| ಬೆಂಕಿ ಬಸಣ್ಣ, ನ್ಯೂಯಾರ್ಕ್
ಟೋಕಿಯೊ: ಉತ್ತರ ಅಮೆರಿಕದ ವಿಶ್ವ ಕನ್ನಡಿಗರ ಸಂಘಟನೆ ‘ನಾವಿಕ’ ಹಾಗೂ ಜಪಾನ್ನ ಟೋಕಿಯೊ ಕನ್ನಡ ಬಳಗ ಜಂಟಿಯಾಗಿ ಆಯೋಜಿಸಿರುವ ಎಂಟನೇ ನಾವಿಕೋತ್ಸವ, ಕನ್ನಡ ರಾಜ್ಯೋತ್ಸವ ಹಾಗೂ ಟೋಕಿಯೊ ಕನ್ನಡ ಬಳಗದ 25ನೇ ವಾರ್ಷಿಕೋತ್ಸವ ನವೆಂಬರ್ 22ರಂದು ಟೋಕಿಯೊದಲ್ಲಿ ಒಂದೇ ವೇದಿಕೆಯಲ್ಲಿ ನಡೆಯಲಿದೆ.
ಅಮೆರಿಕದಿಂದ ಸುಮಾರು ಮುನ್ನೂರು ಕನ್ನಡಿಗರು ನಾವಿಕೋತ್ಸವದಲ್ಲಿ ಭಾಗವಹಿಸಲು ಜಪಾನ್ಗೆ ಆಗಮಿಸುವ ನಿರೀಕ್ಷೆಯಿದೆ. ಟೋಕಿಯೊ ಕನ್ನಡ ಬಳಗದೊಂದಿಗೆ ಈ ಮಹೋತ್ಸವವನ್ನು ಆಚರಿಸುತ್ತಿರುವುದು ನಾವಿಕ ಸಂಸ್ಥೆಗೆ ಹೆಮ್ಮೆಯ ವಿಷಯವಾಗಿದೆ ಎಂದು ನಾವಿಕ ಸಂಸ್ಥೆಯ ಅಧ್ಯಕ್ಷೆ ಡಾ. ಅನು ಭಟ್ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಸರ್ಕಾರದ ಅನಿವಾಸಿ ಭಾರತೀಯ ವೇದಿಕೆಯ ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ, ಹಿರಿಯ ನಟ ಡಾ. ಶ್ರೀನಾಥ್ ಪಾಲ್ಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಸೇರಿದಂತೆ ಹಲವು ಗಣ್ಯರನ್ನು ಈ ಸಮಾರಂಭಕ್ಕೆ ಆಹ್ವಾನಿಸಲಾಗಿದೆ.
ಈ ಸಮಾರಂಭದಲ್ಲಿ ಸಂಗೀತ, ನೃತ್ಯ, ನಾಟಕ, ಕಲೆ, ಸಾಹಿತ್ಯ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ವಾಣಿಜ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ವಿಚಾರ ವಿನಿಮಯಕ್ಕೂ ವೇದಿಕೆ ಸಿದ್ಧವಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕನ್ನಡಿಗರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಯುವಪೀಳಿಗೆಗೆ ಸ್ಫೂರ್ತಿ ನೀಡಲಿದ್ದಾರೆ.
ನಾವಿಕೋತ್ಸವದ ಸಂದರ್ಭದಲ್ಲೇ ನವೆಂಬರ್ 21ರಿಂದ 29ರವರೆಗೆ 8 ರಾತ್ರಿ ಹಾಗೂ 9 ದಿನಗಳ ವಿಶೇಷ ಜಪಾನ್ ಪ್ರವಾಸವನ್ನು ಕೂಡ ಆಯೋಜಿಸಲಾಗಿದೆ.