆ ಇರುವ ಭೀಕರ ಸವಾಲುಗಳು
ಹಣದುಬ್ಬರ ಏರಿಕೆ: ಇಂಧನ ಬೆಲೆ ಏರಿಕೆಯು ಸಾರಿಗೆ ವೆಚ್ಚವನ್ನು ಹೆಚ್ಚಿಸಲಿದ್ದು, ದಿನಬಳಕೆಯ ವಸ್ತುಗಳು, ತರಕಾರಿ ಮತ್ತು ಹಾಲಿನ ಬೆಲೆಗಳು ಗಗನಕ್ಕೇರಲಿವೆ.
ಆರ್ಥಿಕ ದಿವಾಳಿತನ: ಈಗಾಗಲೇ ಸಾಲದ ಸುಳಿಯಲ್ಲಿರುವ ಪಾಕಿಸ್ತಾನಕ್ಕೆ ಈ ಯುದ್ಧವು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಸಾಮಾಜಿಕ ಅಶಾಂತಿ: ಹಸಿವು ಮತ್ತು ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರು ಬೀದಿಗಿಳಿದು ಪ್ರತಿಭಟಿಸುವ ಭೀತಿ ಎದುರಾಗಿದೆ.
ಮಧ್ಯಪ್ರಾಚ್ಯದ ಯುದ್ಧವು ಕೇವಲ ಇರಾನ್ ಮತ್ತು ಅಮೆರಿಕಕ್ಕೆ ಸೀಮಿತವಾಗಿಲ್ಲ. ಅದರ ಆರ್ಥಿಕ ಕಂಪನಗಳು ಏಷ್ಯಾ ಖಂಡದಾದ್ಯಂತ ಹರಡುತ್ತಿವೆ. ಪಾಕಿಸ್ತಾನದ ಇಂದಿನ ಸ್ಥಿತಿಯು ಜಾಗತಿಕ ಅಸ್ಥಿರತೆಯು ಒಂದು ರಾಷ್ಟ್ರವನ್ನು ಹೇಗೆ ಹೈರಾಣಾಗಿಸಬಹುದು ಎಂಬುದಕ್ಕೆ ಕನ್ನಡಿಯಾಗಿದೆ. ಯುದ್ಧ ನಿಲ್ಲದಿದ್ದರೆ ಪಾಕಿಸ್ತಾನ ಮಾತ್ರವಲ್ಲದೆ ಇನ್ನೂ ಹಲವು ಆಮದು ಅವಲಂಬಿತ ದೇಶಗಳು ಇಂತಹದ್ದೇ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು,(ಏಜೆನ್ಸೀಸ್).